Revenue Facts

ಬೆಂಗಳೂರಿನಲ್ಲಿ ಅಕ್ಟೋಬರ್ ನಂತರ ನಿವೇಶನ ಮಾರಿದ್ರೆ ಡಬಲ್ ಲಾಭ!

ಬೆಂಗಳೂರು, ಜು. 31: ಮುಂದಿನ ಅಕ್ಟೋಬರ್ ತಿಂಗಳಿನಿಂದ ಬೆಂಗಳೂರು ಸೇರಿದಂತೆ ಸ್ಥಿರಾಸ್ತಿಗಳ ಮೌಲ್ಯದಲ್ಲಿ ಭಾರೀ ಹೆಚ್ಚಳವಾಗಲಿದೆ. ಸರ್ಕಾರದ ಗ್ಯಾರೆಂಟಿಗಳ ಅನುಷ್ಠಾನಕ್ಕೆ ಸಂಪನ್ಮೂಲ ಕ್ರೋಢಿಕರಣಕ್ಕೆ ಮುಂದಾಗಿರುವ ಸರ್ಕಾರ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ ಮಾಡಿ ಹೆಚ್ಚುವರಿ ಏಳು ಸಾವಿರ ಕೋಟಿ ಸಂಗ್ರಹಕ್ಕೆ ಟಾರ್ಗೆಟ್ ನೀಡಲಾಗಿದೆ. ಪ್ರಸ್ತುತ ಅಸ್ತಿಗಳ ಮಾರುಕಟ್ಟೆ ಮೌಲ್ಯ ಆಧರಿಸಿ ಸರ್ಕಾರದ ಮಾರ್ಗಸೂಚಿ ಬೆಲೆ ನಿಗದಿ ಮಾಡಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಾರ್ಯೋನ್ಮುಖವಾಗಿದ್ದು, ಅಕ್ಟೋಬರ್ ನಿಂದ ಸ್ಥಿರಾಸ್ತಿಗಳ ಮೌಲ್ಯ ಹೆಚ್ಚಳವಾಗಲಿದೆ.

ರಿಯಲ್ ಎಸ್ಟೇಟ್ ಹಬ್ ಬೆಂಗಳೂರಿನಲ್ಲಿ ಒಂದು ನಿವೇಶನದ ಬೆಲೆ ಸರ್ಕಾರದ ಮಾರ್ಗಸೂಚಿ ಬೆಲೆಗೆ ಹೋಲಿಸಿದ್ರೆ ದುಪ್ಪಟ್ಟು ಇರುತ್ತದೆ. ಸರ್ಕಾರಕ್ಕೆ ಪಾವತಿ ಮಾಡಬೇಕಾದ ನೋಂದಣಿ ಮತ್ತು ಮುದ್ರಾಂಕ ಶುಲ್ಕ ತಪ್ಪಿಸುವ ಸಲುವಾಗಿ ಸರ್ಕಾರದ ಮಾರ್ಗಸೂಚಿ ಬೆಲೆಗೆ ಆಸ್ತಿಗಳನ್ನು ನೋಂದಣಿ ಮಾಡಿಕೊಳ್ಳುವ ಪರಿಪಾಠವಿದೆ. ಉದಾಹರಣೆಗೆ ಬೆಂಗಳೂರಿನ ಒಂದು ಪ್ರದೇಶದಲ್ಲಿ ನಿವೇಶನದ ಸರ್ಕಾರದ ಮಾರ್ಗಸೂಚಿ ಬೆಲೆ ಚದರಡಿಗೆ 5000 ರೂ. ಇದ್ದರೆ, ಮಾರುಕಟ್ಟೆ ಮೌಲ್ಯ 10 ಸಾವಿರ ರೂ. ಇರುತ್ತದೆ. ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಉಳಿಸುವ ಸಲುವಾಗಿ ಸರ್ಕಾರದ ಮಾರ್ಗಸೂಚಿ ಬೆಲೆಗೆ ಖರೀದಿಯಂತೆ ದಾಖಲೆಗಳನ್ನು ನೋಂದಣಿ ಮಾಡಲಾಗುತ್ತದೆ. ಉಳಿದ ಮೌಲ್ಯವನ್ನು ಕಪ್ಪು ಹಣದ ಮೂಲಕವೇ ಅನಧಿಕೃತವಾಗಿ ವಹಿವಾಟು ನಡೆಸುವ ಪರಿಪಾಠವಿದೆ. ಹೀಗಾಗಿ ಸರ್ಕಾರಕ್ಕೆ ಪಾವತಿಯಾಗಬೇಕಿರುವ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಕಡಿಮೆಯಾಗುತ್ತಿದೆ.

2019 ರಲ್ಲಿಯೇ ಸ್ಥಿರಾಸ್ತಿಗಳ ನೋಂದಣಿ ಮತ್ತು ಮುದ್ರಾಂಕ ಪರಿಷ್ಕರಣೆ ಮಾಡಬೇಕಿತ್ತು. ಆದರೆ ಕೊರೋನಾ ಕಾರಣಕ್ಕೆ ರಿಯಲ್ ಎಸ್ಟೇಟ್ ಮಾತ್ರವಲ್ಲದೇ ಸ್ಥಿರಾಸ್ತಿಗಳ ವಹಿವಾಟು ಮೇಲೆ ಪೆಟ್ಟು ಬಿದ್ದಿತ್ತು. ಹೀಗಾಗಿ ಮೂರು ವರ್ಷದಿಂದ ಸ್ಥಿರಾಸ್ತಿಗಳ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೆಚ್ಚಳವಾಗಿರಲಿಲ್ಲ. ಸರ್ಕಾರ ಹೆಚ್ಚುವರಿ ಸಂಪನ್ಮೂಲ ಕ್ರೋಢೀಕರಣ ಮಾಡುವ ಸಲುವಾಗಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆಗೆ ಸೂಚಿಸಿದೆ.

