
ಯಾವುದೇ ಒಂದು ಕಟ್ಟಡವನ್ನು ನಿರ್ಮಿಸಿದ ವರ್ಷದ ಬಳಿಕ ಅದು ಕಾನೂನು ಪ್ರಕಾರ ಹಳೇ ಕಟ್ಟಡವಾಗುತ್ತದೆ. ಪ್ರತಿ ವರ್ಷವೂ ಕಟ್ಟಡದ ಮೌಲ್ಯ ಕಡಿಮೆಯಾಗುತ್ತಾ ಹೋಗುತ್ತದೆ. ಕಟ್ಟಡ ಜಾಗದ ಬೆಲೆ ಜಾಸ್ತಿಯಾದರೂ, ಕಟ್ಟಡದ ಮೌಲ್ಯ ಮಾತ್ರ ಕಡಿಮೆಯಾಗುತ್ತಲೇ ಹೋಗುತ್ತದೆ. ಅದನ್ನು ಮುದ್ರಾಂಕ ಕಾಯ್ದೆ ಪ್ರಕಾರ ಕಟ್ಟಡದ ಸವಕಳಿ ಎಂದೇ ಕರೆಯುತ್ತೇವೆ.
ಒಂದು ಕಟ್ಟಡ ನಿರ್ಮಾಣಕ್ಕೆ ಇಂತಿಷ್ಟು ಅಂತ ಬಜೆಟ್ ಇಟ್ಟು ಅದಕ್ಕೆ ಅನ್ವಯವಾಗಿಯೇ ವೆಚ್ಚ ಮಾಡುವುದು ಸಹಜ. ಇವತ್ತಿನ ದಿನಗಳಲ್ಲಿ ಕಟ್ಟಡ ನಿರ್ಮಾಣ ಬೆಲೆ ಗಗನಕ್ಕೇರಿದೆ. ಆದರೆ, ಒಂದು ಕಟ್ಟಡ ನಿರ್ಮಾಣವಾಗಿ ಒಂದು ವರ್ಷದ ಬಳಿಕ ಕಟ್ಟಡದ ಮೌಲ್ಯ ದಿನೇ ದಿನೇ ಕುಸಿಯುತ್ತಾ ಹೋಗುತ್ತದೆ. ವಾಹನಗಳ ಮಾದರಿ ಕಟ್ಟಡದ ಮೌಲ್ಯ ಕೂಡ ಇಳಿಮುಖವಾಗುತ್ತದೆ. ಹಳೇ ಕಟ್ಟಡ ಮಾರಾಟ ಮಾಡುವಾಗ, ಆ ಕಟ್ಟಡ ನಿರ್ಮಾಣಕ್ಕೆ ಬಳಸಿರುವ ವಸ್ತು ಆಧರಿಸಿ ಅದರ ಮೌಲ್ಯವನ್ನು ಒಂದು ಸೂತ್ರದ ಪ್ರಕಾರವೇ ಉಪ ನೋಂದಣಾಧಿಕಾರಿಗಳು ಕಡಿಮೆ ಮಾಡುತ್ತಾರೆ. ಇದನ್ನು ಕಾನೂನು ಪರಿಭಾಷೆಯಲ್ಲಿ ಕಟ್ಟಡದ ಸವಕಳಿ ಮೌಲ್ಯ ಎಂದು ಕರೆಯುತ್ತಾರೆ. ಒಂದು ಹಳೇ ಕಟ್ಟಡ ಮಾರಾಟ ಮಾಡಿದರೆ, ಅದರ ಸವಕಳಿ ಮೌಲ್ಯ ಕಡಿಮೆ ಮಾಡಿ ನಿರ್ಧಾರ ಮಾಡಿದ ಬಳಿಕವಷ್ಟೇ ಆ ಕಟ್ಟಡದ ಮಾರಾಟ ಪ್ರಕ್ರಿಯೆ ಮುದ್ರಾಂಕ ಶುಲ್ಕ ಪಾವತಿಸಿಕೊಳ್ಳಲಾಗುತ್ತದೆ.
