ಬೆಂಗಳೂರು ಜು.21 : ಮನೆ,ಜಮೀನು,ಸೈಟ್ ಸೇರಿ ಸ್ಥಿರಾಸ್ತಿ ಖರೀದಿಗೆ ಇಸ್ಛಿಸುವವರಲ್ಲಿ ಮತ್ತೆ ಗೊಂದಲ ಉಂಟಾಗಿದೆ.ಸ್ಥಿರಾಸ್ತಿ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಹೆಚ್ಚಾಗುತ್ತಾ,ಇಲ್ಲವಾ? ಎಂಬ ಜಿಙ್ಞಾಸೆಗೆ ಸಿಲುಕಿದ್ದಾರೆ. ಮುದ್ರಾಂಕ ಮತ್ತು ನೋಂದಣಿ ಶುಲ್ಕ ಹೆಚ್ಚಳ ಮಾಡುವುದಿಲ್ಲ ಎಂದು ಕಂದಾಯ ಇಲಾಖೆ ತಿಳಿಸಿದೆ. ಬದಲಿಗೆ ಸ್ಥಿರಾಸ್ತಿಗಳ ಸರ್ಕಾರದ ಮಾರ್ಗಸೂಚಿ ದರ ಹೆಚ್ಚಳ ಮಾಡಲಿದ್ದು,ಪರಿಣಾಮ ಶುಲ್ಕಗಳು ಪ್ರಮಾಣ ಹೆಚ್ಚಾಗಲಿವೆ. ಇದರಿಂದ ಸರ್ಕಾರದ ಆದಾಯ ಹೆಚ್ಚಳವಾಗಲಿದ್ದು,ಖರೀದಿದಾರನ ಮೇಲೆ ಹೆಚ್ಚಿನ ಹೊರೆ ಬೀಳಲಿದೆ.
ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಅನುಚ್ಛೇದಗಳಂತೆ ಮುದ್ರಾಂಕ ಶುಲ್ಕನಿಗದಿ ಮಾಡಲಾಗಿದೆ. ಪ್ರಸ್ತುತ ಕ್ರಯಪತ್ರಗಳಿಗೆ ಶೇ.5 ಮುದ್ರಾಂಕ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ. ಅದೇ ರೀತಿ ಕರ್ನಾಟಕ ನೋಂದಣಿ ನಿಯಮಗಳ 1964ರ ಅನ್ವಯ ಕ್ರಯ ದಸ್ತಾವೇಜುಗಳಿಗೆ ಶೇ.1 ನೋಮದಣಿ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ಈ ಶುಲ್ಕಗಳ ಪ್ರಮಾಣವನ್ನು ಹೆಚ್ಚಳ ಮಾಡುವುದಿಲ್ಲ. ಬದಲಿಗೆ ಮಾರ್ಗಸೂಚಿ ದರ ಏರಿಕೆ ಮಾಡಲಾಗುತ್ತದೆ. ಅಂದರೆ, ನಿಗದಿತ ಪ್ರದೇಶದಲ್ಲಿ ಇರುವ ಸೈಟಿನ ಮಾರುಕಟ್ಟೆ ಮೌಲ್ಯವನ್ನು ಅಧ್ಯಾಯನ ನಡೆಸಿ, ಅದರ ಮೌಲ್ಯವನ್ನು ನಿಗದಿ ಮಾಡಲಾಗುತ್ತದೆ.
