ಬೇನಾಮಿ ವಹಿವಾಟುಗಳ ನಿಷೇಧ ಕಾಯ್ದೆ 1988 ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಘೋಷಿಸಿದೆ. ಜತೆಗೆ ಈ ಕಾಯ್ದೆಗೆ 2016ರಲ್ಲಿ ತರಲಾಗಿರುವ ತಿದ್ದುಪಡಿಗಳನ್ನು ಪೂರ್ವಾನ್ವಯ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
2016ರ ಕಾಯಿದೆಯ ಸೆಕ್ಷನ್ 5 ರ ಅಡಿಯಲ್ಲಿ ಬೇನಾಮಿ ಆಸ್ತಿಗಳನ್ನು ಮುಟ್ಟುಗೋಲು ಹಾಕುವ ನಿಬಂಧನೆಯು ದಂಡನಾತ್ಮಕ ಸ್ವರೂಪವನ್ನು ಹೊಂದಿದ್ದು, ಅದನ್ನು ಮುಂದಾಲೋಚನೆಯಿಂದ ಅನ್ವಯಿಸಬಹುದೇ ಹೊರತು ಪೂರ್ವಾನ್ವಯ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಹಾಗೂ ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು ಈ ಮಹತ್ವದ ತೀರ್ಪು ನೀಡಿದೆ.
ಬೇನಾಮಿ ವಹಿವಾಟುಗಳ ನಿಷೇಧ ಕಾಯ್ದೆಯ ಸೆಕ್ಷನ್ 3 (2) ಹಾಗೂ ಸೆಕ್ಷನ್ 5 ಅಸ್ಪಷ್ಟ ಹಾಗೂ ಇಚ್ಛಾನುಸಾರವಾಗಿದೆ. ಹಾಗಾಗಿ ಅಸಾಂವಿಧಾನಿಕ ಎಂದೂ ತಿಳಿಸಿದೆ.
2016 ಅಕ್ಟೋಬರ್ 25ರಲ್ಲಿ ಕಾಯ್ದೆಗೆ ತಿದ್ದುಪಡಿ ತರುವ ಮೊದಲು ದಾಖಲಾದ ಬೇನಾಮಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಕ್ರಿಮಿನಲ್ ಮೊಕದ್ದಮೆ ಅಥವಾ ಮುಟ್ಟುಗೋಲು ಪ್ರಕ್ರಿಯೆಗಳನ್ನು ಮುಂದುವರಿಸಲು ಸಾಧ್ಯವಿಲ್ಲ. ಈಗಿನ ತೀರ್ಪು ಪ್ರಕಾರ ಅಂತಹ ಎಲ್ಲಾ ಮುಟ್ಟುಗೋಲು ಹಾಗೂ ಕಾನೂನು ಪ್ರಕ್ರಿಯೆಗಳನ್ನು ರದ್ದುಗೊಳಿಸಲಾಗುವುದು. ಬೇನಾಮಿ ಆಸ್ತಿಯ ಹಳೆಯ ಪ್ರಕರಣಗಳಲ್ಲಿ, 2016ರ ಕಾನೂನಿನ ಅಡಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಕಾಯ್ದೆಯ ಸೆಕ್ಷನ್ 3 (2) ಅನ್ನು ಸ್ವೇಚ್ಛೆಯಿಂದ ಬಳಸಲು ಅವಕಾಶವಿರುವುದರಿಂದ ಇದು ಅಸಾವಿಂಧಾನಿಕ. ಯಾವುದೇ ಕಾನೂನನ್ನು ಅಪರಾಧಗಳಿಗೆ ಪೂರ್ವಾನ್ವಯ ಮಾಡುವಂತಿಲ್ಲ ಎಂದು ಕೋರ್ಟ್ ಹೇಳಿದೆ.
ಈ ಕಾಯ್ದೆಗೆ 2016ರಲ್ಲಿ ತರಲಾಗಿದ್ದ ತಿದ್ದುಪಡಿಗಳನ್ನು ಪೂರ್ವಾನ್ವಯ ಮಾಡುವಂತಿಲ್ಲ ಎಂದು 2019ರಲ್ಲಿ ಕಲ್ಕತ್ತಾ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
ಬೇನಾಮಿ ಆಸ್ತಿ ಎಂದರೆ ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿ ಅಥವಾ ತನ್ನ ಹೆಂಡತಿ, ಮಕ್ಕಳು, ಸಂಬಂಧಿಕರು ಅಥವಾ ಸ್ನೇಹಿತರ ಹೆಸರಿನಲ್ಲಿ ಆಸ್ತಿಯನ್ನು ಖರೀದಿಸುವುದು. ಬೇನಾಮಿ ಆಸ್ತಿ ಪ್ರಕರಣ ಸಾಬೀತಾದರೆ 3 ವರ್ಷ ಜೈಲುಶಿಕ್ಷೆ ಹಾಗೂ ದಂಡವಿದೆ.


