ಕೆಲವರು ಈಗಾಗಲೇ ಚಂದ್ರ ಮತ್ತು ಮಂಗಳನ ಮೇಲೆ ಕಾಲಿಟ್ಟು ಅಲ್ಲಿ ಮನೆ ಕಟ್ಟಿ ವಾಸಿಸಬಹುದೇ ಎಂಬುದರ ಬಗ್ಗೆ ಕಲ್ಪನೆಗಳಲ್ಲಿ ತೊಡಗಿದ್ದಾರೆ. ಆದರೆ ನಾವು ನಮ್ಮ ಸಮುದ್ರಗಳು ಮತ್ತು ಸಾಗರಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಒಳಗೊಳ್ಳಲು ಈಗಷ್ಟೇ ಪ್ರಾರಂಭಿಸಿದ್ದೇವೆ. ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದಾಗಿ ನಾವು ಈಗಾಗಲೇ ಅಲ್ಲಿನ ಜಲರಾಶಿಗಳ ವಿನಾಶಕ್ಕೆ ಕಾರಣರಾಗುತ್ತದ್ದೇವೆ ಎಂಬುದು ನಿಜವೇ ಆದರೂ ಕಡಲ ಪ್ರದೇಶದ ಹೆಚ್ಚಿನ ಭಾಗವು ಬಳಕೆಯಾಗದೆ ಉಳಿದಿದೆ ಎಂಬುದೂ ಸುಳ್ಳಲ್ಲ. ನಾವು ಈ ಅಮೂಲ್ಯ ಸಂಪನ್ಮೂಲವನ್ನು ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ಚಾಣಾಕ್ಷರಾಗಿರಬೇಕು. ಅದರಲ್ಲೂ ವಿಶೇಷವಾಗಿ ನೀರಿನ ಕೆಳಗೆ ಅಥವಾ ಮೇಲೆ ಮನೆಗಳನ್ನು ನಿರ್ಮಿಸುವ ವಿಚಾರಕ್ಕೆ ಬಂದಾಗ. ನೀರಿನ ಮೇಲೆ ತೇಲುವ ಮನೆಗಳು, ವಸಾಹತು ಸ್ಥಾಪಿಸುವ ಕುರಿತು ಈಗಾಗಲೇ ಹಲವಾರು ವಿಚಾರಗಳು ಪ್ರಸ್ತಾಪವಾಗಿವೆ. ಆದರೆ ಇಲ್ಲಿ ಪ್ರಸ್ತುತಪಡಿಸಿರುವ ಹೊಸ ಪರಿಕಲ್ಪನೆಯು ಹೆಚ್ಚು ಸಮರ್ಥನೀಯವಾಗಿದ್ದು, ಸಮುದ್ರದ ಪರಿಸರವನ್ನು ಗೌರವಿಸುವ ಜೊತೆಗೆ ಸಮುದ್ರ ಜೀವಿಗಳಿಗೂ ಸಂಭಾವ್ಯ ಆವಾಸಸ್ಥಾನ ಆಗಬಲ್ಲುದು.
ಪರಿಕಲ್ಪನೆಯು ಖಂಡಿತವಾಗಿಯೂ ಹೆಚ್ಚಿನ ಚಿಂತನೆ ಮತ್ತು ಸಂಪನ್ಮೂಲಗಳನ್ನು ಬಯಸುತ್ತದೆಯಾದರೂ, ಈ ಹೊಸ ಜಲವಾಸಿ ಕಟ್ಟಡಗಳನ್ನು ಸಾಂಪ್ರದಾಯಿಕ ವಸ್ತುಗಳು ಮತ್ತು ವಿಧಾನಗಳನ್ನು ಬಳಸಿ ನಿರ್ಮಿಸಿದರೆ ಹೆಚ್ಚು ಸುಲಭವಾಗುತ್ತದೆ. ನಾವು ನಮ್ಮ ಹೊಸ ಜೀವನವನ್ನು ನಿರ್ಮಿಸುತ್ತಿರುವ ಹೊಸ ಪರಿಸರವನ್ನು ನಾಶಪಡಿಸುವುದು ಎಂದೂ ಇದನ್ನು ಅರ್ಥೈಸಬಹುದು. ಈವರೆಗೆ ನಾವು ಭೂಮಿಯ ಮೇಲೆ ಮಾಡಿದ್ದಕ್ಕಿಂತ ಇದು ಭಿನ್ನವೇನೂ ಅಲ್ಲ. ಆದಾಗ್ಯೂ ಆ ಬಗ್ಗೆ ನಮಗೆ ಈಗಾಗಲೇ ಸಾಕಷ್ಟು ತಿಳಿವಳಿಕೆ ಇದೆ. ಹೀಗಾಗಿ ಈವರೆಗಿನ ನಮ್ಮ ಅನುಭವಗಳನ್ನು ಬಳಸಿಕೊಂಡು ಹೊಸ ಪರಿಸರದಲ್ಲಿ ಹೊಸ ಸುಸ್ಥಿರ ಮಾದರಿ ನಿರ್ಮಿಸಲು ಸಾಧ್ಯವಾಗುತ್ತದೆ.
