ಬೆಂಗಳೂರು ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆಯ ಲಾಭಗಳು

0
139

ಇಡೀ ದೇಶದಲ್ಲೇ ವೇಗವಾಗಿ ಬೆಳೆಯುತ್ತಿರುವ ಅತ್ಯಂತ ಪ್ರಮುಖ ನಗರಗಳಲ್ಲಿ ಒಂದು ಬೆಂಗಳೂರು. ಐಟಿ ಉದ್ಯಮದ ಆರಂಭ ಮತ್ತು ವಿಸ್ತರಣೆಯ ಪರಿಣಾಮವಾಗಿ ನಗರವು ವೇಗವಾದ ಆರ್ಥಿಕ ಪ್ರಗತಿಯನ್ನು ಕಂಡಿದೆ. ಕಳೆದ ಕೆಲವು ದಶಕಗಳಲ್ಲಿ ತಂತ್ರಜ್ಞಾನ ಮತ್ತು ಮೂಲಸೌಕರ್ಯ ವಲಯದಲ್ಲಿ ಬೃಹತ್‌ ಪ್ರಮಾಣದ ಬೆಳವಣಿಗೆ ಕಂಡಿದೆ. ಇದೆಲ್ಲದರ ಪರಿಣಾಮವಾಗಿ ಬೆಂಗಳೂರು ಮಹಾನಗರಿಯ ರಿಯಲ್‌ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ ಮಾಡುವುದು ಅಪಾರ ಲಾಭದಾಯಕವಾಗಿದೆ.

ಬೆಂಗಳೂರು ರಿಯಲ್‌ ಎಸ್ಟೇಟ್‌ ಹೂಡಿಕೆದಾರರ ಸ್ವರ್ಗ ಎಂಬುದಕ್ಕೆ ಕೆಲವು ಪ್ರಮುಖ ಕಾರಣಗಳಿವೆ. ಕಳೆದ ಕೆಲವು ವರ್ಷಗಳಲ್ಲಿ ಭೂಮಿಯ ಬೆಲೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿರುವುದು ನಗರದ ಬೆಳವಣಿಗೆಗೆ ಸಾಕ್ಷಿ. ಅಲ್ಲದೆ ಈ ಪ್ರಗತಿಯಲ್ಲಿ ಯಾವುದೇ ಹಿಂಜರಿಕೆಯ ಮುನ್ಸೂಚನೆಯೂ ಇಲ್ಲದ ಕಾರಣ ರಿಯಲ್‌ ಎಸ್ಟೇಟ್‌ ಹೂಡಿಕೆದಾರರಿಗೆ ಒಳ್ಳೆಯ ನಗರ ಎನಿಸಿದೆ.

ದೇಶದ ಐಟಿ ಕೇಂದ್ರ
ದೇಶದ ಐಟಿ ಉದ್ಯಮಗಳ ಕೇಂದ್ರ ಸ್ಥಾನ ಬೆಂಗಳೂರು ಎಂಬುದರಲ್ಲಿ ಎರಡು ಮಾತಿಲ್ಲ. ದೇಶದ ವಿವಿಧ ಭಾಗಗಳ ಯುವ, ಪ್ರತಿಭಾವಂತರ ತಾಣವಾಗಿರುವ ಕಾರಣ ಹಲವು ರಿಯಲ್‌ ಎಸ್ಟೇಟ್‌ ಯೋಜನೆಗಳೂ ಆರಂಭವಾದವು. ರಿಯಲ್‌ ಎಸ್ಟೇಟ್‌ ಹೂಡಿಕೆದಾರರು ಗಮನಿಸುವ ಪ್ರಮುಖ ಅಂಶವೆಂದರೆ ʻಜಾಗʼ. ಅಂಥದ್ದೊಂದು ಪರಿಪೂರ್ಣವಾದ ʻಜಾಗʼ ನಮ್ಮ ಬೆಂಗಳೂರು.

ಅತ್ಯುತ್ತಮ ಸಾರಿಗೆ
ನಗರ ವ್ಯಾಪ್ತಿಯ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸುಲಭ ಹಾಗೂ ತ್ವರಿತವಾಗಿ ತೆರಳುವಂತಹ ಅತ್ಯುತ್ತಮ ಸಾರಿಗೆ ಸಂಪರ್ಕ ಇಲ್ಲಿದೆ. ನಗರ ಸಾರಿಗೆ ಬಸ್, ಮೆಟ್ರೊದಂತಹ ಸೌಕರ್ಯಗಳ ಜೊತೆಗೆ ದೇಶದ ಮೂಲೆ ಮೂಲೆಗೆ ಸಂಪರ್ಕಿಸುವ ರೈಲು ಜಾಲ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೂ ಇಲ್ಲಿದೆ.
ಆಂತರಿಕ ಸಂಪರ್ಕ ಸಾರಿಗೆಗಳ ಕಾರಣದಿಂದ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಯಾವಾಗಲೂ ಹೆಚ್ಚಿನ ಲಾಭ. ನಗರದ ಹೊರವಲಯ, ವಿಶೇಷವಾಗಿ ಉತ್ತರ ಬೆಂಗಳೂರು ರಿಯಲ್‌ ಎಸ್ಟೇಟ್‌ ಮಾರುಕಟ್ಟೆಗೆ ಹೆಸರಾಗಿದೆ. ಪೆರಿಫೆರಲ್‌ ರಿಂಗ್‌ ರೋಡ್‌, ಬಳ್ಳಾರಿ ರಸ್ತೆಗಳು ಉತ್ತರ ಮತ್ತು ದಕ್ಷಿಣ ಬೆಂಗಳೂರುಗಳ ನಡುವೆ ಸಂಪರ್ಕ ಸುಲಭವಾಗಿಸಿವೆ.

