
ಬೆಂಗಳೂರು, ಸೆ. 01: ಒಂದು ನಿವೇಶನದ ವಾಸ್ತು ಕೇವಲ ದಿಕ್ಕುಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಆ ನಿವೇಶನದ ಮಣ್ಣಿನ ಗುಣಮಟ್ಟವನ್ನು ಸಹ ಅವಲಂಭಿಸಿರುತ್ತದೆ ಎನ್ನುತ್ತದೆ ವೇದಿಕ್ ವಾಸ್ತು. ಹೀಗಾಗಿ ನಿವೇಶನ ಖರೀದಿ ಮಾಡುವಾಗ ನಿವೇಶನದ ಜಾಗದಲ್ಲಿರುವ ಮಣ್ಣಿನ ಬಣ್ಣ ಮತ್ತು ಗುಣಮಟ್ಟ ಪರೀಕ್ಷಿಸುವುದು ಒಳಿತು. ಯಾಕೆಂದರೆ ವೇದಿಕ್ ವಾಸ್ತುವಿನಲ್ಲಿ ವರ್ಣಾಶ್ರಮ ಪದ್ಧತಿಯಂತೆ ಮಣ್ಣಿನ ಗುಣಮಟ್ಟ ಬಣ್ಣದ ಆಧಾರದ ಮೇಲೆ ವರ್ಗೀಕರಣ ಮಾಡಲಾಗಿದೆ. ತಜ್ಞ ವಾಸ್ತು ಪಂಡಿತರು ನಿವೇಶನ ದಿಕ್ಕಿನ ಜತೆಗೆ ಮಣ್ಣಿನ ಗುಣವನ್ನು ಪರೀಕ್ಷಿಸಿ ವಾಸ್ತು ದೋಷವಿದ್ದರೆ ಅದಕ್ಕೆ ಪರಿಹಾರ ಸೂಚಿಸುತ್ತಾರೆ.
ಅನಾದಿ ಕಾಲದಿಂದಲೂ ಹಿಂದೂ ಸಂಪ್ರದಾಯದಲ್ಲಿ ಜನರನ್ನು ಅವರು ಮಾಡುವ ವೃತ್ತಿ, ಬಣ್ಣದ ಆಧಾರದ ಮೇಲೆ ನಾಲ್ಕು ವರ್ಗಗಳನ್ನಾಗಿ ವಿಗಂಡಿಸಲಾಗಿದೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ವರ್ಗೀಕರಣ ಮಾಡಲಾಗಿದೆ. ವೇದಿಕ್ ವಾಸ್ತುವಿನಲ್ಲಿ ಮಣ್ಣಿನ ಸ್ವಭಾವ, ಗುಣ ಮತ್ತು ಬಣ್ಣದ ಆಧಾರದ ಮೇಲೆ ನಾಲ್ಕು ವರ್ಗದ ಮಣ್ಣು, ಆ ಮಣ್ಣಿರುವ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಮಾಡುವಾಗ ಏನು ಮಾಡಬೇಕು ಎಂಬುದರ ಬಗ್ಗೆ ವಿವರಿಸಲಾಗಿದೆ. ಆರೋಗ್ಯ, ಐಶ್ವರ್ಯ ದೃಷ್ಟಿಯಿಂದ ಕಟ್ಟಡ ಕಚೇರಿ ಕಟ್ಟುವಾಗ ವಾಸ್ತು ನೋಡುವುದು ಸರ್ವೆ ಸಾಮಾನ್ಯ. ಆದ್ರೆ ಈ ವಾಸ್ತು ಕೇವಲ ನಾಲ್ಕು ದಿಕ್ಕುಗಳಿಗೆ ಸೀಮಿತಗೊಳಿಸುವುದು ಸೂಕ್ತವಲ್ಲ. ಆ ನಿವೇಶನದಲ್ಲಿರುವ ಮಣ್ಣು ಕೂಡ ವಾಸ್ತು ದೋಷ, ಒಳಿತನ್ನು ಪ್ರತಿನಿಧಿಸುತ್ತದೆ. ಹೀಗಾಗಿ ವೇದಿಕ್ ವಾಸ್ತುವಿನಲ್ಲಿ ಮಣ್ಣನ್ನು ಕೂಡ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ನಾಲ್ಕು ಭಾಗಗಳಾಗಿ ವರ್ಗೀಕರಣ ಮಾಡಲಾಗಿದೆ ಎಂದು ವೇದಿಕ್ ವಾಸ್ತು ತಜ್ಞ ನಯನ್ ಕುಮಾರ್ ತಿಳಿಸಿದ್ದಾರೆ.