ಕಟ್ಟಡದ ಸವಕಳಿ ವಿಧಾನ :
ಕರ್ನಾಟಕ ಮುದ್ರಾಂಕ ಕಾಯ್ದೆ 1957 ರ ಕಲಂ 45 (B) ಅಡಿ ರಚಿತವಾದ ಸಮಿತಿ ಆಸ್ತಿ ಮೌಲ್ಯ ನಿಯಮಗಳು ಕಟ್ಟಡದ ಮೌಲ್ಯ ಕಡಿಮೆ ಮಾಡುವ ಪ್ರಕ್ರಿಯೆ ಬಗ್ಗೆ ವಿವರಿಸುತ್ತದೆ.
ಈ ಮೇಲ್ಕಂಡ ಸಮಿತಿಯು ಇಡೀ ರಾಜ್ಯದ ಉಪ ನೋಂದಣಿ ಕಚೇರಿಗಳಿಗೆ ನೋಂದಣಿಗಾಗಿ ಮಾರ್ಗಸೂಚಿ ದರಗಳನ್ನು ನಿಗದಿ ಪಡಿಸಿರುತ್ತದೆ. ಈ ಮಾರ್ಗಸೂಚಿ ಬೆಲೆಗಿಂತಲೂ ಕಡಿಮೆಯಾದರೆ, ಉಪ ನೋಂದಣಾಧೀಕಾರಿಗಳು ನೋಂದಣಿ ಮಾಡದೇ ಕರ್ನಾಟಕ ಮುದ್ರಾಂಕ ಕಾಯ್ದೆ 1957 ರ ಕಲಂ 45 (a) ಅಡಿ ಸರಿಯಾದ ಬೆಲೆ ನಿಗದಿ ಪಡಿಸಲು ದಸ್ತಾವೇಜಿನ ನೋಂದಣಿಯನ್ನು ಅಮಾನತು ಪಡಿಸಿ ಉಪ ನೋಂದಣಾಧಿಕಾರಿಗಳು ಜಿಲ್ಲಾ ನೋಂದಣಿ ಆಧಿಕಾರಿಗಳಿಗೆ ರವಾನಿಸಿ ಉಲ್ಲೇಖಿಸುತ್ತಾರೆ. ಒಂದೇ ಒಂದು ಹಳೇ ಕಟ್ಟಡದ ಸವಕಳಿ ಮೊತ್ತ ಸರಿಯಾಗಿ ನಿಗದಿ ಪಡಿಸದಿದ್ದಲ್ಲಿ ಆ ಕಟ್ಟಡಕ್ಕೆ ಮುದ್ರಾಂಕ ಶುಲ್ಕವನ್ನು ಉಪ ನೋಂದಣಾಧಿಕಾರಿಗಳು ಪಡೆಯುವುದಿಲ್ಲ. ಅವರು ನಿರ್ಧಾರವೂ ಮಾಡುವುದಿಲ್ಲ.

