ಬೆಂಗಳೂರು,ಜು.17; ಬೆಂಗಳೂರು ನಾಗರಿಕರಿಗೆ ಮನೆ ಬಾಗಿಲಿಗೇ ಆಸ್ತಿ ದಾಖಲೆಗಳನ್ನು ತಲುಪಿಸುವ ವ್ಯವಸ್ಥೆಯನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಶೀಘ್ರ ಜಾರಿಗೊಳಿಸಲಾಗುವುದು.ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರ ಮನೆಬಾಗಿಲಿಗೆ ಪಹಣಿ ನೀಡುವ ಭೂಮಿ ವ್ಯವಸ್ಥೆ ಜಾರಿಗೆ ತರಲಾಗಿತ್ತು.ಅದೇ ಮಾದರಿಯಲ್ಲಿ ಬೆಂಗಳೂರಿನ ನಾಗರಿಕರಿಗೂ ಸೌಲಭ್ಯ ಕಲ್ಪಿಸಲಾಗುವುದು ಇದರಿಂದ ಯಾರ ಬಳಿ ಎಷ್ಟು ಆಸ್ತಿ ಇದೆ ಎಂಬ ಮಾಹಿತಿ ಹಾಗೂ ತೆರಿಗೆ ಪಾವತಿಯ ಸ್ಪಷ್ಟಚಿತ್ರಣ ದೊರಕಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು ನಾಗರಿಕರು ಇನ್ನು ಮುಂದೆ ತಮ್ಮ ಆಸ್ತಿ ದಾಖಲೆಗಳಿಗೆ ಸರ್ಕಾರಿ ಕಚೇರಿಗೆ ಅಲೆಯುವುದನ್ನು ತಪ್ಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಆಸ್ತಿ ತೆರಿಗೆ ಪಾವತಿಸದ ಮತ್ತು ಜಮೀನು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.ಪ್ರತಿಯೊಂದು ಆಸ್ತಿಯನ್ನು ತಂತ್ರಜ್ಞಾನವನ್ನು ಬಳಸಿಕೊಂಡು ಮ್ಯಾಪ್ ಮಾಡಲಾಗುತ್ತದೆ. ಹಂತ ಹಂತವಾಗಿ ಮತ್ತು ಕಾಲಮಿತಿಯಲ್ಲಿ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡುವಂತೆ ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