ಬೆಂಗಳೂರು, ಡಿ. 20: ಒಬ್ಬ ವ್ಯಕ್ತಿಯ ಹೆಸರಿನಲ್ಲಿ ನೂರಾರು ಎಕರೆ ಆಸ್ತಿ ಇದೆ ಎಂದಿಟ್ಟುಕೊಳ್ಳಿ. ಆಸ್ತಿ ಮಾಲೀಕ ಏಕಾ ಏಕಿ ಮೃತಪಟ್ಟಿದ್ದರು. ಅವರ ಮಕ್ಕಳಿಗೆ ಆಸ್ತಿಯ ಹಕ್ಕು ವರ್ಗಾವಣೆ ಹೇಗೆ ಆಗುತ್ತದೆ. ಮೃತ ವ್ಯಕ್ತಿಯ ಹೆಸರಿನಲ್ಲಿರುವ ಆಸ್ತಿಯ ದಾಖಲೆಗಳನ್ನು ವಾರಸುದಾರರಿಗೆ ( ಪತ್ನಿ, ಮಕ್ಕಳು) ವರ್ಗಾವಣೆ ಮಾಡುವ ನಿಯಮ ಇಲ್ಲಿ ವಿವರಿಸಲಾಗಿದೆ.
ಖಾತಾದಾರ ಪೌತಿ (ಆಸ್ತಿ ಹೊಂದಿದ್ದ ವ್ಯಕ್ತಿ ಮೃತಪಟ್ಟಿದ್ದರೆ) ಆಗಿದ್ದಲ್ಲಿ ಹಿತಾಸಕ್ತಿದಾರರು ಪೌತಿ ವಾರಸು ಖಾತಾ ಮೊದಲು ಮಾಡಿಕೊಳ್ಳಬೇಕು. ಆ ನಂತರ ವಿಭಾಗ ಪತ್ರದ ಅನುಸಾರ ಪೈಕಿ ಹಿಸ್ಸಾ ವಿಂಗಡಿಸಿದ್ದಲ್ಲಿ 11-ಇ ಸ್ಕೆಚ್ ನಂತರ ವಿಭಾಗದ ಖಾತಾ ಚಾಲನೆಯಾಗುತ್ತದೆ. ಈಗ ಪೌತಿ ಖಾತಾ ನಿಯಮ ಹಾಗೂ (Flow Chart) ಹಂತಗಳು ಈ ಕೆಳಕಂಡಂತಿವೆ:
ಆನ್‌ಲೈನ್ ಅಪ್ಲಿಕೇಷನ್ ಸಲ್ಲಿಸುವ ಮುನ್ನ ಈ ಕೆಳಕಂಡ ಪ್ರಮುಖ ದಾಖಲೆಗಳು ಅರ್ಜಿಯೊಂದಿಗೆ ಲಗತ್ತಿಸಬೇಕು.
1. ಆನ್‌ಲೈನ್ ಅಪ್ಲಿಕೇಷನ್ ನಲ್ಲಿ ಪವತಿ ಖಾತಾ ಗೆ ಅರ್ಜಿ ಸಲ್ಲಿಸಬೇಕು.
