Revenue Facts

ಸೈಟ್ ಖರೀದಿ ಮಾಡುವಾಗ ಯಾವ ದಾಖಲೆಗಳನ್ನು ಪರಿಶೀಲಿಸಬೇಕು ಗೊತ್ತಾ ?

ಬೆಂಗಳೂರು, ಅ. 06: ಯಾವುದೇ ಒಂದು ನಿವೇಶನ ಖರೀದಿ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ದಾಖಲೆಗಳಲ್ಲಿ ಸ್ವಲ್ಪ ಎಡವಟ್ಟಾದರೂ ನಿವೇಶನ ವಿವಾದಕ್ಕೆ ಒಳಗಗಾಗುತ್ತದೆ. ಮನೆ ಕಟ್ಟಲಾಗದ ಪರಿಸ್ಥಿತಿಯೂ ಎದುರಾಗಬಹುದು. ಹೀಗಾಗಿ ಯಾವುದೇ ನಿವೇಶನ ಖರೀದಿ ಮಾಡುವಾಗ ಅದು ಪ್ರಾಧಿಕಾರದ ನಿವೇಶನ ( ಬಿಡಿಎ, ನಗರಾಭಿವೃದ್ಧಿ ಪ್ರಾಧಿಕಾರ, ಕೆಎಚ್‌ಬಿ) ಖಾಸಗಿ ಬಡಾವಣೆ ನಿವೇಶನ ಆಗಿರಲೀ, ಅದನ್ನು ಖರೀದಿ ಮಾಡುವಾಗ ದಾಖಲೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಖಾತ್ರಿ ಪಡಿಸಿಕೊಳ್ಳಬೇಕು. ಆನಂತರವಷ್ಟೇ ನಿವೇಶನ ಖರೀದಿ ಮಾಡಬೇಕು.
ಯಾವುದೇ ನಿವೇಶನ ಖರೀದಿ ಮಾಡುವಾಗ ಈ ಕೆಳಕಂಡ ಸೂಕ್ಷ್ಮಗಳನ್ನು ಪಾಲಿಸಿದರೆ, ಮೋಸ ಹಾಗೂ ವಂಚನೆಯಿಂದ ಪಾರಾಗಬಹುದು. ವಿವಾದ ರಹಿತವಾಗಿ ನಿವೇಶನ ಖರೀದಿ ಮಾಡಬಹುದು.

ಮೊದಲ ಅಂಶ:

ನಿವೇಶನಕ್ಕೆ ನಗರಾಭಿವೃದ್ಧಿ ಪ್ರಾಧಿಕಾರಗಳು ಲೀಸ್ ಕಂ ಮತ್ತು ಸೇಲ್ ( ಬಾಡಿಗೆ ಮತ್ತು ಕರಾರು ಪತ್ರ)ದ ಒಪ್ಪಂದ ಕೊಟ್ಟಿದ್ದಾರೆಯೇ ಎಂಬುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳಬೇಕು. ಕೊಟ್ಟಿದ್ದರೆ ಅದರಲ್ಲಿನ ಷರತ್ತುಗಳು ಮತ್ತು ಅಂಶಗಳು ನೆರವೇರಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು.
ಉದಾಹರಣೆಗೆ ಬಿಡಿಎ ವತಿಯಿಂದ ನಿವೇಶನ ಖರೀದಿ ಮಾಡಿದ್ದಲ್ಲಿ, ನಿವೇಶನ ಹದಿನೈದು ವರ್ಷ ನಿವೇಶನ ಮಾರಾಟ ಮಾಡಬಾರದು ಎಂಬ ಷರತ್ತು ವಿಧಿಸಿಯೇ ? ಷರತ್ತು ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಆ ಷರತ್ತು ನೆರವೇರದ ನಿವೇಶನ ಖರೀದಿ ಮಾಡಿದರೆ ವಿನಾಕಾರಣ ದಂಡಕ್ಕೆ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿರುತ್ತದೆ. ಹೀಗಾಗಿ ನಿವೇಶನಕ್ಕೆ ಪ್ರಾಧಿಕಾರ ಹಾಕಿರುವ ಷರತ್ತು ನೆರವೇರಿದೆಯೇ ಎಂಬುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳಬೇಕು. ಷರತ್ತು ನೆರವೇರದೇ ಇದ್ದಲ್ಲಿ ಇಂತಹ ನಿವೇಶನಕ್ಕೆ ದಂಡ ವಿಧಿಸುವ ಅಥವಾ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ.

