ಸೇಲ್ ಡೀಡ್, ಸೇಲ್ ಅಗ್ರಿಮೆಂಟ್, ಅಫಿಡವಿಟ್, ಪಬ್ಲಿಕ್ ನೋಟಿಸ್, ಔಟ್‌ರೇಟ್ ಪರ್ಚೇಸ್, ಜೆಡಿಎ ಕುರಿತ ಸಾರ್ವಜನಿಕರು ಪದೇ ಪದೇ ಪ್ರಶ್ನೆಗಳನ್ನು ಕೇಳಿದ್ದಾರೆ. ಅವುಗಳ ಬಗ್ಗೆ ಸಂಕ್ಷಿಪ್ತ ವಿವರಗಳನ್ನು www.revenuuefacts.com ಇಲ್ಲಿ ಸಮಗ್ರವಾಗಿ ವಿವರ ನೀಡುತ್ತಿದೆ.
ಅಫಿಟವಿಡ್ ಎಂಬುದು ಲಿಖಿತ ಹೇಳಿಕೆಯ ಪ್ರಮಾಣ ಪತ್ರ. ಅಫಿಡವಿಟ್ ನಲ್ಲಿರುವ ಎಲ್ಲಾ ಅಂಶಗಳು ಸತ್ಯಾಂಶಗಳನ್ನೇ ಒಳಗೊಂಡಿರಬೇಕು. ಯಾವುದೇ ವ್ಯಾಪಾರ, ವಹಿವಾಟು, ಕೆಲಸದ ವಿಚಾರದಲ್ಲಿ ಅಫಿಡವಿಟ್ ನ್ನು ಬಳಕೆ ಮಾಡುತ್ತೇವೆ. ಇದನ್ನು ನ್ಯಾಯಾಲಯ ಮಹತ್ವದ ಸಾಕ್ಷಿಯನ್ನಾಗಿ ಸಹ ಪರಿಗಣಿಸುತ್ತದೆ. ಯಾವುದೇ ವಿಚಾರವಾಗಿ ಒಬ್ಬ ವ್ಯಕ್ತಿ ತನ್ನ ಆತ್ಮಸಾಕ್ಷಿಯಾಗಿ ದಾಖಲಿಸಿದ ಹೇಳಿಕೆ ಪ್ರಮಾಣ ಪತ್ರ ಅಂತಲೂ ಹೇಳಬಹುದು.
ಅಫಿಡವಿಟ್ ಮಾಡಿಸುವ ವ್ಯಕ್ತಿಗೆ ಇದೊಂದು ಮಹತ್ವದ ಪ್ರಮಾಣ ಪತ್ರ. ಆದಾಯ ಪ್ರಮಾಣ ಪತ್ರ ಪಡೆಯಲು ಸಹ ಈಗಿನ ಕಾಲದಲ್ಲಿ ಅಫಿಡವಿಟ್ ಬೇಕೇ ಬೇಕು.
