Revenue Facts

ಬೋಗಸ್ ದಸ್ತಾವೇಜುಗಳ ನೋಂದಣಿ ರದ್ದು.

ಬೋಗಸ್ ದಸ್ತಾವೇಜುಗಳ ನೋಂದಣಿ ರದ್ದು.

ಬೆಂಗಳೂರು ಜು.22 : ಬೆಂಗಳೂರು ಬೋಗಸ್ ದಾಖಲೆ ಒದಗಿಸಿ ಸಬ್ ರಿಜಿಸ್ಟಾರ್ ಕಚೇರಿಗೆ ಸಲ್ಲಿಸಿ ನೋಂದಣಿ ಮಾಡಿದರೆ, ಅಂತಹ ದಸ್ತಾವೇಜುಗಳನ್ನು ರದ್ದು ಮಾಡುವ ಅಧಿಕಾರವನ್ನು ಜಿಲ್ಲಾ ನೋಂದಣಾಧಿಕಾರಿಗೆ ನೀಡಲಾಗಿದೆ. ಭೂಗಳ್ಳರು ಮತ್ತು ವಂಚಕರ ಕಡಿವಾಣಕ್ಕೆ ಕಂದಾಯ ಇಲಾಖೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಭಾರತೀಯ ನೋಂದಣಿ ಕಾಯ್ದೆ 1908ರ ಅನ್ವಯ ಕರ್ನಾಟಕ ನೋಂದಣಿ ನಿಯಮಾವಳಿ 1965 ಸಿದ್ಧವಾಗಿದೆ. ಈ ಕಾಯ್ದೆಗೆ ಕಂದಾಯ ಇಲಾಖೆ ತಿದ್ದುಪಡಿ ತಂದು ವಿಧೇಯಕವನ್ನು ವಿಧಾನಸಭೆ ಮತ್ತು ವಿಧಾನಪರಿಷತ್ನಲ್ಲಿ ಮಂಡನೆ ಮಾಡಿ ಒಪ್ಪಿಗೆ ಪಡೆಯಲಾಗಿದೆ. ಇದೀಗ ರಾಷ್ಟ್ರಪತಿ ಅಂಕಿತ ಬಿದ್ದರೆ ಕಾಯ್ದೆ ಜಾರಿಗೆ ಬರಲಿದೆ ಎಂದು ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾನೂನುಬಾಹಿರವಾಗಿ ನೋಂದಣಿ ಮಾಡಿಸಿದರೆ ಅಂತಹ ದಸ್ತಾವೇಜುಗಳನ್ನು ರದ್ದುಪಡಿಸುವ ಅಧಿಕಾರವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಜಿಲ್ಲಾ ನೋಂದಣಾಧಿಕಾರಿಗೆ (ಡಿಆರ್) ವಹಿಸಲಾಗಿದೆ.