ಎರಡನೇ ಅಂಶ:

ಯಾವುದೇ ಖಾಸಗಿ ಬಡಾವಣೆಯಲ್ಲಿ ನಿವೇಶನ ಖರೀದಿ ಮಾಡಿದ್ದರೆ, ಪ್ಲಾನಿಂಗ್ ಅಥಾರಿಟಿ ( ಯೋಜನಾ ಪ್ರಾಧಿಕಾರ ) ಅನುಮತಿ ಕೊಟ್ಟಿರುವ ಪ್ಲಾನ್ ತೆಗೆದುಕೊಳ್ಳಬೇಕು. ಜತೆಗೆ ಸಮಗ್ರ ಅಭಿವೃದ್ಧಿ ಪ್ಲಾನ್ (CDP ) ನೀವು ಖರೀದಿಸುವ ನಿವೇಶನವೂ ಯಲ್ಲೋ ಜೋನ್ ವ್ಯಾಪ್ತಿಯಲ್ಲಿ ಬರುತ್ತದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ( ಹಳದಿ ಜೋನ್ ಅಂದರೆ,ನಿವೇಶನ ನಿರ್ಮಾಣಕ್ಕೆ ಅರ್ಹ ಜಾಗ )

ಮೂರನೇ ಅಂಶ:

ನಿವೇಶನಗಳು ಸಿಡಿಪಿ ನಲ್ಲಿ( ಸಮಗ್ರ ಅಭಿವೃದ್ಧಿ ಯೋಜನೆ) ಹಸಿರು ವಲಯ ಎಂದು ನಿಗದಿ ಪಡಿಸಿರುವ ಜಾಗದಲ್ಲಿ ಲೇಔಟ್ ನಲ್ಲಿದ್ದರೆ, ಭೂ ಉಪಯೋಗ ಬದಲಾವಣೆ ಆಗಿದೆಯೇ ಎಂಬುದನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆದಿರುವ ಆದೇಶದ ಪ್ರತಿಯನ್ನು ನೋಡಬೇಕು. ಪುನಃ ಸೂಕ್ತ ಭೂ ಪರಿವರ್ತನೆ ಆದೇಶ ಕಡ್ಡಾಯವಾಗಿ ಇರಬೇಕು.

ನಾಲ್ಕನೇ ಅಂಶ:

ಗರಿಷ್ಠ ಶೇ. 55 ರಷ್ಟ, ನಾಗರಿಕ ಸೌಲಭ್ಯಗಳಿಗೆ ಲೇಔಟ್ ನಲ್ಲಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಬಿಟ್ಟುಕೊಟ್ಟಿರುವ ಬಗ್ಗೆ ಪರಿತ್ಯಾಜನಾ ಪತ್ರ ನೋಂದಣಿಯಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಂಡಿರಬೇಕು.

ಐದನೇ ಅಂಶ:

