ಗೃಹ ಸಾಲ ನೀಡುವ ಸಂಸ್ಥೆಯಾದ ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಡಿಎಫ್‌ಸಿ) ಗೃಹ ಸಾಲದ ಮೇಲಿನ ಬಡ್ಡಿದರ ಏರಿಕೆ ಮಾಡಿದೆ.
ಅಕ್ಟೋಬರ್ 1, 2022 ರಿಂದ ಜಾರಿಗೆ ಬರುವಂತೆ ರಿಟೇಲ್ ಪ್ರೈಮ್ ಲೆಂಡಿಂಗ್ ದರವನ್ನು 50 ಮೂಲಾಂಕ ಏರಿಕೆ ಮಾಡಲಾಗಿದ್ದು, ಇದರಿಂದ ಎಚ್‌ಡಿಎಫ್‌ಸಿ ಗೃಹ ಸಾಲ ಸ್ವಲ್ಪ ಮಟ್ಟಿನ ಹೊರಯಾಗುವುದು ಖಚಿತವಾಗಿದೆ.
“ಎಚ್‌ಡಿಎಫ್‌ಸಿ ಗೃಹ ಸಾಲಗಳ ಮೇಲಿನ ತನ್ನ ಚಿಲ್ಲರೆ ಪ್ರಧಾನ ಸಾಲದ ದರವನ್ನು (ಆರ್‌ಪಿಎಲ್‌ಆರ್) ಹೆಚ್ಚಿಸುತ್ತದೆ. ಗೃಹ ಸಾಲದ ದರವನ್ನು 50 ಮೂಲಾಂಕ ಹೆಚ್ಚಳ ಮಾಡಲಾಗುತ್ತದೆ. ಈ ನೂತನ ದರವು ಅಕ್ಟೋಬರ್ 1, 2022ರಿಂದ ಜಾರಿಗೆ ಬರುತ್ತದೆ,” ಎಂದು ಎಚ್‌ಡಿಎಫ್‌ಸಿ ಪ್ರಕಟಣೆ ತಿಳಿಸಿದೆ.
ಎಚ್‌ಡಿಎಫ್‌ಸಿ ಅಧಿಕೃತ ವೆಬ್‌ಸೈಟ್ ಪ್ರಕಾರ ಚಿಲ್ಲರೆ ಪ್ರಧಾನ ಸಾಲ ದರ (ಆರ್‌ಪಿಎಲ್‌ಆರ್) ಶೇಕಡ 17.95 ಆಗಿದೆ. ಇನ್ನು ವಸತಿರಹಿತ ಆರ್‌ಪಿಎಲ್‌ಆರ್ ಶೇಕಡ 17.60ಕ್ಕೆ ಏರಿಕೆಯಗಿದೆ. ಎಚ್‌ಡಿಎಫ್‌ಸಿ ಲಿಮಿಡೆಟ್ ಶೇಕಡ 8.10 ಬಡ್ಡಿದರದಲ್ಲಿ ಗೃಹ ಸಾಲವನ್ನು ನೀಡುತ್ತದೆ. ಹೊಸ ಮನೆ ಖರೀದಿ, ಮನೆ ನವೀಕರಣ, ಹಣ ವರ್ಗಾವಣೆ, ಗೃಹ ನವೀಕರಣಕ್ಕಾಗಿ ಪಡೆಯುವ ಸಾಲವು ಈ ಬಡ್ಡಿದರವನ್ನು ಹೊಂದಿರುತ್ತದೆ. ಇನ್ನು ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದ ಬೆನ್ನಲ್ಲೇ ಬೇರೆ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳು ಕೂಡಾ ಮುಂಬರುವ ದಿನಗಳಲ್ಲಿ ಬಡ್ಡಿದರ ಏರಿಕೆ ಮಾಡುವ ನಿರೀಕ್ಷೆ ಇದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಣಕಾಸು ನೀತಿ ಸಮಿತಿಯ (ಎಂಪಿಸಿ) ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಿದೆ. ಇದರಿಂದಾಗಿ ರೆಪೋ ದರ ಶೇಕಡ 5.90ಕ್ಕೆ ಏರಿಕೆಯಾಗಿದೆ. ಈ ಬೆನ್ನಲ್ಲೇ ಹಲವಾರು ಬ್ಯಾಂಕುಗಳು ತಮ್ಮ ಸಾಲದ ಬಡ್ಡಿದರ ಹಾಗೂ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡುತ್ತಿದೆ. ಈ ನಡುವೆ ಎಚ್‌ಡಿಎಫ್‌ಸಿ ಗೃಹ ಸಾಲ ಇನ್ಮುಂದೆ ದುಬಾರಿಯಾಗಲಿದೆ.