ಕೋವಿಡ್ ಸಾಂಕ್ರಾಮಿಕೋತ್ತರ ಕಾಲದಲ್ಲಿ ಜೀವನವು ನಿಧಾನವಾಗಿ ಹಳಿಗೆ ಮರಳುತ್ತಿದೆ. ಕಚೇರಿಗಳು ಮತ್ತೆ ತೆರೆಯುತ್ತಿವೆ; ಶಾಪಿಂಗ್ ಮಾಲ್‌ಗಳು, ಸಿನಿಮಾ ಮಂದಿರಗಳು ಮತ್ತು ಹೋಟೆಲ್‌ಗಳು ಉತ್ತಮ ವ್ಯಾಪಾರ ನಡೆಸುತ್ತಿವೆ. ಅದೇ ರೀತಿ ರಿಯಲ್ ಎಸ್ಟೇಟ್ ಕ್ಷೇತ್ರವೂ ಮತ್ತೆ ತಲೆ ಎತ್ತಿದೆ. ಈಗ ರಿಯಲ್ ಎಸ್ಟೇಟ್ ಕ್ಷೇತ್ರದ ಮುಂದಿರುವ ಯಕ್ಷ ಪ್ರಶ್ನೆ ಎಂದರೆ, ಭಾರತದಲ್ಲಿ ಉದ್ಯಮವು ತನ್ನ ಭರವಸೆಯ ಸಾಮರ್ಥ್ಯ ಎಂದೆಣಿಸಿದ 1 ಟ್ರಿಲಿಯನ್ ಅಮೆರಿಕನ್ ಡಾಲರ್ ಮೌಲ್ಯವನ್ನು ತಲುಪಬಲ್ಲುದೇ?
ಉದ್ಯಮದ ಪ್ರಸ್ತುತ ಮೌಲ್ಯವು 200 ಬಿಲಿಯನ್ ಅಮೆರಿಕನ್ ಡಾಲರ್ ಇದ್ದು, 2030ರ ವೇಳೆಗೆ ಇದು 1 ಟ್ರಿಲಿಯನ್ ಅಮೆರಿಕನ್ ಡಾಲರ್ ಮೌಲ್ಯವನ್ನು ತಲುಪಲಿದೆ ಎಂದು ಸರ್ಕಾರದ ಅಂದಾಜು. ಸದ್ಯಕ್ಕೆ 5.5 ಕೋಟಿ ಜನರಿಗೆ ಈ ಕ್ಷೇತ್ರವು ಉದ್ಯೋಗ ಒದಗಿಸಿದ್ದು, ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆಯು 7 ಕೋಟಿ ಹೆಚ್ಚಲಿದೆ.
ಚಿಲ್ಲರೆ ಹೂಡಿಕೆದಾರರಿಗೆ ಸುಲಭವಾಗಿ ಹೂಡಿಕೆಗೆ ಅನುಕೂಲವಾಗುವ ರಿಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ ಟ್ರಸ್ಟ್ (ಆರ್‌ಇಐಟಿ) ಮತ್ತು ಭಾಗಶಃ ಮಾಲೀಕತ್ವದಂತಹ ಸವಲತ್ತುಗಳ ಕಾರಣ ವಾಣಿಜ್ಯೋದ್ದೇಶದ ರಿಯಲ್ ಎಸ್ಟೇಟ್ ಅಭೂತಪೂರ್ವ ಪ್ರತಿಕ್ರಿಯೆಯನ್ನು ಪಡೆದಿದೆ.

ಆರ್‌ಇಐಟಿ ಗಳಲ್ಲಿ ಕನಿಷ್ಠ ಹೂಡಿಕೆ ಮೊತ್ತ ರೂ. 50,000 ಇದ್ದಿದ್ದನ್ನು ಕಳೆದ ವರ್ಷ ರೂ.10,000ದಿಂದ ರೂ. 15,000ಕ್ಕೆ ಸೆಬಿ ತಗ್ಗಿಸಿದೆ. ಇದು ವೈಯಕ್ತಿಕ ಹೂಡಿಕೆದಾರರಿಗೆ ಬಾಡಿಗೆ ಆದಾಯ ಮತ್ತು ಆಸ್ತಿಯ ಬಂಡವಾಳ ಮೌಲ್ಯದ ಪ್ರಗತಿ (ಅಪ್ರಿಸಿಯೇಷನ್) ರೂಪದಲ್ಲಿ ಆದಾಯವನ್ನು ಗಳಿಸಲು ನೆರವಾಗುತ್ತದೆ. ಕಳೆದ 2-3 ವರ್ಷಗಳ ಸಾಂಕ್ರಾಮಿಕದ ಅವಧಿಯಲ್ಲಿ ಮೂರು ಆರ್‌ಇಐಟಿ ಗಳು ಐಪಿಒ ತಲುಪಿದ್ದು, ವಾಣಿಜ್ಯ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಆಶಾದಾಯಕ ಬೆಳವಣಿಗೆಯನ್ನು ಸೂಚಿಸುತ್ತದೆ.
