Revenue Facts

ರಿಯಲ್‌ ಎಸ್ಟೇಟ್‌ ಹೂಡಿಕೆ: ಎಷ್ಟು ಒಳಿತು?

ಆರ್ಥಿಕ ಸ್ವಾತಂತ್ರ್ಯ ಸಾಧಿಸುವ ನಿಟ್ಟಿನಲ್ಲಿ ರಿಯಲ್‌ ಎಸ್ಟೇಟ್‌ ಮಾಲೀಕತ್ವವು ಬಹಳಷ್ಟು ಭಾರತೀಯರಿಗೆ ದೊಡ್ಡ ಹೆಜ್ಜೆಯಾಗಿರಬಹುದು. ಆದರೆ ಹಣಕಾಸು ಮಾರುಕಟ್ಟೆಗಳಲ್ಲಿನ ಹೂಡಿಕೆಗಿಂತ ಉತ್ತಮ ಎಂದು ಪರಿಗಣಿಸುವುದು ಸಂಕುಚಿತ ತಿಳಿವಳಿಕೆ ಆಗಬಹುದು.

ರಿಯಲ್‌ ಎಸ್ಟೇಟ್‌ ಉದ್ಯಮದ ಕುರಿತು ಇರುವ ಆಳವಾದ ತಪ್ಪು ಕಲ್ಪನೆಗಳು ಅದರ ಸಂಭಾವ್ಯ ಅಪಾಯಗಳ ಕುರಿತು ಹೆಚ್ಚು ಗಮನ ನೀಡದಂತೆ ಮಾಡುತ್ತದೆ. ಇದು ಹೂಡಿಕೆದಾರರು ಆರ್ಥಿಕವಾಗಿ ಅತ್ಯುತ್ತಮ ನಿರ್ಧಾರಗಳನ್ನು ಕೈಗೊಳ್ಳುವುದನ್ನು ತಡೆಯುತ್ತದೆ. ಈ ಲೇಖನವು ರಿಯಲ್‌ ಎಸ್ಟೇಟ್‌ ಉದ್ಯಮದ ಬಗೆಗೆ ಇರುವ ಅಂತಹ ಕಲ್ಪನೆಗಳು ಮತ್ತು ವಾಸ್ತವದ ಅರಿವು ನೀಡಲಿದೆ.

ಭೂಮಿಯ ಬೆಲೆಗಳು ಯಾವಾಗಲೂ ಏರಿಕೆಯಾಗುತ್ತಲೇ ಇರುತ್ತವೆ ಎಂಬುದು ಕೇವಲ ಊಹೆ. ಜಗತ್ತಿನಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಜನಸಂಖ್ಯೆಗೆ ಭೂಮಿಯ ಲಭ್ಯತೆ ಪ್ರಮಾಣ ಕಡಿಮೆ ಆಗಬಹುದು ಎಂಬ ಕಾರಣಕ್ಕೆ ಆಸ್ತಿಯ ಬೆಲೆ ಯಾವಾಗಲೂ ಏರುಗತಿಯಲ್ಲಿಯೇ ಇರುತ್ತದೆ ಎಂಬ ನಂಬಿಕೆಯನ್ನು ನೀಡುತ್ತದೆ. ಆದರೆ ಅಂಕಿಅಂಶಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ, ಅದು ಅಷ್ಟೊಂದು ದೊಡ್ಡ ಕಾರಣ ಅಲ್ಲ ಎಂಬುದನ್ನು ತೋರಿಸುತ್ತದೆ.

ಭೂಮಿಯು ಸೀಮಿತವಾಗಿರುವುದರ ಹೊರತಾಗಿಯೂ, ಮನುಷ್ಯರು ಬದುಕಲು ಮತ್ತು ಅಭಿವೃದ್ಧಿ ಹೊಂದಲು ಹೇರಳವಾದ ಭೂಮಿ ಇದ್ದೇ ಇದೆ. ತಾಂತ್ರಿಕ ಬೆಳವಣಿಗೆಯಿಂದ ಲಭ್ಯವಿರುವ ಭೂಮಿಯನ್ನು ಸಮರ್ಥವಾಗಿ ಬಳಸಿಕೊಳ್ಳುವುದರಿಂದ ಇದು ಸಾಧ್ಯವಾಗುತ್ತದೆ. ಅಷ್ಟಲ್ಲದೆ ಪ್ರಪಂಚದ ಜನಸಂಖ್ಯೆಯು ಒಂದು ಹಂತದಲ್ಲಿ ಸ್ಥಿರಗೊಳ್ಳಲಿದೆ ಎಂದು ಕೆಲವು ಅಧ್ಯಯನಗಳೂ ಹೇಳುತ್ತವೆ.