ಜಿಲ್ಲಾ ಉಪ ನೋಂದಣಾಧಿಕಾರಿಗಳಿಂದ ಸವಕಳಿ ನಿರ್ಧಾರ:
ಇನ್ನು ಹಳೇ ಕಟ್ಟಡದ ಮೌಲ್ಯ ಕಡಿಮೆ ಮಾಡುವ ( ಸವಕಳಿ ನಿರ್ಧಾರ) ಅಧಿಕಾರವನ್ನು ಉಪ ನೋಂದಣಾಧಿಕಾರಿಗಳಿಗೆ ನೀಡಿಲ್ಲ. ಯಾವುದೇ ಸವಕಳಿ ಪಡೆಯಬೇಕಾದರೆ,ಈ ಕೆಳಕಂಡ ಅನುಸರಿಸಬೇಕಾಗುತ್ತದೆ. ತದನಂತರ ಜಿಲ್ಲಾ ನೋಂದಣಾಧೀಕಾರಿಗಳು, ನೈಸರ್ಗಿಕ ನ್ಯಾಯ ತತ್ವದ ಪ್ರಕ್ರಿಯೆ ಪ್ರಕಾರ ಸಂಬಂಧಪಟ್ಟ ಸ್ಥಳಕ್ಕೆ ಭೇಟಿ ಕೊಟ್ಟು, ಸ್ಥಳ ತನಿಖೆ ಮಾಡಿ, ಸರ್ಕಾರ ನಿಗದಿ ಪಡಿಸಿರುವ ಪ್ರಕಾರ ಸವಕಳಿ ನಿರ್ಧಾರ ಮಾಡುತ್ತಾರೆ. ಈ ಅಧಿಕಾರ ಕೇವಲ ಜಿಲ್ಲಾ ಉಪ ನೋಂದಣಾಧಿಕಾರಿಗಳಿಗೆ ನೀಡಲಾಗಿದೆ. ಹಳೇ ಕಟ್ಟಡದ ಮೌಲ್ಯ ನಿಗದಿ ಮಾಡುವ ಬಗ್ಗೆ ಈ ಕೆಳಕಿನ ಕಲಂನಲ್ಲಿ ನೀಡಲಾಗಿದೆ.
ಸವಕಳಿ ನಿರ್ಧಾರ ಸೂತ್ರ:
ಉದಾಹರಣೆಗೆ , ಒಂದು ಕಟ್ಟಡವನ್ನು ಸುಣ್ಣದ ಕಲ್ಲು, ಮದ್ರಾಸು ಗಾರೆ, ತೇಗದ ಮರ ಉಪಯೋಗಿಸಿ ನಿರ್ಮಿಸಿದ್ದರೆ, ಸವಕಳಿ ಪ್ರಮಾಣ ಶೇ. 1 ರಷ್ಟು ಕಡಿಮೆ ಮಾಡಲಾಗುತ್ತದೆ. ಇದು ಕಟ್ಟಡ ನಿರ್ಮಾಣವಾದ ವರ್ಷಗಳನ್ನು ಅವಲಂಬಿಸಿರುತ್ತದೆ. ಉದಾಹರಣೆ ಕಟ್ಟಡ ನಿರ್ಮಾಣ ವರ್ಷವು 30 ವರ್ಷ ಆಗಿದ್ದರೆ, ಶೇ. 1 ರಂತೆ, 0.26303 ಸವಕಳಿ ಆಗಿರುತ್ತದೆ. ಒಂದು ಕಟ್ಟಡ 600 ಚದರಡಿ ಹೊಂದಿದ್ದು, ಅದಕ್ಕೆ ಮೂವತ್ತು ವರ್ಷ ವಯಸ್ಸು ಅಗಿದ್ದು, ಈ ಮೇಲಿನಂತೆ ಸುಣ್ಣದ ಕಲ್ಲು ಮತ್ತು ಮದ್ರಾಸು ಗಾರೆ , ತೇಗದ ಮರ ಉಪಯೋಗಿಸಿ ಕಟ್ಟಡ ನಿರ್ಮಿಸಿದ್ದರೆ ಈ ಕೆಳಕಂಡ ಸೂತ್ರದ ಮೂಲಕ ಅದರ ಸವಕಳಿ ಪ್ರಮಾಣ ನಿರ್ಧಾರ ಮಾಡಬಹುದು. 600 x 1650 (ಕಟ್ಟಡದ ವಿಸ್ತೀರ್ಣ ಮತ್ತು ಮಾರ್ಗಸೂಚಿ ದರ ಇದ್ದರೆ) = 9,90000 ಆಗುತ್ತದೆ. ಇದರಲ್ಲಿ ಶೇ. 