ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಷೇರು ಖರೀದಿಗಿದು ಸುಸಮಯವೇ?

0
115

ಈ ಸಂದರ್ಭದಲ್ಲಿ ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಷೇರುಗಳನ್ನು ಖರೀದಿಸಲು ಮೋತಿಲಾಲ್ ಓಸ್ವಾಲ್ ಫೈನಾನ್ಸ್ ಸರ್ವೀಸಸ್ ಲಿಮಿಟೆಡ್‌ನ ಮುಖ್ಯಸ್ಥ ಚಂದನ್ ಟಪಾರಿಯಾ ಅವರು ಕರೆ ನೀಡಿದ್ದಾರೆ. ಅವರು ಈ ಕರೆ ನೀಡಿದ ಸಂದರ್ಭದಲ್ಲಿ, ಅಂದರೆ ಅಕ್ಟೋಬರ್ 17ರಂದು ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಪ್ರತಿ ಷೇರಿನ ಬೆಲೆ ರೂ. 2344.85 ಇತ್ತು. ಎರಡೇ ದಿನಗಳಲ್ಲಿ, ಅಂದರೆ ಅಕ್ಟೋಬರ್ 19ರಂದು ಈ ಷೇರುಗಳ ಮೌಲ್ಯವು ರೂ. 2389.85ಕ್ಕೆ ತಲುಪಿದೆ.

ವಾಸ್ತವದಲ್ಲಿ ಟಪಾರಿಯಾ ಅವರು, ಈಗ ಈ ಷೇರುಗಳನ್ನು ಖರೀದಿಸಿ ಅದರ ಬೆಲೆಯು ರೂ. 2450 ಆಗುವ ವರೆಗೆ ತಮ್ಮ ಬಳಿಯೇ ಇರಿಸಿಕೊಳ್ಳುವಂತೆ ಗುರಿಯನ್ನು ನಿಗದಿ ಮಾಡಿಕೊಳ್ಳಲು ಸಲಹೆ ನೀಡಿದ್ದಾರೆ. ಆದರೆ ಎರಡೇ ದಿನಗಳಲ್ಲಿ ರೂ. 45ರಷ್ಟು ಬೆಲೆ ಹೆಚ್ಚಿಸಿಕೊಂಡು ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ತನ್ನ ಸಾಮರ್ಥ್ಯವನ್ನು ತೋರಿಸಿದೆ. ರೂ. 2450ರತ್ತ ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುವತ್ತ ದಾಪುಗಾಲು ಇರಿಸುತ್ತಿದೆ.

ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ 1977ರಲ್ಲಿ ಸ್ಥಾಪನೆಗೊಂಡಿದೆ. ಪ್ರಸ್ತುತ ಇದು ಲಾರ್ಜ್ ಕ್ಯಾಪ್ ಕಂಪನಿಗಳ ಸಾಲಿನಲ್ಲಿ ಸ್ಥಾನ ಪಡೆದಿದ್ದು, ರೂ 425220.99 ಕೋಟಿ ಮಾರುಕಟ್ಟೆ ಬಂಡವಾಳ (ಮಾರ್ಕೆಟ್ ಕ್ಯಾಪ್) ಹೊಂದಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್ಬಿಎಫ್ಸಿ) ವಲಯದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.

2022ರ ಮಾರ್ಚ್ 31ರಂದು ಕೊನೆಗೊಂಡ ವರದಿ ಪ್ರಕಾರ, ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್‌ನ ಪ್ರಮುಖ ಉತ್ಪನ್ನಗಳು/ ಆದಾಯ ತರುವ ವಿಭಾಗಗಳೆಂದರೆ ಬಡ್ಡಿ, ಷೇರು ಮತ್ತು ಭದ್ರತೆಗಳ (ಸೆಕ್ಯುರಿಟೀಸ್) ಮಾರಾಟದಿಂದ ಬರುವ ಆದಾಯ, ಲಾಭಾಂಶ, ಇತರ ಸೇವೆಗಳು, ಶುಲ್ಕಗಳು ಮತ್ತು ಕಮಿಷನ್ ಆದಾಯ ಹಾಗೂ ಬಾಡಿಗೆಗಳಿಂದ ಬರುವ ಆದಾಯ.

ಹಣಕಾಸು ವಿವರ:
2022ರ ಜೂನ್ 30ಕ್ಕೆ ಅಂತ್ಯಗೊಂಡ ತ್ರೈಮಾಸಿಕದ ಮಾಹಿತಿ ಪ್ರಕಾರ, ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಸಂಸ್ಥೆಯು ರೂ. 23,193.32 ಕೋಟಿ ಸಂಚಿತ ಆದಾಯವನ್ನು ದಾಖಲಿಸಿದೆ. ಅಂದರೆ, ಅದಕ್ಕಿಂತ ಹಿಂದಿನ ತ್ರೈಮಾಸಿಕದ ಆದಾಯವಾಗಿದ್ದ ರೂ. 35,059.75 ಕೋಟಿಗಿಂತ ಶೇ 33.85ರಷ್ಟು ಕಡಿಮೆ ಆದಾಯ ಪಡೆದಿದೆ. ಅಲ್ಲದೆ, ಕಳೆದ ವರ್ಷದ ಜೂನ್ 30ಕ್ಕೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಇದ್ದ ಆದಾಯ ರೂ. 30,997.13 ಕೋಟಿಗಿಂತಲೂ ಶೇ 25.18ರಷ್ಟು ಆದಾಯ ಕುಸಿತ ಉಂಟಾಗಿದೆ. ಒಟ್ಟಾರೆ, ಕಂಪನಿಯು ಕಳೆದ ತ್ರೈಮಾಸಿಕದಲ್ಲಿ ತೆರಿಗೆ ಪಾವತಿಯ ನಂತರ ರೂ. 3388.96 ಕೋಟಿಗಳ ನಿವ್ವಳ ಲಾಭವನ್ನು ವರದಿ ಮಾಡಿದೆ.

ಹೂಡಿಕೆ ಮಾಹಿತಿ:
ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಸಂಸ್ಥೆಯಲ್ಲಿ ಪ್ರವರ್ತಕರು ಯಾವುದೇ ಷೇರುಗಳ ಒಡೆತನವನ್ನು ಹೊಂದಿಲ್ಲ. ಆದರೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಶೇ 67.75ರಷ್ಟು ಷೇರು ಮಾಲೀಕತ್ವ ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಶೇ 21.02ರಷ್ಟು ಷೇರು ಮಾಲೀಕತ್ವವನ್ನು ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಸಂಸ್ಥೆಯಲ್ಲಿ ಹೊಂದಿದ್ದಾರೆ.