ಈಚಿನ ದಿನಗಳಲ್ಲಿ ನಿಮ್ಮ ಊರುಗಳಲ್ಲಿ ಡ್ರೋಣ್‌ಗಳ ಹಾರಾಟ ಹೆಚ್ಚಾಗುತ್ತಿರುವುದನ್ನು ಗುರುತಿಸುತ್ತಿದ್ದೀರೇನು? ಹಾಗಾದರೆ ಅವು ಒಂದು ನಿರ್ದಿಷ್ಟ ಉದ್ದೇಶದಿಂದ ಹಾರಾಟ ನಡೆಸುತ್ತಿವೆ. ಈವರೆಗೆ ಅಧಿಕೃತ ದಾಖಲೆಗಳಲ್ಲಿ ಇಲ್ಲದ ಹಳ್ಳಿಗಳ ಗಡಿ ಗುರುತಿಸುವುದು ಈ ಡ್ರೋಣ್‌ಗಳ ಕೆಲಸ.
ಸದ್ಯ ಭಾರತೀಯ ಸರ್ವೇಕ್ಷಣ ಇಲಾಖೆಯು ದೊಡ್ಡ ಪ್ರಮಾಣದಲ್ಲಿ ನಕಾಶೆ ಗುರುತಿಸುವ ಕಾರ್ಯದಲ್ಲಿ ತೊಡಗಿದೆ. ಈ ಸಂಬಂಧ 2019ರ ಫೆಬ್ರುವರಿಯಲ್ಲೇ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಮತ್ತು ಭಾರತೀಯ ಸರ್ವೇಕ್ಷಣ ಇಲಾಖೆಯು ಒಪ್ಪಂದ ಮಾಡಿಕೊಂಡಿವೆ. ಅದರಂತೆ ಮೊದಲ ಹಂತದಲ್ಲಿ ಬೆಂಗಳೂರು ನಗರ, ರಾಮನಗರ, ಬೆಳಗಾವಿ, ಉತ್ತರ ಕನ್ನಡ, ಹಾಸನ ಮತ್ತು ತುಮಕೂರು ಜಿಲ್ಲೆಗಳ 51,000 ಚದರ ಕಿಲೋ ಮೀಟರ್ ಪ್ರದೇಶದ ನಕ್ಷೆ ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈವರೆಗೆ 2,650ಕ್ಕೂ ಅಧಿಕ ಹಳ್ಳಿಗಳನ್ನು ಡ್ರೋಣ್‌ಗಳು ನೆರವಿನಿಂದ ಗುರುತಿಸಲಾಗಿದೆ.
“ಈ ಹಿಂದೆ ಬಳಸಲಾಗುತ್ತಿದ್ದ 1:50,000 ಅಳತೆ ಮಾನದಂಡದ ಬದಲಾಗಿ ಹೊಸ ವ್ಯವಸ್ಥೆಯಲ್ಲಿ 1:500 ಅಳತೆ ಮಾನದಂಡವನ್ನು ಬಳಸಲಾಗುತ್ತಿದೆ. ಮೊದಲು ನಕ್ಷೆ ಗುರುತಿಸುವ ಅತಿ ಸಣ್ಣ ಜಾಗ ಎಂದರೆ 100/100 ಮೀಟರ್ ಇತ್ತು. ಈಗ ಅದು 1/1 ಮೀಟರ್‌ಗೆ ತಗ್ಗಿದೆ. ಹಿಂದೆ ಎರಡು ಅಥವಾ ಮೂರು ಆಸ್ತಿಗಳನ್ನು ಸೇರಿ ಒಂದು ಬ್ಲಾಕ್ ಎಂದು ತೋರಿಸುತ್ತಿತ್ತು. ಈಗ ಹೊರ ಪ್ರದೇಶದಲ್ಲಿ ಇರುವ ಒಂದು ಪೀಠೋಪಕರಣವನ್ನು ಕೂಡ ಗುರುತಿಸಬಹುದಾದ ನಿಖರ ವ್ಯವಸ್ಥೆ ಲಭ್ಯವಿದೆ,” ಎಂದು ಭಾರತೀಯ ಸರ್ವೇಕ್ಷಣ ಇಲಾಖೆಯ ಡೆಹ್ರಾಡೂನ್‌ನ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸುತ್ತಾರೆ.
