Revenue Facts

ವಿಧಾನ ಪರಿಷತ್ ಉಪಚುನಾವಣೆ; ಕಾಂಗ್ರೆಸ್ ನ ಜಗದೀಶ್ ಶೆಟ್ಟರ್, ಬೋಸರಾಜು, ತಿಪ್ಪಣ್ಣ ಅವಿರೋಧ ಆಯ್ಕೆ.

ಶುಕ್ರವಾರ ಸಂಜೆ ಕರ್ನಾಟಕ ವಿಧಾನ ಪರಿಷತ್ತಿನ ಮೂರು ತೆರವಾದ ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಜಗದೀಶ್ ಶೆಟ್ಟರ್, ತಿಪ್ಪಣ್ಣಪ್ಪ ಕಮಕನೂರ ಮತ್ತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಎನ್.ಎಸ್.ಬೋಸರಾಜು ಅವರು ಅವಿರೋಧವಾಗಿ ಆಯ್ಕೆಯಾದರು. ಹೀಗಾಗಿ ಜೂನ್ 30ರಂದು ಎಂಎಲ್‌ಸಿ ಉಪ ಚುನಾವಣೆ ನಡೆಸುವ ಅಗತ್ಯವಿಲ್ಲ. ವಿಧಾನಪರಿಷತ್ ಚುನಾವಣೆಗೆ ಸಲ್ಲಿಸಿರುವ ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿತ್ತು. ಕ್ಷೇತ್ರದಲ್ಲಿ ಮೂವರಷ್ಟೇ ಇದ್ದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯಿತು.

ಜೂನ್ 30 ರಂದು ತೆರವಾಗಿರುವ ವಿಧಾನ ಪರಿಷತ್ ಸ್ಥಾನಗಳಿಗೆ ಉಪಚುನಾವಣೆ ನಿಗದಿಯಾಗಿತ್ತು.

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿಧಾನ ಪರಿಷತ್ತಿನ ಮೂರು ಸ್ಥಾನಗಳು ತೆರವಾಗಿದ್ದವು. ಆರ್.ಶಂಕರ್, ಲಕ್ಷ್ಮಣ ಸವದಿ, ಬಾಬುರಾವ್ ಚಿಂಚನಸೂರ್ ರಾಜೀನಾಮೆ ನೀಡಿದ್ದರಿಂದ ಸ್ಥಾನಗಳು ತೆರವಾದವು.

ಪಕ್ಷದ ಮೂವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಪರಿಷತ್ ಉಪಚುನಾವಣೆಯಲ್ಲಿಯೂ ಕಾಂಗ್ರೆಸ್ ಭರ್ಜರಿ ಮುನ್ನಡೆ ಸಾಧಿಸಿದೆ. ವಿಧಾನಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ ಜಗದೀಶ್ ಶೆಟ್ಟರ್ ಗೆ ಕೊಂಚ ರಿಲೀಫ್ ಸಿಕ್ಕಂತಿದೆ. ಕಾಂಗ್ರೆಸ್ ನೂತನ ಸಚಿವ ಸಂಪುಟ ರಚನೆ ಬಳಿಕ ಶೆಟ್ಟರ್ ಅವರನ್ನು ಭೇಟಿ ಮಾಡಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದಾರೆ.

Exit mobile version