ಕರ್ನಾಟಕ ವಿಧಾನಸಭೆ ಚುನಾವಣೆ 2023 : ಮುನ್ಸೂಚನೆ ನೀಡಿದ ಕೇಂದ್ರ ಚುನಾವಣೆ ಆಯೋಗ ತವರು ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ವರ್ಗಾವಣೆಗೆ ಸಿಇಸಿ ನಿರ್ದೇಶನ

0
131
ಕರ್ನಾಟಕ ವಿಧಾನಸಭೆ ಚುನಾವಣೆ
ಕರ್ನಾಟಕ ವಿಧಾನಸಭೆ ಚುನಾವಣೆ

ಬೆಂಗಳೂರು, ಡಿ. 13: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುನ್ಸೂಚನೆಯನ್ನು ಕೇಂದ್ರ ಚುನಾವಣಾ ಆಯೋಗವೇ ನೀಡಿದೆ. ಗುಜರಾತ್ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯದಲ್ಲಿ 2023 ರ ವಿಧಾನಸಭೆ ಚುನಾವಣಾ ಕಣ ರಂಗೇರುತ್ತಿದೆ. ಇದರ ಬೆನ್ನಲ್ಲೇ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಅಯೋಗ ಮಹತ್ವದ ಸುತ್ತೋಲೆ ಹೊರಡಿಸಿದೆ.

24 ಮೇ. 2023 ಕ್ಕೆ ಶಾಸಕಾಂಗದ ಅಧಿಕಾರ ಅವಧಿ ಮುಗಿಯಲಿದ್ದು, ಚುನಾವಣೆ ನಡೆಯಲಿದೆ. ಮೇಗಿಂತಲೂ ಮೊದಲೇ ಚುನಾವಣೆ ಘೋಷಣೆ ಮಾಡಿದರೂ ಅಚ್ಚರಿ ಪಡಬೇಕಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ನೀತಿ ಸಂಹಿತೆ ಪಾಲಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ.   ತವರು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನುಬೇರಡೆಗೆ ವರ್ಗಾವಣೆ ಮಾಡಬೇಕು. ಮೇ. 31, 2023 ಕ್ಕೆ ಮೂರು ವರ್ಷ ಒಂದೇ ಕಡೆ ಕಾರ್ಯ ನಿರ್ವಹಿಸಿದ್ದರೆ ಅಂತಹವರನ್ನು ಈ ಕೂಡಲೇ ಆ ಹುದ್ದೆಗಳಿಂದ ತೆರವುಗೊಳಿಸುವಂತೆ ಸೂಚನೆ ನೀಡಿದೆ.

ಚುನಾವಣಾ ಆಯೋಗದ ಸೂಚನೆಯು ಪೊಲೀಸ್ ಇಲಾಖೆಗೆ ಸಹ ಅನ್ವಯಿಸಲಿದ್ದು, ಐಜಿ, ಡಿಐಜಿ, ಕಮಾಂಡೆಂಡ್, ಎಸ್‌ಪಿ, ಅಡಿಷನಲ್ ಎಸ್ಪಿ, ಡಿವೈಎಸ್ಪಿ , ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಗೂ ಅನ್ವಯಿಸಲಿದೆ. ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ಅಥವಾ ಮೇಲ್ಟಟ್ಟ ದರ್ಜೆಯ ಯಾವ ಅಧಿಕಾರಿಯನ್ನೂ ಸಹ ತವರು ಜಿಲ್ಲೆಯಲ್ಲಿ ಕೆಲಸ ಮಾಡಲು ನಿಯೋಜನೆ ಮಾಡಬಾರದು. ಒಂದು ಕ್ಷೇತ್ರದಲ್ಲಿ ಮೂರು ವರ್ಷಕ್ಕಿಂತಲೂ ಹೆಚ್ಚು ಅವಧಿ ಕೆಲಸ ಮಾಡಿದ್ದರೆ ಅಂತಹವರನ್ನು ಸಹ ಕೂಡಲೇ ವರ್ಗಾವಣೆ ಮಾಡಬೇಕು ಎಂದು ಕೇಂದ್ರ ಚನಾವಣಾ ಆಯೋಗ ಸೂಚನೆ ನೀಡಿದೆ.

ಅಧಿಕಾರಿಗಳು ತವರು ಕ್ಷೇತ್ರದ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರೆ ಅಥವಾ ಒಂದೇ ಜಾಗದಲ್ಲಿ ಮೂರು ವರ್ಷಕ್ಕಿಂತಲೂ ಅಧಿಕ ದಿನ ಕೆಲಸ ಮಾಡುತ್ತಿದ್ದರೆ, ಅವರು ಮತದಾನದ ಮೇಲೆ ಪ್ರಭಾವ ಬೀರಬಹುದು ಎಂಬ ಕಾರಣಕ್ಕಾಗಿ ಅಧಿಕಾರಿಗಳನ್ನು ಬೇರಡೆ ವರ್ಗಾವಣೆ ಮಾಡುವ ನೀತಿ ಮೊದಲಿನಿಂದಲೂ ಜಾಲ್ತಿಯಲ್ಲಿದೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಚುನಾವಣಾ ಆಯೋಗ ಚುನಾವಣಾ ನೀತಿ ಸಂಹಿತೆಯನ್ನು ಹಂತ ಹಂತವಾಗಿ ಜಾರಿಗೊಳಿಸುತ್ತಿದೆ. ಮೊದಲ ಹಂತದಲ್ಲಿ ಅಧಿಕಾರಿಗಳ ಎತ್ತಂಗಡಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿದೆ.    ಈ ಬೆಳವಣಿಗೆ ನೋಡಿದರೆ ರಾಜ್ಯದಲ್ಲಿ ಮಾರ್ಚ್ ನಲ್ಲಿಯೇ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯಿದೆ.