20.4 C
Bengaluru
Saturday, June 28, 2025

ಬೆಂಗಳೂರಿನಲ್ಲಿ ಡಬಲ್ ಬೆಡ್‌ರೂಮ್ ಮನೆ ಬಾಡಿಗೆ ಎಷ್ಟಾಗಿದೆ ಗೊತ್ತಾ?

ಬೆಂಗಳೂರು: ಬೆಂಗಳೂರು ಬಹುತೇಕರಿಗೆ ಕೇಳಿದ್ದನ್ನು ಕೊಡುವ ಕಾಮಧೇನು ಕಲ್ಪವೃಕ್ಷ. ಬೆಂಗಳೂರಿನಲ್ಲಿ ಬದುಕಲು ಕಲಿತವರು ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ ಹಲವರಿಗೆ ಇದು ಅವಕಾಶಗಳ ತೊಟ್ಟಿಲು, ಪ್ರತಿನಿತ್ಯವೂ ಬರುವ ಜನರಿಗೆ ಸದಾ ಸ್ವಾಗತಿಸುವ ಊರು.

ರಾಜಧಾನಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ದರ ಕೇಳಿಯೇ ಇತರೆ ಭಾಗಗಳಲ್ಲಿ ಹೌಹಾರುವಂತಿರುತ್ತದೆ. ದೆಹಲಿ, ಮುಂಬೈನಂತಹ ಇತರೆ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ಮನೆ ಬಾಡಿಗೆ ಅಷ್ಟೇನು ದುಬಾರಿ ಅಲ್ಲವಾದರೂ ಸಹ ಇಲ್ಲಿನ ಜನರಿಗೆ ಒಳ್ಳೆಯ ಮನೆಯಲ್ಲಿ ಇರಬೇಕು ಎಂಬುದು ಗಗನ ಕುಸುಮವೇ ಆಗಿರುತ್ತದೆ. ಐಟಿ ಬಿಟಿ ಕ್ರಾಂತಿ ಬಳಿಕೆ ಬೆಂಗಳೂರಿನ ರಿಯಲ್ ಎಸ್ಟೇಟ್ ಗಗನಕ್ಕೆ ಏರಿತು. ಇದು ಕಳೆದ ಸುಮಾರು ಇಪ್ಪತ್ತು ವರ್ಷಗಳೇ ಸಮೀಪಿಸುತ್ತಿವೆ. ಆದರೆ, ಅದರ ಪ್ರಭಾವ ಈಗಲೂ ಬಹುತೇಕ ಮುಂದುವರಿದೇ ಇದೆ. ಕೆಲವರು ಐಷಾರಾಮಿ ಮನೆಗಳಲ್ಲಿ ವಾಸಿಸುತ್ತಿದ್ದು, ಕೆಲವರು ಅಂಗೈ ಅಗಲ ಜಾಗಕ್ಕಾಗಿ ಪರಿತಪಿಸುವುದೂ ನಿತ್ಯ ನಡೆಯುತ್ತಿದೆ.

ಸಾಮಾನ್ಯವಾಗಿ ಒಂದು ಕುಟುಂಬ ವ್ಯಕ್ತಿ ಮತ್ತು ಆತನ ಪತ್ನಿ, ಮಕ್ಕಳು ಮತ್ತು ತಂದೆ ತಾಯಿ ವಾಸಿಸುವುದಕ್ಕೆ ಎಂದರೆ ಸಹಜವಾಗಿ ಎರಡು ಬೆಡ್‌ರೂಮ್‌ನ ಮನೆಯೊಂದನ್ನು ನೋಡುತ್ತಾರೆ. ಈಗ ನೀವು ಬೆಂಗಳೂರಿನಲ್ಲಿ ಎರಡು ಬೆಡ್‌ರೂಮ್‌ನ ಮನೆ ಹುಡುಕುತ್ತಿದ್ದೀರಾ ಎಂದಾದರೆ ಮನೆಗಾಗಿ ನೀವು ಒಂದು ತಿಂಗಳಿಗೆ ಎಷ್ಟು ಖರ್ಚು ಮಾಡಬೇಕಾದೀತು ಎಂಬ ಲೆಕ್ಕಾಚಾರವೂ ಹಾಕಬೇಕಾಗುತ್ತದೆ.

ಎರಡು ಬೆಡ್‌ರೂಮ್ ಬಾಡಿಗೆ ಎಷ್ಟಾಗುತ್ತೆ?
ಬೆಂಗಳೂರು ಬಹಳ ವಿಸ್ತಾರವಾಗಿದೆ. ಒಂದೊಂದು ಏರಿಯಾದಲ್ಲು ಒಂದೊಂದು ದರ ಇದೆ. ನೀವು ವಾಸಿಸುವ ಪ್ರದೇಶ, ಸುತ್ತಮುತ್ತಲಿನ ಸೌಲಭ್ಯಗಳಿಗೆ ಅನುಗುಣವಾಗಿ ಮನೆಯ ಬಾಡಿಗೆ ನಿರ್ಧಾರ ಆಗುತ್ತದೆ.

ಸಾಮಾನ್ಯವಾಗಿ ಜನವಸತಿ ಪ್ರದೇಶಗಳಲ್ಲಿ ನೀವು ಎರಡು ಬೆಡ್‌ರೂಮ್‌ನ ಮನೆ ಹುಡುಕುತ್ತಿದ್ದೀರಾ ಎಂದಾದರೆ ನಿಮ್ಮ ಮಾಸಿಕ ಬಾಡಿಗೆ ಕನಿಷ್ಠ 15,000 ರೂ. ಆಗುತ್ತದೆ ಎಂದಿಟ್ಟುಕೊಳ್ಳಬೇಕು. ಎರಡು ಬೆಡ್‌ರೂಮ್ ಹೊಂದಿರುವ ಮನೆಗಳ ಬಾಡಿಗೆ ಸಾಮಾನ್ಯವಾಗಿ 12,000 ರೂ.ನಿಂದ 15,000 ರೂ.ವರೆಗೆ ನಡೆಯುತ್ತಿದೆ. ಮನೆ ಗ್ರೌಂಡ್‌ಫ್ಲೋರ್‌ನಲ್ಲಿದೆಯೇ, ಮೊದಲನೇ ಮಹಡಿಯಲ್ಲಿದೆಯೇ, ಎರಡು ಅಥವಾ ಮೂರನೇ ಮಹಡಿಯಲ್ಲಿದೆಯೇ ಎಂಬುದರ ಮೇಲೆ ಸ್ವಲ್ಪಮಟ್ಟಿನ ದರಗಳಲ್ಲಿ ವ್ಯತ್ಯಾಸ ಇದ್ದೇ ಇರುತ್ತದೆ. ಗ್ರೌಂಡ್‌ಫ್ಲೋರ್ ಮತ್ತುಮೊದಲನೇ ಮಹಡಿಗೆ ಕೊಂಚ ದರ ಹೆಚ್ಚಾಗಿಯೆ ಇರುತ್ತದೆ. ಹೆಚ್ಚಿನ ಮಹಡಿಗಳನ್ನು ಹತ್ತಬೇಕಾದಷ್ಟೂ ದರ ಸ್ವಲ್ಪ ಮಟ್ಟಿಗೆ ತಗ್ಗುತ್ತದೆ.

ಯಾವ ಏರಿಯಾದಲ್ಲಿ ಎಷ್ಟಿದೆ ದರ?
ಎರಡು ಬೆಡ್‌ರೂಮ್ ಮನೆ ಬೇಕು ಎಂಬ ಉದ್ದೇಶದಿಂದ ಬೆಂಗಳೂರಿನ ಯಾವ ಯಾವ ಪ್ರದೇಶಗಳಲ್ಲಿ ಮನೆ ಬಾಡಿಗೆ ಎಷ್ಟಿದೆ ಎಂದು ಹುಡುಕಾಡಿದಾಗ ಭಿನ್ನ ದರಗಳೇ ಕಂಡುಬರುತ್ತವೆ.

