ಭಾರತಕ್ಕೆ ಬಡಿದಿದೆ ʻಘೋಸ್ಟ್‌ ಮಾಲ್ʼ ಪಿಡುಗು: ಮೂರನೇ ಸ್ಥಾನದಲ್ಲಿ ಬೆಂಗಳೂರು

0
70

 

ಭಾರತಕ್ಕೆ ವಿಲಕ್ಷಣವಾದ ತಲೆನೋವೊಂದು ಆರಂಭವಾಗಿದೆ. ಅದೇನೆಂದರೆ ʻಘೋಸ್ಟ್ ಮಾಲ್ʼ ಸಮಸ್ಯೆ. ದೆಹಲಿ ಎನ್‌ಸಿಆರ್ ಭಾಗದಲ್ಲಿ ಈ ಸಮಸ್ಯೆ ತೀವ್ರವಾಗಿದೆ ಮತ್ತು ಅದರ ನಂತರದ ಸ್ಥಾನದಲ್ಲಿ ಕ್ರಮವಾಗಿ ಪುಣೆ, ಹೈದರಬಾದ್ ಮಹಾನಗರಗಳಿವೆ. ಈ ಸಾಲಿನಲ್ಲಿ ನಮ್ಮ ರಾಜಧಾನಿ, ಸಿಲಿಕಾನ್ ಸಿಟಿ ಬೆಂಗಳೂರು ಕೂಡ ಇದೆ ಎಂದರೆ ಅಚ್ಚರಿ ಪಡಬೇಡಿ.

ʻನೈಟ್ ಫ್ರಾಂಕ್ ಇಂಡಿಯಾʼದ ಇತ್ತೀಚಿನ ವರದಿ ʻಥಿಂಕ್ ಇಂಡಿಯಾ, ಥಿಂಕ್ ರಿಟೇಲ್ 2022ʼ ಪ್ರಕಾರ ಇಂತಹ ಘೋಸ್ಟ್ ಮಾಲ್ ಸಮಸ್ಯೆಯು ಒಟ್ಟಾರೆಯಾಗಿ 4,175 ಕೋಟಿ ರೂಪಾಯಿಗೂ (524 ಮಿಲಿಯನ್ ಅಮೆರಿಕನ್ ಡಾಲರ್) ಅಧಿಕ ನಷ್ಟಕ್ಕೆ ದಾರಿಮಾಡಿಕೊಟ್ಟಿದೆ.

ಕಾರ್ಯಾಚರಣೆಯಲ್ಲಿರುವ 271 ಶಾಪಿಂಗ್ ಮಾಲ್‌ಗಳ ಪೈಕಿ 57 ಮಾಲ್‌ಗಳು, ಅಂದರೆ ಶೇ 21ರಷ್ಟು ಮಾಲ್‌ಗಳು ದುರವಸ್ಥೆಯನ್ನು ತಲುಪಿವೆ ಮತ್ತು ತುರ್ತಾಗಿ ಅವುಗಳನ್ನು ರಕ್ಷಿಸುವ ಅಗತ್ಯವಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಏನಿದು ಘೋಸ್ಟ್ ಮಾಲ್?
ವರದಿ ಹೇಳುವ ಪ್ರಕಾರ, ಯಾವುದೇ ಒಂದು ಮಾಲ್‌ಲ್ಲಿ ಶೇ 40ಕ್ಕಿಂತಲೂ ಹೆಚ್ಚು ಸ್ಥಳಾವಕಾಶ ಖಾಲಿ ಇದ್ದರೆ ಅದನ್ನು ʻಘೋಸ್ಟ್ ಮಾಲ್ʼ ಎಂದು ಗುರುತಿಸಲಾಗಿದೆ.

ಮಾಲ್‌ಗಳು ಘೋಸ್ಟ್ ಮಾಲ್‌ಳಾಗಿ ಪರಿವರ್ತನೆ ಆಗಲು ಬೇರೆ ಬೇರೆ ಕಾರಣಗಳಿವೆ. ಅವುಗಳಿಗೆ ಬಾಡಿಗೆದಾರ ಅಥವಾ ಖರೀದಿದಾರರನ್ನು ಹುಡುಕಲು ಅಗತ್ಯವಾದ ಶ್ರಮ ವಹಿಸದಿರುವುದು, ಮಾಲ್‌ಗಳ ಗಾತ್ರ ಮತ್ತು ಮಾಲೀಕತ್ವದಲ್ಲಿನ ನ್ಯೂನತೆಗಳು, ಡಾರ್ಕ್ ಲೇನ್‌ಗಳನ್ನು ಹೊಂದಿರುವ ದೋಷಪೂರಿತ ವಿನ್ಯಾಸ, ಗ್ರಾಹಕರನ್ನು ಸೆಳೆಯುವ ತಂತ್ರಗಳಲ್ಲಿನ ವೈಫಲ್ಯ, ಕಳಪೆ ಆಕ್ಯುಪೆನ್ಸಿ ಮತ್ತು ಅತ್ಯುತ್ತಮ ವ್ಯಾಪಾರ-ವಹಿವಾಟು ಕೊರತೆ ಹೀಗೆ ಹಲವು ಕಾರಣಗಳಿಂದಾಗಿ ಮಾಲ್ಗಳಲ್ಲಿ ಜಾಗಗಳು ಖಾಲಿ ಉಳಿಯುತ್ತಿವೆ.

ಅಗ್ರ ಎಂಟು ಮಾರುಕಟ್ಟೆಗಳಾದ ಅಹಮದಾಬಾದ್, ಬೆಂಗಳೂರು, ಚೆನ್ನೈ, ಹೈದರಾಬಾದ್‌, ಕೋಲ್ಕತ್ತ, ಮುಂಬೈ, ದೆಹಲಿ ಮತ್ತು ಪುಣೆ ಮಹಾನಗರಗಳಲ್ಲಿ ಕಾರ್ಯಾಚರಿಸುತ್ತಿರುವ 271 ಮಾಲ್‌ಗಳಲ್ಲಿ ಒಟ್ಟಾರೆ 8.6 ಮಿಲಿಯನ್ (86 ಲಕ್ಷ) ಚದರ ಮೀಟರ್‌ (92.9 ಮಿಲಿಯನ್ ಚದರ ಅಡಿ) ಸ್ಥಳಾವಕಾಶ ಖಾಲಿ ಬಿದ್ದಿವೆ. 2022ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಖಾಲಿ ಬಿದ್ದಿರುವ ಮಾಲ್‌ಗಳ ಸ್ಥಳಾವಕಾಶಗಳ ಪೈಕಿ ಅಂದಾಜು ಶೇ 34ರಷ್ಟು ಪಾಲಿನೊಂದಿಗೆ ದೆಹಲಿ ಮೊದಲ ಸ್ಥಾನದಲ್ಲಿದೆ. ಅಂದರೆ ಒಟ್ಟು ಎಂಟು ನಗರಗಳ ಮಾಲ್‌ಗಳಲ್ಲಿನ ಖಾಲಿ ಭಾಗದ ಮೂರನೇ ಒಂದರಷ್ಟು ಕೊಡುಗೆ ದೆಹಲಿಯದ್ದಾಗಿದೆ. ಶೇ 18ರಷ್ಟು ಕೊಡುಗೆಯೊಂದಿಗೆ ಮುಂಬೈ ಎರಡನೇ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನದಲ್ಲಿರುವ ಬೆಂಗಳೂರು ಶೇ 17ರಷ್ಟು ಪಾಲು ಹೊಂದಿದೆ.