Revenue Facts

ಒಬ್ಬ ವ್ಯಕ್ತಿ/ ಕುಟುಂಬ ಕಾನೂನು ಬದ್ಧವಾಗಿ ಎಷ್ಟು ಎಕರೆ ಜಮೀನು ಹೊಂದಬಹದು?

ಒಬ್ಬ ವ್ಯಕ್ತಿ/ ಕುಟುಂಬ ಕಾನೂನು ಬದ್ಧವಾಗಿ ಎಷ್ಟು ಎಕರೆ ಜಮೀನು ಹೊಂದಬಹದು?

ಕರ್ನಾಟಕ ಭೂ ಸುಧಾರಣೆ ಕಾಯ್ದೆ ಎಂದರೆ ನೆನಪಿಗೆ ಬರೋದೇ ದಿವಂಗತ ಮಾಜಿ ಸಿಎಂ ದೇವರಾಜು ಅರಸು. ಉಳುವವನೇ ಭೂಮಿಯ ಮಾಲೀಕ ಎಂಬ ಕಾನೂನು ಜಾರಿಗೆ ತಂದು ಇಂದಿಗೂ ಕರ್ನಾಟಕದ ಇತಿಹಾಸದಲ್ಲಿ ಚರಿತ್ರಾರ್ಹ ಪುಟ ಸೇರಿದ್ದಾರೆ. ಈ ಕಾಯ್ದೆಯನ್ನು ಶಿಸ್ತು ಬದ್ಧವಾಗಿ ಜಾರಿಗೆ ತಂದು ಬಿಟ್ಟರೆ ಈಗಲೂ ಎಷ್ಟೋ ಮಂದಿ ಭೂ ರಹಿತರು ಭೂಮಿಯ ಒಡೆಯರಾಗುತ್ತಾರೆ. ಯಾಕೆಂದರೆ ಕಾನೂನು ಮಾಡುವ ಜನ ಪ್ರತಿನಿಧಿಗಳ ಹೆಸರಿನಲ್ಲಿ ಬೇನಾಮಿ ಹೆಸರಿನಲ್ಲಿ ಸಾವಿರಾರು ಎಕರೆ ಆಸ್ತಿ ಹೊಂದಿರುವುದು ಸುಳ್ಳಲ್ಲ. ಇದಕ್ಕೆ ಉದ್ಯಮಿಗಳು ಕೂಡ ಹೊರತಾಗಿಲ್ಲ. ಒಬ್ಬ ವ್ಯಕ್ತಿ ಅಥವಾ ಕುಟುಂಬ ಎಷ್ಟು ಎಕರೆ ಕೃಷಿ ಭೂಮಿ ಹೊಂದಲು ಅರ್ಹತೆ ಪಡೆಯುತ್ತದೆ. ಹೆಚ್ಚುವರಿಯಾಗಿ ಇದ್ದರೆ ಅದು ಏನಾಗುತ್ತದೆ ಎಂಬುದರ ಬಗ್ಗೆ ಕರ್ನಾಟಕ ಭು ಸುಧಾರಣೆ ಕಾಯ್ದೆ 1961 ತಿಳಿಸುತ್ತದೆ. ಇದನ್ನೇ ಲ್ಯಾಂಡ್ ಸೀಲಿಂಗ್ ಲಿಮಿಟ್ ಎಂದು ಕರೆಯುತ್ತೇವೆ. ಕರ್ನಾಟಕ ಭು ಸುಧಾರಣೆ ನಿಯಮ ಉಲ್ಲಂಘಿಸಿ ಹೆಚ್ಚು ಆಸ್ತಿ ಹೊಂದಿದ್ದರೆ ಅದನ್ನು ಸರ್ಕಾರ ತನ್ನ ವಶಕ್ಕೆ ಪಡೆಯಲು ಅವಕಾಶವಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ಕಲಂ 63 (1) ರಿಂದ ಕಲಂ 63(9) ರ ವರೆಗೆ ಲ್ಯಾಂಡ್ ಸೀಲಿಂಗ್ ( ಕೃಷಿ ಭೂಮಿ ಮಿತಿ) ಯ ಬಗ್ಗೆ ಹೇಳುತ್ತದೆ. ಅಚ್ಚರಿ ಏನೆಂದರೆ , ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ಅನೇಕ ತಿದ್ದುಪಡಿಗಳನ್ನು ತರುವ ಮೂಲಕ ಆಳುವ ಸರ್ಕಾರಗಳು ಕಾಯ್ದೆಯ ಉದ್ದೇಶಗಳಿಗೆ ಕೊಡಲಿ ಪೆಟ್ಟು ನೀಡಲಾಗಿದೆ. ಧಾರ್ಮಿಕ ಸಂಘ ಸಂಸ್ಥೆಗಳು, ಕಂಪನಿಗಳು, ಸಕ್ಕರೆ ಕಾರ್ಖಾನೆಗಳು ಹೊಂದಬಹುದಾದ ಆಸ್ತಿಯ ಮಿತಿಯನ್ನು ಹೆಚ್ಚಳ ಮಾಡಿ ಕಾಯ್ದೆಗೆ 2020 ರಲ್ಲಿ ತಿದ್ದುಪಡಿ ಮಾಡಲಾಗಿದೆ. ಈ ಮೂಲಕ ಕಾಯ್ದೆಯ ನಿಯಮಗಳನ್ನು ಸಡಿಲಿಸಲಾಗಿದೆ. ಅದ್ಯಾಗ್ಯೂ ಒಂದು ಕುಟುಂಬ ಅಥವಾ ಒಬ್ಬ ವ್ಯಕ್ತಿ ಹಾಗೂ ಇನ್ನಿತರೆ ಸಂಘ ಸಂಸ್ಥೆಗಳು ಹೊಂದ ಬಹುದಾದ ಆಸ್ತಿಯ ಮಿತಿಯ ಬಗ್ಗೆ ಕರ್ನಾಟಕ ಭೂ ಸುಧಾರಣೆ ಕಾಯ್ದೆ ಹೇಳುತ್ತದೆ.