ಇದೇ ರೀತಿ ರಾಜ್ಯವ್ಯಾಪಿ ಸ್ಥಿರಾಸ್ತಿಗಳ ಮಾರುಕಟ್ಟೆ ದರವನ್ನು ಅಧ್ಯಯನ ನಡೆಸಿ ಮಾರ್ಗಸೂಚಿ ದರವನ್ನು ಹೆಚ್ಚಳ ಅಂದರೇ ಸ್ಥಿರಾಸ್ತಿ ಮೌಲ್ಯವನ್ನು ಏರಿಕೆ ಮಾಡಲಾಗುತ್ತದೆ. ಸರ್ಕಾರದ ಮಾರ್ಗಸೂಚಿ ಪಟ್ಟಿಯಲ್ಲಿ ನಿಗದಿ ಆಗಿರುವ ಆಸ್ತಿ ಮೌಲ್ಯಕ್ಕೆ ಕ್ರಯಪತ್ರಗಳ ನೋಂದಣಿ ವೇಳೆ ಮುದ್ರಾಂಕ ಮತ್ತು ನೋಂದಣಿ ಶುಲ್ಕವನ್ನುಪಾವತಿ ಮಾಡಬೇಕಾಗಿದೆ. ಕಳೆದ 3 ವರ್ಷಗಳಿಂದ ಮಾರ್ಗಸೂಚಿ ದರವನ್ನು ಏರಿಕೆ ಮಾಡಿಲ್ಲ. ಈ ಬಾರಿ ಹೆಚ್ಚಳ ಮಾಡಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಮಾರುಕಟ್ಟೆ ಬೆಲೆ ಹೆಚ್ಚಿಸಲು 35 ಲಕ್ಷದಿಂದ 45 ಲಕ್ಷ ರೂ. ವರೆಗಿನ ಅಪಾರ್ಟ್ ಮೆಂಟ್ ಅಥವಾ ಫ್ಲ್ಯಾಟ್ಗಳ ಮೊದಲನೇ ಕ್ರಯದ ಮುದ್ರಾಂಕ ಶುಲ್ಕವನ್ನು ಶೇ.5 ರಿಂದ 3 ಕಡಿತ ಸೌಲಭ್ಯವನ್ನು ಹಿಂದಿನ ಸರ್ಕಾರ ಕಲ್ಪಿಸಿತ್ತು.
ರಿಯಾಯಿತಿ ಸೌಲಭ್ಯ ಮುಂದುವರಿಕೆ:
ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೇ ಮಾರ್ಗಸೂಚಿ ದರ ಏರಿಕೆ ಆಗಲಿದೆ. ಸೆಪ್ಟಂಬರ್ ಒಳಗಾಗಿ ಆಗುವ ಸಾಧ್ಯತೆಗಳಿವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಸುಳಿವು ನೀಡಿದ್ದಾರೆ. ಅದಕ್ಕಾಗಿ ಸ್ಥಿರಾಸ್ತಿ ಖರೀದಿಗೆ ಇಚ್ಛಿಸುವವರು ಕೂಡಲೇ ಕ್ರಯ ಪ್ರಕ್ರಿಯೆ ಮುಗಿಸಿಕೊಳ್ಳುವುದು ಉತ್ತಮವಾಗಿದೆ.
5 ವರ್ಷಗಳಲ್ಲಿ ಸಂಗ್ರಹವಾದ ನೋಂದಣಿ ,ಮುದ್ರಾಂಕ ಶುಲ್ಕ
ವರ್ಷ ಶುಲ್ಕ (ಕೋಟಿ ರೂ.ನಲ್ಲಿ)
2018-19 10,845
2019-20 11,451
2020-21 10,705
2021-22 14,246
2022-23 17,873
26 ಸಾವಿರ ಕೋಟಿ ಟಾರ್ಗೆಟ್:
ರಾಜ್ಯ ಸರ್ಕಾರ ತನ್ನ ಐದು ಗ್ಯಾರಂಟಿಗಳಿಗೆ ಹಣ ಸಂಗ್ರಹಿಸುವ ಸಲುವಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 2023-24ನೇ ಸಾಲಿನಲ್ಲಿ 19 ಸಾವಿರ ರೂ.ಕೋಟಿ ಇದ್ದ ಟಾರ್ಗೆಟ್ ಅನ್ನು 26 ಸಾವಿರ ರೂ.ಕೋಟಿ ಗೆ ನಿಗದಿ ಮಾಡಲಾಗಿದೆ. ಮಾರ್ಗಸೂಚಿ ದರ ಹೆಚ್ಚಳ ಮಾಡದಿದ್ದರೆ ಟಾರ್ಗೆಟ್ ತಲುಪಲು ಸಾಧ್ಯವಾಗುವುದಿಲ್ಲ ಎಂಬುದು ಕಂದಾಯ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.