ಬೆಂಗಳೂರು, ಮಾ. 21 : ಸಿಲಿಕಾನ್ ಸಿಟಿಯಲ್ಲಿ ಬಾಡಿಗೆ ಮನೆಯನ್ನು ಹುಡುಕುವುದು ಎಂದರೆ, ಇರುವ ಕೆಲಸವನ್ನೆಲ್ಲಾ ಬಿಟ್ಟು ವಾರಾನುಗಟ್ಟಲೆ ಬೀದಿ ಬೀದಿಗಳಲ್ಲಿ ಸುತ್ತಾಡಬೇಕು. ಈಗ ಬಾಡಿಗೆ ಮನೆಗಳನ್ನು ಹುಡುಕಲು ಬ್ರೋಕರ್ ಗಳು ಹಾಗೂ ಹಲವು ಆಪ್ ಗಳು ಕೂಡ ಇವೆ. ಆದರೆ, ಸಮಸ್ಯೆ ಏನೆಂದರೆ, ನಮಗೆ ಇಷ್ಟವಾಗುವಂತಹ ಮನೆ ಸಿಕ್ಕರೆ, ಏರಿಯಾ ಬೇಕಾಗುವುದಿಲ್ಲ. ಏರಿಯಾ ಇಷ್ಟವಾದರೆ ಬಾಡಿಗೆ ಮನೆಯಲ್ಲಿ ಏನಾದರೂ ಒಂದು ಲೋಪಗಳು ಕಾಣಿಸಿಕೊಳ್ಳುತ್ತವೆ. ಇಲ್ಲವೇ ಬಾಡಿಗೆ ಹೆಚ್ಚು, ಮನೆ ಚಿಕ್ಕದು, ಮನೆ ಮಾಲೀಕರ ಕಂಡೀಷನ್ ಗಳು ಕೂಡ ಬಾಡಿಗೆದಾರರಿಗೆ ಸಮಸ್ಯೆ ಆಗಿ ಕಾಣುತ್ತದೆ.
ಹೀಗಿರುವಾಗ ಬಾಡಿಗೆ ಮನೆಗಳನ್ನು ಹುಡುಕುವವರಿಗೆ ಈಗ ಮತ್ತೊಂದು ತಲೆ ನೋವು ಎದುರಾಗಿದೆ. ಅದು ಏನೆಂದರೆ, ಮಾಲೀಕರು ಬಾಡಿಗೆ ನೀಡಲು ಲಿಂಕ್ಡ್‌ಇನ್ ನಲ್ಲಿ ಪ್ರೊಫೈಲ್ ಇದೆಯಾ ಎಂಬ ಹೊಸ ಚಕಾರ ಎತ್ತಿದ್ದಾರೆ. ಈ ಹಿಂದೆ ಮನೆ ಬಾಡಿಗೆಗ ಬೇಕೆಂದರೆ, ಆಧಾರ್ ಕಾರ್ಡ್ ಅಥವಾ ಯಾವುದಾದರೂ ಐಡೆಂಟಿಟಿ ಕಾರ್ಡ್ ನೀಡಬೇಕಿತ್ತು. ಇನ್ನು ಕೆಲವು ಕಡೆ ಬ್ಯಾಚುಲರ್ಸ್ ಗೆ ಮನೆ ಕೊಡುತ್ತಿರಲಿಲ್ಲ. ಇಲ್ಲವೇ ವೆಜ್ ಅಥವಾ ನಾನ್ ವೆಜ್ ಸೇವಿಸುವ ಬಗ್ಗೆ ಮಾಹಿತಿಯನ್ನು ಕೇಳುತ್ತಿದ್ದರು. ಇದು ಬಿಟ್ಟರೆ, ತಿಂಗಳಿಗೆ ಬಾಡಿಗೆ ಬಂದರಾಯ್ತು ಎನ್ನುತ್ತಿದ್ದ ಮನೆ ಮಾಲೀಕರು ಈಗ ಕಂಪ್ಲೀಟ್ ಆಗಿ ಅಪ್ ಡೇಟ್ ಆಗಿದ್ದಾರೆ.
