ಬೆಂಗಳೂರು, ಫೆ. 14 : ರಾಜ್ಯ ಬಜೆಟ್ ಫೆ.17 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಲಿದ್ದಾರೆ. ಈಗ ಎಲ್ಲರ ಚಿತ್ತವೂ ಬಜೆಟ್ ಮೇಲೇ ಕೇಂದ್ರೀಕೃತವಾಗಿದೆ. ರಾಜ್ಯದ ಅಭಿವೃದ್ಧಿಗೆ ಸರ್ಕಾರ ಯಾವೆಲ್ಲಾ ಯೋಜನೆಗಳಿಗೆ ಅಸ್ತು ಎನ್ನಬಹುದು, ಅನುದಾನ ಎಷ್ಟು ಸಿಗಲಿದೆ. ಯಾವ ಜಿಲ್ಲಿಗೆ ಸರ್ಕಾರ ಹೆಚ್ಚು ಒಲವು ತೋರುತ್ತದೆ ಎಂಬುದೆ ಎಲ್ಲರ ಆಲೋಚನೆಯಾಗಿದೆ. ಇನ್ನು ಬಿಜೆಪಿ ಸರ್ಕಾರದ ಕೊನೆಯ ಆಯವ್ಯಯ ಇದಾಗಲಿದ್ಯಾ ಅಥವಾ ಮತ್ತೆ ಮುಂದುವರೆಯಲಿದ್ಯಾ ಎಂಬಸ್ಪಷ್ಟತೆ ಯಾರಿಗೂ ಇಲ್ಲ. ಹೀಗಿರುವಾಗ ಬಿಜೆಪಿ ಬಜೆಟ್ ಮೂಲಕ ಮತದಾರರನ್ನು ಸೆಳೆಯುತ್ತಾರಾ ಎಂಬ ಕುತೂಹಲವೂ ಇದೆ.
ಆದರೆ, ರಾಜ್ಯದ ಪ್ರತೀ ಜಿಲ್ಲೆಯೂ ನಿರೀಕ್ಷೆಗಳನ್ನು ಹೊಂದಿವೆ. ಹಾಗಾದರೆ ಬನ್ನಿ ಈಗ ಯಾವ ಜಿಲ್ಲೆಯಲ್ಲಿ ಏನೆಲ್ಲಾ ನಿರೀಕ್ಷೆಗಳು ಇವೆ ಎಂಬುದನ್ನು ತಿಳಿಯೋಣ.
ಬೆಂಗಳೂರು ನಗರ : ಟ್ರಾಫಿಕ್ ಸಮಸ್ಯೆ ಪರಿಹಾರ, ನಮ್ಮ ಮೆಟ್ರೋ ಹಾಗೂ ಸಬ್ ಅರ್ಬನ್ ರೈಲ್ವೇ ಯೋಜನೆಗಳ ಕ್ರಮ ಕೈಗೊಳ್ಳಬೇಕು. ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ಮೂಲಸೌಕರ್ಯ ವ್ಯವಸ್ಥೆ, ರಸ್ತೆಗುಂಡಿ ಮುಕ್ತ ನಗರ, ಅಂತರ್ಜಲ ವೃದ್ಧಿಗಾಗಿ ಕೆರೆ ಸಂರಕ್ಷಣೆ, ಹಸಿರೀಕರಣಕ್ಕಾಗಿ ಉದ್ಯಾನವನಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ.
ರಾಮನಗರ ಜಿಲ್ಲೆ: ರಾಮನಗರ ಜಿಲ್ಲೆ ಹೈಟೆಕ್ ರೇಷ್ಮೆ ಮಾರುಕಟ್ಟೆ, ಮಾವು ಸಂಸ್ಕರಣಾ ಘಟಕವನ್ನು ಸ್ಥಾಪನೆಗೆ ಒಪ್ಪಿಗೆ, ರಾಜೀವ್ ಗಾಂಧಿ ಆರೋಗ್ಯ ವಿವಿ ಸ್ಥಾಪನೆ ಹಾಗೂ ಮೇಕೆದಾಟು ಯೋಜನೆಗೆ ಮರುಜೀವ ಸಿಗುವ ಭರವಸೆ ಇದೆ.
