ವಿಳಂಬ ಕಾಮಗಾರಿಗಳೇ ರಿಯಲ್ ಎಸ್ಟೇಟ್‌ನ ಆತಂಕಗಳು..

0
120

ವಿಳಂಬ ಎಂಬುದು ಒಂದು ದಶಕದಿಂದ ಭಾರತದ ರಿಯಲ್ ಎಸ್ಟೇಟ್ ಉದ್ಯಮವನ್ನು ಬೆಂಬಿಡದೆ ಕಾಡುತ್ತಿದೆ. ಹಣಕಾಸು ಸಮಸ್ಯೆ ಅಥವಾ ಕಾರ್ಮಿಕರ ಕೊರತೆ ಕಾರಣ ಕೊಟ್ಟು ಯೋಜನೆಯನ್ನು ಮುಂದಕ್ಕೆ ಹಾಕುತ್ತ ಹೋಗುವುದು ಬಿಲ್ಡರ್‌ಗಳಿಗೆ ಸಾಮಾನ್ಯವೇ ಆಗಿದೆ. ಆದರೆ ಅದರ ಸಂಪೂರ್ಣ ಪರಿಣಾಮ ಮಾತ್ರ ಮನೆ ಖರೀದಿಸಿದ ಗ್ರಾಹಕನ ಮೇಲೆ. ಕನಸಿನ ಮನೆಗೆಂದು ಬ್ಯಾಂಕ್‌ನಿಂದ ಪಡೆದ ಸಾಲವನ್ನು ಬಡ್ಡಿ ಸಹಿತ ತೀರಿಸುವ ಜೊತೆಗೆ ಬಾಡಿಗೆ ಮನೆಯಲ್ಲೇ ಇರುವ ದೌರ್ಭಾಗ್ಯ ಅವರದ್ದಾಗಿದೆ.

ಭಾರತದ ಏಳು ಪ್ರಮುಖ ನಗರಗಳಲ್ಲಿ ಅಂದಾಜು 4.48 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸರಿಸುಮಾರು 5 ಲಕ್ಷ ಮನೆಗಳು ಅಪೂರ್ಣ ಹಂತದಲ್ಲಿವೆ ಎಂದು ರಿಯಲ್ ಎಸ್ಟೇಟ್ ಕನ್ಸಲ್ಟನ್ಸಿ ಒಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಇಂತಹ ಅಪೂರ್ಣ ಮನೆಗಳ ಸಿಂಹಪಾಲು (ಶೇ 77) ರಾಷ್ಟ್ರ ರಾಜಧಾನಿ ಪ್ರದೇಶ (ಎನ್ಸಿಆರ್) ಮತ್ತು ಮುಂಬೈ ಮೆಟ್ರೋಪಾಲಿಟನ್ ಪ್ರದೇಶಗಳದ್ದು. ನಂತರದ ಸ್ಥಾನದಲ್ಲಿ ಪುಣೆ (ಶೇ 9) ಇದ್ದರೆ, ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ಗಳು ಸೇರಿ ಶೇ 9ರಷ್ಟು ಪಾಲನ್ನು ಹೊಂದಿವೆ. ಉಳಿದ ಶೇ 5ರಷ್ಟು ಪಾಲು ಕೋಲ್ಕತ್ತ ನಗರದ್ದು.

ಜೀವಿತಾವಧಿಯ ಉಳಿತಾಯ ಮತ್ತು ಬ್ಯಾಂಕ್‌ನಿಂದ ಬಡ್ಡಿಗೆ ಪಡೆದ ಸಾಲದ ಹಣವನ್ನು ಕನಸಿನ ಮನೆಯ ಮೇಲೆ ಹೂಡಿಕೆ ಮಾಡಿ ದಶಕಗಟ್ಟಲೆ ಕಾಯುವ ಸ್ಥಿತಿ ಭಾರತದಾದ್ಯಂತ ಗ್ರಾಹಕರದ್ದಾಗಿದೆ. ಮನೆ ಬುಕ್‌ ಮಾಡಿದ ನಂತರ ಸರ್ಕಾರಿ ಕಚೇರಿಗಳು, ನ್ಯಾಯಮಂಡಳಿಗಳು, ನ್ಯಾಯಾಲಯಕ್ಕೆ ಅಲೆಯುತ್ತ ಅವರ ಬದುಕು ಸಂಕಷ್ಟದಲ್ಲಿದೆ.

