Revenue Facts

ಅನಿವಾಸಿ ಭಾರತೀಯರು ಭಾರತದಲ್ಲಿನ ತಮ್ಮ ಆಸ್ತಿ ಮಾರಿದರೂ ತೆರಿಗೆ ಪಾವತಿಸಬೇಕು…

ಒಬ್ಬ ವ್ಯಕ್ತಿಯು ತನ್ನ ಒಂದು ಆಸ್ತಿಯನ್ನು ಎರಡು ಬೇರೆಬೇರೆ ದೇಶಗಳಲ್ಲಿ ಘೋಷಿಸಿಕೊಂಡಿದ್ದಾಗ, ಅದಕ್ಕೆ ಎರಡೂ ದೇಶಗಳಲ್ಲಿ ಪ್ರತ್ಯೇಕವಾಗಿ ತೆರಿಗೆ ಪಾವತಿಸುವುದನ್ನು ತಪ್ಪಿಸುವ ಒಪ್ಪಂದವನ್ನು ಭಾರತವು ಹಲವು ದೇಶಗಳೊಂದಿಗೆ ಮಾಡಿಕೊಂಡಿದೆ. ಇದನ್ನು ಡಬಲ್ ಟ್ಯಾಕ್ಸ್ ಅವಾಯ್ಡೆನ್ಸ್ ಅಗ್ರೀಮೆಂಟ್ (ಡಿಟಿಎಎ) ಎನ್ನಲಾಗುತ್ತದೆ. ಆದರೆ ಈ ಒಪ್ಪಂದದ 13ನೇ ಸೆಕ್ಷನ್ ಪ್ರಕಾರ, ಆಯಾ ದೇಶಗಳು ತಮ್ಮ ಕಾನೂನುಗಳಿಗೆ ಅನುಗುಣವಾಗಿ ಸ್ವತ್ತು ಮಾರಾಟದಿಂದ ಬಂದ ಲಾಭದ (ಕೆಪಿಟಲ್ ಗೇನ್ಸ್) ಮೇಲೆ ತೆರಿಗೆ ವಿಧಿಸಲು ಸ್ವತಂತ್ರವಾಗಿವೆ. ಅಂದರೆ, ಅನಿವಾಸಿ ಭಾರತೀಯ ವ್ಯಕ್ತಿಯು ಭಾರತದಲ್ಲಿನ ತನ್ನ ಆಸ್ತಿ ಮಾರಾಟ ಮಾಡಿದರೆ ಅದರಿಂದ ಬಂದ ಆದಾಯಕ್ಕೆ ಭಾರತದಲ್ಲಿ ತೆರಿಗೆ ಭರಿಸುವುದು ಅನಿವಾರ್ಯವಾಗುತ್ತದೆ.

ಉದಾಹರಣೆಗೆ, ಭಾರತೀಯ ವ್ಯಕ್ತಿಯೊಬ್ಬರು ಇಬ್ಬರು ಹೆಣ್ಣುಮಕ್ಕಳನ್ನು ಹೊಂದಿದ್ದಾರೆ. ಅವರಲ್ಲಿ ಒಬ್ಬರು ಭಾರತದ ನಿವಾಸಿ, ಇನ್ನೊಬ್ಬರು ಅಮೆರಿಕದ ನಿವಾಸಿ. ಈಗ ಆ ವ್ಯಕ್ತಿ ತಮ್ಮ ಇಬ್ಬರೂ ಹೆಣ್ಣುಮಕ್ಕಳಿಗೆ ತಮ್ಮ ಒಂದು ಮನೆಯನ್ನೂ ಸೇರಿಸಿ ಎಲ್ಲ ಆಸ್ತಿಯನ್ನು ಸಮಾನವಾಗಿ ಹಂಚಿಕೊಡುವ ಕುರಿತು ಉಯಿಲು ಬರೆಯುತ್ತಾರೆ. ಆದರೆ ಅಮೆರಿಕದಲ್ಲಿರುವ ಮಗಳಿಗೆ ಭಾರತದಲ್ಲಿ ಪ್ಯಾನ್ (PAN) ಕಾರ್ಡ್ ಇಲ್ಲ. ಆಕೆ ಭಾರತದಲ್ಲಿ ಪಿತ್ರಾರ್ಜಿತವಾಗಿ ಬಂದ ಮನೆಯ ತನ್ನ ಪಾಲನ್ನು ಮಾರಾಟ ಮಾಡಿದಾಗ ಆ ಲಾಭಕ್ಕೆ ತೆರಿಗೆ ಪಾವತಿಸಲೇ ಬೇಕಾಗುತ್ತದೆ.