2. ಚಾಲ್ತಿ ಸಾಲಿನ ಗಣಕ ಪಹಣಿ,
3.ಗಣಕ ಪಹಣಿ ಕಾಲಂ 10ರಲ್ಲಿ ಕಂಡ ಮ್ಯುಟೇಷನ್ ಕಾಪಿ,
4. ಪಹಣಿ ಕಾಲಂ- 9ರಲ್ಲಿ ಕಂಡ ಮೃತ ಖಾತಾದಾರನ ಹಾಗೂ ಅವರ ಮೃತ ಪತ್ನಿಯ ಮರಣ ಸಮರ್ಥನಾ ಪತ್ರ. (ಈಗ ಲಭ್ಯವಿಲ್ಲದಿದ್ದಲ್ಲಿ ತಹಶೀಲ್ದಾರ್/ ನಾಡ ಕಚೇರಿಯಲ್ಲಿ ಪಡೆಯಬಹುದು. ಬಹಳ ಹಳೆಯ ಮರಣಪತ್ರವಾಗಿದ್ದು, ಅದು ಲಭ್ಯವಿಲ್ಲದಿದ್ದಲ್ಲಿ ತಹಶೀಲ್ದಾರ್/ ನಾಡ ಕಚೇರಿ ಉಪತಹಶೀಲ್ದಾರರಲ್ಲಿ ಮನವಿ ಸಲ್ಲಿಸಿ ಹಿಂಬರಹ ಪಡೆದು ಸಿವಿಲ್ ಕೋರ್ಟ್‌ಗೆ ಸದರಿ ಹಿಂಬರಹದೊಂದಿಗೆ ದಾವಾ ಸಲ್ಲಿಸಿ ವಿಳಂಬ ನೋಂದಣಿಗೆ ದಾವಾ ಹೂಡಬಹುದು. ಸದರಿ ದಾವಾದಾರರಿಗೆ ನೋಟಿಸ್ ನೀಡಿ ಸಿವಿಲ್ ನ್ಯಾಯಾಲಯ ನೀಡುವ ಆದೇಶದ ಕಾಪಿಯನ್ನು ತಹಶೀಲ್ದಾರ್‌ರವರಲ್ಲಿ/ ಉಪತಹಶೀಲ್ದಾರ್ ರವರಲ್ಲಿ ಸಲ್ಲಿಸಿದಲ್ಲಿ ವಿಳಂಬ ನೋಂದಣಿ ಶುಲ್ಕ ಪಡೆದು ಮರಣ ನೋಂದಣಿ ವಹಿಯಲ್ಲಿ ದಾಖಲಿಸಿ ಮರಣ ನೋಂದಣಿ ಕಾಪಿಯನ್ನು ದಾವಾ ಅರ್ಜಿ ದಾರನಿಗೆ ನೀಡಲಾಗುತ್ತದೆ. ಸದರಿ ಕಾಪಿಯನ್ನು ಪೌತಿ ಖಾತಾ ಸಂದರ್ಭದಲ್ಲಿ ಆನ್‌ಲೈನ್ ಅರ್ಜಿಯೊಂದಿಗೆ ಲಗತ್ತಿಸಬಹುದು.
5. ಮೃತ ಖಾತಾದಾರನ ವಂಶವೃಕ್ಷ ವಿವರ (ನೋಟರಿ ಅಫಿಡವಿಟ್‌ನೊಂದಿಗೆ) ಆನ್‌ಲೈನ್‌ನಲ್ಲಿ ಸಕಾಲ ಶಾಖೆಗೆ ಸಲ್ಲಿಸಿ ಅಧಿಕೃತ ವಂಶವೃಕ್ಷ ದೃಢೀಕರಣ ಪತ್ರ ತಹಶೀಲ್ದಾರ್/ ಉಪತಹಶೀಲ್ದಾರ್ ರವರಿಂದ ಪಡೆಯಬೇಕು.
6. ವಂಶವೃಕ್ಷದಲ್ಲಿ ಕಂಡ ಖಾತಾದಾರನ ಪತ್ನಿ/ ಪತ್ನಿಯರು ಜೀವಂತ ಇಲ್ಲದಿದ್ದಲ್ಲಿ ಅವರ ಮರಣಪತ್ರ ಹಾಗೂ ವಂಶವೃಕ್ಷ ಪಡೆಯಬೇಕು.
7. ಈ ಮೇಲ್ಕಂಡ ದಾಖಲಾತಿಗಳೊಂದಿಗೆ ಭೂಮಿ ಶಾಖೆಗೆ ಆನ್‌ಲೈನ್ ಅರ್ಜಿ ಸಲ್ಲಿಸಿದ ನಂತರ ಡಿಇಓ (ಡಾಟಾ ಎಂಟ್ರಿ ಆಪರೇಟರ್) ಅವರು ಮೇಲಿನ ಮಾಹಿತಿ ಆಧರಿಸಿ ಚೆಕ್‌ಲಿಸ್ಟ್ ಅನ್ನು ತಯಾರಿಸಿ ಸಕ್ಷಮ ಅಧಿಕಾರಿಯ ಅನುಮೋದನೆ ಪಡೆದು ಎಂ.ಆರ್. ವಹಿ ಸಾರ್ವಜನಿಕ ತಿಳುವಳಿಕೆ ನಮೂನೆ-12 ಹಾಗೂ ನಮೂನೆ-21ನ್ನು ತಯಾರಿಸಿ ಮೇಲ್ಕಂಡ ದಾಖಲೆಗಳೊಂದಿಗೆ ಆರ್. ಆರ್. ಶಾಖೆಯಿಂದ ನಾಡ ಕಚೇರಿ ಉಪತಹಶೀಲ್ದಾರ್/ ಹೋಬಳಿ ರಾಜಸ್ವ ನಿರೀಕ್ಷರ ಮೂಲಕ ಗ್ರಾಮ ಲೆಕ್ಕಿಗರಿಗೆ ಕಡತ ರವಾನೆಯಾಗುತ್ತದೆ.