ವಂಶ ವೃಕ್ಷ ಪಡೆಯಲು, ಕುಟುಂಬ ಸದಸ್ಯರ ಜೀವಿತ ಪ್ರಮಾಣ ಪತ್ರ ಪಡೆಯಲು, ವಿಲ್ ಗಳ ಪ್ರಮಾಣ ಪತ್ರಗಳನ್ನು ಪಡೆಯಲು, ಉಪ ನೋಂದಣಿ ಕಚೇರಿಯಲ್ಲಿ ನೋಂದಣಿಯಾದ ಪುಸ್ತಕ ನಾಲ್ಕರ ಪ್ರಮಾಣ ಪ್ರತಿಗಳನ್ನು ಪಡೆಯಲು, ಸರ್ಕಾರದ ಯಾವುದೇ ಕಚೇರಿಯ ಯಾವುದಾದರೂ ವಿಚಾರವಾಗಿ ಮಾಡುವ ಕೆಲಸಗಳಿಗೆ ಅನುಮಾನ ಬಂದರೆ ಅಂತಹ ಸಂದರ್ಭದಲ್ಲಿ ಅಫಿಡವಿಟ್ ಪಡೆಯುವ ಮೂಲಕ ತೆರೆ ಎಳೆಯಬಹುದಾಗಿದೆ. ದಾನ ಪತ್ರ ನೋಂದಣಿ ಮಾಡುವಾಗಲೂ ಸಹ ವಿಭಾ ಪತ್ರ, ಹಕ್ಕು ಬಿಡುಗಡೆ ಪತ್ರ, ಕುಟುಂಬ ಸದಸ್ಯರ ವ್ಯವಸ್ಥಾ ಪತ್ರ, ಪವರ್ ಆಫ್ ಅಟಾರ್ನಿ ಹಾಗೂ ಇನ್ನಿತರ ಪತ್ರಗಳಿಂದ ನೋಂದಣಿ ಮತ್ತು ಮುದ್ರಾಂಕ ಶುಲ್ಕ ವಿನಾಯಿತಿ ಪಡೆಯಲು ಸಹ ಅಫಿಡವಿಟ್ ಬೇಕಾಗುತ್ತದೆ. ಅಫಿಡವಿಟ್ ನಲ್ಲಿರುವ ಘೋಷಣೆಗಳು ಸುಳ್ಳು ಎಂದು ಕಂಡು ಬಂದರೆ, ಅಫಿಡವಿಟ್ ನ ಆಧಾರದ ಮೇಲೆ ಸಂಬಂಧಿಸಿದ ಪ್ರಾಧಿಕಾರಿಗಳು ಆಯಾ ವ್ಯಕ್ತಿಯ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿ ಶಿಕ್ಷೆಗೆ ಗುರಿಪಡಿಸಬಹುದು.
ಅಫಿಡವಿಟ್ ಮಾಡಿಸೋದು ಹೇಗೆ ? :
ನ್ಯಾಯಾಲಯದ ಹೊರಗೆ ನೋಂದಾಯಿತ ಪಬ್ಲಿಕ್ ನೋಟರಿ ಮುಂದೆ ತಮಗೆ ಬೇಕಾಗಿರುವ ವಿಚಾರ ಹೇಳಿ ಅದೇ ಪ್ರಕಾರವಾಗಿ ಅಫಿಡವಿಟ್ ನ್ನು ಮಾಡಿಸಿ ಪಬ್ಲಿಕ್ ನೋಟರಿಯಿಂದ ದೃಢೀಕರಿಸಬಹುದು. ಕೆಲವು ಸಂದರ್ಭದಲ್ಲಿ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯ ಸಮಕ್ಷಮ ಅಫಿಡವಿಟ್ ನ್ನು ಪ್ರಮಾಣೀಕರಿಸಲು ಅವಕಾಶವಿದೆ. ಇನ್ನಿತರ ಅಫಿಡವಿಟ್ ಗಳನ್ನು ಇತ್ತೀಚಿನ ಸಾಮಾಜಿಕ ಜಾಲ ತಾಣದಲ್ಲಿ ನಿಗದಿ ಪಡಿಸಿರುವ ಫಾರ್ಮೆಟ್ ಗಳ ಪ್ರಕಾರ ಪಾರ್ಟಿಗಳು ಸಿದ್ದಪಡಿಸಿ ನೋಟರಿ ಮಾಡಿಸಿ ನ್ಯಾಯಾಧೀಶರ ಎದುರು ಪ್ರಮಾಣೀಕರಿಸಬಹುದು.
ಒಬ್ಬ ವ್ಯಕ್ತಿ/ ಕುಟುಂಬ ಕಾನೂನು ಬದ್ಧವಾಗಿ ಎಷ್ಟು ಎಕರೆ ಜಮೀನು ಹೊಂದಬಹದು?
