26.4 C
Bengaluru
Wednesday, December 4, 2024

ಮಾಡಾಳ್ ವಿರುಪಾಕ್ಷಪ್ಪ ಬಂಧನ ವಿಚಾರದಲ್ಲಿ ಲೋಕಾ ಪೊಲೀಸರು ಮೈ ಮರತರೇ ? ED ಎಂಟ್ರಿಗೆ ತಯಾರಿ!

ಬೆಂಗಳೂರು. ಮಾ. 06: ಲಂಚ ಪ್ರಕರಣದಲ್ಲಿ ಮೊದಲ ಅರೋಪಿಯಾಗಿರುವ ಚನ್ನಗಿರಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಬಂಧನ ವಿಚಾರದಲ್ಲಿ ಲೋಕಾಯುಕ್ತ ಪೊಲೀಸರು ಎಡವಿದರೇ ? ಅಥವಾ ಸರ್ಕಾರದ ಒತ್ತಡಕ್ಕೆ ಮಣಿದು ಬಂಧನದ ಅವಕಾಶವನ್ನು ಕೈ ಚೆಲ್ಲಿದರೇ ?

ಹೀಗೊಂದು ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಲಂಚ ಪ್ರಕರಣದಲ್ಲಿ ಪ್ರಶಾಂತ್ ಮಾಡಾಳ್ ಬಂಧನ ವೇಳೆ ಮಾಡಾಳ್ ವಿರುಪಾಕ್ಷಪ್ಪ ಸ್ವತಃ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರಾಜೀನಾಮೆ ನೀಡಿದ್ದರು. ಈ ವೇಳೆ ವಿರುಪಾಕ್ಷಪ್ಪ ರಾಜಾರೋಷವಾಗಿ ಓಡಾಡಿಕೊಂಡಿದ್ದರು. ಮೈಸೂರು ಸೋಪ್ಸ್ ಅಂಡ್ ಡಿಟೆರ್ಜೆಂಟ್ ಲಿ. ನ ಅಧ್ಯಕ್ಷರಾಗಿರುವ ಮಾಡಾಳ್ ವಿರುಪಾಕ್ಷಪ್ಪ ಅವರನ್ನು ಆಗಲೇ ಲೋಕಾಯುಕ್ತ ಪೊಲೀಸರು ಬಂಧಿಸಬಹುದಿತ್ತು. ಆದರೆ ಸುಮ್ಮನಿದ್ದ ಪೊಲೀಸರು ಇದೀಗ ಮೂವರು ಡಿವೈಎಸ್ಪಿಗಳ ನೇತೃತ್ವದಲ್ಲಿ ತಂಡ ರಚಿಸಿದ್ದಾರೆ. ವಿರುಪಾಕ್ಷಪ್ಪ ಬಂಧನಕ್ಕಾಗಿ ಶೋಧ ನಡೆಸಲಾಗುತ್ತಿದೆ.

ಇದೇ ವಿಚಾರವನ್ನು ಪ್ರಸ್ತಾಪಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಧ್ಯಮಗಳಿಗೆ ಲಾ ಆಫ್ ಟಾರ್ಟ್‌ ಪಾಠ ಮಾಡಿದ್ದಾರೆ. ಸಿದ್ದ ರಾಮಯ್ಯ ಅವರ ಮಾತುಗಳು ಅಕ್ಷರಶಃ ಸತ್ಯ. ಲಂಚ ಪ್ರಕರಣದ ಹಿನ್ನೆಲೆ ನೋಡಿದಾಗ ಟೆಂಡರ್ ನೀಡಲು ಡೀಲಿಂಗ್ ಕುದುರಿಸಿರುವುದು ಮಾಡಾಳ್ ವಿರುಪಾಕ್ಷಪ್ಪ. ಇವರ ಸೂಚನೆ ಮೇರೆಗೆ ಬೆಂಗಳೂರು ನೀರು ಸರಬರಾಜು ಮಂಡಳಿಯ ಲೆಕ್ಕಾಧಿಕಾರಿಯಾಗಿರುವ ಅವರ ಪುತ್ರ ಮಾಡಾಳ್ ಪ್ರಶಾಂತ್ ನಲವತ್ತು ಲಕ್ಷ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾನೆ. ಈತನ ಕಚೇರಿಯಲ್ಲಿ ಅರು ಕೋಟಿ ರೂ. ನಗದು ಹಣ ಮತ್ತು ಮನೆಯಲ್ಲಿ ಎರಡು ಕೋಟಿ ಒಟ್ಟು ಎಂಟು ಕೋಟಿ ರೂಪಾಯಿ ನಗದು ಸಿಕ್ಕಿದೆ. ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಮೊದಲ ಆರೋಪಿ ಮಾಡಾಳ್ ವಿರುಪಾಕ್ಷಪ್ಪ. ಎರಡನೇ ಅರೋಪಿ ಅವರ ಪುತ್ರ ಪ್ರಶಾಂತ್ ಮಾಡಾಳ್.

