ಆಕಾಶ್ ಎಂಬ ವ್ಯಕ್ತಿಗೆ ರಾಮಯ್ಯ ಎಂಬಾತ ಒಂದು ಆಸ್ತಿಯನ್ನು ಮಾರಾಟ ಮಾಡಿ ನೋಂದಣಿ ಮಾಡಿಸಿದ್ದ. ನೋಂದಣಿ ಬಳಿಕ ಇಬ್ಬರ ನಡುವೆ ವಿವಾದ ಉಂಟಾಯಿತು ಎಂದಿಟ್ಟುಕೊಳ್ಳಿ. ಜಮೀನು ಮಾರಾಟ ಮಾಡಿದ ವ್ಯಕ್ತಿ ಇಚ್ಛಿಸಿದರೆ ನೋಂದಣಿಯಾದ ಕ್ರಯಪತ್ರವನ್ನು ಕೋರ್ಟ್ ಮೊರೆ ಹೋಗದೇ ರದ್ದು ಪಡಿಸಬಹುದೇ ? ಅಥವಾ ಜಮೀನು ಖರೀದಿ ಮಾಡಿದ ವ್ಯಕ್ತಿ ಇಚ್ಛಿಸಿದರೆ ಕ್ರಯ ಪತ್ರ ರದ್ದು ಮಾಡಬಹುದೇ ? ಸ್ವತ್ತುಗಳ ನೋಂದಣಿಯನ್ನು ರದ್ದು ಪಡಿಸಿವ ಬಗ್ಗೆ ಕಾನೂನಿನಲ್ಲಿ ಇರುವ ಅವಕಾಶಗಳೇನು? ಈ ನಿಯಮ ತಿಳಿದರೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿಯೇ ದಾಸ್ತವೇಜು ನೋಂದಣಿಯನ್ನು ಸುಲಭವಾಗಿ ರದ್ದು ಪಡಿಸಬಹುದು.
ಯಾವುದೇ ಚರ ಅಥವಾ ಸ್ಥಿರ ಸ್ವತ್ತುಗಳಿಗೆ ಸಂಬಂಧಿಸಿದಂತೆ ನೋಂದಣಿ ಮಾಡಿಸಲು ಉಪ ನೋಂದಣಾಧಿಕಾರಿಗಳ ಸಮಕ್ಷಮ ಹಾಜರು ಮಾಡಿದರೆ, ಆ ಪತ್ರಗಳಿಗೆ ಸರಿಯಾದ ಶುಲ್ಕ ಪಾವತಿಸಿದರೆ, ಉಪ ನೋಂದಣಾಧಿಕಾರಿಗಳು ನೋಂದಣಿ ಮಾಡುತ್ತಾರೆ. ಆದರೆ, ಬರೆಸಿಕೊಟ್ಟವರು, ಬರೆಸಿಕೊಂಡವರು ಎರಡು ಸಾಕ್ಷಿಗಳ ಸಮಕ್ಷಮ ಒಪ್ಪಿಗೆ ಕಡ್ಡಾಯವಾಗಿ ಬೇಕೇ ಬೇಕು.
ಈ ರೀತಿ ನೋಂದಣಿ ಮಾಡಿದ ಪತ್ರಗಳನ್ನು ಖರೀದಿದಾರರಾಗಲೀ, ಮಾರಾಟಗಾರರಾಗಲೀ ಏಕ ಪಕ್ಷೀಯವಾಗಿ ಹಿಂಪಡೆಯಲು ಬರುವುದಿಲ್ಲ. ಇಂತಹ ನೋಂದಾದ ಪತ್ರಗಳು ವ್ಯವಹಾರ ಸರಿಯಾಗದೇ ಹೋದರೆ, ಖರೀದಿ ಮಾಡಿದವರು ಮತ್ತೆ, ಮಾರುವರು ಇಬ್ಬರೂ ಒಪ್ಪಿಗೆ ಮೇರೆಗೆ ರದ್ದತಿ ಪತ್ರ ಎಂಬ ಇನ್ನೊಂದು ದಾಸ್ತವೇಜನ್ನು ಉಪ ನೋಂದಾಧಿಕಾರಿಗಳ ಸಮಕ್ಷಮ ಎರಡು ಸಾಕ್ಷಿಗಳ ಸಮೇತ ಹಾಜರು ಪಡಿಸಿ ಇನ್ನೊಂದು ಪತ್ರ ನೋಂದಣಿ ಮಾಡಿಸಿ, ನೋಂದಾದ ಪತ್ರವನ್ನು ಈ ಪತ್ರದ ಮೂಲಕ ರದ್ದು ಪಡಿಸಬಹುದಾಗಿದೆ.