8. ಮೇಲ್ಕಂಡ ಮೂಲ ಕಡತ ಪಡೆದ ಗ್ರಾಮ ಲೆಕ್ಕಿಗರು ಗ್ರಾಮ ವೃತ್ತದ ಪ್ರಮುಖ ಪ್ರಕಟಣಾ ಫಲಕದಲ್ಲಿ ಹಾಗೂ ಜಮೀನಿನ ಬಳಿ ನಮೂನೆ- 12ನ್ನು ಪ್ರಚುರ ಪಡಿಸಿ ಗ್ರಾಮದ ಪ್ರಮುಖ ವ್ಯಕ್ತಿಗಳ ಪಂಚನಾಮೆ ಸಹಿ ಪಡೆಯಲಾಗುವುದು. 9. ಮೇಲ್ಕಂಡ ಮೂಲ ಕಡತ ಪಡೆದ ಗ್ರಾಮ ಲೆಕ್ಕಿಗರು ಗ್ರಾಮ ವೃತ್ತದ ಪರಿಧಿಯಲ್ಲಿ ಸದರಿ ಅರ್ಜಿದಾರರು ಹಾಗೂ ಹಿತಾಸಕ್ತಿದಾರರು ಇದ್ದಲ್ಲಿ ಸದರಿ ನಮೂನೆ-21ರ ವೈಯಕ್ತಿಕ ನೋಟಿಸನ್ನು ಸಂಬಂಧಪಟ್ಟವರಿಗೆ ಜಾರಿ ಮಾಡಲಾಗುವುದು. ಸದರಿ ವಿಳಾಸ ದಾರರು ಗ್ರಾಮದಲ್ಲಿ ಲಭ್ಯವಿಲ್ಲದಿದ್ದಲ್ಲಿ ಸಂಬಂಧಪಟ್ಟವರಿಂದ ಅವರ ಅಂಚೆ ವಿಳಾಸ ಪಡೆದು ಈ ಬಗ್ಗೆ ಗ್ರಾಮಸ್ಥರ ಸ್ಪಷ್ಟ ವಿಳಾಸ ಇರುವ ಮೂವರ ಸಹಿ ಪಡೆದು ಖಾತಾ ಅರ್ಜಿದಾರನಿಂದ ಅಂಚೆ ಲಕೋಟೆಗೆ ಸಲ್ಲುವ ಮೊತ್ತದ ಅಂಚೆ ಮೊಹರನ್ನು ಪಡೆದು ಅಂಚೆಯಲ್ಲಿ ಸದರಿ ಅಲಭ್ಯ ವಿಳಾಸದಾರನಿಗೆ ವೈಯಕ್ತಿಕ ನೋಟಿಸ್ ರವಾನಿಸಬಹುದು. ನೋಟಿಸ್ ಪಡೆದ ದಿನಾಂಕದಿಂದ 30ದಿನ ನಿರೀಕ್ಷಿಸಿ ಸದರಿ ನೋಟಿಸ್‌ದಾರ ಕೊಡುವ ಒಪ್ಪಿಗೆ ಅಥವಾ ಆಕ್ಷೇಪಣೆ ಅಂಶಗಳನ್ನು ಗ್ರಾ.ಲೆ/ ರಾ.ನಿ ಅವರು ಆಕಾರಬಂದ್ ಹಾಗೂ ಖಾತಾ ಲೆಡ್ಜರ್ ಇತ್ಯಾದಿಯಲ್ಲಿರುವ ಮಾಹಿತಿ ಖಾತ್ರಿಪಡಿಸಿಕೊಂಡ ನಂತರ ಪೂರ್ಣ ವರದಿ ಮೂಲಕ ಅಂಗೀಕಾರ ಕ್ರಮಕ್ಕೆ ಕಡತ ಸಲ್ಲಿಸಬೇಕು.
