ಬೆಂಗಳೂರು, ಫೆ. 10 : ಇಂದು ಮಾಜಿ ಮುಖ್ಯಮಂತ್ರಿ ದಿ.ಕೆಂಗಲ್ ಹನುಮಂತಯ್ಯನವರ 115 ನೇ ಜನ್ಮದಿನಾಚಾರಣೆಯನ್ನು ವಿಧಾನಸೌಧದ ಆವರಣದಲ್ಲಿ ಆಚರಿಸಲಾಯ್ತು. ಕೆಂಗಲ್ ಹನುಮಂತಯ್ಯನವರ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಸಿಎಂ, ಕರ್ನಾಟಕದ 2 ನೇ ಮುಖ್ಯಮಂತ್ರಿ , ಧೀಮಂತ ನಾಯಕ, ಕೇಂದ್ರ ರೈಲ್ವೆ ಸಚಿವ, ಕರ್ನಾಟಕದ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕೆಂಗಲ್ ಹನುಮಂತಯ್ಯನವರಿಗೆ ಇಂದು ಅವರ ಜನ್ಮದಿನದಂದು ಗೌರವಾರ್ಪಣೆ ಮಾಡಿದ್ದೇವೆ.
ವಿಧಾನಸೌಧ ಇಷ್ಟು ಸುಂದರವಾಗಿ ಕರ್ನಾಟಕದ ರಾಜಧಾನಿಯಲ್ಲಿ ತಲೆ ಎತ್ತಲು ಅವರು ಕಾರಣೀಭೂತರಾಗಿದ್ದಾರೆ. ಒಂದು ಮಿಷನ್ ರೀತಿಯಲ್ಲಿ ಪರಿಶ್ರಮ ಹಾಕಿದ್ದರು. ತಂತ್ರಜ್ಞಾನ ಇಲ್ಲದ ಕಾಲದಲ್ಲಿ ಅತ್ಯಂತ ಭವ್ಯವಾಗಿ ವಿಧಾನಸೌಧವನ್ನು ನಿರ್ಮಾಣ ಮಾಡಿದ್ದು ಕೆಂಗಲ್ ಹನುಮಂತಯ್ಯ ಅವರು. ಪ್ರತಿ ಕನ್ನಡಿಗನಿಗೂ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಬದುಕು, ಹೋರಾಟದ ಬಗ್ಗೆ ಪರಿಚಯಿಸುವ ಗ್ರಂಥವನ್ನು ಇದೇ ವರ್ಷ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಈಗಾಗಲೇ ರಾಮನಗರದಲ್ಲಿ ಕೆಂಗಲ್ ಹನುಮಂತಯ್ಯನವರ ಪ್ರತಿಮೆ ನಿರ್ಮಾಣವಾಗುತ್ತಿದ್ದು, ಆದಷ್ಟು ಬೇಗನೆ ಪ್ರತಿಮೆ ಅನಾವರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಹಾಗೂ ಬೆಂಗಳೂರು–ಮೈಸೂರು ರಸ್ತೆಯ ಮಾರ್ಗದ ಪ್ರಮುಖ ಸ್ಥಳದಲ್ಲಿ ಅವರ ಪ್ರತಿಮೆ ನಿರ್ಮಾಣಕ್ಕೆ ಬಿಬಿಎಂಪಿಯಲ್ಲಿ ಪ್ರಸ್ತಾವನೆ ಇದೆ. ಅದಕ್ಕೆ ಕೂಡಲೇ ಒಪ್ಪಿಗೆ ನೀಡಿ ಆ ಕೆಲಸವನ್ನು ಈ ವರ್ಷವೇ ಪ್ರಾರಂಭಿಸಲಾಗುವುದು. ಕೆಂಗಲ್ನಲ್ಲಿರುವ ಅವರ ಸ್ಮಾರಕವನ್ನು ಸ್ಮೃತಿ ಉದ್ಯಾನವನ ಎಂದು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಅದಕ್ಕೆ ಅಗತ್ಯ ಅನುದಾನವನ್ನೂ ಒದಗಿಸಲಾಗುವುದು. ಅವರ ಸ್ಮರಣೆ ನಿರಂತರವಾಗಿರಲಿ. ಕೆಂಗಲ್ ಹನುಮಂತಯ್ಯನವರ 125 ನೇ ಜನ್ಮದಿನಾಚರಣೆ ಒಳಗೆ ಇದೆಲ್ಲವನ್ನೂ ಮಾಡಿ ಮುಗಿಸುವ ಯೋಜನೆ ಇದೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.
ಮಾತು ಮುಂದುವರಿಸಿದ ಸಿಎಂ, ಕರ್ನಾಟಕ ರಾಜ್ಯ ಸ್ಥಾಪನೆಯಾಗಲು ಮತ್ತು ಕನ್ನಡ ಮಾತನಾಡುವ ಎಲ್ಲಾ ಜನರನ್ನು ಒಗ್ಗೂಡಿಸಿದ ಪ್ರಮುಖರಲ್ಲಿ ಕೆಂಗಲ್ ಹನುಮಂತಯ್ಯ ಅವರು ಅಗ್ರಗಣ್ಯರು. ಅಂದಿನ ಮೈಸೂರಿನ ಪ್ರಜಾ ಪ್ರತಿನಿಧಿ ಸಭೆಯಿಂದ ಹಿಡಿದು ವಿಧಾನಸಭಾ ಸದಸ್ಯರು, ಲೋಕಸಭಾ ಸದಸ್ಯರಾಗಿ, ಕರ್ನಾಟಕದ ಪ್ರಾರಂಭಿಕ ರಾಜಕಾರಣದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ ಧೀಮಂತ ನಾಯಕರು. ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ವಿಷನ್ ಡಾಕ್ಯುಮೆಂಟ್ ನೀಡಿ, ಕರ್ನಾಟಕದ ಅಭಿವೃದ್ಧಿಗೆ ಭದ್ರಬುನಾದಿಯನ್ನು ಹಾಕಿದವರು ಕೆಂಗಲ್ ಹನುಮಂತಯ್ಯ ಅವರು ಎಂದು ಹೇಳಿದರು.