ಮೈಸೂರು ಜಿಲ್ಲೆ : ವ್ಯವಸ್ಥಿತ ದಸರಾ ಆಚರಣೆಗಾಗಿ ಪ್ರತ್ಯೇಕ ದಸರಾ ಪ್ರಾಧಿಕಾರ ರಚನೆ, ಮೈಸೂರು ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ನಿರೀಕ್ಷೆ ಮಾಡಲಾಗಿದೆ.
ಮಂಡ್ಯ ಜಿಲ್ಲೆ: ಮಂಡ್ಯದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯಾಗುವ ನಿರೀಕ್ಷೆ ಇದೆ. ಶ್ರೀರಂಗಪಟ್ಟಣವನ್ನು ಅಭಿವೃದ್ಧಿ ಪಡಿಸಿ ಸ್ಮಾರಕಗಳ ಸಂರಕ್ಷಣೆ ಮಾಡಬೇಕಿದೆ. ಮಳವಳ್ಳಿ ತಾಲೂಕು ಬ್ಲಫ್ ಬಳಿಯ ಗಗನಚುಕ್ಕಿ ಜಲಪಾತ ಸ್ಥಳವನ್ನು ಅಭಿವೃದ್ಧಿಪಡಿಸಬೇಕಿದೆ.
ತುಮಕೂರು ಜಿಲ್ಲೆ: ಜಯದೇವ ಹೃದ್ರೋಗ ಆಸ್ಪತ್ರೆಯನ್ನು ತುಮಕೂರು ಜಿಲ್ಲೆಗೆ ಘೋಷಿಸಲಾಗಿದೆ. ಈ ಬಾರಿಯ ಆಯವ್ಯಯದಲ್ಲಿ ಮಂಡಿಸುವ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ ತೆಂಗು ವಿಶೇಷ ಆರ್ಥಿಕ ವಲಯ ಸ್ಥಾಪನೆ ಘೋಷಿಸಬೇಕು. ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಅನ್ನು ಜಿಲ್ಲೆಯಲ್ಲಿ ಸ್ಥಾಪಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಿ ಕೇಂದ್ರದ ಮುಂದಿಡಬೇಕು. ಹಾಗೆ ಮಿಟ್ರೋವನ್ನು ತುಮಕೂರಿನವರೆಗೂ ವಿಸ್ತರಿಸಬೇಕು ಎಂದು ನಿರೀಕ್ಷಿಸಲಾಗಿದೆ.
ಹಾಸನ ಜಿಲ್ಲೆ: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರವೆಂಬಂತೆ ಆನೆಧಾಮ ಸ್ಥಾಪಿಸಬೇಕು. ಐಟಿ ಉದ್ಯಮವನ್ನು ಜಿಲ್ಲೆಯಲ್ಲಿ ಪ್ರಾರಂಬಿಸಬೇಕು. ಗೊರೂರಿನ ಹೇಮಾವತಿ ಜಲಾಶಯ ಆವರಣದಲ್ಲಿ ಕೆಆರ್‌ಎಸ್ ಮಾದರಿ ಉದ್ಯಾನವನ ನಿರ್ಮಿಸಬೇಕು ಎಂದು ನಿರೀಕ್ಷೆ ಮಾಡಲಾಗಿದೆ.
