ಎ ಎಂಬ ವ್ಯಕ್ತಿಗೆ ಸ್ವಂತ ಮನೆಯಿಲ್ಲ. ಪ್ರತಿ ತಿಂಗಳು ಬಾಡಿಗೆ ಕಟ್ಟಲಿಕ್ಕೆ ಕಿರಿಕಿರಿ. ಹೀಗಾಗಿ ಬೆಂಗಳೂರಿನ ಒಂದು ಏರಿಯಾದಲ್ಲಿ ಮನೆಗೆ 20 ಲಕ್ಷ ರೂ. ಹಣ ಕೊಟ್ಟು ಭೋಗ್ಯಕ್ಕೆ ಪಡೆದುಕೊಂಡಿದ್ದರು. ಮನೆ ಮಾಲೀಕರು ಭೋಗ್ಯದ ಹಣ ವಾಪಸು ನೀಡಿರಲಿಲ್ಲ. ಪೊಲಿಸ್ ಠಾಣೆಗೆ ಹೋದ್ರೆ ಏಯ್ ಇದು ಸಿವಿಲ್ ವಿಚಾರ, ಕೋರ್ಟ್ ಗೆ ಹೋಗಿ ಅಂತ ವಾಪಸು ಕಳಿಸುತ್ತಾರೆ. ಇಂತಹ ಸಂದರ್ಭದಲ್ಲಿ ಅತಿ ಸುಲಭವಾಗಿ ಮನೆ ಮಾಲೀಕರಿಂದ ಭೋಗ್ಯದ ಹಣ ವಾಪಸು ಪಡೆಯವುದು ಹೇಗೆ ?
ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಬಾಡಿಗೆ ಬಲು ದುಬಾರಿ. ಜೀವನ ನಿರ್ವಹಣೆ ಮಾಡುವುದು ಕಷ್ಟ. ಹೀಗಾಗಿ ಬಹುತೇಕರು ಹಣವನ್ನು ಕೊಟ್ಟು ಭೋಗ್ಯಕ್ಕೆ ಪಡೆಯುತ್ತಾರೆ. ಕಾಲವಧಿ ಮುಗಿದ ಬಳಿಕ ಮನೆ ಖಾಲಿ ಮಾಡುವಂತೆ ಮಾಲೀಕರು ಬೆದರಿಸಿ ಮನೆಯನ್ನು ಖಾಲಿ ಮಾಡಿಸುತ್ತಾರೆ. ಆದರೆ ಭೋಗ್ಯದ ಹಣ ಕೊಡಲ್ಲ. ಕೇಳಿದರೆ ಕಾಲ ಮುಂದೂಡುವುದು ಸರ್ವೆ ಸಾಮಾನ್ಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಬಹುತೇಕರು ತಮ್ಮ ಭೋಗ್ಯದ ಹಣ ವಾಪಸು ಕೊಡಿಸಿ ಎಂದು ಪೊಲೀಸ್ ಠಾಣೆಗೆ ಹೋಗುತ್ತಾರೆ. ಠಾಣೆಗೆ ಹೋದರೂ ಏನೂ ಪ್ರಯೋಜನ ಆಗಲ್ಲ. ಯಾಕೆಂದರೆ ಇಬ್ಬರು ಪಾರ್ಟಿಗಳಿಗೆ ಸಂಬಂಧಿಸಿದಂತೆ ಇರುವ ಅದೊಂದು ಕರಾರು. ಹೀಗಾಗಿ ಕೋರ್ಟ್ ಗೆ ಹೋಗಿ ಎಂದು ಹೇಳುತ್ತಾರೆ. ಕೋರ್ಟ್ ಗೆ ಹೋಗಿ ಹಣ ವಾಪಸು ಪಡೆಯುವಷ್ಟು ಕಾಲಾವಕಾಶ ಜನರಿಗೆ ಇರಲ್ಲ. ಇಂತಹ ಸಂದರ್ಭಗಳು ಬಹುತೇಕರಿಗೆ ಎದುರಾಗಿರುತ್ತದೆ. ಈಗಲೂ ಅನೇಕರು ಇಂತಹ ಸಮಸ್ಯೆ ಎದುರಿಸುತ್ತಿರುತ್ತಾರೆ.
ಪರಿಹಾರ ಏನು ? : ಭೋಗ್ಯಾ ಪತ್ರ (mortgage with portion ) ಈ ಪತ್ರಗಳಲ್ಲಿ ಸ್ವತ್ತಿನ ಮೂಲ ದಾಖಲೆಗಳ ಜೊತೆ ಸ್ವತ್ತಿನ ಸ್ವಾಧಿನವನ್ನು ಸಹ ನೀಡಲಾಗುತ್ತದೆ. ಸಾಲ ನೀಡಿರುವ ಮೊತ್ತಕ್ಕೆ ಸಾಲ ನೀಡಿರುವವನು ಸ್ವತ್ತನ್ನು ಅನುಭವಿಸುತ್ತಾನೆ. ಸಾಲದ ಮೊತ್ತ ಹಿಂದಿರುಗಿಸಿದ ನಂತರ ಸ್ವತ್ತನ್ನು ವಾಪಸ್ಸ್ ನೀಡುತ್ತಾನೆ.