ಮನೆ ಖರೀದಿಸುವ ವ್ಯಕ್ತಿಯು ಅನಿವಾಸಿ ಭಾರತೀಯ ವ್ಯಕ್ತಿಗೆ ಹಣ ಪಾವತಿಸುವ ಸಂದರ್ಭದಲ್ಲಿ ಯಾವ ದರ ಅನ್ವಯವಾಗುತ್ತದೋ ಆ ಮೊತ್ತದ ತೆರಿಗೆಯನ್ನು ಕಡಿತಗೊಳಿಸುವ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ ಎಂದು ಭಾರತೀಯ ತೆರಿಗೆ ಕಾನೂನುಗಳ 195ನೇ ಸೆಕ್ಷನ್ ಹೇಳುತ್ತದೆ. ಒಂದುವೇಳೆ ಭಾರತದಲ್ಲಿನ ಮಗಳು ಮನೆಯನ್ನು ಮಾರಾಟ ಮಾಡಿ, ಅಮೆರಿಕದಲ್ಲಿನ ತನ್ನ ಸಹೋದರಿಗೆ ಆಕೆಯ ಪಾಲನ್ನು ಪಾವತಿಸುವ ಮಾರ್ಗ ಅನುಸರಿಸಿದರೂ ಅದಕ್ಕೆ ಅನ್ವಯವಾಗುವ ತೆರಿಗೆಯನ್ನು ಮೂಲದಲ್ಲಿಯೇ ಕಡಿತ (ಟಿಡಿಎಸ್) ಮಾಡಿಕೊಳ್ಳಬೇಕಾಗುತ್ತದೆ. ಈ ಇಬ್ಬರು ಸಹೋದರಿಯರ ಜಂಟಿ ಆಸ್ತಿಯ ತೆರಿಗೆ ಹೊಣೆಗಾರಿಕೆಯನ್ನು ಭಾರತೀಯ ನಿವಾಸಿಯಾದ ಮಗಳು ಮಾತ್ರ ಹೊರುವುದು ಸಾಧ್ಯವಿಲ್ಲ. ಈ ರೀತಿ ಮೂಲದಲ್ಲೇ ಕಡಿತಗೊಳಿಸಲಾದ ತೆರಿಗೆಯ (ಟಿಡಿಎಸ್) ಮೊತ್ತವನ್ನು ಕ್ಲೇಮ್ ಮಾಡಿಕೊಳ್ಳಲು ಅಮೆರಿಕದ ನಿವಾಸಿಯು ಭಾರತದಲ್ಲಿ ಪ್ಯಾನ್‌ ಅರ್ಜಿ ಸಲ್ಲಿಸಬೇಕಾಗುತ್ತದೆ.

ಭಾರತದ ನಿವಾಸಿ ಆಗಿರುವ ಮಗಳ ಹೆಸರಿಗೆ ಮಾತ್ರವೇ ಮನೆ ಉಯಿಲು ಬರೆದಿದ್ದ ಪಕ್ಷದಲ್ಲಿ ಆಕೆ ಮಾತ್ರ ತೆರಿಗೆ ಭರಿಸುವ ಹೊಣೆಗಾರಿಕೆ ಹೊಂದಿರುತ್ತಾರೆ. ನಂತರ ಬಂದ ಮೊತ್ತದಲ್ಲಿ ಅಮೆರಿಕದಲ್ಲಿನ ತನ್ನ ಸಹೋದರಿಗೆ ಅರ್ಧ ಪಾಲನ್ನು ಉಡುಗೊರೆ ರೂಪದಲ್ಲಿ ನೀಡಬಹುದು. ಈ ರೀತಿ ನೀಡುವ ಉಡುಗೊರೆಗೆ ಭಾರತದಲ್ಲಿ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಆದರೆ ಅಮೆರಿಕದಲ್ಲಿ ಈ ಉಡುಗೊರೆಯ ಮೊತ್ತಕ್ಕೆ ಲೆಕ್ಕ ನೀಡಬೇಕಾಗುತ್ತದೆ. ಈ ಉಪಾಯ ಕೆಲಸ ಮಾಡದಿದ್ದಲ್ಲಿ, ಅಮೆರಿಕದಲ್ಲಿನ ಮಗಳು ಭಾರತದಲ್ಲಿ ಆಸ್ತಿ ಮಾರಾಟ ಮಾಡಿದಾಗ ಈ ದೇಶದಲ್ಲಿ ಐಟಿಆರ್ ಫೈಲ್ ಮಾಡುವುದು ಮತ್ತು ತೆರಿಗೆ ಪಾವತಿಸುವ ಹೊರತು ಅನ್ಯಮಾರ್ಗವಿಲ್ಲ.

Exit mobile version