20.8 C
Bengaluru
Thursday, December 19, 2024

ಏರ್‌ಪೋರ್ಟ್‌ಗೆ ರಸ್ತೆ: ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಸದ್ಯದಲ್ಲೇ ಆರಂಭ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಟರ್‌ನ್ಯಾಷನಲ್‌ ವಿಮಾನಗಳಿಗಾಗಿ ಪ್ರತ್ಯೇಕ ಟರ್ಮಿನಲ್-2 ಉದ್ಘಾಟಿಸಲಾಗಿದೆ. ಇದಕ್ಕೆ ಪೂರಕವಾಗಿ ಬೆಂಗಳೂರಿನಿಂದ ವಿಮಾನ ನಿಲ್ದಾಣದ ಸಂಪರ್ಕವನ್ನೂ ಉತ್ತಮಪಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ತೆರಳುವರಿಗೆ ಕಿರಿಕಿರಿ ಎನಿಸುವ ಹೆಬ್ಬಾಳ ಮೇಲ್ಸೇತುವೆಯನ್ನು ಅಗಲೀಕರಣ ಮಾಡಲು ಸರ್ಕಾರ ನಿರ್ಧರಿಸಿದೆ.

ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಮತ್ತು ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುತ್ತಿರುವ ಹೆಬ್ಬಾಳ ಮೇಲ್ಸೇತುವೆಯ ವಿಸ್ತರಿತ ಯೋಜನೆ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ತಿಳಿಸಿದ್ದಾರೆ.

ಬಿಡಿಎ ನೌಕರರ ಸಂಘದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಮಾನನಿಲ್ದಾಣದಿಂದ ಬೆಂಗಳೂರು ನಗರಕ್ಕೆ ಬರುವ ವಾಹನಗಳು ಹೆಚ್ಚಾಗಿರುವುದರಿಂದ ಹೆಬ್ಬಾಳ ಮೇಲ್ಸೇತುವೆ ಸುತ್ತಮುತ್ತ ಸಂಚಾರ ದಟ್ಟಣೆ ಹೆಚ್ಚಾಗಿ ತೊಂದರೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಮಾನನಿಲ್ದಾಣ ಕಡೆಯಿಂದ ನಗರದ ಕಡೆಗೆ ಇರುವ ಮೇಲ್ಸೇತುವೆ ಜೊತೆಗೆ ಇನ್ನೆರಡು ಪಥಗಳನ್ನು ನಿರ್ಮಿಸಲಾಗುತ್ತದೆ ಎಂದರು.

ಈ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಿದ್ದು, ಕೂಡಲೇ ಕಾಮಗಾರಿಯನ್ನು ಆರಂಭಿಸುವಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದು ತಿಳಿಸಿದರು.
ಹಣಕಾಸಿನ ತೊಂದರೆ ಇಲ್ಲ

ಕಳೆದ ಎರಡು ವರ್ಷಗಳ ಹಿಂದೆ ಬಿಡಿಎ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ಭೂ ಕಬಳಿಕೆದಾರರಿಂದ ಬಿಡಿಎ ಆಸ್ತಿಯನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಯನ್ನು ನಡೆಸಿ, ನಿವೇಶನಗಳನ್ನು ಸಾರ್ವಜನಿಕರಿಗೆ ಹರಾಜು ಮೂಲಕ ಹಂಚಿಕೆ ಮಾಡಲಾಗುತ್ತಿದೆ. ಇದರಿಂದ ಸಂಸ್ಥೆಗೆ ಹಣಕಾಸು ಕ್ರೋಢೀಕರಣವಾಗುತ್ತಿದ್ದು, ಪ್ರಸ್ತುತ ಒಂದು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರವಾಗಿದೆ ಎಂದು ಹೇಳಿದರು.

ಬಡವರು ಹಾಗೂ ಬೆಂಗಳೂರು ನಿವಾಸಿಗಳು ನಂಬಿಕೆ ಇಡುವ ರೀತಿಯಲ್ಲಿ ಬಿಡಿಎ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.

ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ರಚನೆ ಸಂಬಂಧ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಸ್ಥೆ ವಹಿಸಿದ್ದರು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಿತಿ ರಚನೆ ಮಾಡಿದ್ದಾರೆ. ಇವರಿಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ ವಿಶ್ವನಾಥ್, ಸದ್ಯದಲ್ಲೇ ಬಿಡಿಎ ನೌಕರರು ಮತ್ತು ಅವರ ಕುಟುಂಬಗಳಿಗೆ ಅನುಕೂಲವಾಗುವಂತೆ ಸಮುದಾಯ ಭವನ ನಿರ್ಮಾಣಕ್ಕೆ ಅನುಮೋದನೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ನಾವು ನಮ್ಮ ಸಂಸ್ಕೃತಿಯನ್ನು ಮರೆತರೆ ದೇಶ, ಭಾಷೆ ಉಳಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಕನ್ನಡದ ಹಬ್ಬವನ್ನು ನವೆಂಬರ್ ತಿಂಗಳಲ್ಲಿ ಮಾತ್ರ ಆಚರಿಸದೇ ನಿತ್ಯೋತ್ಸವದ ರೀತಿಯಲ್ಲಿ ಪ್ರತಿದಿನವೂ ಆಚರಿಸುವಂತಾಗಬೇಕೆಂದು ಹೇಳಿದರು.

ಮಾತೃಭಾಷೆಗೆ ಆದ್ಯತೆ ಇರಲಿ: ಜಗ್ಗೇಶ್
ರಾಜ್ಯಸಭಾ ಸದಸ್ಯ ಮತ್ತು ಚಿತ್ರನಟ ಜಗ್ಗೇಶ್ ಅವರು ಮಾತನಾಡಿ, ಮಾತೃಭಾಷೆಯನ್ನು ಮಕ್ಕಳಿಗೆ ಕಲಿಸುವ ಜವಾಬ್ದಾರಿ ಎಲ್ಲಾ ಪೋಷಕರ ಮೇಲೆ ಇರುತ್ತದೆ. ನಾವು ನಮ್ಮ ಕನ್ನಡ ಭಾಷೆಯನ್ನು ಮೊದಲು ಕಲಿತು ಸಂಪರ್ಕ ಭಾಷೆಯನ್ನಾಗಿ ಇತರೆ ಭಾಷೆಗಳನ್ನು ಕಲಿಯಲು ಅಡ್ಡಿಯಿಲ್ಲ ಎಂದರು.

ಕನ್ನಡೇತರರಿಗೆ ಕನ್ನಡವನ್ನು ಕಲಿಸುವ ಮೂಲಕ ಕನ್ನಡ ಹಬ್ಬವನ್ನು ಆಚರಿಸಬೇಕು. ಈ ಕಾಯಕ ದಿನನಿತ್ಯ ನಡೆಯಬೇಕೆಂದು ಕರೆ ನೀಡಿದರು.

ವಿಶ್ವನಾಥ್ ಗೃಹ ಮಂತ್ರಿ-ಭವಿಷ್ಯ
ಬಿಡಿಎ ಅಧ್ಯಕ್ಷರಾಗಿರುವ ಎಸ್.ಆರ್.ವಿಶ್ವನಾಥ್ ಅವರು ನೇರ ದಿಟ್ಟ ನಡವಳಿಕೆಗೆ ಹೆಸರಾಗಿರುವವರು. ಅವರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಈ ರಾಜ್ಯದ ಗೃಹಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಬಿಡಿಎ ಆಯುಕ್ತ ಜಿ.ಕುಮಾರ ನಾಯಕ ಅವರು ಮಾತನಾಡಿ, ಬಿಡಿಎದಲ್ಲಿ ಸಾರ್ವಜನಿಕರಿಗಾಗಿ ಮಾಡಬೇಕಾದ ಕೆಲಸ ಸಾಕಷ್ಟಿದೆ. ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿ ಕರ್ತವ್ಯ ನಿಭಾಯಿಸಬೇಕೆಂದು ಕರೆ ನೀಡಿದರು.

ಸಮಾರಂಭದಲ್ಲಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ಶಿವಶಂಕರ್, ಶ್ರೀನಿವಾಸ್, ಗೋವಿಂದರಾಜು, ಅಧಿಕಾರಿಗಳಾದ ಧನಂಜಯರೆಡ್ಡಿ, ಶಾಂತರಾಜು, ಶಾಂತರಾಜಣ್ಣ, ಡಾ.ಸೌಜನ್ಯ, ನಂಜುಂಡೇಗೌಡ ಸೇರಿದಂತೆ ಮತ್ತಿತರರು ಇದ್ದರು. ಇದೇ ವೇಳೆ, ವಿಶ್ವವಾಣಿ ಫೌಂಡೇಶನ್ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬಿಡಿಎ ನೌಕರರು ಮತ್ತು ಅವರ ಕುಟುಂಬದ ಸದಸ್ಯರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

Related News

spot_img

Revenue Alerts

spot_img

News

spot_img