ಚಾಮರಾಜನಗರ ಜಿಲ್ಲೆ: ಚಾಮರಾಜನಗರ-ಬೆಂಗಳೂರಿಗೆ ನೇರವಾಗಿ ರೈಲು ಮಾರ್ಗ ಯೋಜನೆ ಬಗ್ಗೆ ಜಿಲ್ಲೆ ನಿರೀಕ್ಷಿಸಿದೆ. ಜಿಲ್ಲೆಯ ಪ್ರಸ್ತಾವಿತ ಯೋಜನೆಯಾಗಿರುವ ಕಾವೇರಿ ಎರಡನೇ ಹಂತದ 271 ಕೋಟಿ ರೂ. ಯೋಜನೆಯ ಜಾರಿಯಾಗಬೇಕಿದೆ. ಮಲೆ ಮಹಾದೇಶ್ವರಬೆಟ್ಟ ವನ್ಯಧಾಮವನ್ನು ಹುಲಿ ಯೋಜನೆಯನ್ನಾಗಿ ಘೋಷಣೆ ಮಾಡಬೇಕಿದೆ.
ಚಿಕ್ಕಬಳ್ಳಾಪುರ ಜಿಲ್ಲೆ: ಜಿಲ್ಲೆಯಲ್ಲಿ ಎಚ್‌ಎನ್ ವ್ಯಾಲಿ ನೀರಿನ ಮೂರು ಹಂತದ ಶುದ್ಧೀಕರಣಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲೂ ಕೂಡ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಒಪ್ಪಿಗೆ ನೀಡಬೇಕು. ಹೈಟೆಕ್ ಹೂವಿನ ಮಾರುಕಟ್ಟೆ ನಿರ್ಮಾಣ ಕ್ರಮ ಕೈಗೊಳ್ಳಬೇಕು ಹಾಗೂ ವೈನ್ ಯಾರ್ಡ್ ಸ್ಥಾಪನೆಗೆ ಅಸ್ತು ಎನ್ನಬೇಕು ಎಂದು ಚಿಕ್ಕಬಳ್ಳಾಪುರ ಜನ ಕಾಯುತ್ತಿದ್ದಾರೆ.
ಕೋಲಾರ ಜಿಲ್ಲೆ: ಕೆಜಿಎಫ್, ಮುಳಬಾಗಿಲು ಹಾಗೂ ಶ್ರೀನಿವಾಸಪುರ ತಾಲೂಕಿನಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಹೊಂದಲು ಬಜೆಟ್ ನಲ್ಲಿ ಅನುದಾನ ಘೋಷಿಸಬೇಕು. ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಒಪ್ಪಿಗೆ ಹಾಗೂ ಮಾವು ಸಂಸ್ಕರಣಾ ಕೇಂದ್ರ ಸ್ಥಾಪನೆಯ ನಿರೀಕ್ಷೆ ಮಾಡಲಾಗಿದೆ.
ಉತ್ತರ ಕನ್ನಡ: ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಒಪ್ಪಿಗೆ, ಶಿರಸಿಯಲ್ಲಿ ಪರಿಸರ ವಿವಿ ಸ್ಥಾಪನೆ, ಗುಡ್ಡಗಾಡು ಪ್ರದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ ಹಾಗೂ ಕುಚಲಕ್ಕಿ ಬೆಳಗೆ ಉತ್ತೇಜನ ನೀಡಬೇಕು ಎಂದು ನಿರೀಕ್ಷೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ, ಮತ್ಸೋದ್ಯಮಕ್ಕೆ ವಿಶೇಷ ಪ್ಯಾಕೇಜ್ ಸೇರಿದಂತೆ ಹಲವು ನಿರೀಕ್ಷೆಗಳನ್ನು ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆ: ಅಡಕೆ ಬೆಳೆಗೆ ಸಬ್ಸಿಡಿ, ಆಯುಷ್ ವಿಶ್ವವಿದ್ಯಾಲಯಕ್ಕೆ ಅನುದಾನ, ಪಶು ವೈದ್ಯಕೀಯ ವಿಶ್ವವಿದ್ಯಾಲಯ ಸ್ಥಾಪನೆಗೆ ಬಜೆಟ್ ನಲ್ಲಿ ಒಪ್ಪಿಗೆ ನೀಡಿ ಅನುದಾನ ಬಿಡುಗಡೆ ಮಾಡಬೇಕಿದೆ.