10. ಆ ಬಳಿಕ 30 ದಿನಗಳ ನಂತರ ನಮೂನೆ-12ರ ಪ್ರಚುರ ಪ್ರಕಟಣೆಗೆ ಹಾಗೂ ನಮೂನೆ-21ರ ವೈಯಕ್ತಿಕ ನೋಟಿಸ್‌ಗೆ ಯಾರಿಂದಲೂ ಆಕ್ಷೇಪಣೆ ಬರದಿದ್ದಲ್ಲಿ ಈ ಎರಡೂ ನೋಟಿಸ್‌ಗಳು ಪ್ರಚುರ ಪಡಿಸಿದ 30 ದಿನಗಳ ನಂತರ ಮೇಲ್ಕಂಡ ಪೂರ್ಣಕಡತ ರಾಜಸ್ವ ನಿರೀಕ್ಷಕರ ಮೂಲಕ ಸೂಕ್ತ ಷರಾ (ವರದಿ)ದೊಂದಿಗೆ ತಹಶೀಲ್ದಾರ್/ ಉಪತಹಶೀಲ್ದಾರ್‌ರವರಿಗೆ ಮ್ಯುಟೇಷನ್ ಅಂಗೀಕಾರ ಆದೇಶಕ್ಕೆ ಸಲ್ಲಿಸಬಹುದು.
11. ಈ ಮೇಲ್ಕಂಡ ಕ್ರಮಸಂಖ್ಯೆ 10ರಲ್ಲಿ ಕಂಡಂತೆ ಮ್ಯುಟೇಷನ್ ಅಂಗೀಕಾರವಾದನಂತರ ಗಣಕ ತಂತ್ರಾಂಶದ ಪ್ರಕಾರ ಸ್ವಯಂಚಾಲನೆ ಮೂಲಕ ಅಧಿಕೃತ ಮ್ಯುಟೇಷನ್ ಗಣಕದಲ್ಲಿ ದಾಖಲಾಗುತ್ತದೆ ಹಾಗೂ ಅದರ ಮಾಹಿತಿ ಚಾಲ್ತಿ ಸಾಲಿನ ಪಹಣಿಗೆ ಇಂಡೀಕರಣವಾಗುತ್ತದೆ. ಸದರಿ ಮ್ಯುಟೇಷನ್ ಹಾಗೂ ಅಧಿಕೃತ ಇಂಡೀಕರಣ ಗಣಕ ಪಹಣಿಯನ್ನು ಭೂಮಿ ಕಿಯೋಸ್ಕ್ ಬೂತ್‌ನಲ್ಲಿ ಅಧಿಕೃತ ದಾಖಲೆಯಾಗಿ ಅರ್ಜಿದಾರ ಹಾಗೂ ಹಿತಾಸಕ್ತಿದಾರರು ಪಡೆದು ದಾಖಲೆಯಾಗಿ ಸಂರಕ್ಷಿಸಬಹುದು.
12. ಆ ನಂತರ 30 ದಿನಗಳ ನಂತರ ನಮೂನೆ-12ರ ಪ್ರಚುರ ಪ್ರಕಟಣೆಗೆ ಹಾಗೂ ನಮೂನೆ-21ರ ವೈಯಕ್ತಿಕ ನೋಟಿಸ್‌ಗೆ ಯಾರಿಂದಲಾದರೂ ಆಕ್ಷೇಪಣೆ ಬಂದಿದ್ದಲ್ಲಿ ಹಾಗೂ ಈ ಎರಡೂ ನೋಟಿಸ್‌ಗಳು ಪ್ರಚುರ ಪಡಿಸಿದ 30 ದಿನಗಳ ನಂತರ ಮೇಲ್ಕಂಡ ಪೂರ್ಣಕಡತ ರಾಜಸ್ವ ನಿರೀಕ್ಷಕರ ಮೂಲಕ ತಹಶೀಲ್ದಾರ್/ ಉಪತಹಶೀಲ್ದಾರ್‌ರವರಿಗೆ ಮುಂದಿನ ಪ್ರಕರಣ ವಿಚಾರಣಾ ಕ್ರಮಕ್ಕೆ ಪೂರ್ಣಕಡತ ಸಲ್ಲಿಸಬಹುದು.
13. ಸದರಿ ವಿವಾದ ಪ್ರಕರಣದ ಮೂಲ ಕಡತವನ್ನು ಸಕ್ಷಮ ಅಧಿಕಾರಿ ಸಕ್ಷಮ ಶಾಖೆಯಲ್ಲಿ ಕಾಯ್ದಿರಿಸಿಕೊಂಡು ಉಭಯ ಪಕ್ಷಗಳಿಗೂ ಭೂ ಕಂದಾಯ ಕಾಯ್ದೆ ಹಾಗು ನಿಯಮ ಅನುಸಾರ ವಿಚಾರಣಾ ನೋಟಿಸ್ ನೀಡಿ ಆಕ್ಷೇಪಣೆಗೆ ಪೂರಕವಾದ ದಾಖಲೆಗಳನ್ನು ಹಾಜರುಪಡಿಸಲು ತಿಳಿಸಿ ವಿಚಾರಣೆ ಪ್ರಾರಂಭಿಸಲಾಗುತ್ತದೆ. ಆಕ್ಷೇಪಣೆ ಸಲ್ಲಿಸಿರುವ ವ್ಯಕ್ತಿ ಸೂಕ್ತ ದಾಖಲೆ ಸಲ್ಲಿಸಲು ವಿಫಲನಾದಲ್ಲಿ ಮೇಲ್ಕಂಡ ಮ್ಯುಟೇಷನ್ ಪ್ರಕರಣ ಅಂಗೀಕಾರಕ್ಕೆ ಸಂಬಂಧಪಟ್ಟ ಅಧಿಕಾರಿಗೆ ಪೂರ್ಣಕಡತದೊಂದಿಗೆ ರವಾನಿಸಲಾಗುತ್ತದೆ.
14. ಕೋರ್ಟ್ ಪ್ರಕರಣದ ಮಾದರಿ ಮೂಲಕ ಸಕ್ಷಮ ಅಧಿಕಾರಿಯಿಂದ ಮ್ಯುಟೇಷನ್ ಅಂಗೀಕಾರವಾದ ನಂತರ ಈ ಮೇಲ್ಕಂಡ ಕ್ರಮಸಂಖ್ಯೆ 10ರಲ್ಲಿ ಕಂಡಂತೆ ಮ್ಯುಟೇಷನ್ ಅಂಗೀಕಾರವಾದನಂತರ ಗಣಕ ತಂತ್ರಾಂಶದ ಪ್ರಕಾರ ಸ್ವಯಂಚಾಲನೆ ಮೂಲಕ ಅಧಿಕೃತ ಮ್ಯುಟೇಷನ್ ಗಣಕದಲ್ಲಿ ದಾಖಲಾಗುತ್ತದೆ ಹಾಗೂ ಅದರ ಮಾಹಿತಿ ಚಾಲ್ತಿ ಸಾಲಿನ ಪಹಣಿಗೆ ಇಂಡೀಕರಣವಾಗುತ್ತದೆ. ಸದರಿ ಮ್ಯುಟೇಷನ್ ಹಾಗೂ ಅಧಿಕೃತ ಇಂಡೀಕರಣ ಗಣಕ ಪಹಣಿಯನ್ನು ಭೂಮಿ ಕಿಯೋಸ್ಕ್ ಬೂತ್‌ನಲ್ಲಿ ಅಧಿಕೃತ ದಾಖಲೆಯಾಗಿ ಅರ್ಜಿದಾರ ಹಾಗೂ ಹಿತಾಸಕ್ತಿದಾರರು ಪಡೆದು ದಾಖಲೆಯಾಗಿ ಸಂರಕ್ಷಿಸಬಹುದು.
