ಬೆಂಗಳೂರು, ಮಾ. 01: ಸರ್ಕಾರಿ ಅಧಿಕಾರಿಗಳ ಮುಷ್ಕರಕ್ಕೆ ಬೆದರಿದ ರಾಜ್ಯ ಸರ್ಕಾರ ಏಳನೇ ವೇತನ ಆಯೋಗದ ಮಧ್ಯಂತರ ಪರಿಹಾರ ಘೋಷಣೆ ಮಾಡಿದೆ.
ಏಳನೇ ವೇತನ ಆಯೋಗದ ಶಿಫಾರಸು ಜಾರಿಗೆ ಅಗ್ರಹಿಸಿ ಸರ್ಕಾರಿ ಅಧಿಕಾರಿಗಳು ರಾಜ್ಯಾದ್ಯಂತ ಮಾ. 1 ರಂದು ಕೆಲಸ ತ್ಯಜಿಸಿ ಮುಷ್ಕರಕ್ಕೆ ಕರೆ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೇರಿದಂತೆ ಸರ್ಕಾರಿ ನೌಕರರ ಸಂಘದ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಡೆಸಿದ ಸಭೆ ವಿಫಲವಾಗಿತ್ತು.
ಇದರ ಬೆನ್ನಲ್ಲೇ ಬುಧವಾರ ಬೆಳಗ್ಗೆ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸರ್ಕಾರಿ ಅಧಿಕಾರಿಗಳ ಮೂಲ ವೇತನದಲ್ಲಿ ಶೇ. 17 ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಲು ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಹಣಕಾಸು ಇಲಾಖೆಯ ಆದೇಶ ಹೊರ ಬಿದ್ದಿದ್ದು, ಮೂಲ ವೇತನದಲ್ಲಿ ಶೇ. 17 ರಷ್ಟು ಹೆಚ್ಚಳ ಮಾಡಲಾಗಿದೆ.
ಮಧ್ಯಂತರ ಪರಿಹಾರ ಉದ್ದೇಶಕ್ಕಾಗಿ ಮೂಲ ವೇತನದಲ್ಲಿ ಸರ್ಕಾರಿ ನೌಕರ ಧಾರಣ ಮಾಡಿರುವ ಹುದ್ದೆಗೆ ಅನ್ವಯ ವಾಗುವ ವೇತನ ಶ್ರೇಣಿಗೆ ಅನುಗುಣವಾಗಿ ಶೇ. 17 ರಷ್ಟು ವೇತನ ಹೆಚ್ಚಳವಾಗಲಿದೆ. ಇದರ ಜತೆಗೆ ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಪಡೆಯುತ್ತಿರುವ ವೇತನದಾರರಿಗೆ ಸಹ ಏ. 1 2023 ರಿಂದ ಜಾರಿಗೆ ಬರುವಂತೆ ಶೇ. 17 ರಷ್ಟು ಮಧ್ಯಂತರ ಪರಿಹಾರ ನೀಡಲಾಗಿದೆ.
ಚುಣಾವಣೆ ಹೊಸ್ತಿಲಲ್ಲಿ ನೌಕರರರ ಮುಷ್ಕರ ಬಿಸಿ:
ರಾಜ್ಯದಲ್ಲಿ 2023 ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ರಾಜ್ಯದಲ್ಲಿ ಸರ್ಕಾರಿ ನೌಕರರು ಏಳನೇ ವೇತನ ಅಯೋಗದ ಶಿಫಾರಸು ಜಾರಿಗೆ ತರುವಂತೆ ಅಗ್ರಹಿಸಿದ್ದರು. ಈಗಾಗಲೇ ವರ್ಚಸ್ಸು ಕಳೆದುಕೊಂಡಿರುವ ರಾಜ್ಯದ ಬಿಜೆಪಿ ಸರ್ಕಾರಕ್ಕೆ ಭವಿಷ್ಯದ ಚುನಾವಣೆಯಲ್ಲಿ ನಕಾರಾತ್ಮಕ ಪರಿಣಾಮ ಬೀಳುವ ಮುನ್ಸೂಚನೆ ನೀಡಿತ್ತು. ಏಳನೇ ವೇತನ ಅಯೋಗದ ಶಿಭಾರಸು ಜಾರಿಗೆ ತರುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಗ್ರಹಿಸಿತ್ತು. ಏಳನೇ ವೇತನ ಅಯೋಗದ ಶಿಫಾರಸು ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರು ಮುಷ್ಕರಕ್ಕೆ ಕರೆ ಕೊಟ್ಟಿದ್ದರು. ಮಾ. 1 ರಂದು ಅನಿರ್ಧಿಷ್ಟ ಮುಷ್ಕರಕ್ಕೆ ಕರೆ ಕೊಟ್ಟ ಬೆನ್ನಲ್ಲೇ ಬಸವರಾಜ ಬೊಮ್ಮಾಯಿ ಸರ್ಕಾರ ಮುಷ್ಕರ ಶಮನಗೊಳಿಸಲು ತಾತ್ಕಾಲಿಕ ಪರಿಹಾರ ನೀಡಿದೆ. ಸರ್ಕಾರಿ ಅಧಿಕಾರಿಗಳ ಮೂಲ ವೇತನದಲ್ಲಿ ಶೇ. 17 ಹೆಚ್ಚಳ ಮಾಡಿ ಅದೇಶ ಹೊರಡಿಸಿದೆ.
ಮೂಲ ವೇತನದಲ್ಲಿ ಶೇ. 17 ರಷ್ಟು ಹೆಚ್ಚಳ ಮಾಡಿರುವ ಸರ್ಕಾರದ ಈ ತಾತ್ಕಾಲಿಕ ಪರಿಹಾರ ಕ್ರಮ ಸರ್ಕಾರಿ ನೌಕರರಲ್ಲಿ ಸಂತಸ ಮೂಡಿಸಿಲ್ಲ. ಹಳೇ ಪಿಂಚಣಿ ಯೋಜನೆ ಸೇರಿದಂತೆ ನಾನಾ ಬೇಡಿಕೆಗಳು ಬಾಕಿಯಿವೆ. ಈ ಬೇಡಿಕೆಗಳನ್ನು ಈಡೇರಿಸಿದರೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭಾರೀ ಹೊಡೆತ ಬೀಳಲಿದೆ. ಇಂತಹ ಸಂಕಷ್ಟ ಸ್ಥಿತಿಯಲ್ಲಿ ರಾಜ್ಯದಲ್ಲಿ ಸರ್ಕಾರಿ ನೌಕರರು ಕೆಲಸ ತ್ಯಜಿಸಿ ಮುಷ್ಕರ ಮುಂದುವರೆಸಿದ್ದಾರೆ.