ಕಂದಾಯ ಇಲಾಖೆಗೆ ತನ್ನ ದಾಖಲೆಗಳನ್ನು ಆಧುನೀಕರಣಗೊಳಿಸಲು ಈ ಹೈ ರೆಸಲ್ಯೂಷನ್ ನಕ್ಷೆಗಳು ನೆರವಾಗಲಿವೆ. ಪ್ರತಿಯೊಂದು ಆಸ್ತಿಯನ್ನೂ ಸ್ಪಷ್ಟವಾಗಿ ದಾಖಲಿಸುವ ಕಾರಣಕ್ಕೆ ಕಂದಾಯ ಇಲಾಖೆಗೆ ಇದೊಂದು ಚಿನ್ನದ ಗಣಿಯಾಗಿ ಪರಿಣಮಿಸಲಿದೆ ಎಂಬುದು ಅಧಿಕಾರಿಗಳ ಅಂಬೋಣ.
ಕೇಂದ್ರದ ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಸಚಿವ ಕಪಿಲ್ ಮೋರೇಶ್ವರಿ ಪಾಟೀಲ ಅವರು, ʻಕೇಂದ್ರ ವಲಯದ ಯೋಜನೆಯಾದ “ಸ್ವಾಮಿತ್ವ”ವು ಗ್ರಾಮೀಣ ನಿವಾಸಿಗಳಿಗೆ ತಮ್ಮ ಮನೆಯ ಮಾಲೀಕತ್ವದ ಅಧಿಕೃತ ದಾಖಲೆಗಳನ್ನು ಪಡೆಯುವ “ದಾಖಲೆಗಳ ಹಕ್ಕು” ನೀಡುವ ಉದ್ದೇಶ ಹೊಂದಿದೆ. 2020-21ರಿಂದ 2024-25ರ ಆರ್ಥಿಕ ವರ್ಷಗಳ ಅವಧಿಯಲ್ಲಿ 6.62 ಲಕ್ಷ ಗ್ರಾಮಗಳನ್ನು ತಲುಪುವುದು ಯೋಜನೆಯ ಗುರಿ. ಪಂಚಾಯತ್ ರಾಜ್ ಸಚಿವಾಲಯ, ಭಾರತೀಯ ಸರ್ವೇಕ್ಷಣ ಇಲಾಖೆ, ರಾಜ್ಯ ಕಂದಾಯ ಇಲಾಖೆ, ರಾಜ್ಯ ಪಂಚಾಯತ್ ರಾಜ್ ಇಲಾಖೆ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರಗಳ ಸಾಮೂಹಿಕ ಪ್ರಯತ್ನದಲ್ಲಿ ಯೋಜನೆ ಅನುಷ್ಠಾನಕ್ಕೆ ಬರುತ್ತಿದೆʼ ಎಂದು ತಿಳಿಸಿದ್ದಾರೆ.
ಗ್ರಾಮೀಣರಿಗೆ ಸರಿಯಾದ ದಾಖಲೆಗಳನ್ನು ಹೊಂದುವ ಹಕ್ಕು ನೀಡುವುದರೊಂದಿಗೆ, ಅವರು ಈ ಆಸ್ತಿಯನ್ನು ಬಳಸಿ ಸಾಲ ಪಡೆಯಲು ಅನುವು ಮಾಡುವುದು ʻಸ್ವಾಮಿತ್ವʼ ಯೋಜನೆಯ ಉದ್ದೇಶಗಳಲ್ಲಿ ಒಂದು. ಆರ್ಥಿಕ ಸ್ಥಿರತೆ, ಗ್ರಾಮೀಣ ಯೋಜನೆ ರೂಪಿಸಲು ನಿಖರ ಭೂ ದಾಖಲೆ ಸೃಷ್ಟಿಸುವುದು, ಆಸ್ತಿ ತೆರಿಗೆ ನಿರ್ಧರಿಸುವುದು, ಸರ್ವೆ ಮೂಲಸೌಕರ್ಯಗಳನ್ನು ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ನಿರ್ಮಿಸುವುದು ಹಾಗೂ ಭೂ ಸಂಬಂಧಿ ವಿವಾದಗಳನ್ನು ಕಡಿಮೆ ಮಾಡುವುದು ಯೋಜನೆಯ ಆದ್ಯತೆ. ಎರಡನೇ ಹಂತದಲ್ಲಿ ಕೊಡಗು, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಕಲಬುರಗಿ, ವಿಜಯಪುರ, ಗದಗ, ಮೈಸೂರು ಜಿಲ್ಲೆಗಳಲ್ಲಿ ನಕ್ಷೆ ಗುರುತಿಸುವ ಕಾರ್ಯ ನಡೆಯಲಿದೆ.