ಕರ್ನಾಟಕ ಭೂ ಸುಧಾರಣೆ ಕಾಯ್ದೆ ಕಲಂ 63 (1) ರಿಂದ ಕಲಂ 63(9) ರ ಪ್ರಕಾರ ಒಬ್ಬ ವ್ಯಕ್ತಿ , ಕುಟುಂಬ, ಗೇಣಿದಾರ, ಅವಿಭಕ್ತ ಕುಟುಂಬ ವಿಶ್ವಸ್ಥ ಸಮಿತಿ, ( ಟ್ರಸ್ಟ್ ) ಸಂಘ ಸಂಸ್ಥೆ, ಸಕ್ಕರೆ ಕಾರ್ಖಾನೆ, ತೋಟದ ಬೆಳೆ ಬೆಳೆಯುವ ಭೂಮಿ ಎಷ್ಟಿರಬೇಕು ಎಂಬುದರ ಬಗ್ಗೆ ಹೇಳಿದೆ. ಅದರಲ್ಲಿ ಎ ವರ್ಗದ ಜಮೀನು ಎಂದರೆ ಕಡ್ಡಾಯವಾಗಿ ನೀರಾವರಿ, ಸರ್ಕಾರದ ಕಾಲುವೆ ವ್ಯವಸ್ಥೆ ಅಥವಾ ಟ್ಯಾಂಕ್ ಹೊಂದಿರುವ ಭೂಮಿ ಆಗಿದ್ದು, ವಾರ್ಷಿಕ ಎರಡು ಭತ್ತದ ಬೆಳೆ ಅಥವಾ ಕಬ್ಬು ಬೆಳೆಯುವಂತದ್ದು ಎಂದರ್ಥ.

ಒಂದು ಕುಟುಂಬ ಗರಿಷ್ಠ 20 ಯೂನಿಟ್
ನಾಲ್ಕು ಸದಸ್ಯರು ಅಥವಾ ಕಡಿಮೆ ಇರುವ ಒಂದು ಕುಟುಂಬ ಗರಿಷ್ಠ 20 ಯೂನಿಟ್ ಜಮೀನು ಹೊಂದಬಹದು. ಒಂದು ಯೂನಿಟ್ ಎಂದರೆ 5.4 ಎಕರೆ ಜಮೀನು ಎಂದರ್ಥ. 20 ಯೂನಿಟ್ ಎಂದರೆ ಗರಿಷ್ಠ 100 ಎಕರೆ ವರೆಗೂ ಹೊಂದಬಹುದು. ಅದಕ್ಕೂ ಮೀರಿ ಹೊಂದುವಂತಿಲ್ಲ. ( ಸ್ತ್ರೀ ಧನ ಸೇರಿ) ಸ್ತ್ರೀ ಧನ ಎಂದರೆ ಹೆಣ್ಣು
ಮಕ್ಕಳಿಗೆ ಈ ಜಮೀನಿನಲ್ಲಿ ನೀಡುತ್ತಿದ್ದ ಪಾಲು. ಇದೀಗ ಹೆಣ್ಣು ಮಕ್ಕಳಿಗೂ ಸಮಾನ ಆಸ್ತಿ ಹಕ್ಕು ಅನ್ವಯಿಸುತ್ತದೆ.