ದಾವಣಗೆರೆ ಜಿಲ್ಲೆ: ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆ, ಮೆಕ್ಕೆಜೋಳ ಸಂಶೋಧನಾ ಕೇಂದ್ರ, ಭದ್ರಾ ಅಚ್ಚುಕಟ್ಟಿನ ನಾಲೆಗಳ ಆಧುನೀಕರಣಕ್ಕೆ ಅನುದಾನ ಘೋಷಿಸಬೇಕಿದೆ.
ಬೆಳಗಾವಿ ಜಿಲ್ಲೆ: ಗಡಿ ಸಮಸ್ಯೆಗೆ ಪರಿಹಾರ, ಕೈಗಾರಿಕಾ ಅಭಿವೃದ್ಧಿ, ಜಿಲ್ಲೆಯಲ್ಲಿ ಶೀತಲೀಕರಣ ಘಟಕ ಸ್ಥಾಪನೆಗೆ ಅನುಮೋದನೆ ಸಿಗಬೇಕಿದೆ.
ಕೊಡಗು ಜಿಲ್ಲೆ: ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್, ಕ್ರೀಡೆಗೆ ಪ್ರೋತ್ಸಾಹ, ಜಿಲ್ಲೆಯಲ್ಲಿ ಒಂದು ಕ್ರೀಡಾ ಸ್ಟೇಡಿಯಂ ನಿರ್ಮಾಣ, ಕೊಡಗಿಗೆ ಮಲ್ಟಿ ಸ್ಪೆಷಾಲಿಟಿ ಸೇರಿದಂತೆ ರೈಲು ಮಾರ್ಗಕ್ಕೆ ಬೇಡಿಕೆ ಇದೆ.
ಬೆಂಗಳೂರು ಗ್ರಾಮಾಂತರ : * ದೊಡ್ಡಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು, ಮೇಲ್ಸೇತುವೆಗಳ ಅಭಿವೃದ್ಧಿಗೆ ನಿಧಿ, ನೆಲಮಂಗಲದ ಶಿವಗಂಗೆ ಬೆಟ್ಟದ ಅಭಿವೃದ್ಧಿ ಹಾಗೂ ಹೊಸಕೋಟೆಯಲ್ಲಿ ನರ್ಸಿಂಗ್ ಕಾಲೇಜು ನಿರ್ಮಾಣದ ಬೇಡಿಕೆ.
ಚಿತ್ರದುರ್ಗ ಜಿಲ್ಲೆ: ಭದ್ರಾ ಮೇಲ್ದಂಡೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಸಲು ಅನುದಾನ, ಜಿಲ್ಲೆಯ ಬೆಳಗಳ ಸಂಸ್ಕರಣೆಗೆ ಆದ್ಯತೆ ನೀಡಬೇಕಿದೆ.
ಹಾವೇರಿ ಜಿಲ್ಲೆ: ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆ, ಬ್ಯಾಡಗಿ ಮೆಣಸಿನಕಾಯಿಗೆ ಎಪಿಎಂಸಿ, ಈತರೆ ಬೆಳಗಳ ಅಭಿವೃದ್ಧಿಗೆ ಅನುದಾನವನ್ನು ನಿರೀಕ್ಷಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆ: ಪ್ರವಾಸೋದ್ಯಮದ ಅಭಿವೃದ್ಧಿ, ಹಾಲು ಒಕ್ಕೂಟ ಸ್ಥಾಪನೆಗೆ ಆದ್ಯತೆ ನೀಡಬೇಕಿದೆ.
ಧಾರವಾಡ ಜಿಲ್ಲೆ: ಮಹದಾಯಿ ಕಾಮಗಾರಿಗೆ ಅನುದಾನ, ಹುಬ್ಬಳ್ಳಿಗೂ ಮೆಟ್ರೋ ರೈಲು, ಕೈಗಾರಿಕೆ ಅಭಿವೃದ್ಧಿಗೆ ಒತ್ತು ನೀಡಬೇಕಿದೆ.