ಭಾರತದಲ್ಲಿ ಗ್ರೇಡ್-ಎ ಕಚೇರಿ ಸ್ಥಳಾವಕಾಶದ ಅಗತ್ಯತೆ 2025ರ ವೇಳೆಗೆ 100 ಕೋಟಿ ಚದರ ಅಡಿಗಳಿಗೆ ಹೆಚ್ಚಾಗಲಿದೆ ಎಂಬುದು ಉದ್ಯಮದ ಅಂದಾಜು. ಆರ್‌ಇಐಟಿ ಅಷ್ಟೇ ಅಲ್ಲದೆ, ವಾಣಿಜ್ಯ ರಿಯಲ್ ಎಸ್ಟೇಟ್‌ಗಳಲ್ಲಿ ಭಾಗಶಃ ಮಾಲೀಕತ್ವ (fractional ownership) ಹೂಡಿಕೆಯ ಅವಕಾಶವನ್ನೂ ನೀಡಲಾಗಿದೆ. ಜಾಗತಿಕವಾಗಿ ಜನಪ್ರಿಯವಾಗಿರುವ ಭಾಗಶಃ ಮಾಲೀಕತ್ವವು ಭಾರತದ ಮಟ್ಟಿಗೆ ಸಾಕಷ್ಟು ಬದಲಾವಣೆ ತರಬಲ್ಲದು ಎಂದೇ ನಿರೀಕ್ಷಿಸಲಾಗಿದೆ.
ಭಾಗಶಃ ಮಾಲೀಕತ್ವದ ಪ್ರಯೋಜನ
ಆರ್‌ಇಐಟಿ ಮತ್ತು ಭಾಗಶಃ ಮಾಲೀಕತ್ವವು ವಾಣಿಜ್ಯ ರಿಯಲ್ ಎಸ್ಟೇಟ್ನಲ್ಲಿ ಪ್ರವೇಶ ವೆಚ್ಚವನ್ನು ಕಡಿಮೆ ಮಾಡಿದೆ. ಈ ಹೂಡಿಕೆ ವಿಧಾನಗಳು ಚಿಲ್ಲರೆ ಹೂಡಿಕೆದಾರರಿಗೆ ವಾಣಿಜ್ಯ ರಿಯಲ್ ಎಸ್ಟೇಟ್‌ನಲ್ಲಿ ಹೆಚ್ಚಿನ ಆದಾಯ ಗಳಿಸಲು ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ಸಣ್ಣ ಹೂಡಿಕೆದಾರರೂ ಸಾಕಷ್ಟು ಆದಾಯ ಕಂಡುಕೊಂಡಿದ್ದಾರೆ.
ವಾಣಿಜ್ಯ ಸ್ವತ್ತುಗಳ ಬಾಡಿಗೆ ಆದಾಯವು ವಾರ್ಷಿಕ ಶೇ 8ರಿಂದ ಶೇ 10ರಷ್ಟಿದೆ. ಇದು ವಸತಿ ಉದ್ದೇಶದ ಸ್ವತ್ತುಗಳ ಬಾಡಿಗೆ ಆದಾಯಕ್ಕಿಂತಲೂ ಹೆಚ್ಚು. ಇದು ಸಂಪತ್ತಿನ ಸ್ಥಿರ ವಿಸ್ತರಣೆ ಮತ್ತು ಪ್ರತಿ ತಿಂಗಳು ದ್ರವ್ಯತೆ (liquidity) ಸುಧಾರಣೆಗೆ ಕಾರಣವಾಗುತ್ತದೆ. ಅದಕ್ಕೂ ಹೆಚ್ಚಾಗಿ, ವಾಣಿಜ್ಯ ರಿಯಲ್ ಎಸ್ಟೇಟ್‌ನ ದೀರ್ಘಾವಧಿಯ ಹೂಡಿಕೆಯ ಪ್ರಗತಿ (Appreciation) ಪರಿಣಾಮವಾಗಿ, ಪ್ರತಿ ವರ್ಷ ಶೇ 5ರಿಂದ ಶೇ10ರಷ್ಟು ಹೂಡಿಕೆಯ ಪ್ರಗತಿಯೂ ಆಗುವ ಸಾಧ್ಯತೆ ಇರುತ್ತದೆ.
ಈ ಎಲ್ಲ ಸಾಧ್ಯತೆಗಳನ್ನು ಪರಿಗಣಿಸಿದಾಗ ಈ ದಶಕದ ಕೊನೆಯಲ್ಲಿ ಭಾರತದ ರಿಯಲ್ ಎಸ್ಟೇಟ್ ಮಾರುಕಟ್ಟೆಯ 1 ಟ್ರಿಲಿಯನ್ ಅಮೆರಿಕನ್ ಡಾಲರ್ ಮೌಲ್ಯ ತಲುಪುವ ಆಶಾವಾದವು ನಿಜವಾಗುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ.