ಭ್ರಷ್ಟಾಚಾರ ಕಾಯ್ದೆ ಪ್ರಕಾರ ಲಂಚ ಪ್ರಕರಣದಲ್ಲಿ ಮೂರು ಅಂಶಗಳು ಮುಖ್ಯವಾಗುತ್ತವೆ. ಕೆಲಸ ಬಾಕಿ ಇರಬೇಕು. ಲಂಚಕ್ಕೆ ಬೇಡಿಕೆ ಇಟ್ಟಿರುವುದು ದೃಢಪಡಬೇಕು. ಅನಂತರ ಲಂಚವನ್ನು ಸ್ವೀಕರಿಸಿರಬೇಕು. ಮಾಡಾಳ್ ಪ್ರಕರಣದಲ್ಲಿ ಈ ಮೂರು ಅಂಶಗಳು ಇವೆ. ಟೆಂಡರ್ ನೀಡಲು ಗುತ್ತಿಗೆದಾರನಿಗೆ ಮಾಡಾಳ್ ವಿರುಪಾಕ್ಷಪ್ಪ ಅವರೇ ಭರವಸೆ ನೀಡಿದ್ದಾರೆ. ಟೆಂಡರ್ ಡೀಲ್ ಮೈಸೂರು ಸೋಪ್ಸ್ ಅಂಡ್‌ ಡಿಟೆರ್ಜೆಂಟ್ ಲಿ. ಗೆ ಸಂಬಂಧಿಸಿದ್ದು. ಹೀಗಾಗಿ ಮಾಡಾಳ್ ವಿರುಪಾಕ್ಷಪ್ಪ ಅವರೇ ಟೆಂಡರ್ ನೀಡುವಲ್ಲಿ ಪ್ರಮುಖ ಪಾತ್ರದಾರಿ. ಅವರ ಪುತ್ರ ಲಂಚ ಸ್ವೀ ಕರಿಸಿರುವ ಆರೋಪಿಯಷ್ಟೇ. ಹೀಗಾಗಿ ಲಂಚ ಪ್ರಕರಣದಲ್ಲಿ ಮಾಡಾಳ್ ಪ್ರಶಾಂತ್ ನನ್ನು ಬಂಧಿಸಿದ ಕೂಡಲೇ ಲೋಕಾ ಪೊಲೀಸರು ಮಾಡಾಳ್ ವಿರುಪಾಕ್ಷಪ್ಪ ಅವರನ್ನು ವಶಕ್ಕ ಪಡೆಯಬಹುದಿತ್ತು. ಅವಕಾಶ ಇದ್ದಾಗ ಕೈ ಚೆಲ್ಲಿದ ಲೋಕಾಯುಕ್ತ ಪೊಲೀಸರು ಇದೀಗ ತಂಡಗಳನ್ನು ರಚಿಸಿ ಬೇಟೆಗೆ ಇಳಿದಿದ್ದಾರೆ. ಪುತ್ರನ ಬಂಧನ ಬಳಿಕ ಮಾಡಾಳ್ ವಿರುಪಾಕ್ಷಪ್ಪ ಸ್ವತಃ ಸಿಎಂ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಈ ವೇಳೆ ವಶಕ್ಕೆ ಪಡೆಯಬಹುದಿತ್ತು. ಆಗಿದ್ದ ಅವಕಾಶ ಕೈ ಚೆಲ್ಲಿ ಇದೀಗ ಬಂಧನಕ್ಕಾಗಿ ಹುಡುಕಾಟ ಅರಂಭಿಸಿದ್ದಾರೆ.