ಎ ವರ್ಗದ ಮಣ್ಣು:
ಬಿಳಿದಾದ, ಕೆಂಪು ಮಿಶ್ರಿತ ಅಥವಾ ಹಳದಿ ಮಣ್ಣು ಇದ್ದು, ಸಿಹಿ ವಾಸನೆ, ಫಲವತ್ತಾದ ಮಣ್ಣು ಇರುವ ನಿವೇಶನ ಆಗಿದ್ದರೆ ಅದನ್ನು ವಾಸಯೋಗ್ಯ ಜಾಗ ಎಂದು ಪರಿಗಣಿಸಲಾಗುತ್ತದೆ. ಇಂತಹ ಬಣ್ಣದ ಮಣ್ಣು ಇರುವ ಜಾಗದಲ್ಲಿ ಕಟ್ಟಡ ನಿರ್ಮಿಸಿದ್ರೆ ಉದ್ಯೋಗ, ವ್ಯಾಪಾರ ಜೋರಾಗಿ ನಡೆಯುತ್ತದೆ. ಯಾವುದೇ ಅಡೆ ತಡೆಗಳಿಲ್ಲದೇ ವಹಿವಾಟು ಸರಾಗವಾಗಿ ನಡೆದುಕೊಂಡು ಹೋಗುತ್ತದೆ.
ಬಿ ವರ್ಗದ ಮಣ್ಣು:
ಒಂದು ನಿವೇಶನದಲ್ಲಿ ಕಪ್ಪು ಮಣ್ಣು ಇದ್ದು, ಕೆಟ್ಟ ವಾಸನೆ ಬರುತ್ತಿದ್ದರೆ, ಅದು ಕಹಿಯಾಗಿದ್ದರೆ ವಾಸಯೋಗಕ್ಕೆ ಸೂಕ್ತವಲ್ಲ. ಮತ್ತು ವಾಣಿಜ್ಯ ಚಟುವಟಿಕೆಗೂ ಅರ್ಹವಲ್ಲ ಎಂದು ವೇದಿಕ್ ವಾಸ್ತು ಶಾಸ್ತ್ರ ಹೇಳುತ್ತದೆ.
ವರ್ಣಾಶ್ರಮ ಆಧಾರದ ಮೇಲೆ ಮಣ್ಣಿನ ವರ್ಗೀಕರಣ ಮತ್ತು ಕಟ್ಟಡ ನಿರ್ಮಾಣ ಫಲ: ಮೇಲೆ ಹೇಳಿದಂತೆ ಮಣ್ಣಿನ ಗುಣ, ಬಣ್ಣ, ವಾಸನೆ ಆಧಾರದ ಮೇಲೆ ವರ್ಣಾಶ್ರಮ ಪದ್ಧತಿಯಂತೆ ನಾಲ್ಕು ಭಾಗಗಳಾಗಿ ವರ್ಗೀಕರಣ ಮಾಡಲಾಗಿದೆ. ಆ ನಾಲ್ಕು ವರ್ಗದ ಮಣ್ಣು , ಆಂತಹ ಮಣ್ಣಿರುವ ಜಾಗದಲ್ಲಿ ಯಾವ ಕಟ್ಟಡ ಕಟ್ಟಬೇಕು. ಅದರಿಂದ ಆಗುವ ಅನುಕೂಲಗಳ ಬಗ್ಗೆ ಈ ಕೆಳಗೆ ವಿವರಿಸಲಾಗಿದೆ.