ಈ ಮಾಡ್ಯುಲರ್ ಕಟ್ಟಡಗಳು ಅಕ್ಷರಶಃ ಪ್ರಾಚೀನ ಕಾಲದ ಮಾದರಿಯನ್ನು ಹೊಂದಿವೆ. ವಿಶಿಷ್ಟವಾದ ಗೇಬಿಯನ್ ಕೇಜ್ನ ತಲೆಕೆಳಗು ಮಾಡಿದ ವಿನ್ಯಾಸ ಇದರದ್ದು. ಗೇಬಿಯನ್ ಕೇಜ್ನಲ್ಲಿ ಸಾಮಾನ್ಯವಾಗಿ ಕಡಿಮೆ ವೆಚ್ಚದ ಅಡಿಪಾಯವನ್ನು ರಚಿಸಲು ಕಲ್ಲು-ಮಣ್ಣುಗಳನ್ನು ತುಂಬಿಸಲಾಗಿರುತ್ತದೆ. ಅದರ ಬದಲಾಗಿ ಈ ಮಾಡ್ಯುಲರ್ ಕಟ್ಟಡಗಳಲ್ಲಿ ಸ್ಥಳೀಯವಾಗಿ ಸಿಗುವ ತೇಲಬಲ್ಲ ರಚನೆಗಳನ್ನು ಬಳಸಲಾಗುತ್ತದೆ. ಸಮತಟ್ಟಾದ ಮುಚ್ಚಿದ ಪಂಜರಗಳನ್ನು ಮರುಬಳಕೆಯ ಪ್ಲಾಸ್ಟಿಕ್ನಿಂದ ತಯಾರಿಸಲಾಗುತ್ತದೆ. ಇದು ಗಟ್ಟಿಮುಟ್ಟಾದ ಮಾಡ್ಯೂಲ್ಗಳನ್ನು ಸಾಗಿಸಲು ಮತ್ತು ನಿರ್ದಿಷ್ಟ ಸ್ಥಳದಲ್ಲಿ ಜೋಡಿಸಲು ಸುಲಭವಾಗುತ್ತದೆ.
ಉಕ್ಕು ಮತ್ತು ಕಾಂಕ್ರೀಟ್ ಅಡಿಪಾಯಗಳಲ್ಲಿ ಬಳಸಲಾಗುವ ವಿಷಕಾರಿ ಬಣ್ಣಗಳನ್ನು ಇಲ್ಲಿ ಬಳಸಲಾಗುವುದಿಲ್ಲ. ಈ ಮಾಡ್ಯೂಲ್ಗಳು ಮೀನು ಮತ್ತು ಕಠಿಣಚರ್ಮಿಗಳಿಗೆ ಹೊಸ ಆವಾಸಸ್ಥಾನಗಳಾಗಿ ಪರಿಣಮಿಸಬಹುದು ಹಾಗೂ ಮೃದ್ವಂಗಿಗಳು ಮತ್ತು ಕಡಲಕಳೆಗಳಿಗೆ ಆಧಾರವಾಗಲೂಬಹುದು. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನೀರ ಮೇಲೆ ನಿರ್ಮಿಸುವ ಆವಾಸಸ್ಥಾನವು ಕೇವಲ ಮನುಷ್ಯರಿಗೆ ಮನೆಗಳಾಗುವುದಲ್ಲದೇ ಸಮುದ್ರ ಜೀವಿಗಳಿಗೂ ಆಧಾರವಾಗುತ್ತವೆ ಮತ್ತು ಆ ಮೂಲಕ ಮಾನವ ಸಮುದಾಯಕ್ಕೆ ಬೆಂಬಲವಾಗಿ ಇರುತ್ತವೆ.
ಮಾಡ್ಯುಲರ್ ಪಂಜರಗಳನ್ನು ತೇಲುವ ಮನೆಗಳಿಂದ ಹಿಡಿದು ಪೂಲ್ಗಳು ಮತ್ತು ಪುಟ್ಟ ಹಬೆ ಸ್ನಾನ ಗೃಹ ನಿರ್ಮಿಸಲೂ ಬಳಸಬಹುದು. ಭೂಮಿಗೆ ಮಾರಕವಾಗುವ ಅಭ್ಯಾಸಗಳ ಮೂಲಕ ನಿರ್ಮಿಸುವ ಭವ್ಯ ಕಟ್ಟಡಗಳಿಗೆ ಪರ್ಯಾಯವಾಗಿ, ಭವಿಷ್ಯದ ತೇಲುವ ಸಮುದಾಯದ ನಿರ್ಮಾಣಕ್ಕೆ ಈ ʻನೀರ ಮೇಲಣ ಭೂಮಿʼ ಪರಿಕಲ್ಪನೆ ನೀಲನಕ್ಷೆಯಾಗಿ ಪರಿಣಮಿಸಬಹುದು. ಇದು ಬೃಹತ್ ಮತ್ತು ಭಾರವಾದ ಕಟ್ಟಡಗಳನ್ನು ತಡೆದುಕೊಳ್ಳುವ ವಿನ್ಯಾಸವಲ್ಲ. ಬದಲಾಗಿ ಚಿಕ್ಕದಾದ, ಹೆಚ್ಚು ಚತುರವಾದ ಮನೆಗಳಾಗಿರುತ್ತವೆ. ಅದರಿಂದಾಗಿ ಅವುಗಳು ನೆಲೆನಿಂತ ಪರಿಸರಕ್ಕೆ ಹೆಚ್ಚು ಪ್ರಾಧಾನ್ಯ ನೀಡುವಂತಿರುತ್ತವೆ.