ರಿಯಲ್ ಎಸ್ಟೇಟ್ ವಲಯದಲ್ಲಿ ಅಭೂತಪೂರ್ವ ಪ್ರಗತಿಗೆ ಸಾಕ್ಷಿಯಾಗುತ್ತಿರುವ ಅಭಿವೃದ್ಧಿಶೀಲ ಆರ್ಥಿಕತೆಗಳು ಭೂಮಿಯ ಬೆಲೆಗಳು ನಿರಂತರವಾಗಿ ಹೆಚ್ಚಾಗುತ್ತಲೇ ಇರುತ್ತವೆ ಎಂಬ ಊಹೆಯನ್ನು ಹುಟ್ಟುಹಾಕುತ್ತವೆ. ಆದರೆ ಅಭಿವೃದ್ಧಿ ಹೊಂದಿದ ದೇಶಗಳಾದ ಅಮೆರಿಕ ಮತ್ತು ಜಪಾನ್‌ನಲ್ಲಿ ಕಳೆದ ದಶಕದಲ್ಲಿ ಶೇ 40ರಿಂದ 50ರಷ್ಟು ಬೆಲೆ ಕುಸಿತದೊಂದಿಗೆ ರಿಯಲ್ ಎಸ್ಟೇಟ್ ಉದ್ಯಮವೂ ಪಾತಾಳಕ್ಕಿಳಿದಿದೆ. ಭೂಮಿಯ ಮೌಲ್ಯವನ್ನು ಅದರ ಲಭ್ಯತೆಯ ಕೊರತೆ ಅಥವಾ ರಾಷ್ಟ್ರವೊಂದರ ಜೀವನ ಮಟ್ಟದಿಂದ ನಿರ್ಧರಿಸಲಾಗುವುದಿಲ್ಲ ಎಂಬುದಕ್ಕೆ ಇದು ಸಾಕ್ಷಿ.

ರಿಯಲ್ ಎಸ್ಟೇಟ್ ಹೂಡಿಕೆಯು ಸ್ಥಿರ ಠೇವಣಿಗಿಂತ ಭಿನ್ನವಾಗಿರುವುದಿಲ್ಲ. ಏಕೆಂದರೆ 30 ವರ್ಷಗಳ ಅವಧಿಯಲ್ಲಿ ಇವೆರಡೂ ಸರಿಸುಮಾರು ಒಂದೇ ಮಟ್ಟದ ಆದಾಯವನ್ನು ನೀಡುತ್ತದೆ. ಒಟ್ಟು ಆಸ್ತಿ ಮೌಲ್ಯದ ಶೇ 2-5ರಷ್ಟು ಮಾತ್ರ ವಾರ್ಷಿಕ ಬಾಡಿಗೆ ರೂಪದಲ್ಲಿ ಆದಾಯವನ್ನು ರಿಯಲ್‌ ಎಸ್ಟೇಟ್‌ ನೀಡುತ್ತದೆ ಮತ್ತು ಹೋಲಿಕೆಯಲ್ಲಿ ಅದು ಸ್ಥಿರ ಠೇವಣಿಗಿಂತ ಕಡಿಮೆಯೇ ಆಗಿದೆ.

ಒಂದೊಮ್ಮೆ ಆಸ್ತಿ ಮೌಲ್ಯ ಕುಸಿತ ಕಂಡರೆ ಅಲ್ಲಿಯೂ ನಷ್ಟ ಕಟ್ಟಿಟ್ಟಬುತ್ತಿ. ಉದಾಹರಣೆಗೆ, ನೀವು ರೂ. 50 ಲಕ್ಷ ಮೌಲ್ಯದ ಸ್ವತ್ತನ್ನು ಸಾಲ ಮಾಡಿ ಖರೀದಿಸಿದ್ದೀರಿ. ಆಸ್ತಿ ಮೌಲ್ಯ ಕಾಲಾಂತರದಲ್ಲಿ ಶೇ 30ರಷ್ಟು ಕುಸಿದರೆ ಆಸ್ತಿಯು ಕೇವಲ ರೂ. 35 ಲಕ್ಷಕ್ಕೆ ಬೆಲೆಬಾಳುತ್ತದೆ. ಆದರೆ ನೀವು ಪಡೆದ ಅಷ್ಟೂ ಸಾಲವನ್ನು ತೀರಿಸುವುದು ಕಡ್ಡಾಯ. ಈ ಸ್ವತ್ತಿನಿಂದ ನೀವು ಗಳಿಸುವ ಬಾಡಿಗೆ ಆದಾಯವೂ ಕುಸಿದರೆ ಆಗ ದೊಡ್ಡ ಅಪಾಯಕ್ಕೆ ಸಿಲುಕುತ್ತೀರಿ. ಇಂತಹ ಅನೇಕ ಪ್ರಕರಣಗಳು ಸಿಗುತ್ತವೆ.

ರಿಯಲ್‌ ಎಸ್ಟೇಟ್‌ ಪ್ರಗತಿಯನ್ನು ಊಹಿಸುವುದು ಕಷ್ಟದ ಕೆಲಸ. ತೀರಾ ಅದೃಷ್ಟವಂತರಾಗಿದ್ದಲ್ಲಿ ಅಥವಾ ಖರೀದಿಸುವ ಜಾಗವು ಭವಿಷ್ಯದಲ್ಲಿ ಭಾರಿ ಅಭಿವೃದ್ಧಿಗೆ ಸಾಕ್ಷಿಯಾಗುತ್ತದೆ ಎಂಬ ಪಕ್ಕಾ ಜ್ಞಾನ ಇದ್ದರೆ ಮಾತ್ರ ದೊಡ್ಡ ಪ್ರಮಾಣದಲ್ಲಿ ಹಣವನ್ನು ಗಳಿಸಬಹುದು. ಇಲ್ಲದಿದ್ದರೆ ಅದೊಂದು ನಿರ್ವಹಿಸಿಕೊಂಡು ಹೋಗಬೇಕಾದ ಬಾಧ್ಯತೆಯಾಗಿ ಉಳಿದುಬಿಡುವ ಸಾಧ್ಯತೆಯೇ ಹೆಚ್ಚು.

Exit mobile version