ಬೆಂಗಳೂರು:ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್‌ಐ )ನೇಮಕಾತಿಯಲ್ಲಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚನೆ ನೀಡಿದೆ.ಇಲ್ಲಿಯವರೆಗೆ ನಡೆದಿರುವ ತನಿಖೆ, ತೆಗೆದುಕೊಂಡಂತಹ ಕ್ರಮದ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದ್ದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ ಸರ್ಕಾರಕ್ಕೆ ನೋಟಿಸ್ ಜಾರಿ ನೀಡಿದ್ದು, ಮುಂದಿನ ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ.ಪ್ರಮುಖವಾಗಿ ಎಡಿಜಿಪಿ ಅಮೃತ್ ಪಾಲ್ ಬಂಧಿಸಿರುವ ಬಗ್ಗೆ ಪ್ರತ್ಯೇಕವಾದ ಮಾಹಿತಿಯನ್ನು ಕೇಳಿದ್ದು, ಬಳಿಕ ತೆಗೆದುಕೊಂಡ ಪ್ರಸ್ತುತ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.
ಪ್ರಾಮಾಣಿಕ ಅಭ್ಯರ್ಥಿಗಳಿಗೆ ತೊಂದರೆ: ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ರಾಜ್ಯದಲ್ಲಿ ನಡೆದಿರುವ ಈ ಹಗರಣದಿಂದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ತೀವ್ರ ಸ್ವರೂಪದ ತೊಂದರೆ ಆಗಿದೆ. ಬ್ಲೂಟೂತ್ ಬಳಕೆ ಮತ್ತು ಒಎಂಆರ್ ತಿದ್ದಿರುವ ಆರೋಪ ಇದೆ. ಈ ಘಟನೆಯ ಹಿಂದೆ ಹಿರಿಯ ಅಧಿಕಾರಿಗಳ ಕೈವಾಡ ಇದ್ದು, ನ್ಯಾಯಾಲಯ ಪರಿಶೀಲನೆ ಮಾಡಬೇಕು ಎಂದು ವಾದ ಮಂಡಿಸಿದರು.ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ನೇಮಕಾತಿ ದಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಪಿಎಸ್‌ಐ (ಸಿವಿಲ್) ನೇಮಕಾತಿ ಸಮಿತಿಯ ಅಧ್ಯಕ್ಷರು ಹಾಗೂ ಸಿಐಡಿ ಪರವಾಗಿ ನೋಟಿಸ್ ಸ್ವೀಕರಿಸಲು ಸರ್ಕಾರದ ವಕೀಲ ಲಕ್ಷ್ಮಿಕಾಂತ್ ಅವರಿಗೆ ಸೂಚಿಸಿರುವ ಪೀಠವು ಪ್ರಕರಣದ ಹಾಲಿ ಸ್ಥಿತಿಗತಿ ಒಳಗೊಂಡು ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದೆ. ಅಲ್ಲದೇ, ನಾಲ್ಕು ವಾರಗಳ ಬಳಿಕ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲು ಆದೇಶಿಸಿದೆ.
ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದ ಇಲ್ಲಿಯವರೆಗೆ ವಿವಿಧೆಡೆ ದಾಖಲಾಗಿರುವ ಎಫ್‌ಐಆರ್ ಮತ್ತು ದೂರುಗಳಿಗೆ ಸಂಬಂಧಿಸಿದ ಸಂಪೂರ್ಣವಾದ ತನಿಖಾ ದಾಖಲೆಗಳನ್ನು ಸಲ್ಲಿಸಲು ಸಿಐಡಿಗೆ ಆದೇಶಿಸಬೇಕು. ಪ್ರಕರಣದ ತನಿಖೆ ನಡೆಸಿರುವ ಸಿಐಡಿಗೆ ಪೊಲೀಸ್ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಮೃತ್ ಪೌಲ್ ಬಂಧನ ಬಳಿಕದ ಸ್ಥಿತಿಗತಿಯ ಕುರಿತು ಮಾಹಿತಿ ನೀಡಲು ನಿರ್ದೇಶಿಸಬೇಕು. ನ್ಯಾಯಯುತ, ಸ್ವತಂತ್ರ ಮತ್ತು ಪಾರದರ್ಶಕವಾಗಿ ತನಿಖೆ ನಡೆಸಲು ರಾಜ್ಯ ಸರ್ಕಾರ ಮತ್ತು ಸಿಐಡಿಗೆ ನಿರ್ದೇಶಿಸಬೇಕು ಎಂದು ಪಿಐಎಲ್‌ನಲ್ಲಿ ಕೋರಲಾಗಿದೆ.