ಬೆಂಗಳೂರು: ವೇತನ ಪರಿಷ್ಕರಣೆಗೆ ಆಗ್ರಹಿಸಿ, 7ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ನಾಳೆಯಿಂದ ಅನಿರ್ದಿಷ್ಟಾವಧಿಗೆ ರಾಜ್ಯ ಸರ್ಕಾರಿ ನೌಕರರು ಮುಷ್ಕರ ನಡೆಸಲಿದ್ದಾರೆ. ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತು ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡದ್ದನ್ನು ಖಂಡಿಸಿ ಹಾಗೂ ಹೊಸ ಪಿಂಚಣಿ ನೀತಿ ರದ್ದತಿಗೆ ಆಗ್ರಹಿಸಿ 5.11ಲಕ್ಷ ನೌಕರರು ನಾಳೆಯಿಂದ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ಮಾಡಲಿದ್ದಾರೆ.ರಾಜ್ಯದ 2023-24 ನೇ ಸಾಲಿನ ಆಯ-ವ್ಯಯದಲ್ಲಿ ಸರ್ಕಾರಿ ನೌಕರರ ವೇತನ-ಭತ್ಯೆಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪ ಮಾಡದಿರುವುದು ಸಹಜವಾಗಿಯೇ ನೌಕರರಲ್ಲಿ ನಿರಾಶೆ ಮೂಡಿಸಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಶೇ.25 ಕ್ಕೂ ಅಧಿಕ ವ್ಯತ್ಯಾಸವಿದ್ದು ದೇಶದ ಇತರೇ ರಾಜ್ಯಗಳಿಗೆ ಹೋಲಿಸಿದ್ದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳು ಅತ್ಯಂತ ಕಡಿಮೆ ಇವೆ ಎಂದರು.
ನೌಕರರ ಪ್ರಮುಖ ಬೇಡಿಕೆಯಾದ, ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರಿಗೆ 7ನೇ ವೇತನ ಆಯೋಗದಿಂದ ಶೀಘ್ರವಾಗಿ ಮಧ್ಯಂತರ ವರದಿಯನ್ನು ಪಡೆದು, ಚುನಾವಣೆ ನೀತಿ ಸಂಹಿತೆಜಾರಿಗೆ ಮೊದಲು ಶೇ. 40% ಫಿಟ್‍ಮೆಂಟ್ ಸೌಲಭ್ಯವನ್ನು ದಿನಾಂಕ: 01-07-2022ರಿಂದ ಜಾರಿಗೆ ಬರುವಂತೆ ಸರ್ಕಾರಿಆದೇಶ ಹೊರಡಿಸುವುದು. ಮತ್ತು ರಾಜ್ಯದಲ್ಲಿ ಎನ್.ಪಿ.ಎಸ್. ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಕುರಿತಂತೆ ಸರಕಾರದಿಂದ ಸ್ಪಷ್ಟ ಆದೇಶ ದೊರೆಯುವ ವರೆಗೂ ಮುಷ್ಕರ ಮುಂದುವರೆಯಲಿದೆ ಎಂದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾಯಂ ಪೌರ ಕಾರ್ಮಿಕರು, ಉಪ ನೋಂದಣಾಧಿಕಾರಿ ಕಚೇರಿ ಸಿಬ್ಬಂದಿಯೂ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ,ಗ್ರಾಮ ಪಂಚಾಯಿತಿ ಸಿಬ್ಬಂದಿ, ನಗರ ಸ್ಥಳೀಯ ಸಂಸ್ಥೆಗಳು,ಗ್ರಾಮ ಲೆಕ್ಕಿಗರಿಂದ ಹೆಚ್ಚುವರಿ ಜಿಲ್ಲಾಧಿಕಾರಿವರೆಗಿನ ಅಧಿಕಾರಿ, ಆರೋಗ್ಯ, ಶಿಕ್ಷಣ, ನಾಗರಿಕ ಸೇವಾ ವಲಯಕ್ಕೆ ಸಂಬಂಧಿಸಿದ ಇಲಾಖೆಗಳ ನೌಕರರು, ಅರಣ್ಯ ಇಲಾಖೆ, ವಿವಿಧ ನಿಗಮ, ಮಂಡಳಿಗಳ ನೌಕರರು ಸೇರಿ ಹಲವಾರು ಇಲಾಖೆಗಳು ಈ ಮುಷ್ಕರಕ್ಕೆ ಕೈ ಜೋಡಿಸಿವೆ. ಮಾ. 