Revenue Facts

ಮಹಿಳೆಯರ ಹೆಸರಲ್ಲಿ ಗೃಹ ಸಾಲ ಪಡೆಯುವುದು ಲಾಭದಾಯಕವೇ?

ಮಹಿಳೆಯರ ಹೆಸರಲ್ಲಿ ಗೃಹ ಸಾಲ ಪಡೆಯುವುದು ಲಾಭದಾಯಕವೇ?

ಅನೇಕ ಜನರು ಸ್ವಂತ ಮನೆ ಖರೀದಿಸುವ ಕನಸು ಕಾಣುತ್ತಾರೆ. ಎಂತಹ ಮನೆ ಖರೀದಿಸಬೇಕು ಅಥವಾ ಕಟ್ಟಿಸಬೇಕು ಎಂಬ ನಿರ್ಧಾರಕ್ಕೆ ಬಂದಾಗ ಜನರು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಕಾರಣ ಇದು ಬಹುತೇಕರಿಗೆ ಜೀವನದಲ್ಲಿ ಒಂದು ಬಾರಿ ಮಾತ್ರ ನಡೆಯುವುದರಿಂದ ಸಾಕಷ್ಟು ಸಾಧಕ-ಬಾಧಕಗಳನ್ನು ನೋಡುತ್ತಾರೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಮನೆಯನ್ನು ಆಯ್ಕೆ ಮಾಡುವಲ್ಲಿ ಮುಂದಿದ್ದಾರೆ. ಅವರು ಸಮಾಜದಲ್ಲಿ ತಮ್ಮ ಸರಿಯಾದ ಸ್ಥಾನವನ್ನು ಪಡೆದುಕೊಳ್ಳುವುದು ಮಾತ್ರವಲ್ಲದೆ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಸಹ ಸಮಾನವಾಗಿ ನಿಭಾಯಿಸುತ್ತಿದ್ದಾರೆ. ಹೀಗೆ ಮುಂಚೂಣಿಯಲ್ಲಿರುವ ಮಹಿಳೆಯರನ್ನು ತಮ್ಮತ್ತ ಸೆಳೆಯುವ ದೃಷ್ಟಿಯಿಂದ ಅನೇಕ ರಿಯಲ್ ಎಸ್ಟೇಟ್ ಸಂಸ್ಥೆಗಳು ಮತ್ತು ಗೃಹ ಸಾಲ ನೀಡುವ ಸಂಸ್ಥೆಗಳು ಮಹಿಳೆಯರಿಗಾಗಿಯೇ ವಿಶೇಷ ಯೋಜನೆ ಅಥವಾ ರಿಯಾಯಿತಿಗಳನ್ನು ರೂಪಿಸುತ್ತವೆ.

ಗೃಹ ಸಾಲ ನೀಡುವಂತಹ ಸಂದರ್ಭದಲ್ಲಿ ಮಹಿಳೆಯರು ಸಲ್ಲಿಸಿದಂತಹ ಅರ್ಜಿಯನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಗೃಹ ಸಾಲ ಪಡೆದ ಅಂಕಿಸಂಖ್ಯೆ (ಡೇಟಾ) ಪ್ರಕಾರ ಮಹಿಳಾ ಅರ್ಜಿದಾರರಲ್ಲಿ ಸಾಲದ ಡೀಫಾಲ್ಟ್ ಕಡಿಮೆ ಇರುತ್ತದೆ. ಹೀಗಾಗಿ ಬ್ಯಾಂಕ್ ಅಥವಾ ಗೃಹ ಸಾಲ ನೀಡುವ ಸಂಸ್ಥೆಗಳು ಮಹಿಳೆಯರ ಹೆಸರಲ್ಲಿನ ಗೃಹ ಸಾಲದ ಅರ್ಜಿ ಎಂದರೆ ಪ್ರಮುಖ ಆದ್ಯತೆ ನೀಡುತ್ತಾರೆ.

ಗೃಹ ಸಾಲವನ್ನು ತೆಗೆದುಕೊಳ್ಳುವಾಗ ಮಹಿಳೆಯರು ಪಡೆಯುವ ಐದು ಪ್ರಯೋಜನಗಳು ಇಲ್ಲಿವೆ:

ಕಡಿಮೆ ಬಡ್ಡಿದರ:
ಗೃಹ ಸಾಲದ ಬಡ್ಡಿ ದರದ ವಿಚಾರದಲ್ಲಿ ಪುರುಷ ಸಾಲಗಾರರಿಗೆ ಹೋಲಿಸಿದರೆ ಮಹಿಳಾ ಅರ್ಜಿದಾರರಿಗೆ ಬ್ಯಾಂಕ್‌ಗಳು ಕಡಿಮೆ ಬಡ್ಡಿದರವನ್ನು ವಿಧಿಸುತ್ತವೆ. ಕಡಿಮೆ ಬಡ್ಡಿದರ ಮಾಸಿಕ ಕಂತು (EMI) ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಮತ್ತು ಗೃಹ ಸಾಲದ ದೀರ್ಘಾವಧಿಯಲ್ಲಿ ಗಮನಾರ್ಹ ಉಳಿತಾಯ ನೀಡುತ್ತದೆ.