ಕರ್ನಾಟಕ ಮುದ್ರಾಂಕ ಕಾಯ್ದೆ ಕಲಂ 04 ರ ಅನ್ವಯ 20 ರೂ. ಮೊತ್ತದ ಮುದ್ರಾಂಕ ಶುಲ್ಕ ನಿಗದಿ ಯಾಗಿದ್ದು, ಈ ಪ್ರಕಾರ ಅಫಿಡವಿಟ್ ಗೆ 20 ರೂ. ಮೊತ್ತದ ಇ ಸ್ಟಾಂಪ್ ಪೇಪರ್ ಮೇಲಾಗಲೀ ಅಥವಾ ದಾಸ್ತವೇಜು ಹಾಳೆಗಳು ಕರ್ನಾಟಕ ಬಾರ್ ಅಸೋಸಿಯೇಷನ್, ಸಹಕಾರ ಸಂಘಗಳು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ದಾಸ್ತವೇಜು ಹಾಳೆಗಳು ಅಥವಾ ಗುಣಮಟ್ಟದ ಬಿಳಿ ಪೇಪರ್ ನಲ್ಲಿ ಹೇಳಿಕೆ ದಾಖಲಿಸಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮುದ್ರಾಂಕಿತಗೊಳಿಸಿ ಅದರ ಮೇಲೂ ಸಹ ಅಫಿಡವಿಟ್ ಮಾಡಿಸಬಹುದು.
ಅಫಿಡವಿಟ್ ಗಳು ನೋಂದಣಿ ಕಾಯ್ದೆಯ ಕಲಂ 18 ರ ವ್ಯಾಪ್ತಿ ಅಡಿಯಲ್ಲಿ ಐಶ್ಚಿಕ ನೋಂದಣಿ ಮಾಡಿಸಬಹುದಾದ ದಾಖಲೆ ಆಗಿರುವುದರಿಂದ ನೋಂದಣಿ ಮಾಡಿಸವುದು ಕಡ್ಡಾಯ ಇರುವುದಿಲ್ಲ. ಪಬ್ಲಿಕ್ ನೋಟರಿ ಮಾಡಿಸಿದರೂ ಸಾಕು.
ಅಫಿಡವಿಟ್ ಪ್ರಕಾರಗಳು:
ನ್ಯಾಯಾಲಯದ ಅಫಿಡವಿಟ್ ಗಳು: ಸಾಮಾನ್ಯವಾಗಿ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ನ್ಯಾಯಾಧೀಶರು ಪ್ರತಿ ವಿಚಾರಕ್ಕೂ ಅಫಿಡವಿಟ್ ಗಳ ಮೂಲಕವೇ ಪ್ರಕ್ರಿಯೆ ನಡೆಯುತ್ತದೆ.
ಸ್ವಯಂ ವಿಲ್ ಅಫಿಡವಿಟ್ : ವಿಲ್ ಮಾಡುವ ಸಂದರ್ಭದಲ್ಲಿ ವಿಲ್ ಮಾಡಿದ ವ್ಯಕ್ತಿ ನಾನೇ ಎಂದು ದೃಢೀಕರಿಸುವ ಅಫಿಡವಿಟ್. ವಿಲ್ ಬರೆದವರು ಮರಣ ಹೊಂದಿದಲ್ಲಿ ವಿಲ್ ಬರೆಸಿಕೊಂಡವರು ನಿಜ ಎಂದು ದೃಢೀಕರಿಸುವ ಪ್ರಮಾಣ ಪತ್ರ. ಸಾಮಾನ್ಯ ಈ ಮಾದರಿಯ ಅಫಿಡವಿಟ್ ಮಾಡಿಸುವಾಗ ಇಬ್ಬರು ಸಾಕ್ಷಿದಾರರ ಸಹಿ ಅಗತ್ಯವಿದೆ.