ಬ್ರಾಹ್ಮಣ ಮಣ್ಣು:
ಒಂದು ಕಟ್ಟಡ ನಿರ್ಮಾಣ ಮಾಡುವ ಉದ್ದೇಶಿತ ಜಾಗದಲ್ಲಿ ಬಿಳಿ ಮಣ್ಣು ಇದ್ದರೆ, ಅದರಿಂದ ಸುಗಂಧ ವಾಸನೆ ಬರುತ್ತಿದ್ದರೆ, ರುಚಿಯಲ್ಲಿ ಸಿಹಿಯಾಗಿದ್ದರೆ ಅಲ್ಲಿ ಕಟ್ಟಡ ನಿರ್ಮಾಣ ಮಾಡುವುದು ಸೂಕ್ತ ಎನ್ನುತ್ತದೆ ವೇದಿಕ್ ವಾಸ್ತು. ಇಂತಹ ಮಣ್ಣು ಇರುವ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿದರೆ, ಎಲ್ಲಾ ರೀತಿಯ ಏಲಿಗೆ,ಸಂತೋಷ, ಅಭಿವೃದ್ಧಿಗೆ ಕಾರಣವಾಗುತ್ತದೆ. ಇದು ವಿಜ್ಞಾನಿಗಳು, ಆಧ್ಮಾತ್ಮಿಕ ಸಾಧಕರಿಗೆ ಅತಿ ಸೂಕ್ತ. ಸಲಹೆಗಾರರು, ಶಿಕ್ಷಣ ಸಂಸ್ಥೆಗಳು, ಸಾಮಾಜಿ ಸಂಸ್ಥೆಗಳು ಈ ಜಾಗದಲ್ಲಿ ನಿರ್ಮಾಣವಾದರೆ ತುಂಬಾ ಶ್ರೇಯಸ್ಸು.
ಕ್ಷತ್ರಿಯ ಮಣ್ಣು:
ಕಟ್ಟಡ ನಿರ್ಮಾಣ ಉದ್ದೇಶಿತ ನಿವೇಶನ ಅಥವಾ ಜಾಗದಲ್ಲಿ ಕೆಂಪು ಮಣ್ಣು ಇದ್ದರೆ, ಅದು ರಕ್ತದಂತೆ ವಾಸನೆ ಬರುವಂತಿದ್ದರೆ, ಕಹಿಯಾಗಿದ್ದರೆ ಅದನ್ನು ಕ್ಷತ್ರಿಯ ವರ್ಗದ ಮಣ್ಣು ಎಂದು ವರ್ಗೀಕರಿಸಲಾಗುತ್ತದೆ. ಇದು ಪ್ರಭಾವ, ಹೆಸರು ಮತ್ತು ಕೀರ್ತಿ ಗಳಿಸಲು, ಬಲ ತಂದುಕೊಡುವ ಮಣ್ಣು ಆಗಿರುತ್ತದೆ. ಈ ಮಣ್ಣು ಇರುವ ಜಾಗಗಳಲ್ಲಿ ಮಿಲಟರಿ ಕಟ್ಟಡ, ಪೊಲೀಸ್, ರಾಜಕಾರಣಿಗಳು ಮತ್ತು ಆಡಳಿತಗಾರರಿಗೆ ಸರಿ ಹೊಂದುತ್ತದೆ. ಈ ಜಾಗದಲ್ಲಿ ಕಂಟೋನ್ಮೆಂಟ್, ಸರ್ಕಾರಿ ಕಚೇರಿಗಳು, ಡಿಸ್ಟಿಲರಿ, ಶಸ್ತಾಸ್ತ್ರ ತಯಾರಿಕೆ, ಸಿಡಿ ಮದ್ದು ತಯಾರಿಕೆ, ಕೈಗಾರಿಕೆ, ಬೆಂಕಿ ಪಟ್ಟಣ ತಯಾರಿಕೆ, ಪಟಾಕಿ ತಯಾರಿಕೆ ಕಾರ್ಖಾನೆ, ಶಾಪ್, ಕೋರ್ಟ್, ರಕ್ಷಣಾ ಕಚೇರಿ ತೆಗೆಯುವುದು ಸೂಕ್ತ ಎನ್ನುತ್ತದೆ ವೇದಿಕ್ ವಾಸ್ತು ಶಾಸ್ತ್ರ.