ನೀವು ಖರೀದಿಸುತ್ತಿರುವ ನಿವೇಶನದ ಜಾಗ ಸರ್ಕಾರದ ಯಾವುದಾದರೂ ಯೋಜನೆಗೆ ಭೂ ಸ್ವಾಧೀನಕ್ಕೆ ಒಳಗಾಗಿದಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. 1950 ರಿಂದ ಸದರಿ ಜಾಗದ ವಾರಸುದಾರರ ಜಮೀನಿನ ಹಕ್ಕು ಕುರಿತ ದಾಖಲೆ ಪತ್ರಗಳನ್ನು ಕಡ್ಡಾಯವಾಗಿ ಪರೀಕ್ಷಿಸಬೇಕು. ಸುಮಾರು 70 ವರ್ಷಗಳು ಆಸ್ತಿಯ ಟೈಟಲ್ ಯಾವುದಾದರೂ ಸಮಸ್ಯೆಗೆ ಒಳಗಾಗಿದಯೆ ಎಂಬುದನ್ನು ನೋಡಬೇಕು.
ಲೇಔಟ್ ನಲ್ಲಿ ಸುತ್ತ ಕುಡಿಯುವ ನೀರು, ಉಪಯೋಗಿಸಿದ ನೀರು ಟ್ರೀಟ್‌ಮೆಂಟ್ ಪ್ಲಾಂಟ್, ರಸ್ತೆಗಳು ನಕ್ಷೆಗೆ ಅನುಗುಣವಾಗಿ ನಡೆದಿದೆಯೇ ಎಂಬುದನ್ನು ಪರಿಶೀಲಿಸಬೇಕು.

ಆರನೇ ಅಂಶ:

ಲೇಔಟ್ ಅಭಿವೃದ್ಧಿ ಸಂಬಂಧ ಭೂ ಮಾಲೀಕರು ಮತ್ತು ಬಿಲ್ಡರ್ ನಡುವಿನ ಜಂಟಿ ಕರಾರು ಪತ್ರವನ್ನು ಪರಿಶೀಲಿಸಿ ಅದರಲ್ಲಿನ ಅಂಶಗಳು ಸರಿಯಾಗಿ ನಡೆದಿವೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಇಲ್ಲವಾದರಲ್ಲಿ, ವ್ಯಾಜ್ಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.

ಏಳನೇ ಅಂಶ:

ಸರ್ಕಾರದ ಮಾರ್ಗಸೂಚಿ ಬೆಲೆಯನ್ನು ಸಕ್ಷಮ ಪ್ರಾಧಿಕಾರ ಲೇಔಟ್ ಗೆ ನಿಗದಿ ಮಾಡಿರಬೇಕು. ರೇರಾ ದಿಂದ ಅನುಮತಿ ಪಡೆದು ರೇರಾ ವಿಧಿಸಿರುವ ಷರತ್ತುಗಳನ್ನು ಕಡ್ಡಾಯವಾಗಿ ಪೂರೈಸಿರಿವುದನ್ನು ಖಾತ್ರಿ ಪಡಿಸಿಕೊಳ್ಳಬೇಕು.
ನಿವೇಶನ ಖರೀದಿಸಿದ ಬಳಿಕ ಲೇಔಟ್ ನ್ನು ಯಾರು ನಿರ್ವಹಣೆ ಮಾಡುತ್ತಾರೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು.

ನಿವೇಶನ ಖರೀದಿಗೆ ಬೇಕಾಗಿರುವ ದಾಖಲೆಗಳು:

ಭೂ ಸ್ವಾಧೀನ ಆದೇಶ, ನಗರಾಭಿವೃದ್ಧಿ ಪ್ರಾಧಿಕಾರ,ಖಾಸಗಿ ಗೃಹ ನಿರ್ಮಾಣ ಪ್ರಾಧಿಕಾರದ ನಿವೇಶನಗಳಿಗೆ ಮಾತ್ರ ಇದು ಅನ್ವಯ ಆಗುತ್ತದೆ.
ಭೂ ಪರಿವರ್ತನಾ ಆದೇಶ,
ಬಡಾವಣೆ ಪ್ಲಾನ್
ಪರಿತ್ಯಾಜನಾ ಪತ್ರ
ಖಾತಾ ( ಇತ್ತೀಚನದ್ದು )
ಇತ್ತೀಚಿನ ತೆರಿಗೆ ಪಾವತಿ ರಶೀದಿ ಸರಿಯಾಗಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು.

Exit mobile version