1 ರಂತೆ ಸವಕಳಿ ಮೊತ್ತವನ್ನು ತೆಗೆದಾಗ ( 9,90000 x 0.26303 = 260,399.7 (ಸವಕಳಿ ಮೊತ್ತ) ಸವಕಳಿ ಮೊತ್ತ ಆಗುತ್ತದೆ. ಈ ಸವಕಳಿ ಮೊತ್ತವನ್ನು ಕಟ್ಟಡದ ಮೊತ್ತದಿಂದ ಕಳೆದಾಗ ನಿಜವಾದ ಕಟ್ಟಡದ ನೋಂದಣಿ ಮಾಡಬಹುದಾದ ಮಾರ್ಗಸೂಚಿ ಬೆಲೆ ಗೊತ್ತಾಗುತ್ತದೆ. ಉದಾಹರಣೆಗೆ ಕಟ್ಟಡದ ಬೆಲೆ 9,90,000 ಆಗಿದ್ದರೆ, ಅದರ ಸವಕಳಿ ಮೊತ್ತ 2.60,399 ರೂ. ಆಗಿರುತ್ತದೆ. ಕಟ್ಟಡದ ಮಾರ್ಗಸೂಚಿ ದರ 729,600.03 ಆಗುತ್ತದೆ. ಇದಕ್ಕೆ ಮುದ್ರಾಂಕ ಶುಲ್ಕ ಪಾವತಿ ಮಾಡಿದರೆ, ಜಿಲ್ಲಾ ಉಪ ನೋಂದಣಾಧಿಕಾರಿಗಳು ನಿರ್ದೇಶನ ಮೇರೆಗೆ ಉಪ ನೋಂದಣಾಧಿಕಾರಿಗಳು ನೋಂದಣಿ ಮಾಡುತ್ತಾರೆ.
ಕಟ್ಟಡ ನಿರ್ಮಾಣವಾದ ವರ್ಷ, ಅದರ ವಿಸ್ತೀರ್ಣ ಹಾಗೂ ಆ ಕಟ್ಟಡಕ್ಕೆ ಬಳಸಿರುವ ಉಪಕರಣಗಳನ್ನು ಮಾನದಂಡವಾಗಿಟ್ಟುಕೊಂಡು ಕನಿಷ್ಠ 1 ರಿಂದ ಗರಿಷ್ಠ 2 ರಷ್ಟು ಸವಕಳಿ ಪ್ರಮಾಣ ತೆಗೆಯಲಾಗುತ್ತದೆ. ಕಟ್ಟಡದ ಮೌಲ್ಯವನ್ನು ಕಟ್ಟಡದ ಸೇಲ್ ಡೀಡ್ ಅನ್ನು ಮಾನದಂಡವನ್ನಾಗಿ ಇಟ್ಟುಕೊಂಡು ಲೆಕ್ಕ ಹಾಕಲಾಗುತ್ತದೆ. ಕಟ್ಟಡದ ಸವಕಳಿ ಪ್ರಮಾಣವನ್ನು ಉಪ ನೋಂದಣಾಧಿಕಾರಿಗಳು ನಿರ್ಧಾರ ಮಾಡುವುದಿಲ್ಲ. ಜಿಲ್ಲಾ ಉಪ ನೋಂದಣಾಧಿಕಾರಿಗಳು ಮಾತ್ರ ನಿಗದಿ ಮಾಡುತ್ತಾರೆ. ಒಂದು ಕಟ್ಟಡದ ಸವಕಳಿ ಪ್ರಮಾಣ ಕಾನೂನು ಬದ್ಧವಾಗಿ ನಿರ್ಧಾರ ಮಾಡದಿದ್ದ ಪಕ್ಷದಲ್ಲಿ ಆ ದಾಸ್ತವೇಜನ್ನು ಉಪ ನೋಂದಣಾಧಿಕಾರಿಗಳು ನೋಂದಣಿ ಮಾಡುವುದಿಲ್ಲ. ಜತೆಗೆ ಆ ದಸ್ತಾವೇಜನ್ನು ಜಿಲ್ಲಾ ಉಪ ನೋಂದಣಾಧಿಕಾರಿಗಳಿಗೆ ಸಲ್ಲಿಸುತ್ತಾರೆ.