ಭೊಗ್ಯತಾ ಪತ್ರ ಯಾವುದೇ ಮನೆಯನ್ನು ಭೋಗ್ಯಕ್ಕೆ ಪಡೆದರೆ, ಹಣಕಾಸಿನ ವಹಿವಾಟನ್ನು ಬಹುತೇಕ ಬ್ಯಾಂಕ್ ಮೂಲಕ ನಡೆಸಬೇಕು. ಕೊಟ್ಟ ಹಣದ ವಿವರಗಳನ್ನು ಉಲ್ಲೇಖಿಸಿ ಮಾಡಿಸಿದ ಭೋಗ್ಯದ ಪತ್ರವನ್ನು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಲು ಅವಕಾಶವಿದೆ. ಭೋಗ್ಯ ಪತ್ರವನ್ನು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿದರೆ, ಮನೆ, ಅಂಗಡಿ, ಕಚೇರಿ, ಜಮೀನು ಯಾವುದೇ ಆಗಿರಲಿ ಸ್ವತ್ತಿಗೆ ಸಂಬಂಧಪಟ್ಟ ಋಣಭಾರ ಪತ್ರ ಉಂಟಾಗುತ್ತದೆ. ಒಮ್ಮೆ ಈ ಋಣ ಭಾರ ಪತ್ರ ಉಂಟಾದರೆ, ಆ ಆಸ್ತಿ/ ಮನೆ ಮಾಲೀಕರು ಯಾವುದೇ ಕಾರಣಕ್ಕೂ ಬೇರೊಬ್ಬರಿಗೆ ಮಾರಾಟ ಮಾಡಲು ಸಾಧ್ಯವಿಲ್ಲ. ಅಥವಾ ಆ ಆಸ್ತಿಯ ಮೇಲೆ ಬ್ಯಾಂಕುಗಳಲ್ಲಿ ಸಾಲ ಪಡೆಯಲು ಸಾಧ್ಯವಿಲ್ಲ. ಬೇರೆ ಯಾರಿಗಾದರೂ ಗಿಫ್ಟ್ ಡೀಡ್ ಮಾಡಿಕೊಡಲಿಕ್ಕೂ ಅವಕಾಶ ಇರಲ್ಲ. ಋಣಭಾರ ಪತ್ರದಲ್ಲಿ ಭೋಗ್ಯ ವಹಿವಾಟು ನಮೂದು ಆಗಿರುವ ಕಾರಣ ಅಂತಹ ಆಸ್ತಿಯನ್ನು ಯಾರೂ ಸಹ ಖರೀದಿ ಮಾಡಲು ಮುಂದೆ ಬರಲ್ಲ. ಯಾವ ಬ್ಯಾಂಕು ಸಹ ಸಾಲ ಕೊಡುವುದಿಲ್ಲ.
ಭೊಗ್ಯ ಪತ್ರವನ್ನು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿದರೆ ಭೋಗ್ಯಕ್ಕೆ ಪಡೆದ ಆಸ್ತಿಯ ಮೇಲೆ ಹಣ ನೀಡಿದವರ ಕಾನೂನು ಬದ್ಧ ಹಕ್ಕು ಸೃಷ್ಟಿಯಾಗುತ್ತದೆ. ಇಂತಹ ಸಂದರ್ಭ ಒದಗಿ ಬಂದರೆ, ಮನೆ ಮಾಲೀಕರು ಯಾರೂ ಸಹ ಹಣ ವಾಪಸು ನೀಡಿ ಇತ್ಯರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗುತ್ತದೆ. ಹೀಗಾಗಿ ಭೊಗ್ಯ ಪತ್ರಗಳನ್ನು ಕಡ್ಡಾಯವಾಗಿ ಸಂಬಂಧಪಟ್ಟ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸುವುದು ಹಣದ ಸುರಕ್ಷತೆ ವಿಚಾರವಾಗಿ ತುಂಬಾ ಒಳ್ಳೆಯದು ಎನ್ನುತ್ತಾರೆ ಕಂದಾಯ ಅಧಿಕಾರಿಗಳು. ಸಾಲ ತೀರುವಳಿ ಪತ್ರ ಪಡೆಯುವ ವರೆಗೂ ಆ ಆಸ್ತಿಯ ವಹಿವಾಟು ನಡೆಸಲು ಸಾಧ್ಯವಿಲ್ಲ.
ಅಡಮಾನ ಮಾಡಿ ಸಾಲ ತಿರಿಸದಿದ್ದರೆ ಸಾಲ ಕೊಟ್ಟವರು ಘನ ನ್ಯಾಯಾಲಯಕ್ಕಾಗಲಿ ಅಥಾವಾ Securitization and Reconstruction of Financial Assets and enforcement of Security Interest act-2022 ಅಡಿಯಲ್ಲಿ ಸ್ವತ್ತುಗಳ ಹರಾಜು ಮಾಡಿ ಸಂಸ್ಥೆಗಳು ಸಾಲದ ಮೊತ್ತ ಮತ್ತು ಬಡ್ಡಿಯನ್ನು ವಸೂಲಿ ಮಾಡಲು ಅವಕಾಶವಿರುತ್ತದೆ.