ವೈಶ್ಯ ವರ್ಗದ ಮಣ್ಣು:
ಹಸಿರು ಮತ್ತು ಹಳದಿ ಬಣ್ಣವಿರುವ ಮಣ್ಣಾಗಿದ್ದು ಕಾಳುಗಳ ರೀತಿ ವಾಸನೆ ಬರುತ್ತಿದ್ದರೆ, ಹುಳಿಯಾದ ರುಚಿ ಇದ್ದರೆ ಅದನ್ನು ವೈಶ್ಯ ವರ್ಗದ ಮಣ್ಣು ಎಂದು ಪರಿಗಣಿಸಲಾಗುತ್ತದೆ. ಈ ಮಣ್ಣಿರುವ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವುದರಿಂದ ಸಂಪತ್ತು ಮತ್ತು ಅಭಿವೃದ್ಧಿ ತಂದು ಕೊಡುತ್ತದೆ. ಇದು ವ್ಯಾಪಾರಿಗಳಿಗೆ ಮತ್ತು ಉದ್ಯಮಿಗಳಿಗೆ ಸೂಕ್ತ. ಅದೇ ರೀತಿ ವೃತ್ತಿನಿರತರಿಗೆ ಹಾಗೂ ಕೈಗಾರಿಕೊದ್ಯಮಗಳಿಗೆ ಭಾರೀ ಒಳಿತು ಆಗುತ್ತದೆ. ಶಾಪ್, ಬ್ಯಾಂಕ್, ವಾಣಿಜ್ಯ ಕಟ್ಟಡಗಳು,ಕೈಗಾರಿಕೆ, ಶಾಪಿಂಗ್ ಸೆಂಟರ್, ಎಲ್ಲಾ ರೀತಿಯ ವ್ಯಾಪಾರಗಳಗೆ ಈ ಮಣ್ಣು ಇರುವ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವುದು ಸೂಕ್ತ ಎಂದು ವೇದಿಕ್ ವಾಸ್ತು ವಿವರಿಸುತ್ತದೆ.
ಶೂದ್ರ ವರ್ಗದ ಮಣ್ಣು:
ಕಪ್ಪು ಮಣ್ಣು, ಕೆಟ್ಟ ವಾಸನೆ, ಕಹಿಯಾಗಿದ್ದರೆ ಅದನ್ನು ಶೂದ್ರ ವರ್ಗದ ಮಣ್ಣು ಎಂದು ವಾಸ್ತು ಶಾಸ್ತ್ರದಲ್ಲಿ ವರ್ಗೀಕರಿಸಲಾಗಿದೆ. ಇದು ಕಾರ್ಮಿಕ ವರ್ಗಕ್ಕೆ ಸರಿ ಹೊಂದುತ್ತದೆ. ಬಾರ್, ಮಾಂಸದ ಅಂಗಡಿ, ಕ್ಯಾಸಿನೋ, ಪೆಟ್ರೋಲ್ ಪಂಪ್, ರಾಸಾಯನಿಕ ಕಾರ್ಖಾನೆ, ಫರ್ನೀಚರ್, ಸಾನಿಟೆರಿ, ಹಾರ್ಡ್ ವೇರ್, ಜಿಮ್, ಆರೋಗ್ಯ ಕ್ಲಬ್, ಬಿಲ್ಡಿಂಗ್ ಮೆಟೀರಿಯಲ್, ಟೈಲರಿಂಗ್, ವೀವಿಂಗ್, ಗಾರ್ಮೆಂಟ್, ಮೆಡಿಕಲ್ ಸ್ಟೋರ್ ಫಾರ್ಮಟಿಕಲ್ ಕಾರ್ಖಾನೆ ಮಾಡಬಹದು. ಇದು ವಾಸಯೊಗ್ಯಕ್ಕೆ ಅಷ್ಟು ಸೂಕ್ತವಲ್ಲ ಎಂದು ನಂಬಲಾಗಿದೆ.