15. ಸದರಿ ಮ್ಯುಟೇಷನ್ ಪ್ರಕಣದಲ್ಲಿ ಆಕ್ಷೇಪಣೆ ಸಲ್ಲಿಸಿದ ವ್ಯಕ್ತಿ ಆಕ್ಷೇಪಣೆಗೆ ಸಮರ್ಥನೆ ಮಾಡುವಂತಹ ಅಧಿಕೃತ ಪುರಾವೆ/ದಾಖಲೆಗಳನ್ನು ಸಲ್ಲಿಸಿದಲ್ಲಿ ವಿವಾದ ಪ್ರಕರಣದ ಸಕ್ಷಮ ಪೀಠಾಧಿಕಾರಿ ಈ ಪ್ರಕರಣವನ್ನು ತಕರಾರು ಪ್ರಕರಣವೆಂದು ಪರಿಗಣಿಸಿ ಖಾತಾ ಅರ್ಜಿಯನ್ನು ಸಕಾರಣ ನೀಡಿ ವಜಾ ಮಾಡಬಹುದು.
16. ಈ ಮೇಲ್ಕಂಡ ಕ್ರಮಸಂಖ್ಯೆ 15ರಲ್ಲಿ ಕಂಡಂತೆ ಸದರಿ ಖಾತಾ ಅರ್ಜಿದಾರ ಸಂತ್ರಸ್ತನಾಗಿದ್ದಲ್ಲಿ ಭೂಕಂದಾಯ ಕಾಯ್ದೆ ಸೆಕ್ಷನ್ 136(2)ರ ಪ್ರಕಾರ ಆಯಾ ತಾಲ್ಲೂಕು ಪರಿಧಿಯ ಉಪವಿಭಾಗಾಧಿಕಾರಿ (ಅಸಿಸ್ಟಂಟ್ ಕಮೀಷನರ್) ಯವರಲ್ಲಿ ಸಕಾರಣ ದಾಖಲೆ ಮೂಲಕ ನಿಗದಿತ ಅವಧಿಯಲ್ಲಿ ಮೇಲ್ಮನವಿ ಸಲ್ಲಿಸಿ ಪರ್ಯಾಯ ಪರಿಹಾರ ಕಂಡುಕೊಳ್ಳಬಹುದು. ಸದರಿ ಉಪವಿಭಾಗಾಧಿಕಾರಿ (ಅಸಿಸ್ಟಂಟ್ ಕಮೀಷನರ್)ರವರ ನ್ಯಾಯಾಲಯದ ಮೇಲ್ಮನವಿ ಆದೇಶಕ್ಕೆ ಅತೃಪ್ತನಾಗಿದ್ದಲ್ಲಿ ಭೂಕಂದಾಯ ಕಾಯ್ದೆ ಸೆಕ್ಷನ್ 136(2)ರ ಪ್ರಕಾರ ಮಾನ್ಯ ಜಿಲ್ಲಾಧಿಕಾರಿಯವರಲ್ಲಿ ಪರಿಷ್ಕೃತ ಮೇಲ್ಮನವಿ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಬಹುದು. ಇದು ಅಂತಿಮ ಆದೇಶವಾಗಿರುತ್ತದೆ ಹಾಗೂ ನಂತರ ನಿಯಮಾನುಸಾರ ಸಂತ್ರಸ್ತ ಅರ್ಜಿದಾರ ಸಂಬಧಪಟ್ಟ ನ್ಯಾಯಾಲಯಲ್ಲಿ ಸಂವಿಧಾನ ಹಾಗೂ ಇತರೆ ಕಾನೂನು ಪ್ರಕಾರ ನಿಗದಿತ ಅವಧಿಯಲ್ಲಿ ರಿಟ್/ ರಿವಿಜನ್ ಅರ್ಜಿ ಸಲ್ಲಿಸಿ ನ್ಯಾಯ ಪಡೆಯಬಹುದು.