ಹೂಡಿಕೆ ಮೇಲೆ ಹೆಚ್ಚಿನ ಲಾಭ
ನವ ಹೂಡಿಕೆದಾರರಿಗೆ ಬೆಂಗಳೂರಿನ ಹೊರವಲಯಗಳು ಹೇಳಿಮಾಡಿಸಿದಂತಿವೆ. ಬಹುರಾಷ್ಟ್ರೀಯ ಕಂಪನಿಗಳು, ಐಟಿ ಉದ್ಯಮಗಳ ನೆಲೆಯಾಗಿರುವ ಕಾರಣ ಈ ವಲಯಗಳಲ್ಲಿನ ಹೂಡಿಕೆಗೆ ಅತ್ಯುತ್ತಮಾದ ಲಾಭಾಂಶ ನೀಡುತ್ತಿವೆ. ಈ ಭಾಗಗಳಲ್ಲಿ ಭಾರಿ ಸಂಖ್ಯೆಗಳಲ್ಲಿ ವಿಲ್ಲಾಗಳು, ವಸತಿ ಸಮುಚ್ಚಯಗಳು ತಲೆ ಎತ್ತಿವೆ.

ಮನೆ ಮಾಲೀಕರಿಗೆ ತೆರಿಗೆ ಅನುಕೂಲಳು
ಮನೆ ಮಾಲೀಕರಿಗೆ ಸಿಗುವ ತೆರಿಗೆ ಅನುಕೂಲಗಳು ಕೂಡ ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಹೂಡಿಕೆ ಮಾಡಲು ಸೆಳೆಯುತ್ತವೆ. ಸ್ವತ್ತುಗಳಿಗೆ ಸಾಲ ಪಡೆದು ಬೆಂಗಳೂರು ಅಥವಾ ರಾಜ್ಯದ ಯಾವುದೇ ಭಾಗದಲ್ಲಿ ನೀವು ಮನೆಗಾಗಿ ಹೂಡಿಕೆ ಮಾಡಿದರೆ ಅದಕ್ಕೆ ತೆರಿಗೆ ವಿನಾಯಿತಿ ಲಭ್ಯ.

ಇನ್ನೂ ಒಂದು ಮುಖ್ಯ ವಿಚಾರವೆಂದರೆ, ಸಾಲದ ಕಂತುಗಳು ಸಮಾನವಾಗಿರುತ್ತವೆ. ಆದರೆ ನಿಮ್ಮ ಮನೆಗೆ ನೀವು ಪಡೆಯುವ ಬಾಡಿಗೆ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತದೆ. ಅಂದರೆ ದೀರ್ಘಾವಧಿಯಲ್ಲಿ ಇದು ಹೆಚ್ಚಿನ ಲಾಭದಾಯಕವಾಗುತ್ತದೆ.

ಸಾಮಾಜಿಕ ಮೂಲಸೌಕರ್ಯ
ಅಗ್ರಗಣ್ಯ ಶಿಕ್ಷಣ ಸಂಸ್ಥೆಗಳು, ಹೆಸರಾಂತ ಆಸ್ಪತ್ರೆಗಳು, ಸಿನಿಮಾ ಮಂದಿರಗಳು, ಶಾಪಿಂಗ್‌ ಮಾಲ್‌ಗಳು, ಉದ್ಯಾನ ಮತ್ತು ಮನರಂಜನೆಗಾಗಿ ಲೈವ್‌ ಇವೆಂಟ್‌ ಕೇಂದ್ರಗಳು ಇವೆಲ್ಲವೂ ಬೆಂಗಳೂರಿನಲ್ಲಿ ಲಭ್ಯ. ಇವುಗಳ ಜೊತೆಗೆ ಇಲ್ಲಿನ ಹವಾಮಾನ ಕೂಡ ಬೆಂಗಳೂರಿನ ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಆಕರ್ಷಿಸುವ ಹೆಚ್ಚುವರಿ ಅಂಶಗಳು.