ಪವರ್ ಆಫ್ ಅಟಾರ್ನಿ ಅಫಿಡವಿಟ್ : ಪವರ್ ಆಫ್ ಅಟಾರ್ನಿ ಕೂಡ ಒಂದು ಕಾನೂನು ಬದ್ಧ ದಾಖಲೆ. ಬರೆದುಕೊಡುವರನ್ನು ಪ್ರಿನ್ಸಿಪಾಲ್ ಎನ್ನುತ್ತೇವೆ. ಬರೆಸಿಕೊಂಡವರನ್ನು ಏಜೆಂಟ್ ಎಂದು ಕರೆಯುತ್ತೇವೆ. ಇವರಲ್ಲಿ ಯಾರಾದರೂ ಒಬ್ಬರು ನಿಧನರಾದರೂ ಪವರ್ ಆಫ್ ಅಟಾರ್ನಿ ಜಾರಿಯಾಗುವುದಿಲ್ಲ. ಆದ್ದರಿಂದ ಇಬ್ಬರೂ ಜೀವಿತವಾಗಿರುವ ಸಂದರ್ಭದಲ್ಲಿ ಏಜೆಂಟ್ ಪವರ್ ಆಫ್ ಅಟಾರ್ನಿಯನ್ನು ಜಾರಿಗೊಳಿಸುವಾಗ ಪ್ರಿನ್ಸಿಪಾಲ್ ಬದುಕಿದ್ದಾನೆ ಎಂದು ನೀಡುವ ಪ್ರಮಾಣ ಪತ್ರವನ್ನೇ ಪವರ್ ಆಫ್ ಅಟಾರ್ನಿ ಅಫಿಡವಿಟ್ ಎಂದು ಕರೆಯುತ್ತೇವೆ.
ಫೈನಾನ್ಸಿಯಲ್ ಅಫಿಡವಿಟ್ :
ಹಣಕಾಸಿನ ವಿಚಾರದಲ್ಲಿ ನೀಡುವ ಪ್ರಮಾಣ ಪತ್ರ. ಬ್ಯಾಂಕ್ ನಲ್ಲಿ ಸಾಲ ಪಡೆಯುವಾಗ, ವ್ಯಕ್ತಿಗಳು ಪರಸ್ಪರ ಹಣ ವಿನಿಮಯ ಮಾಡಿಕೊಳ್ಳುವಾಗ, ಅಥವಾ ಆಸ್ತಿ ಅಡಮಾನ ಮಾಡುವಾಗ ಹಾಗೂ ಇನ್ನಿತರೆ ಸಂದರ್ಭದಲ್ಲಿ ಹಣಕಾಸು ಅಫಿಡವಿಟ್ ನ್ನು ಬಳಕೆ ಮಾಡುತ್ತಾರೆ.
ಕಳೆದು ಹೋದ ದಾಖಲೆಗಾಗಿ ಅಫಿಡವಿಟ್ : ಯಾವುದಾದರೂ ದಾಖಲೆ ಕಳೆದು ಹೋದಲ್ಲಿ ಅಥವಾ ನಾಶವಾದಲ್ಲಿ ಅದರ ಬಗ್ಗೆ ದೂರು ನೀಡಿದ ಬಳಕ ಸಂಬಂಧಪಟ್ಟ ಇಲಾಖೆಗೆ ಅಫಿಡವಿಟ್ ಸಲ್ಲಿಸಿ ನಾಶವಾದ ದಾಖಲೆಗಳನ್ನು ಪಡೆಯಲು ಬಳಕೆ ಮಾಡಲಾಗುತ್ತದೆ. ಹಾಗೂ ಇನ್ನಿತರೆ ಮಾದರಿಯ ಅಫಿಡವಿಟ್.
ಅಫಿಡವಿಟ್ ನಲ್ಲಿ ಈ ಅಂಶ ಇರಲೇಬೇಕು: ಯಾವುದೇ ರೀತಿಯ ಅಫಿಟವಿಟ್ ನಲ್ಲಿ ವ್ಯಕ್ತಿಯ ಸತ್ಯಾಂಶ ಹೇಳಿಕೆ. ಈ ಅಂಶ ಸತ್ಯಾಂಶದಿಂದ ಕೂಡಿದ ಎಂದು ಪ್ರಮಾಣೀಕರಿಸಿರಬೇಕು. ಅಫಿಡವಿಟ್ ಮಾಡಿಸುವ ವ್ಯಕ್ತಿಯ ಸಹಿ ಇರಬೇಕು. ಈ ಅಫಿಟವಿಟ್ ನ್ನು ಪಬ್ಲಿಕ್ ನೋಟರಿ ಮುಂದೆ ಘೋಷಣೆ ಮಾಡಿ ಸಹಿ ಪಡೆದಿರಬೇಕು. ಅಥವಾ ನ್ಯಾಯಿಕ ಅಧಿಕಾರ ಮುಂದೆ ಹೇಳಿ ಅವರ ಸಹಿ ಪಡೆದಿರಬೇಕು.