ರಾಜ್ಯದ ಪ್ರಮುಖ ನಗರ, ಪಟ್ಟಣ ಹಾಗೂ ಹೊರ ವಲಯಗಳಿಗೆ ಹೊಂದಿಕೊಂಡಿರುವ ಆಸ್ತಿಗಳ ಮಾರುಕಟ್ಟೆ ಮೌಲ್ಯ ಮತ್ತು ಸರ್ಕಾರದ ಮಾರ್ಗಸೂಚಿ ಬೆಲೆಯ ನಡುವೆ ಭಾರೀ ವ್ಯತ್ಯಾಸವಿದೆ. ಅಂತಹ ಪ್ರದೇಶ ಗುರುತಿಸಿ ಮಾರುಕಟ್ಟೆ ದರ ಕುರಿತು ಮಾಹಿತಿ ಸಂಗ್ರಹಿಸಿ ಅದರ ಆಧಾರದ ಮೇಲೆ ಸರ್ಕಾರದ ಮಾರ್ಗಸೂಚಿ ಬೆಲೆ ನಿಗದಿ ಮಾಡಲು ಅರ್ಥಿಕ ಇಲಾಖೆ ಕಂದಾಯ ಇಲಾಖೆಗೆ ಸೂಚಿಸಿದೆ.

ಒಂದು ತಿಂಗಳಲ್ಲಿ ಅಧ್ಯಯನ ವರದಿ: ಅರ್ಥಿಕ ಇಲಾಖೆಯ ನಿರ್ದೇಶನದಂತೆ ಇನ್ನೊಂದು ತಿಂಗಳಲ್ಲಿ ಆಸ್ತಿಗಳ ಮಾರುಕಟ್ಟೆ ದರ ಕುರಿತು ಅಧ್ಯಯನ ನಡೆಸಿ ಮಾರ್ಗಸೂಚಿ ಬೆಲೆ ಪರಿಷ್ಕರಣೆ ಅಂದಾಜು ವರದಿ ಕಂದಾಯ ಇಲಾಖೆ ( ನೋಂದಣಿ ಮತ್ತು ಮುದ್ರಾಂಕ ಇಲಾಖೆ) ನೀಡಲಿದೆ. ವರದಿಯ ಸಾದಕ ಬಾಧಕ ಚರ್ಚಿಸಿ ಮಾರ್ಗಸೂಚಿ ದರ ಪರಿಷ್ಕರಣೆಯಾಗಲಿದೆ.

ಅಕ್ಟೋಬರ್ ನಿಂದ ಜಾರಿ: ಪ್ರಸಕ್ತ ಅರ್ಥಿಕ ವರ್ಷದಲ್ಲಿಯೇ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ ನಿಂದಲೇ ಸ್ಥಿರಾಸ್ತಿಗಳ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೆಚ್ಚಳವಾಗಲಿದೆ. ಪರಿಷ್ಕೃತ ದರ ಅಧರಿಸಿ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ನೋಂದಣಿ ಮತ್ತು ಮುದ್ರಾಂ ಇಲಾಖೆ, ಸ್ಥಳೀಯ ಮೌಲ್ಯಮಾಪನ ಸಮಿತಿಗಳಿಂದ ವರದಿ ಪಡೆಯುವ ಕಾರ್ಯಕ್ಕೆ ಚಾಲನೆ ನೀಡಿದೆ. ಕೇಂದ್ರೀಯ ಮೌಲ್ಯಮಾಪನ ಸಮಿತಿಗಳೊಂದಿಗೆ ಅನುಮೋದನೆ ಪಡೆದು ನಂತರ ಸಾರ್ವಜನಿಕ ಅಹವಾಲು ಸ್ವೀಕಾರಕ್ಕೆ ಅವಕಾಶ ನೀಡಲಾಗುತ್ತದೆ. ಸೆಪ್ಟೆಂಬರ್ ಅಂತ್ಯದೊಳಗೆ ಎಲ್ಲಾ ಪ್ರಕ್ರಿಯೆ ಮುಗಿಸಿ ಅಕ್ಟೋಬರ್ ನಲ್ಲಿ ಪರಿಷ್ಕೃತ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ.

25 ಸಾವಿರ ಕೋಟಿ ಟಾರ್ಗೆಟ್: 2022 -23 ನೇ ಸಾಲಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಆಸ್ತಿಗಳ ನೋಂದಣಿಯಿಂದ 19 ಸಾವಿರ ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಜುಲೈನಲ್ಲಿ ಪ್ರಕಟಿಸಿದ ಬಜೆಟ್ ನಲ್ಲಿ 25 ಸಾವಿರ ಕೋಟಿ ರೂ. ಗುರಿ ಹೊಂದಲಾಗಿದೆ. ಹೆಚ್ಚುವರಿಯಾಗಿ ಏಳು ಸಾವಿರ ಕೋಟಿ ರೂ. ದರ ಪರಿಷ್ಕರಣೆಯಿಂದ ಬರುವ ನಿರೀಕ್ಷೆಯಿದೆ. ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೆಚ್ಚಳವಾದರೆ ಸಾಮಾನ್ಯವಾಗಿ ಬೆಂಗಳೂರು ಹಾಗೂ ಹೊರವಲಯದ ಆಸ್ತಿಗಳ ಮೌಲ್ಯ ಸಹ ಹೆಚ್ಚಳವಾಗುವುದರಲ್ಲಿ ಅನುಮಾನವೇ ಇಲ್ಲ!

Exit mobile version