ಉಡುಪಿ ಜಿಲ್ಲೆ: ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಆದ್ಯತೆ, ಸಣ್ಣ ಕೈಗಾರಿಕಾ ಪಾರ್ಕ್, ಭತ್ತದ ಬೆಂಬಲ ಬೆಲೆಯನ್ನು ನಿರೀಕ್ಷೆ ಮಾಡಲಾಗಿದೆ.
ಕೊಪ್ಪಳ ಜಿಲ್ಲೆ: ಭತ್ತ ಅಭಿವೃದ್ಧಿ ಮಂಡಳಿ, ಜಲಾಶಯ ನಿರ್ಮಾಣ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಒತ್ತು ಕೊಡಬೇಕಿದೆ.
ಕಲಬುರಗಿ ಜಿಲ್ಲೆ: ತೊಗರಿ ಬೆಳೆ ಅಭಿವೃದ್ಧಿ, ಜವಳಿ ಪಾರ್ಕ್ ನಿರ್ಮಾಣ ಮಾಡಬೇಕಿದೆ.
ಯಾದಗಿರಿ ಜಿಲ್ಲೆ: ಸರ್ಕಾರಿ ಇಂಜಿನಿಯರ್ ಕಾಲೇಜು ಸ್ಥಾಪನೆ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಪ್ಯಾಕೇಜ್ ನಿರೀಕ್ಷೆ.
ಬೀದರ್ ಜಿಲ್ಲೆ: ಕೃಷಿ ಕಾಲೇಜು, ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ ನೀಡಬೇಕಿದೆ.
ಗದಗ ಜಿಲ್ಲೆ: ಟೆಕ್ಸ್‌ಟೈಲ್ ಪಾರ್ಕ್, ಏತ ನೀರಾವರಿ ಯೋಜನೆಗಳಿಗೆ ಆದ್ಯತೆ, ಆಯುರ್ವೇದಿಕ್ ಸಂಶೋಧನಾ ಕೇಂದ್ರಕ್ಕೆ ಒತ್ತು.
ಬಳ್ಳಾರಿ ಜಿಲ್ಲೆ: ಜೀನ್ಸ್ ಉದ್ಯಮಕ್ಕೆ ಪೋತ್ಸಾಹ ನೀಡಬೇಕು. ಇದಕ್ಕಾಗಿ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪನೆ.
ರಾಯಚೂರು ಜಿಲ್ಲೆ: ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಾಲನೆ, ಬೆಳಗಾರರಿಗೆ ವಿಶೇಷ ಪ್ಯಾಕೇಜ್, ಏಮ್ಸ್ ಸ್ಥಾಪನೆ.
ವಿಜಯನಗರ ಜಿಲ್ಲೆ: ಪ್ರವಾಸೋದ್ಯಮ ಅಭಿವೇದ್ಧಿಗೆ ಒತ್ತು, ವೈದ್ಯಕೀಯ ಶಿಕ್ಷಣ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಆದ್ಯತೆ.
ಬಾಗಲಕೋಟೆ ಜಿಲ್ಲೆ: ಬೃಹತ್ ಗ್ಲಾಸ್ ಫ್ಯಾಕ್ಟರಿ ಆರಂಭ, ಜಸ ಸಾರಿಗೆಗೆ ಯೋಜನೆ ಹಾಗೂ ಏಮ್ಸ್ ಸ್ಥಾಪನೆಗೆ ಒತ್ತು.
ವಿಜಯಪುರ ಜಿಲ್ಲೆ: ತೋಟಗಾರಿಕೆ ಕಾಲೇಜಜು, ಕ್ಯಾನ್ಸರ್ ಚಿಕಿತ್ಸಾ ಘಟಕ, ದ್ರಾಕ್ಷಿ ಬೆಳೆಗೆ ಕೋಲ್ಡ್ ಸ್ಟೋರೇಜ್ ಸ್ಥಾಪನೆಯಾಗಬೇಕಿದೆ.