ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ ) ಅಧ್ಯಕ್ಷರನ್ನಾಗಿ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಕಾಂಗ್ರೆಸ್ ಶಾಸಕರಾದ ಟಿ.ಬಿ.ಜಯಚಂದ್ರ, ಹ್ಯಾರಿಸ್, ಎಂ.ಕೃಷ್ಣಪ್ಪ, ಪ್ರಿಯಾಕೃಷ್ಣ ಸೇರಿದಂತೆ ಹಲವರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ರಾಜಕಾರಣಿಗಳಿಗೆ ಮಣೆಹಾಕದೆ ಬಿಡಿಎ ಅಧ್ಯಕ್ಷ(Bangalore Development Authority) ಹುದ್ದೆಗೆ IAS ಅಧಿಕಾರಿ ರಾಕೇಶ್ ಸಿಂಗ್ ಅವರನ್ನು ನೇಮಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಕೆಲ ಶಾಸಕರಿಗೆ ಭಾರೀ ನಿರಾಸೆಯಾಗಿದೆ.
ಬಿಡಿಎ ಸೇರಿದಂತೆ ರಾಮನಗರ ಹಾಗೂ ಗ್ರಾಮಾಂತರ ಮತ್ತು ಕರ್ನಾಟಕದ ಒಟ್ಟು 10 ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರಾಗಿ ರಾಖೇಶ್ ಸಿಂಗ್ ಅವರನ್ನು ನೇಮಕ ಮಾಡಿದ್ದು, ಇದು ಅಚ್ಚರಿಕೆ ಕಾರಣವಾಗಿದೆ. ಸಹಜವಾಗಿ ಬಿಡಿಎ ಹಾಗೂ ಇತರೆ ಯೋಜನಾ ಪ್ರಾಧಿಕಾರ ಅಧ್ಯಕ್ಷರ ಹುದ್ದೆಗೆ ಆಡಳಿತ ಪಕ್ಷದ ನಾಯಕರನ್ನು ನೇಮಕ ಮಾಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಆದ್ರೆ, ಇದೀಗ ಅಚ್ಚರಿ ಎಂಬಂತೆ ಸರ್ಕಾರ ಪಕ್ಷದ ನಾಯಕರನ್ನು ಬಿಟ್ಟು ಐಎಎಸ್ ಅಧಿಕಾರಿಯನ್ನು ನೇಮಕ ಮಾಡಿ ಅಚ್ಚರಿ ಮೂಡಿಸಿದೆ.
ಸಚಿವ ಸ್ಥಾನ ವಂಚಿತ ಶಾಸಕರು ಈಗ ಪ್ರಮುಖ ನಿಗಮ ಹಾಗೂ ಮಂಡಳಿಗಳ ಮೇಲೆ ಕಣ್ಣಿಟ್ಟಿದ್ದಾರೆ. ಅದರಲ್ಲೂ ಮುಖ್ಯವಾಗಿ ಬಿಡಿಎ ಚೇರ್ಮನ್ ಹುದ್ದೆಗೆ ಭಾರೀ ಪೈಪೋಟಿ ನಡೆದಿತ್ತು. ಟಿಬಿ ಜಯಚಂದ್ರ ಜೊತೆಗೆ ಬೆಂಗಳೂರಿನ ವಿಜಯನಗರ ಶಾಸಕ ಪ್ರಿಯಾಕೃಷ್ಣ ಹಾಗೂ ಶಾಂತಿನಗರ ಕ್ಷೇತ್ರದ ಶಾಸಕ ಎನ್ಎ ಹ್ಯಾರಿಸ್ ಸಹ ಬಿಡಿಎ ಚೇರ್ಮನ್ ಬೇಕೆಂದು ಪಟ್ಟು ಹಿಡಿದಿದ್ದರು. ಬಿಡಿಎ ಚೇರ್ಮನ್ ಹುದ್ದೆಯನ್ನು ಸ್ಥಳೀಯ ಶಾಸಕರಿಗೇ ನೀಡಿ ಎಂದು ಬೆಂಗಳೂರು ಶಾಸಕರು ಡಿಕೆ ಶಿವಕುಮಾರ್ ಮೇಲೆ ಒತ್ತಡ ಹಾಕಿದ್ದರು. ಆದ್ರೆ, ಅಂತಿಮವಾಗಿ ರಾಜ್ಯ ಸರ್ಕಾರ ರಾಜಕಾರಣಿಗಳನ್ನು ಬಿಟ್ಟು ಐಎಎಸ್ ಅಧಿಕಾರಿಯನ್ನು ನೇಮಿಸಿದೆ.