ನೀವು ಕನಕಪುರ ರಸ್ತೆಯಲ್ಲಿ ನೋಡುತ್ತಿದ್ದೀರಿ ಎಂದಾದರೆ, ಎರಡು ಬೆಡ್‌ರೂಮ್ ಮನೆ ಮಾಸಿಕ ಬಾಡಿಗೆ ದರ 15,000 ರೂ., ಜೆ.ಪಿ, ನಗರದಲ್ಲಿ 20,000 ರೂ., ಸಂಜಯನಗರದಲ್ಲಿ 30,000 ರೂ., ಹೆಗ್ಗನಹಳ್ಳಿಯಲ್ಲಿ 15,500 ರೂ., ಯಲಹಂಕದಲ್ಲಿ 16,000 ರೂ., ಪಟ್ಟಣಗೆರೆಯಲ್ಲಿ 13,000 ರೂ., ಯಶವಂತಪುರದಲ್ಲಿ 14,500 ರೂ., ಉತ್ತರಹಳ್ಳಿ ಭಾಗದಲ್ಲಿ 13,000 ರೂ., ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಸುತ್ತಮುತ್ತ 18,000 ರೂ., ಬೆಳ್ಳಂದೂರು 33,000 ರೂ., ಎಲೆಕ್ಟ್ರಾನಿಕ್ ಸಿಟಿ 18,000 ರೂ., ಬೆನ್ಸನ್‌ಟೌನ್ 30,000 ರೂ., ಬಿಟಿಎಂ ಲೇಔಟ್‌ 24,000 ರೂ., ಗಂಗಾನಗರದಲ್ಲಿ 15,000 ರೂ., ವಿಜಯನಗರ ಸುತ್ತಮುತ್ತ 18,000 ರೂ. ವರೆಗೆ ಬಾಡಿಗೆಗಳು ಇವೆ. ಕೋರಮಂಗಲ ಮತ್ತು ಇಂದಿರಾನಗರಗಳಲ್ಲಿ 25,000 ರೂ.ನಿಂದ 35,000 ರೂ.ವರೆಗೂ ಬಾಡಿಗೆಗಳು ನಡೆಯುತ್ತಿವೆ.

ಸುತ್ತಮುತ್ತ ಐಟಿ ಕಂಪೆನಿಗಳು ಇದ್ದರೆ ಅಥವಾ ವಾಣಿಜ್ಯ ಪ್ರದೇಶಗಳು ಇದ್ದರೆ ಸಹಜವಾಗಿಯೇ ದರದಲ್ಲಿ ವ್ಯತ್ಯಾಸ ಇರುತ್ತದೆ. ಇದಲ್ಲದೆ ಮನೆಗೆ ನೀರು, ಲಿಫ್ಟ್‌ಗಳು, ಸೆಕ್ಯೂರಿಟಿ ಹೀಗೆ ನಿರ್ವಹಣೆಗಾಗಿ ಒಂದೆರಡು ಸಾವಿರ ರೂಪಾಯಿ ಹೆಚ್ಚುವರಿಯಾಗಿ ಪಡೆಯಲಾಗುತ್ತದೆ. ಒಂದು ಕುಟುಂಬ ಎರಡು ಬೆಡ್‌ರೂಮ್‌ನ ಉತ್ತಮ ಮನೆಯಲ್ಲಿ ವಾಸಿಸಬೇಕು ಎಂದು ನಿರ್ಧರಿಸಿದರೆ ತಿಂಗಳಿಗೆ ಸರಾಸರಿ 15,000 ರೂ. ಮೀಸಲಿಡಬೇಕಾದುದು ಅನಿವಾರ್ಯವಾಗಿದೆ.

Related News

spot_img

Revenue Alerts

spot_img

News

spot_img