1ರಿಂದ ತಮ್ಮ ಕರ್ತವ್ಯಕ್ಕೆ ಹಾಜರಾಗದೇ ಗೈರು ಆಗುವ ಮೂಲಕ ಸರ್ಕಾರಿ ನೌಕರರು ಪ್ರತಿಭಟನೆಗೆ ಸಾಥ್ ನೀಡಲಿದ್ದಾರೆ. ಇದರಿಂದ, ಹಲವಾರು ಇಲಾಖೆಗಳ ಸೇವೆಗಳು ಅಲಭ್ಯವಾಗುವ ಸಾಧ್ಯತೆಗಳಿವೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ, ಒಳರೋಗಿಗಳ ಆರೈಕೆ ಸೇವೆಗಳು ದೊರಕುತ್ತವೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ತಮ್ಮ ಬೇಡಿಕೆ ಈಡೇರಿಸುವಂತೆ ಮುಷ್ಕರ ನಡೆಸಲಿದ್ದಾರೆ. ಬಸ್ ಗಳ ಸಂಚಾರ ಎಂದಿನಂತಿರುತ್ತದೆ. ವಿವಿಗಳಲ್ಲಿ ತರಗತಿಗಳು ಎಂದಿನಂತೆ ನಡೆಯಲಿವೆ. ಕಸ ಸಂಗ್ರಹದಲ್ಲಿ ವ್ಯತ್ಯಯ, ಶಾಲಾ-ಕಾಲೇಜುಗಳು ಬಂದ್, ಹೊರ ರೋಗಿಗಳ ಸೇವೆ ಸರ್ಕಾರಿ ಆಸ್ಪತ್ರೆಗಳಲ್ಲಿ ಅಲಭ್ಯ, ಆಸ್ತಿ ನೋಂದಣಿ ಸ್ಥಗಿತ, ತಹಶೀಲ್ದಾರ್ ಕಚೇರಿ ಬಂದ್, ಅಹವಾಲು ಸಲ್ಲಿಕೆ ಸೇವೆಗಳಿಗೆ ವ್ಯತ್ಯಯವುಂಟಾಗಲಿದೆ.ಮುಷ್ಕರ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದಂತೆ, ನೌಕರರು ಪ್ರತಿಭಟನೆ, ಉಪವಾಸ ಸತ್ಯಾಗ್ರಹ, ಧರಣಿ, ಸರ್ಕಾರದ ವಿರುದ್ಧ ಘೋಷಣೆ ಕೂಗುವಂತಿಲ್ಲ ಎಂದು ನೌಕರರ ಸಂಘ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.
ಯಾವ್ಯಾವ ಸೇವೆಗಳು ನಿಲುಗಡೆ?
ಗ್ರಾಮ ಪಂಚಾಯಿತಿ ಸಿಬ್ಬಂದಿ, ಶಿಕ್ಷಕರು, ನಗರ ಸ್ಥಳೀಯ ಸಂಸ್ಥೆಗಳು, ಬಿಬಿಎಂಪಿ ಕಾಯಂ ಪೌರಕಾರ್ಮಿಕರು, ಉಪನೋಂದಣಾಧಿಕಾರಿ ಕಚೇರಿ ಸಿಬ್ಬಂದಿ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಶಾಲಾ ಕಾಲೇಜು, ತ್ಯಾಜ್ಯ ವಿಲೇವಾರಿ, ಕಂದಾಯ ಮತ್ತು ಆರೋಗ್ಯ ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಆರೋಗ್ಯ ಇಲಾಖೆ
ಆರೋಗ್ಯ ಇಲಾಖೆಯ ಸೇವೆಗಳಲ್ಲಿ ಹೊರರೋಗಿಗಳ ಸೇವೆಗಳು ಪೂರ್ಣವಾಗಿ ಬಂದ್ ಆಗಲಿವೆ. ಆದರೆ, ಒಳರೋಗಿಗಳ ಸೇವೆಗಳು, ಐಸಿಯು, ಆ್ಯಂಬುಲೆನ್ಸ್, ಶಸ್ತ್ರಚಿಕಿತ್ಸೆ, ರಕ್ತನಿಧಿಯಂಥ ತುರ್ತು ಸೇವೆಗಳು ಮುಂದುವರಿಯುವ ಸಾಧ್ಯತೆಗಳಿವೆ. ತುರ್ತು ಸೇವೆಗಳನ್ನು ನೀಡುವ ಸಿಬ್ಬಂದಿಗಳು ಕೈಗಳಿಗೆ ಕಪ್ಪುಪಟ್ಟಿಯನ್ನು ಕಟ್ಟಿಕೊಂಡು ಸೇವೆಗಳನ್ನು ನೀಡಲಿದ್ದಾರೆ.
ಸಚಿವರ ಕಚೇರಿಗಳಲ್ಲಿ ಸೇವೆ ಸಲ್ಲಿಸುವ ಸರ್ಕಾರಿ ನೌಕರರ ಸಂಘವೂ ಮುಷ್ಕರಕ್ಕೆ ಬೆಂಬಲ ಸೂಚಿಸಿರುವುದರಿಂದ ಸಚಿವಾಲಯಗಳ ದಿನನಿತ್ಯದ ಕೆಲಸ ಕಾರ್ಯಗಳಿಗೂ ತೊಂದರೆಯಾಗುವ ಸಾಧ್ಯತೆಗಳಿವೆ
ಆಸ್ತಿ ನೋಂದಾವಣಿ, ವಿವಾಹ ನೋಂದಾವಣಿ, ಡ್ರೈವಿಂಗ್ ಲೈಸನ್ಸ್ ಇತ್ಯಾದಿ ಕೆಲಸ ಕಾರ್ಯಗಳಿಗೂ ತೊಂದರೆಯಾಗುವ ಸಾಧ್ಯತೆಗಳಿವೆ