17. ಈ ಮೇಲ್ಕಂಡ ಎಲ್ಲಾ ಮಾಹಿತಿ ಮತ್ತು ದಾಖಲೆ ಆಧರಿಸಿ ಗ್ರಾಮ ವೃತ್ತದ ಗ್ರಾಮ ಲೆಕ್ಕಿಗರು ಗ್ರಾಮ ಲೆಕ್ಕಿಗರ ಕೈಪಿಡಿ ಅನುಸಾರ ನಮೂನೆ-1ರಿಂದ 12ರವರೆಗಿನ ವಹಿಗಳಲ್ಲಿ ಮೇಲ್ಕಂಡ ಹಕ್ಕು ಬದಲಾವಣೆಗಳನ್ನು ಇಂಡೀಕರಿಸಿಕೊಂಡು ಖಾತಾ ಲೆಡ್ಜರ್ ವಹಿ, ಕಂದಾಯ ಲೆಡ್ಜರ್ ವಹಿ ಇತ್ಯಾದಿ ಮಾಹಿತಿಗಳು ಗ್ರಾಮ ಲೆಕ್ಕಿಗರ ಕಚೇರಿಯಲ್ಲಿ ಕ್ರೋಡೀಕರಣವಾದ ನಂತರ ಆಯಾ ಕಂದಾಯ ವರ್ಷದಲ್ಲಿ ಆಯಾ ಕಂದಾಯ ವೃತ್ತದ ಗ್ರಾಮಗಳ ಲೆಕ್ಕಗಳು ತಾಲ್ಲೂಕು ತಹಶೀಲ್ದಾರ್ ಹಂತದಲ್ಲಿ (ಡಿಟ್ಟಂ) ಹಾಗೂ ಉಪವಿಭಾಗಾಧಿಕಾರಿ ಮಟ್ಟದ ಹುಜೂರ್ ಜಮಾಬಂಧಿ ಗ್ರಾಮಸಭೆಯಲ್ಲಿ ಪರಿಶೀಲಿಸಿ ಅಂಗೀಕಾರಗೊಳ್ಳುತ್ತವೆ. ವ್ಯತ್ಯಾಸವಿದ್ದಲ್ಲಿ ಗ್ರಾಮ ವೃತ್ತದ ಗ್ರಾಮ ಲೆಕ್ಕಿಗರಿಗೆ ಸೂಕ್ತ ಸಲಹೆ ಸೂಚನೆ ಕೊಟ್ಟ ನಂತರ ಅದರಂತೆ ಸದರಿ ಗ್ರಾಮ ಲೆಕ್ಕಿಗರು ವ್ಯತ್ಯಾಸಗಳನ್ನು ಸರಿಪಡಿಸಿಕೊಂಡು ಗ್ರಾಮ ದಾಖಲೆಗಳನ್ನು ಸಂಬಂಧಪಟ್ಟ ವಹಿಗಳಲ್ಲಿ ಮಾಹಿತಿ ತುಂಬಿ ತದನಂತರ ಗ್ರಾಮ ಲೆಕ್ಕಿಗರ ಗ್ರಾಮ ದಾಖಲೆಗಳು ಅಧಿಕೃತ ದಾಖಲೆಯಾಗಿ ಸಂರಕ್ಷಿಸುತ್ತಾರೆ.
18. ಮೇಲ್ಕಂಡ ಡಿಟ್ಟಂ ಹಾಗೂ ಹುಜೂರ್ ಜಮಾಬಂಧಿ ಸಂದರ್ಭದಲ್ಲಿ ಸಾರ್ವಜನಿಕರು ಆಯಾ ಗ್ರಾಮ ವೃತ್ತದ ಗ್ರಾಮಗಳ ಪಟ್ಟಾದಾರರು (ರೈತರು) ಯಾವುದೇ ವಿಚಾರದಲ್ಲಿ ಸಂತ್ರಸ್ತರಾಗಿದ್ದಲ್ಲಿ ತಹಶೀಲ್ದಾರ್‌ರವರಿಗೆ ಹಾಗೂ ಹುಜೂರ್ ಜಮಾಬಂಧಿ ಅಧಿಕಾರಿಗೆ ದೂರು ಸಲ್ಲಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಈ ಬಗ್ಗೆ ಬಂದ ದೂರುಗಳನ್ನು ಗ್ರಾಮ ಲೆಕ್ಕಿಗರು ದೂರು ಅರ್ಜಿ ವಹಿಗೆ ದಾಖಲಿಸಿಕೊಂಡು ಸಂತ್ರಸ್ತ ಅರ್ಜಿದಾರನಿಗೆ ಹಿಂಬರಹದ ಮೂಲಕ ಮಾಹಿತಿ ನೀಡಬಹುದು.