ಕಡಿಮೆ ಸ್ಟ್ಯಾಂಪ್ ಡ್ಯೂಟಿ:
ಮಹಿಳೆಯರು ಆಸ್ತಿಗಳ ಮಾಲೀಕರಾಗುವುದನ್ನು ಬಹುತೇಕ ರಾಜ್ಯಗಳು ಪ್ರೋತ್ಸಾಹಿಸುತ್ತಿವೆ. ಇದಕ್ಕೆ ಪೂರಕ ಎಂಬಂತೆ ಅವರು ಮಹಿಳೆಯರ ಹೆಸರಲ್ಲಿ ಆಸ್ತಿ ನೋಂದಾಯಿಸಿದರೆ ನೋಂದಣಿ ಶುಲ್ಕ ಅಥವಾ ಸ್ಟ್ಯಾಂಪ್ ಡ್ಯೂಟಿಯಲ್ಲಿ ಸಾಕಷ್ಟು ರಿಯಾಯಿತಿಗಳನ್ನು ನೀಡುತ್ತವೆ. ಕನಿಷ್ಠ ಶೇ.1ರಿಂದ 2 ಕಡಿಮೆ ಸ್ಟ್ಯಾಂಪ್ ಡ್ಯೂಟಿ ನೀಡಿದರೂ ಸಹ ಉದಾಹರಣೆಗೆ 80 ಲಕ್ಷ ರೂ.ವರೆಗಿನ ಆಸ್ತಿಯ ನೋಂದಣಿ ಮಾಡಿಸಿದಲ್ಲಿ ಮಹಿಳೆಯು 1,60,000 ರೂ.ವರೆಗೆ ಉಳಿಸಬಹುದು.

ಜಂಟಿ ಸಾಲದ ಸೌಲಭ್ಯ:
ಸದ್ಯ ಬ್ಯಾಂಕ್ ಅಥವಾ ಗೃಹ ಸಾಲ ನೀಡುವ ಖಾಸಗಿ ಸಂಸ್ಥೆಗಳು ಪತಿ-ಪತ್ನಿ ಇಬ್ಬರಿಗೂ ಜಂಟಿಯಾಗಿ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತವೆ. ಕಾರಣ ಇಬ್ಬರೂ ಉದ್ಯೋಗದಲ್ಲಿದ್ದರೆ ಇಬ್ಬರಿಗೂ ಆದಾಯದ ಮೂಲಗಳು ಇರುತ್ತವೆ. ಇಬ್ಬರ ಆದಾಯವನ್ನೂ ಒಟ್ಟುಗೂಡಿಸಿದಾಗ ಸಾಲ ಪಡೆಯುವ ಮೊತ್ತ ಹೆಚ್ಚಾಗುತ್ತದೆ. ಇದರಿಂದ ಅವರ ಕುಟುಂಬಕ್ಕೆ ಸೂಕ್ತವಾದ ಮನೆಯನ್ನು ಆಯ್ಕೆ ಮಾಡಲು ಹೆಚ್ಚಿನ ಅವಕಾಶ ಒದಗಿಸುತ್ತದೆ.

ತೆರಿಗೆ ವಿನಾಯಿತಿ:
ಪುರುಷರಂತೆ ಮಹಿಳೆಯರು ಕೂಡ ಗೃಹ ಸಾಲ ಮರುಪಾವತಿಯ ಮೇಲೆ ತೆರಿಗೆ ವಿನಾಯಿತಿಯನ್ನು ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಅಸಲು ಹಾಗೂ ಬಡ್ಡಿಯಲ್ಲಿ ಅನುಕ್ರಮವಾಗಿ ರೂ 1.5 ಲಕ್ಷ ಮತ್ತು ರೂ 2 ಲಕ್ಷದಲ್ಲಿ ಗರಿಷ್ಠ ಕಡಿತವನ್ನು ಅನುಮತಿಸಲಾಗಿದೆ.

ಪಿಎಂಎವೈ ಉಪಯೋಗ:
ಮನೆ ಖರೀದ ಮಾಡುವ ಆಸಕ್ತರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಹಳ ಸಹಕಾರಿ ಇದೆ. PMAY ಯೋಜನೆಯಡಿ ಮನೆ ನೀಡುವಾಗ ಕುಟುಂಬದ ಮಹಿಳಾ ಹಿರಿಯರೊಬ್ಬರನ್ನು ಮನೆಯ ಸಹ ಮಾಲೀಕರಾಗುವುದನ್ನು ಕಡ್ಡಾಯಗೊಳಿಸಿದೆ. ಆರ್ಥಿಕವಾಗಿ ದುರ್ಬಲ ವಿಭಾಗ (EWS) ಮತ್ತು ಕಡಿಮೆ ಆದಾಯದ ಗುಂಪು (LIG) ವರ್ಗಕ್ಕೆ ಬಂದಾಗ, PMAY ಯೋಜನೆಯ ಆದ್ಯತೆಯನ್ನು ವಿಧವೆಯರು ಮತ್ತು ಒಂಟಿ ಮಹಿಳೆಯರಿಗೆ ವಿಸ್ತರಿಸಲಾಗಿದೆ.

Exit mobile version