ಕರ್ನಾಟಕ ಮುದ್ರಾಂಕ ಕಾಯಿದೆ ಆರ್ಟಿಕಲ್ 14 ರ ಅನ್ವಯ ಕ್ರಯ ಪತ್ರ ಹೊರತು ಪಡಿಸಿ ಇನ್ನುಳಿದ ಪತ್ರಗಳಿಗೆ ಮೂಲ ನೋಂದಾದ ಪತ್ರಗಳಿಗೆ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ ಎಷ್ಟಿರುತ್ತದೋ ಅಷ್ಟನ್ನೇ ಕಟ್ಟಬೇಕಿರುತ್ತದೆ. ಕ್ರಯ ಪತ್ರಗಳಿಗೆ ರದ್ದತಿ ಪತ್ರ ಮಾಡಿದರೆ ಹೊಸ ಕ್ರಯಪತ್ರದಷ್ಟೇ ಮಾರುಕಟ್ಟೆ ಮೌಲ್ಯದ ಮೇರೆಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಪಾವತಿ ಮಾಡಬೇಕು.
ಸ್ಥಿರ ಪತ್ರಗಳ ರದ್ದು:
ಕೆಲವು ಸಂದರ್ಭದಲ್ಲಿ ಉಪ ನೋಂದಣಾಧಿಕಾರಿಗಳೇ ಕೆಲವು ದಾಸ್ತವೇಜುಗಳನ್ನುನೋಂದಣಿ ಮಾಡದೇ ಅಮಾನತು ಪಡಿಸಿ ಪೆಂಡಿಂಗ್ ಇಡುತ್ತಾರೆ. ಉದಾಹಣೆಗೆ ನೋಂದಣಿಗೆ ಹಾಜರು ಪಡಿಸಿದ ದಾಸ್ತಾವೇಜುಗಳಿಗೆ ಸರಿಯಾಗಿ ಮಾರ್ಗಸೂಚಿ ಬೆಲೆಗೆ ಅನುಗುಣವಾಗಿ ಮುದ್ರಾಂಕ ಶುಲ್ಕ ಕಟ್ಟದೇ ಅಪಮೌಲ್ಯ ತನಿಖೆಗೆ ಒಳಪಡಿಸಿದಾಗ, ಸರಿಯಾದ ಮುದ್ರಾಂಕ ಶುಲ್ಕ ಪಾವತಿ ಮಾಡದೇ ಇದ್ದಾಗ, ಬರೆದುಕೊಡುವರು ಬೇರೆ ಸಮಯದಲ್ಲಿ ಉಪ ನೋಂದಣಾಧಿಕಾರಿಗಳ ಮುಂದೆ ಹಾಜರಾಗುವಾಗ, ನಿಗದಿತ ಸಮಯಕ್ಕಿಂತಲೂ ಹೆಚ್ಚು ಸಮಯದ ನಂತರ ನೋಂದಣಿಗೆ ಹಾಜರು ಪಡಿಸಿದ ದಾಸ್ತಾವೇಜಿಗೆ ಹಾಗೂ ಖಾಸಗಿ ಹಾಜರಾತಿ, ಇನ್ನಿತರ ವಿಶೇಷ ಸಂದರ್ಭದಲ್ಲಿ ದಾಸ್ತವೇಜಿನ ನೋಂದಣಿಯನ್ನು ಅಮಾನತು ಪಡಿಸಬಹುದು.
ಯಾವ ಕಾರಣಕ್ಕೆ ಅಮಾನತು ಪಡಿಸಲಾಗಿದೆ ಆ ಕಾರಣ ಪೂರ್ಣಗೊಳ್ಳುವ ವರೆಗೂ ಆ ದಾಸ್ತವೇಜನ್ನು ಬರೆಸಿಕೊಂಡವರು ಅರ್ಜಿ ನೀಡಿ ನೋಂದಣಿ ಬೇಡದಿದ್ದ ಪಕ್ಷದಲ್ಲಿ ಅ ದಾಸ್ತವೇಜಿನ ನೋಂದಣಿಯನ್ನು ಹಿಂಪಡೆಯಬದಾಗಿದೆ. ಇದರಲ್ಲಿ ಬರೆದುಕೊಡುವರ ಒಪ್ಪಿಗೆ ಕಡ್ಡಾಯವಾಗಿರುವುದಿಲ್ಲ. ಕರ್ನಾಟಕ ನೋಂದಣಿ ನಿಯಮ 1965 ರ ನಿಯಮ 193 ಅನ್ವಯ ನೋಂದಣಿಗೆ ಮೊದಲು ಯಾವುದೇ ದಾಸ್ತವೇಜನ್ನು ಹಿಂಪಡೆಯಬಹುದಾಗಿದೆ.
ನೋಂದಣಿಯನ್ನು ಬಾಕಿ ಇರಿಸಿ ಹಿಂಪಡೆದ ದಾಸ್ತವೇಜುಗಳಿಗೆ ಶೇ. ಅರ್ಧದಷ್ಟು ನೋಂದಣಿ ಶುಲ್ಕ ಹಾಗೂ ಮುದ್ರಾಂಕ ಶುಲ್ಕವನ್ನು ಮರು ಪಾವತಿ ಪಡೆಯಲು ಅವಕಾಶ ಇರುತ್ತದೆ. ಈ ನಿಯಮದ ಮೂಲಕ ಸ್ಥಿರ ಅಥವಾ ಚರ ಸ್ವತ್ತುಗಳಿಗೆ ಸಂಬಂಧಿಸಿದಂತೆ ನೋಂದಣಿಯನ್ನು ರದ್ದು ಪಡಿಸಬಹುದಾಗಿದೆ.