ಈ ಬಗ್ಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದಕ್ಕೆ ಕಾರಣ ಗೌತಮ್ ಎಂಬುವರು ಮಾಡಿರುವ ಟ್ವೀಟ್. ಇವರು ಬೆಂಗಳೂರಿನಲ್ಲಿ ಮನೆಯನ್ನು ಹುಡುಕುತ್ತಿದ್ದು, ಇಂತಹ ಅನುಭವವಾಗಿದೆಯಂತೆ. ಇವರ ಟ್ವೀಟ್ ಗೆ ಸಾಕಷ್ಟು ಮಂದಿ ತಮಗೂ ಇಂತಹ ಅನುಭವ ಆಗಿದೆ ಎಂದು ಹೇಳಿದ್ದಾರೆ. ಮನೆ ಮಾಲೀಕರು ಮನೆ ಬಾಡಿಗೆ ಹುಡುಕುತ್ತಿರುವವರಿಗೆ ಮೊದಲು ಲಿಂಕ್‌ಡ್‌ಇನ್ ನಲ್ಲಿ ಇರುವ ಪ್ರೊಫೈಲ್ ಕಳಿಸುವಂತೆ ಹೇಳಿ, ಬಳಿಕ ಸ್ವ-ವಿವರದ ಕಿರು ಪರಿಚಯದ ಲೇಖನಗಳನ್ನು ಕೇಳುತ್ತಿದ್ದಾರೆ. ಎರಡೂ ಪ್ರೊಫೈಲ್ ಗಳನ್ನು ನೋಡಿ, ವ್ಯಕ್ತಿ ಕೆಲಸ ಮಾಡುತ್ತಿರುವ ಕಂಪನಿ ಹಾಗೂ ಅವರ ಆದಾಯದ ಬಗ್ಗೆ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳುತ್ತಿದ್ದಾರೆ.
ಬಳಿಕವಷ್ಟೇ, ಆ ವ್ಯಕ್ತಿ ಮನೆ ಬಾಡಿಗೆ ಪಡೆಯಲು ಅರ್ಹನಿದ್ದಾನಾ.? ಆತನಿಗೆ ಸಂಬಳ ಕರೆಕ್ಟ್ ಆಗಿ ಬರುತ್ತಿದೆಯೇ..? ಬಾಡಿಗೆಯನ್ನು ಮಿಸ್ ಮಾಡದೆಯೇ ಕಟ್ಟುತ್ತಾನಾ..? ಎಂಬ ಎಲ್ಲಾ ಮಾಹಿತಿಯನ್ನು ಪಡೆದು, ಬಳಿಕವಷ್ಟೇ ಮನೆ ಬಾಡಿಗೆ ನೀಡುವ ಯೋಚನೆ ಮನೆ ಮಅಲೀಕರದ್ದು. ತಮ್ಮ ಬಾಡಿಗೆ ಹಣದ ಮೇಲಿನ ಗ್ಯಾರೆಂಟಿಗಾಗಿ ಹೀಗೆ ಮಾಡುತ್ತಿದ್ದು, ಇದು ಈಗ ಬಾಡಿಗೆದಾರರಿಗೆ ಹೊಸ ತಲೆ ನೋವಾಗಿದೆ. ಲಿಂಕ್ಡ್ ಇನ್ ನಲ್ಲಿ ಪ್ರೊಫೈಲ್ ಇರಬೇಕೆಂದರೆ ಆತ ಯಾವುದಾದರೂ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿರಬೇಕು. ಇದು ಸದ್ಯ ಬಾಡಿಗೆದಾರರಿಗೆ ಬೆಂಗಳೂರಿನಲ್ಲಿ ಮನೆ ಹುಡುಕುವುದಕ್ಕಿಂತಲೂ ದೊಡ್ಡ ಕಷ್ಟದ ಸಂಗತಿಯಾಗಿದೆ.