ಬೆಂಗಳೂರು. ಭಾರತೀಯರು ಅದರಲ್ಲೂ ಬಹುತೇಕ ಕನ್ನಡಿಗರು ವಿದೇಶದಲ್ಲಿ ನೆಲೆಸಿರುತ್ತಾರೆ. ಸ್ಥಿರ ಆಸ್ತಿಗೆ ಸಂಬಂಧಿಸಿದಂತೆ ಆಸ್ತಿ ನೊಂದಣಿ, ಕ್ರಯ ಪತ್ರ, ಜಿಪಿಎ, ದಾನಪತ್ರ ಇನ್ನಿತರೇ ದಾಸ್ತವೇಜುಗಳನ್ನು ಅಲ್ಲಿದ್ದುಕೊಂಡೇ ಮಾಡಿಸಬಹುದೇ ? ಅದಕ್ಕೆ ಕಾನೂನು ಮಾನ್ಯತೆ ಇರುತ್ತದೆಯೇ ? ಎಷ್ಟು ದಿನದಲ್ಲಿ ನೊಂದಣಿ ಮಾಡಿಸಬೇಕು ? ನೋಂದಣಿ ಮಾಡಿಸದಿದ್ದೆ ಏನಾಗುತ್ತದೆ ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ ಅದಕ್ಕೆ ಉತ್ತರ ಇಲ್ಲಿದೆ.
ಭಾರತೀಯ ಮೂಲದ ವ್ಯಕ್ತಿ, ಹೊರ ದೇಶದಲ್ಲಿ ನೆಲೆಸಿರುವ ವ್ಯಕ್ತಿ, ಬ್ಯುಜಿನೆಸ್ ಮ್ಯಾನ್ ಯಾರೆ ಅದರೂ ಹೊರ ದೇಶದಲ್ಲಿದ್ದುಕೊಂಡೇ ಭಾರತದಲ್ಲಿನ ಅಸ್ತಿಗೆ ಸಂಬಂಧಿಸಿದ ವಹಿವಾಟು ಮಾಡಬಹುದು. ವಿದೇಶದಲ್ಲಿದ್ದುಕೊಂಡೇ ದಾಸ್ತವೇಜು ಮಾಡಿಸಬಹುದು. ಒಮ್ಮೆ ದಾಸ್ತವೇಜು ಮಾಡಿಸಿದ ದಿನಾಂಕದಿಂದ ಹಿಡಿದು ಕರ್ನಾಟಕ ನೋಂದಣಿ ಅಧಿನಿಯಮ ಕಲಂ 52 ರ ಪ್ರಕಾರ ನಾಲ್ಕು ತಿಂಗಳ ಒಳಗೆ ಸಂಬಂಧಪಟ್ಟ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ನಾಲ್ಕು ತಿಂಗಳು ಮೀರಿದರೆ, ಸಂಬಂಧಪಟ್ಟ ಉಪ ನೋಂದಣಾಧಿಕಾರಿಗಳ ಮೂಲಕ ಜಿಲ್ಲಾ ನೋಂದಣಾಧಿಕಾರಿಗಳಿಗೆ ಸಕಾರಣ ಸಮೇತ ಅರ್ಜಿ ಸಲ್ಲಿಸಬೇಕು.
ವಿಳಂಬವಾಗಿದ್ದಕ್ಕೆ ಅರ್ಜಿದಾರ ನೀಡಿದ ಸಕಾರಣ ಸರಿಯಾಗಿದ್ದಲ್ಲಿ ನೋಂದಣಿ ನಿಯಮದ ಪ್ರಕಾರ ದಂಡವನ್ನು ವಿಧಿಸಿ ನೋಂದಣಿ ಮಾಡಲಾಗುತ್ತದೆ. ಆದರೆ ದಾಸ್ತವೇಜಿಗೆ ಅನುಗುಣವಾಗಿ ದಂಡವನ್ನು ವಿಧಿಸಲಾಗುತ್ತದೆ. ಒಂದು ವೇಳೆ ದಾಸ್ತವೇಜಿನ ಕಾಲಾವಧಿ ಎಂಟು ತಿಂಗಳು ಮುಗಿದು ಹೋಗಿದ್ದರೆ, ಅಂತಹ ದಾಸ್ತವೇಜನ್ನು ನೋಂದಣಿ ಮಾಡಲು ಕಾನೂನಿನ ಅಡಿಯಲ್ಲಿ ಅವಕಾಶವಿಲ್ಲ ಎನ್ನುತ್ತದೆ ನೋಂದಣಿ ನಿಯಮಗಳು. ದಂಡ ಪಾವತಿಸಿ ದಾಸ್ತವೇಜನ್ನು ನೋಂದಣಿ ಮಾಡುವ ಸಮಯದಲ್ಲಿ ಉಪ ನೋಂದಣಿ ಅಧಿಕಾರಿಗಳ ಕಚೇರಿಯಲ್ಲಿಹಾಜರಾಗಬೇಕು.