ಬೆಂಗಳೂರು, ಮಾ. 13 : ಶಿವರಾಮ ಕಾರಂತ ಬಡಾವಣೆಯಲ್ಲಿ ₹670 ಕೋಟಿ ರೂ. ಟೆಂಡರ್ ಅನ್ನು ಬಿಡಿಎ ರದ್ದುಗೊಳಿಸಿದೆ. ವಿವಾದಾತ್ಮಕ ವಿದ್ಯುತ್ ಕಾಮಗಾರಿ ಟೆಂಡರ್ ಅನ್ನು ಕರೆಯಲಾಗಿತ್ತು. ಆದರೆ. ಮಾರ್ಚ್ 10ರಂದು ಬಿಡಿಎ ಟೆಂಡರ್ ಅನ್ನು ರದ್ದು ಮಾಡಿರುವುದಾಗಿ ಹೇಳಿದೆ. ಆಡಳಿತಾತ್ಮಕ ಕಾರಣ ಗಳಿಂದಾಗಿ ಟೆಂಡರ್ ಅನ್ನು ರದ್ದು ಮಾಡಲಾಗಿದೆ ಎಂದು ಬಿಡಿಎ ಉಲ್ಲೇಖಿಸಿದೆ.
ಬಿಡಿಎ ಶಿವರಾಮ ಕಾರಂತ ಬಡಾವಣೆಯ ವಿದ್ಯುದ್ದೀಕರಣ ಕಾಮಗಾರಿ ಸಂಬಂಧ ₹670 ಕೋಟಿ ಮೊತ್ತದ ಟೆಂಡರ್ ಅನ್ನು ಕರೆಯಲಾಗಿತ್ತು. ಇದಕ್ಕೆ ಎಲ್ಲ ಹಿರಿಯ ಅಧಿಕಾರಿಗಳ ಸಮ್ಮತಿ ನೀಡಿದ ಬಳಿಕವೇ ಟೆಂಡರ್ ಅನ್ನು ಕರೆಯಲಾಗಿತ್ತು. ಗುಣಿ ಅಗ್ರಹಾರ ಗ್ರಾಮದಲ್ಲಿ ಒಂದು 220/66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರವನ್ನು ಸ್ಥಾಪಿಸಬೇಕು. ಸೋಮಶೆಟ್ಟಿಹಳ್ಳಿ, ಬ್ಯಾಲಕೆರೆ, ದೊಡ್ಡಬೆಟ್ಟಹಳ್ಳಿ ಮತ್ತು ಆವಲಹಳ್ಳಿ ಗ್ರಾಮಗಳಲ್ಲಿ ಉಪಕೇಂದ್ರಗಳನ್ನು ನಿರ್ಮಾಣ ಮಾಡಬೇಕು. ಇದಕ್ಕಾಗಿ ಇಎಚ್‌ವಿ ಭೂಗತ ಕೇಬಲ್ ಎಳೆದು 66/11 ಕೆ.ವಿ ಉಪಕೇಂದ್ರಗಳ ನಿರ್ಮಾಣಕ್ಕಾಗಿ ಟೆಂಡರ್ ಕರೆಯಲು ಸಭೆ ನಡೆಸಲಾಗಿತ್ತು.
ಅಲ್ಪಾವಧಿ ಟೆಂಡರ್ ಕರೆಯಲು 2022ರ ಡಿ.17ರಂದು ಬಿಡಿಎ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಟೆಂಡರ್ ಕರೆಯಲು ಅನುಮೋದನೆ ಪಡೆಯಲಾಗಿತ್ತು. ಪಿಎಂಸಿ ಸಲ್ಲಿಸಿದ್ದ ಟೆಂಡರ್ ದಾಖಲೆ, ಬಿಒಕ್ಯೂಗಳನ್ನು ರಾಜ್ಯ ಪೂರ್ವ–ಟೆಂಡರ್ ಪರಿಶೀಲನಾ ಸಮಿತಿಗೆ ಸಲ್ಲಿಸಲಾಗಿತ್ತು. ಇದರಂತೆ ಟೆಂಡರ್ ಕರೆಯಲು ಅನುಮೋದನೆ ದೊರಕಿತ್ತು. ಈ ಅನುಮೋದನೆಗೆ ಮೂವರು ಸಹಾಯಕ ಎಂಜಿನಿಯರ್‌ಗಳಾದ ದೀಪಕ್ ಬಿ., ನರೇಂದ್ರ ಜಿ., ಬಾಲರಾಜು ಎಸ್ ಸಹಿ ಹಾಕಿದ್ದಾರೆ. ಇವರ ಜೊತೆಗೆ ಇಬ್ಬರು ಸಹಾಯಕ ಕಾರ್ಯಪಾಲಕರಾದ ವಸಂತ ಪಿ.ಆರ್., ಪ್ರವೀಣ ವಿ.ಆರ್. ಖುಡ ಸಹಿ ಹಾಕಿದ್ದಾರೆ. ಅಲ್ಲದೇ, ಕಾರ್ಯಪಾಲಕ ಎಂಜಿನಿಯರ್ ಬಿ.ಎಸ್. ದೀಪಕ್ ಟೆಂಡರ್ ಗೆ ಅನುಮೋದನೆಯ ಪತ್ರಕ್ಕೆ ಸಹಿ ಮಾಡಿದ್ದಾರೆ.
ಎಂಜಿನಿಯರ್ ಸದಸ್ಯ ಶಾಂತರಾಜು ಅವರು ಟೆಂಡರ್ ಆಹ್ವಾನಿಸಲು ಅನುಮೋದನೆಗೆ ಮಂಡನೆ ಮಾಡಿದ್ದರು. ಈ ಬಗ್ಗೆ ಫೆ.21ರಂದು ಬರೆದು ಆಯುಕ್ತರ ಮುಂದೆ ಕಡತ ಮಂಡಿಸಲಾಗಿತ್ತು. ಆಯುಕ್ತರು ಅಂದೇ ಟೆಂಡರ್ ಕರೆಯಲು ಅನುಮತಿಯನ್ನು ಕೂಡ ನೀಡಿದ್ದರು. ಎಲ್ಲಾ ನಿಯಮಗಳ ಪ್ರಕಾರವೇ ಟೆಂಡರ್ ಪಡೆಯಲು ಅನುಮೋದನೆ ದೊರಕಿತ್ತು. ರಾಜ್ಯ ಪೂರ್ವ–ಟೆಂಡರ್ ಪರಿಶೀಲನಾ ಸಮಿತಿ ಟೆಂಡರ್ ದಾಖಲೆಗಳನ್ನು ಒಪ್ಪದ್ದರಿಂದ ಇ–ಪ್ರೊಕ್ಯೂರ್‌ಮೆಂಟ್‌ನಲ್ಲಿ ಅಪ್‌ಲೋಡ್ ಮಾಡಿರಲಿಲ್ಲ. ಫೆ.27ರಂದು ಟೆಂಡರ್ ಪ್ರಕ್ರಿಯೆ ಮುಂದೂಡುವ ಬಗ್ಗೆ ಪ್ರಕಟಣೆಯನ್ನು ನೀಡಲಾಗಿತ್ತು. ಇದೀಗ ಶಿವರಾಮ ಕಾರಂತ ಬಡಾವಣೆಯಲ್ಲಿ ₹670 ಕೋಟಿ ರೂ. ಟೆಂಡರ್ ಅನ್ನು ಬಿಡಿಎ ರದ್ದುಗೊಳಿಸಿದೆ.