ಈ ಮೊದಲು ನಕಲಿ ದಾಖಲೆ, ವ್ಯಕ್ತಿಗಳು ನೋಂದಣಿ ಮಾಡಿಸಿದ್ದರೆ ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಬೇಕಿತ್ತು. ಇದೀಗ ಡಿ.ಆರ್.ಗೆ ಸ್ವಯಂ ದೂರು ಅಥವಾ ಸಂತ್ರಸ್ತ ವ್ಯಕ್ತಿಯ ಕಡೆಯಿಂದ ದೂರು ಸ್ವೀಕರಿಸಿ ನೋಂದಣಿ ರದ್ದುಪಡಿಸಬಹುದು. ರಾಜ್ಯದಲ್ಲಿ 260 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಿನಕ್ಕೆ ಅಂದಾಜು 10 ಸಾವಿರ ದಾಖಲೆ ಪತ್ರಗಳು ನೋಂದಣಿ ಆಗುತ್ತಿವೆ. ಇದರ ನಡುವೆ ಕೃಷಿ ಭೂಮಿ ಎಲ್ಲಾ, ಸೈಟು, ಮನೆ, ಕಟ್ಟಡ ಸೇರಿ ಸ್ಥಿರಾಸ್ತಿಗಳ ಕ್ರಯ, ದಾನ ಪತ್ರ, ವಿಭಾಗ ಪತ್ರ, ಹಕ್ಕು ಬಿಡುಗಡೆ ಮತ್ತು ಕರಾರು ಪತ್ರಗಳ ನೋಂದಣಿ ವೇಳೆ ತಿರುಚಿದ ದಾಖಲೆ ಸಲ್ಲಿಸಿ ಅಥವಾ ಬದಲಿ ವ್ಯಕ್ತಿಗಳು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹಾಜರಾಗಿ ನೋಂದಣಿ ಮಾಡಿಸಿ ಭೂಕಬ್ಜ ಮಾಡುತ್ತಿದ್ದರು. ಇದರಿಂದ ನಿಜವಾದ ವಾರಸುದಾರರಿಗೆ ಅನ್ಯಾಯವಾಗು ತ್ತಿತ್ತು, ಬೋಗಸ್ ಎಂದು ಗೊತ್ತಿದ್ದರೂ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಬದಲಿಗೆ, ಪೊಲೀಸ್ ಠಾಣಿ ಅಥವಾ ಕೋರ್ಟ್ನಲ್ಲಿ ನ್ಯಾಯದಾನಕ್ಕೆ ಮೊರೆ ಇಡಬೇಕಿತ್ತು. ಕೋರ್ಟ್ ಶುಲ್ಕ ಪಾವತಿಸಿ ವಾದ- ಪ್ರತಿವಾದ ನಡೆದು ನ್ಯಾಯದಾನಕ್ಕೆ ಕನಿಷ್ಠ 10 ವರ್ಷ ಬೇಕಾಗುತ್ತದೆ. ಇದನ್ನೇ ದುರ್ಬಳಕೆ ಮಾಡಿಕೊಂಡು ಭೂಗಳ್ಳರು, ರಾಜೀಸಂಧಾನ ನೆಪದಲ್ಲಿ ನೈಜ ವಾರಸುದಾರರಿಗೆ ತೊಂದರೆ ಕೊಡುತ್ತಿದ್ದಾರೆ. ಇದನ್ನು ತಪ್ಪಿಸುವ ಸಲುವಾಗಿ ಅಕ್ರಮ ನೋಂದಣಿ ದಸ್ತಾವೇಜುಗಳನ್ನು ರದ್ದುಪಡಿಸುವ ಅಧಿಕಾರವನ್ನು ಡಿಆರ್ಗೆ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ತಿದ್ದುಪಡಿಯಲ್ಲಿ ಏನಿದೆ?: ಕರ್ನಾಟಕ ನೋಂದಣಿ ನಿಯಮಾವಳಿ 1965ರ 22’ಬಿ’, 22’ಸಿ’ ಮತ್ತು 22’ಡಿ’ಗೆ ತಿದ್ದುಪಡಿ ತರಲಾಗುತ್ತಿದೆ. ಈ ಕಾಯ್ದೆ 22“ಬಿ” ಸುಳ್ಳು ದಸ್ತಾವೇಜು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾಯ್ದೆಗೆ ವಿರುದ್ಧವಾಗಿ ಮತ್ತು ಕೇಂದ್ರ, ರಾಜ್ಯ ಸರ್ಕಾರ ಜಪ್ತಿ ಮಾಡಿರುವ ಸ್ಥಿರಾಸ್ತಿಗಳನ್ನು ಕ್ರಯ, ದಾನ, ಗುತ್ತಿಗೆ ಮತ್ಯಾವುದೇ ನೋಂದಣಿ ಮಾಡಿಸಿದರೆ ನೋಂದಣಿ ರದ್ದುಪಡಿಸಲಾಗುತ್ತದೆ.

ಡಿಆರ್ ಅಧಿಕಾರ ಚಲಾವಣೆ: ತಿರುಚಿದ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾಯ್ದೆ ವಿರುದ್ಧ ನೋಂದಣಿ ಆಗಿರುವ ದಸ್ತಾವೇಜುಗಳ ವಿರುದ್ಧ ಸ್ವಯಂಪ್ರೇರಿತ ಅಥವಾ ಸಂತ್ರಸ್ತರ ದೂರು ಪಡೆದು ಕೇಸ್ ದಾಖಲಿಸುವ ಅಧಿಕಾರ ಡಿ.ಆರ್.ಗೆ ಇದೆ. ನೋಂದಣಿಯಲ್ಲಿ ಭಾಗವಹಿಸಿರುವ ಪಕ್ಷಗಾರರಿಗೆ ಮತ್ತು ಸಂಬಂಧಪಟ್ಟವರಿಗೆ ನೋಟಿಸ್ ಕೊಟ್ಟು ಕಾರಣ ಕೇಳಿ ಅಥವಾ ರದ್ದುಪಡಿಸುವ ಸಂಬಂಧ ಮಾಹಿತಿ ನೀಡುತ್ತಾರೆ. ಪಕ್ಷಗಾರರ ಹೇಳಿಕೆ ಪಡೆದು ನೋಂದಣಿ ರದ್ದುಪಡಿಸುವ ಅಧಿಕಾರ ನೀಡಲಾಗಿದೆ.

Exit mobile version