ಇನ್ನೊಂದು ಕಡೆ ವಿಳಂಬವಾದ ನಿರ್ಮಾಣ ಯೋಜನೆಗಳ ಡೆವಲಪರ್‌ಗಳು, ನಗದು ಕೊರತೆಯ ಕಾರಣ ನೀಡುತ್ತಾರೆ. ಪರಿಣತರು ಹೇಳುವ ಪ್ರಕಾರ, ಆರ್ಥಿಕ ಅಶಿಸ್ತು ಮತ್ತು ʻರಿಯಲ್‌ ಎಸ್ಟೇಟ್‌ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ 2016ʼ ಜಾರಿ ಬರುವ ಪೂರ್ವ ಕಾಲದಲ್ಲಿ ಹಣದ ಹರಿವನ್ನು ಬೇರೆಡೆಗೆ ವರ್ಗಾಯಿಸಿದ್ದೇ ನಗದು ಕೊರತೆಗೆ ಕಾರಣ.

ರೇರಾ ಜಾರಿಗೂ ಮುನ್ನ ಡೆವಲಪರ್‌ಗಳು ಮನೆ ಖರೀದಿದಾರರಿಂದ ಪಡೆದುಕೊಂಡ ಹಣವನ್ನು ಇನ್ನಷ್ಟು ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಮತ್ತು ಹೊಸ ಯೋಜನೆಗಳನ್ನು ಆರಂಭಿಸುವುದಕ್ಕೆ ಹೂಡಿಕೆ ಮಾಡುತ್ತಿದ್ದರು. ಅಪೂರ್ಣಗೊಂಡಿರುವ ಹೆಚ್ಚಿನ ಯೋಜನೆಗಳು ರೇರಾ ಪೂರ್ವ ಕಾಲದ್ದೇ ಆಗಿವೆ ಎಂದು ತಜ್ಞರು ಹೇಳುತ್ತಾರೆ.

ಬೆಂಗಳೂರಿನ ಓಜೋನ್‌ ಅರ್ಬಾನಿಯ ಯೋಜನೆಯ ಪೆವಿಲಿಯನ್‌ ಬ್ಲಾಕ್‌ನಲ್ಲಿ ಮನೆ ಖರೀದಿಸಿದ ಸುಮಾರು 100 ಗ್ರಾಹಕರು ತಲಾ ಒಂದು ಕೋಟಿ ರೂಪಾಯಿ ಪಾವತಿ ಮಾಡಿ, ಸಂಕಷ್ಟದಲ್ಲಿ ಕಾಲ ಕಳೆಯುತ್ತಿದ್ದಾರೆ. 2014ರಲ್ಲಿ ಆರಂಭಗೊಂಡ ಈ ಬ್ಲಾಕ್‌ ಕಾಮಗಾರಿ 2016ಕ್ಕೆ ಮುಕ್ತಾಯಗೊಳ್ಳಬೇಕಿತ್ತು. ಖರೀದಿದಾರರು ರೇರಾ, ಗ್ರಾಹಕ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದಾರೆ.

ಇಂಥದ್ದೇ ಇನ್ನೊಂದು ಪ್ರಕರಣ ಬೆಂಗಳೂರಿನ ಮಂತ್ರಿ ಎನರ್ಜಿಯಾ. 2014ರಲ್ಲಿ ಈ ಯೋಜನೆ ಆರಂಭಗೊಂಡಿದ್ದು, 2018ಕ್ಕೆ ಮನೆಗಳು ಗ್ರಾಹಕರ ಕೈಸೇರಬೇಕಿತ್ತು. ಆದರೆ ಅದು ಇನ್ನೂ ಸಾಕಾರಗೊಂಡಿಲ್ಲ. ಗ್ರಾಹಕರು ಡೆವಲಪರ್ ವಿರುದ್ಧ ರೇರಾ ಅಡಿ ಪ್ರಕರಣ ದಾಖಲಿಸಿದ್ದಾರೆ.

ʻಬಿಲ್ಡರ್ ನೋಟು ಅಮಾನ್ಯೀಕರಣ ಮತ್ತು ಕೋವಿಡ್‌-19 ಕಾರಣ ನೀಡುತ್ತಿದ್ದಾರೆ. ಆದರೆ ಅವರು ಹಣವನ್ನು ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದಾರೆʼ ಎಂದು ಗ್ರಾಹಕರು ವಾದಿಸುತ್ತಿದ್ದಾರೆ. ಜೂನ್‌ 26ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಂಗಳೂರು ಮೂಲದ ಮಂತ್ರಿ ಡೆವಲಪರ್ಸ್‌ನ ನಿರ್ದೇಶಕ ಸುಶೀಲ್‌ ಪಿ. ಮಂತ್ರಿ ಅವರನ್ನು ಹಣ ಅಕ್ರಮ ವರ್ಗಾವಣೆ ಮತ್ತು ಹಣವನ್ನು ಬೇರೆಡೆ ಹೂಡಿಕೆ ಮಾಡಿದ ಆರೋಪದಲ್ಲಿ ಬಂಧಿಸಿದ್ದಾರೆ.