21.4 C
Bengaluru
Saturday, June 28, 2025

ಗೋವಾದ ಕರ್ಲೀಸ್‌ ರೆಸ್ಟೊರೆಂಟ್‌ ಪ್ರಕರಣ: ಅನಧಿಕೃತ ಕಟ್ಟಡ ತೆರವಿಗೆ ಸುಪ್ರೀಂ ತಡೆ

ಗೋವಾದ ಪ್ರಸಿದ್ಧ ಅಂಜುನಾ ಬೀಚ್‌ನಲ್ಲಿರುವ ಕರ್ಲೀಸ್‌ ರೆಸ್ಟೊರೆಂಟ್‌ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿದೆ. ನಿಗದಿತ ಸರ್ವೇ ನಂಬರ್‌ 42/10 ಹೊರತುಪಡಿಸಿ ಬೇರೆ ಭೂಮಿಯಲ್ಲಿ ಅನಧಿಕೃತ ನಿರ್ಮಾಣಗಳಿದ್ದರೆ ಖಂಡಿತವಾಗಿಯೂ ಕೆಡವಬಹುದು ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ಕರಾವಳಿ ನಿಯಂತ್ರಣ ವಲಯ (ಸಿಆರ್‌ಝೆಡ್‌) ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಗೋವಾದ ಪ್ರಸಿದ್ಧ ಅಂಜುನಾ ಬೀಚ್‌ನಲ್ಲಿರುವ ಕರ್ಲೀಸ್‌ ರೆಸ್ಟೊರೆಂಟ್‌ ಅನ್ನು ಕೆಡವಲು ರಾಷ್ಟ್ರೀಯ ಹಸಿರು ನ್ಯಾಯಪೀಠ ಆದೇಶ ನೀಡಿತ್ತು. ಆದರೆ ಸುಪ್ರೀಂ ಕೋರ್ಟ್‌ ಇದನ್ನು ಕೆಡವದಂತೆ ಸದ್ಯ ತಡೆಯಾಜ್ಞೆ ನೀಡಿದೆ.

ಮುಂದಿನ ವಿಚಾರಣೆಯ ದಿನಾಂಕದವರೆಗೆ ಈ ಸ್ಥಳದಲ್ಲಿ ಅಥವಾ ಪ್ರದೇಶದಲ್ಲಿ ಯಾವುದೇ ವಾಣಿಜ್ಯ ಕಾರ್ಯಾಚರಣೆಗಳನ್ನು ಕೈಗೆತ್ತಿಕೊಳ್ಳುವುದಿಲ್ಲವೆಂಬ ಷರತ್ತಿಗೆ ಅನ್ವಯವಾಗಿ ತಡೆಯಾಜ್ಞೆ ನೀಡಿದೆ.

ಅರ್ಜಿದಾರರಾದ ಲಿನೆಟ್‌ ನ್ಯೂನ್ಸ್‌ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಹುಝೆಫಾ ಅಹ್ಮದಿ ಅವರು, ‘ಸರ್ವೇ ನಂ 42/10ರಲ್ಲಿರುವ ಕಟ್ಟಡವು 1991ಕ್ಕಿಂತ ಮೊದಲೇ ಆಸ್ತಿತ್ವದಲ್ಲಿತ್ತು. ಈ ಸರ್ವೇ ನಂಬರ್‌ನಲ್ಲಿ ಕಕ್ಷಿದಾರರು ಆಸ್ತಿಯನ್ನು ಹೊಂದಿದ್ದಾರೆ. ಆದರೆ ಇತರ ಕಟ್ಟಡಗಳು ಅವರದ್ದಲ್ಲ’ ಎಂದು ವಾದಿಸಿದರು.

ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್‌ 16ಕ್ಕೆ ಮುಂದೂಡಿದರು. ವಕೀಲ ಅಭಯ್‌ ಅನಿಲ್‌ ಅಂತೂರ್ಕರ್‌ ಅವರು ಗೋವಾ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ ಪರವಾಗಿ ನೋಟಿಸ್‌ ಸ್ವೀಕರಿಸಿ, ಸೆಪ್ಟೆಂಬರ್‌ 14ರೊಳಗೆ ಈ ಪ್ರಕರಣದ ಕುರಿತ ಛಾಯಾಚಿತ್ರಗಳು ಹಾಗೂ ಮುಂದಿನ ಯೋಜನೆಗಳ ಕುರಿತು ಎಲ್ಲಾ ರೀತಿಯ ವರದಿಗಳನ್ನು ಸಲ್ಲಿಸುವುದಾಗಿ ಕೋರ್ಟ್‌ಗೆ ಸ್ಪಷ್ಟಪಡಿಸಿದರು. ಈ ನೋಟಿಸ್‌ ಅನ್ನು ಸೆಪ್ಟೆಂಬರ್‌ 16ರೊಳಗೆ ಹಿಂತಿರುಗಿಸುವಂತೆ ಕೋರ್ಟ್‌ ತಿಳಿಸಿದೆ.

ಬಿಜೆಪಿ ನಾಯಕಿ ಹಾಗೂ ಮಾಜಿ ಟಿಕ್‌ಟಾಕ್ ತಾರೆ, ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದ ಸೋನಾಲಿ ಫೋಗಟ್ ಇತ್ತೀಚೆಗೆ ಆಗಸ್ಟ್ 23 ರಂದು ಇದೇ ರೆಸ್ಟೋರೆಂಟ್‌ನಲ್ಲಿ ಮಾದಕ ದ್ರವ್ಯ ಸೇವಿಸಿದ ನಂತರ ಶವವಾಗಿ ಪತ್ತೆಯಾಗಿದ್ದರು. ಸೋನಾಲಿ ಫೋಗಟ್ ಸಾಯುವ ಕೆಲವು ಗಂಟೆಗಳ ಮೊದಲು ರೆಸ್ಟೋರೆಂಟ್‌ನ ಔಟ್‌ಲೆಟ್‌ನಲ್ಲಿ ಪಾರ್ಟಿ ಮಾಡುತ್ತಿರುವುದು ತನಿಖೆಯಿಂದ ತಿಳಿದುಬಂದಿತ್ತು. ಫೋಗಟ್ ಸಾವಿನ ಪ್ರಕರಣದಲ್ಲಿ ಬಂಧಿತರಾದ ಐವರ ಪೈಕಿ ರೆಸ್ಟಾರೆಂಟ್ ಮಾಲೀಕ ಎಡ್ವಿನ್‌ ನೂನ್ಸ್ ಕೂಡ ಸೇರಿದ್ದಾರೆ.

Related News

spot_img

Revenue Alerts

spot_img

News

spot_img