ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಅಕ್ರಮಗಳ ತನಿಖೆ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್ ನಾಯಕರು ಇಂದು ಮೊದಲ ಗಂಗಾ ಕಲ್ಯಾಣ ಯೋಜನೆಯ ಅಕ್ರಮದ ಬಗ್ಗೆ ತನಿಖೆ ಮಾಡುವಂತೆ ದೂರು ದಾಖಲು ನೀಡಲಾಗಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಮೊದಲ ಎಫ್ ಐ ಆರ್ ದಾಖಲಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆ ಅಕ್ರಮ ಸಂಬಂಧ ಮೊದಲ ಎಫ್ ಐ ಆರ್ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ಆಗಿದೆ ಎಂದು ದೂರು ನೀಡಲಾಗಿದೆ. ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ವಿಧಾನಸೌಧ ಠಾಣೆಗೆ ದೂರು ಕೊಡಲಾಗಿದೆ. ಟೆಂಡರ್ ನಿಯಮಗಳನ್ನ ಗಾಳಿಗೆ ತೂರಿ ಹಣ ಕಬಳಿಸಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಸಿಐಡಿ ತನಿಖೆಗೆ ಹಗರಣ ವರ್ಗಾವಣೆ ಸಾಧ್ಯತೆ: ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ನಕಲಿ ದಾಖಲೆ ನೀಡಿ ಕೋಟ್ಯಾಂತರ ರೂಪಾಯಿ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ. ಈ ಹಿಂದೆ 2021 ರಲ್ಲಿ ಗಂಗಾ ಕಲ್ಯಾಣ ಯೋಜನೆ ಅಕ್ರಮ ತಡೆಯಲು ಸದನ ಸಮಿತಿ ರಚನೆಯಾಗಿತ್ತು. ಈ ಬಗ್ಗೆ ಈಗಾಗಲೇ ಸದನ ಸಮಿತಿಯು ಕೂಡ ಮಧ್ಯಂತರ ವರದಿ ಸಲ್ಲಿಕೆ ಮಾಡಿದೆ. ಇದರ ಬೆನ್ನೆಲ್ಲೇ ಕಾಂಗ್ರೆಸ್ ಸರ್ಕಾರ ಗಂಗಾಕಲ್ಯಾಣ ಯೋಜನೆಯ ಅಕ್ರಮದ ತನಿಖೆಗೆ ಮುಂದಾಗಿದೆ. ಸದ್ಯ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶೀಘ್ರವೇ ಸಿಐಡಿಗೆ ವರ್ಗಾವಣೆ ಸಾಧ್ಯತೆಯಿದೆ.
ಬಿಜೆಪಿ ಸರ್ಕಾರದ ಕೈಗೊಂಬೆಯಾಗಿ ಪೊಲೀಸರಿಂದ ಕಿರುಕುಳ : ಕೋಲಾರ ಜಿಲ್ಲೆಯ ಕೆ.ಜಿ.ಎಫ್ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾ ಶಶಿಧರ್ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದೆ ಕಣ್ಣೀರು ಹಾಕಿ ಪೊಲೀಸರು ನೀಡಿದ ಕಿರುಕುಳ ನೀಡಿದ್ದ ಬಗ್ಗೆ ಹೇಳಿಕೊಂಡಿದ್ದಾರೆ. ಬುಧವಾರ ನಡೆದ ಮೊದಲ ಅಧಿವೇಶನದ ಕೊನೆಯ ದಿನ ಶಾಸಕಾಂಗ ಸಭೆ ಬಳಿಕ ಕಣ್ಣೀರು ಹಾಕಿ ಸಮಸ್ಯೆ ಹೇಳಿಕೊಂಡ ಶಾಸಕಿ ರೂಪಾ ಶಶಿಧರ್, ಚುನಾವಣೆ ಅವಧಿಯಲ್ಲಿ ಪೊಲೀಸರು ನನಗೆ ಹಾಗೂ ನಮ್ಮ ಕಾರ್ಯಕರ್ತರಿಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದಾರೆ. ಚುನಾವಣೆ ವೇಳೆ ಸುಳ್ಳು ಕೇಸ್ ದಾಖಲು ಮಾಡಿ ಕಿರುಕುಳ ನೀಡಿದ್ದಾರೆ. ಮಾನಸಿಕ ಹಿಂಸೆ ನೀಡಿದ್ದಾರೆ. ಅವರ ಮೇಲೆ ಸೂಕ್ತ ಕ್ರಮ ಆಗಬೇಕು. ಬಿಜೆಪಿ ಸರ್ಕಾರದ ಕೈಗೊಂಬೆಯಾಗಿ ಪೊಲೀಸರು ಮತ್ತು ಚುನಾವಣಾ ಅಧಿಕಾರಿಗಳು ವರ್ತಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಪೊಲೀಸರಿಗೆ ಚಳಿ ಬಿಡಿಸಿದ್ದ ಡಿ.ಕೆ. ಶಿವಕುಮಾರ್: ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇಂದು ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಸಭೆ ನಡೆಸಿದರು. ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಡಿಸಿಎಂ ಡಿಕೆ ಶಿವಕುಮಾರ್ ತರಾಟೆ ತೆಗೆದುಕೊಂಡರು. ನೀವು ಪೊಲೀಸ್ ಇಲಾಖೆಯನ್ನೇ ಕೇಸರಿಕರಣ ಮಾಡಲು ಹೊರಟಿದ್ದೀರಾ? ನಮ್ಮ ಸರ್ಕಾರದಲ್ಲಿ ಇದಕ್ಕೆ ಅವಕಾಶ ಕೊಡೊಲ್ಲ. ಮಂಗಳೂರಿನಲ್ಲಿ ಪೊಲೀಸರೇ ಕೇಸರಿ ಶಾಲು ಹಾಕ್ತಿರಿ ಅಂದರೆ ಹೇಗೆ? ಈ ಸಭೆಗೂ ಕೇಸರಿ ಶಾಲು ಹಾಕಿಕೊಂಡು ಬರಬೇಕಾಗಿತ್ತು. ನಮ್ಮ ಸರಕಾರದಲ್ಲಿ ಪೊಲೀಸ್ ಇಲಾಖೆಯನ್ನ ಕೇಸರಿಕರಣ ಮಾಡಲು ನಾವು ಬಿಡೊಲ್ಲ. ದೇಶದ ಬಗ್ಗೆ ಗೌರವ ಇದ್ರೆ ರಾಷ್ಟ್ರ ಧ್ವಜ ಹಾಕೊಂಡು ಕೆಲಸ ಮಾಡಬೇಕಿತ್ತು ಎಂದು ತಾಕೀತು ಮಾಡಿದ್ದಾರೆ.
ಯಾರು ಹಣ ಕೊಡೋದು ಬೇಡ ಉತ್ತಮವಾಗಿ ಕೆಲಸ ಮಾಡಿ: ರಾಜ್ಯದಲ್ಲಿ ಪಿಎಸ್ಐ (PSI) ಅಕ್ರಮದಲ್ಲಿ ಒಬ್ಬ ಎಡಿಜಿಪಿ ಪೇಪರ್ ತಿದ್ದುತ್ತಾರೆ ಅಂದರೆ ಇಲಾಖೆ ಎಷ್ಟು ಕೆಟ್ಟು ಹೋಗಿದೆ? ಪೊಲೀಸ್ ಇಲಾಖೆ ಘನತೆಯನ್ನು ನೀವು ಹಾಳು ಮಾಡಿದ್ದೀರಿ. ಇದನ್ನ ನಾವು ಸಹಿಸೊಲ್ಲ. ನಮ್ಮ ಸರ್ಕಾರದಲ್ಲಿ ಎಲ್ಲವೂ ಕ್ಲೀನ್ ಆಗಬೇಕು. ಜನ ದೊಡ್ಡ ಬದಲಾವಣೆ ನಿರೀಕ್ಷೆ ಮಾಡಿದ್ದಾರೆ. ನೀವು ಯಾರು ನಮಗೆ ಹಣ ಕೊಡೋದು ಬೇಡ. ಉತ್ತಮವಾಗಿ ಕೆಲಸ ಮಾಡಿದ್ರೆ ಸಾಕು ಎಂದು ಹಿರಿಯ ಪೊಲೀಸರಿಗೆ ಡಿಸಿಎಂ ಡಿಕೆಶಿವಕುಮಾರ್ ಖಡಕ್ ಸಂದೇಶ ನೀಡಿದ್ದಾರೆ.