ನಿರೀಕ್ಷಣಾ ಜಾಮೀನು ಕೋರಿ ಅರ್ಜಿ :

ಮಾಡಾಳ್ ವಿರುಪಾಕ್ಷಪ್ಪ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದಾರೆ. ಮಾಡಾಳ್ ಪರ ವಕೀಲ ಸಂದೀಪ್ ಪಾಟೀಲ್ ಅರ್ಜಿ ಸಲ್ಲಿಸಿದ್ದು, ತುರ್ತು ಅರ್ಜಿ ವಿಚಾರಣೆಗೆ ಹೈಕೋರ್ಟ್ ನಿರಾಕರಿಸಿದೆ. ಮಂಗಳವಾರ ಅರ್ಜಿಯ ವಿಚಾರಣೆಗೆ ಬರಲಿದ್ದು, ಈ ಪ್ರಕರಣದಲ್ಲಿ ಜಾಮೀನು ಸಿಗುವುದು ಕಷ್ಟ ಎಂದೇ ವಕೀಲ ವರ್ಗ ವಿಶ್ಲೇಷಣೆ ಮಾಡುತ್ತಿದೆ. ಲೋಕಾಯುಕ್ತ ಇತಿಹಾಸದಲ್ಲಿ ಇಷ್ಟು ದೊಡ್ಡ ಮೊತ್ತದ ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿ ಬಿದ್ದಿರುವುದು ಹಾಗೂ ಲೆಕ್ಕ ವಿಲ್ಲದ ಹಣ ಜಪ್ತಿ ಮಾಡಿರುವುದು ಇದೇ ಮೊದಲು. ಮಿಗಿಲಾಗಿ ಅಧಿಕಾರ ಬಳಿಸಿ ಅಪಾರ ಪ್ರಮಾಣದ ಲಂಚಕ್ಕೆ ಬೇಡಿಕೆ ಇಟ್ಟಿರುವುದುಕ್ಕೆ ಮಹತ್ವದ ಸಾಕ್ಷಿಗಳು ಲಭ್ಯವಾಗಿವೆ. ಹೀಗಾಗಿ ಮಾಡಾಳ್ ವಿರುಪಾಕ್ಷಪ್ಪ ಬಂಧನದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತಿದೆ.

ಇಡಿ ಎಂಟ್ರಿ: ಎಂಟು ಕೋಟಿ ರೂಪಾಯಿ ನಗದು ಹಣ ಪತ್ತೆಯಾಗಿರುವ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಹಣದ ಬೇನಾಮಿ ವಹಿವಾಟು ಅರೋಪ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸಿ ಮಾಡಾಳ್ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಲೋಕಾಯುಕ್ತ ಪೊಲೀಸರು ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿದ್ದು, ಇಡಿ ಅಧಿಕಾರಿಗಳು ಶೀಘ್ರದಲ್ಲಿಯೇ ಎಂಟ್ರಿ ಕೊಡಲಿದ್ದಾರೆ. ಲೋಕಾಯುಕ್ತದಲ್ಲಿ ದಾಖಲಾಗುವ ಪ್ರತಿ ಪ್ರಕರಣದ ವಿವರವನ್ನು ಇಡಿ ಅಧಿಕಾರಿಗಳು ಸಂಗ್ರಹಿಸುತ್ತಾರೆ. ಹಣದ ಬೇನಾಮಿ ವಹಿವಾಟಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಾರೆ. ಹೀಗಾಗಿ ಜಾರಿ ನಿರ್ದೇಶನಾಲಯವೂ ಈ ಕೇಸಿನಲ್ಲಿ ಶೀಘ್ರದಲ್ಲಿಯೇ ಎಂಟ್ರಿ ಕೊಡಲಿದೆ.

Related News

spot_img

Revenue Alerts

spot_img

News

spot_img