ಒಂದೇ ಕುಟುಂಬದ ಐವರು ಸದಸ್ಯರು ಅಥವಾ ಹೆಚ್ಚು ಸದಸ್ಯರು ಇದ್ದರೆ ಹೆಚ್ಚುವರಿ 2. 5 ಯೂನಿಟ್ ಹೆಚ್ಚುವರಿಯಾಗಿ ಹೊಂದಬಹದು. ಅದರ ಪ್ರಕಾರ ಐವರು ಸದಸ್ಯರಿಗಿಂತಲೂ ಹೆಚ್ಚು ಇರುವ ಕುಟುಂಬ ಗರಿಷ್ಠ 40 ಯೂನಿಟ್ ಜಮೀನು ಹೊಂದಬಹುದು ವಿನಃ ಅದನ್ನು ಮೀರುವಂತಿಲ್ಲ. ಅಂದರೆ ಸುಮಾರು 200 ಎಕರೆ ಆಸ್ತಿ.
ಒಂದು ವೇಳೆ ಗೇಣಿದಾರನಾಗಿದ್ದಲ್ಲಿ (ಲೀಸ್‌ಗೆ ಪಡೆದ ಜಮೀನು ) ಗರಿಷ್ಠ 40 ಯೂನಿಟ್ ಮೀರುವಂತಿಲ್ಲ.

ಬೀಜೋತ್ಪಾದನೆ, ಸಂಶೋಧನೆ, ಕೃಷಿ ಹೊರತು ಪಡಿಸಿ ಸಕ್ಕರೆ ಕಾರ್ಖಾನೆಗಳು ಗರಿಷ್ಠ 50 ಯೂನಿಟ್ ಜಮೀನು ಹೊಂದಬಹುದು. ಇದಕ್ಕಿಂತಲೂ ಹೆಚ್ಚುವರಿ ಭೂಮಿ ಹೊಂದಿದ್ದು ಕಂಡು ಬಂದಲ್ಲಿ ಅಂತಹ ಜಮೀನನ್ನು ಸರ್ಕಾರ ಕರ್ನಾಟಕ ಭು ಸುಧಾರಣೆ ಕಾಯ್ದೆ ಕಲಂ 64 , 65 ರ ಅಡಿಯಲ್ಲಿ ಸರ್ಕಾರ ಆ ಜಮೀನನ್ನು ತನ್ನ ವಶಕ್ಕೆ ಪಡೆಯಬಹುದು. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿಗೆ ಸಂಬಂಧಿಸಿದ ಚಟುವಟಿಕೆ ಮಾಡುವರಿಗೆ ಗರಿಷ್ಠ 80 ಯೂನಿಟ್ ಭೂಮಿ ಲೀಸ್ ( ಗೇಣಿ ) ಮಾಡಿಕೊಳ್ಳಬಹುದು.

ಕರ್ನಾಟಕ ಭೂ ಸುಧಾರಣೆ ಕಾಯಿದೆಗೆ ಅನೇಕ ತಿದ್ದುಪಡಿ ತರಲಾಗಿದ್ದು, ಟ್ರಸ್ಟ್, ಕಂಪನಿ, ಕಾರ್ಖಾನೆ, ಧಾರ್ಮಿಕ ಸಂಸ್ಥೆಗಳು ಹೊಂದಬಹುದಾದ ಜಮೀನಿನ ಮಿತಿಯ ಬಗ್ಗೆ ನಿಯಮಗಳನ್ನು 2020 ರಲ್ಲಿ ತಿದ್ದುಪಡಿ ಮಾಡಲಾಗಿದೆ. ಶಿಕ್ಷಣ ಸಂಸ್ಥೆಗಳು ಸೇರಿದಂತೆ ಅವರುಗಳ ಅಗತ್ಯಕ್ಕೆ ತಕ್ಕಂತೆ ನೀಡಬಹುದು ಎಂಬ ನಿಯಮ ಸೇರಿಸಲಾಗಿದೆ.

Exit mobile version