ಮನೆ, ಆಸ್ತಿ ಖರೀದಿಗೂ ಮುನ್ನ ಕೇಳಬೇಕಾದ 7 ಪ್ರಶ್ನೆಗಳೇನು?

0
118

ವ್ಯಕ್ತಿಯೊಬ್ಬ ಜೀವನದಲ್ಲಿ ಅತಿ ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವುದು ಸ್ವಂತ ಮನೆಗೆ. ಈಗ ನಗರ ಪ್ರದೇಶಗಳಲ್ಲಿ ವಾಸಿಸುವವರು ಅಪಾರ್ಟ್‌ಮೆಂಟ್‌ ಅಥವಾ ವಿಲ್ಲಾ ಖರೀದಿ ಮಾಡುವಾಗ ಸೂಕ್ತ ಮನೆ ಹುಡುಕಾಟಕ್ಕೆ ಸಾಕಷ್ಟು ಸಮಯ ಹಾಗೂ ಶಕ್ತಿ ವ್ಯಯ ಮಾಡುತ್ತಾರೆ. ಒಂದು ವೇಳೆ ಯಾವುದಾದರೂ ಮನೆ ಇಷ್ಟವಾದಲ್ಲಿ ಅದನ್ನು ಕೊಂಡುಕೊಳ್ಳುವ ಮೊದಲು ಅದರ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆದಿರಬೇಕು. ಸುತ್ತಮುತ್ತ ಪ್ರದೇಶ ಸೇರಿದಂತೆ ಎಲ್ಲಾ ಮಾಹಿತಿಯನ್ನು ಕೇಳಿ ತಿಳಿದುಕೊಳ್ಳುವುದು ವ್ಯವಹಾರ ಜಾಣ್ಮೆ. ಒಂದಷ್ಟು ಪತ್ತೇದಾರಿ ಕೆಲಸದ ಮೂಲಕ ಮನದಲ್ಲಿರುವ ಕೆಲ ಪ್ರಶ್ನೆಗಳನ್ನು ಪರಿಹರಿಸಿಕೊಳ್ಳುವುದು ಉತ್ತಮ. ಆಗ ಮನೆ ಖರೀದಿ ನಂತರ ಯಾವುದೇ ಸಂದೇಹಗಳು ಮನಸ್ಸಿನಲ್ಲಿರುವುದಿಲ್ಲ.

ಮನೆ ಅಥವಾ ಅಪಾರ್ಟ್‌ಮೆಂಟ್‌ನ ಮಾಲೀಕ ಅಥವಾ ಮಾರಾಟಗಾರ, ಅವರ ಕಡೆಯ ಏಜೆಂಟ್‌ ಜೊತೆಗೆ ಮಾತುಕತೆ ಹಾಗೂ ಆಸ್ತಿ ಕುರಿತಾದ ಹಳೆ ದಾಖಲೆಗಳನ್ನು ಪರಿಶೀಲಿಸಿ ನಾವು ನಿರ್ಧಾರ ಕೈಗೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಆ ಪ್ರಾಂತದ ಆಸ್ತಿಯ ಅಂದಾಜುಗಾರ ಅಥವಾ ಮೌಲ್ಯಮಾಪಕರನ್ನು ಸಂಪರ್ಕಿಸುವುದು ಉತ್ತಮ. ಖರೀದಿ ಸಂದರ್ಭದಲ್ಲಿ ಮನೆ ಮಾರಾಟ ಮಾಡುವ ವ್ಯಕ್ತಿಗೆ ಕೇಳಬೇಕಾದ 10 ಪ್ರಶ್ನೆಗಳು ಇಲ್ಲಿವೆ.

ಯಾಕೆ ಮಾರಾಟ ಮಾಡುತ್ತಿದ್ದೀರಿ?
ವ್ಯಕ್ತಿ ತಾನಿರುವ ಪ್ರದೇಶದಿಂದ ಮತ್ತೊಂದು ಸ್ಥಳಕ್ಕೆ ತೆರಳಲು ನಾನಾ ಕಾರಣಗಳಿರುತ್ತವೆ. ಕೆಲಸದ ಸ್ಥಳದಲ್ಲಿ ವರ್ಗಾವಣೆ, ಸಣ್ಣ ಅಥವಾ ದೊಡ್ಡ ಮನೆಗೆ ಸ್ಥಳಾಂತರ, ಮದುವೆ, ಮಕ್ಕಳ ಜನನ, ಪತಿ/ಪತ್ನಿ ನಿಧನ, ನಿವೃತ್ತಿಯಂತಹ ಸಂದರ್ಭದಲ್ಲಿ ಜನರು ತಾವು ವಾಸವಿರುವ ಮನೆಯನ್ನು ಮಾರಾಟ ಮಾಡಿ ಬೇರೆ ಜಾಗಕ್ಕೆ ತೆರಳುವ ಸಾಧ್ಯತೆಗಳಿರುತ್ತವೆ. ಒಂದು ವೇಳೆ ಮಾರಾಟಗಾರನ ಉತ್ತರದಿಂದ ಸಮಾಧಾನವಾಗದಿದ್ದಲ್ಲಿ ನಿರ್ಧಾರದಿಂದ ಹಿಂದೆ ಸರಿಯಲು ಇದು ನೆರವಾಗಬಹುದು. ಹಾಗೇ ಆ ಆಸ್ತಿ ನಮಗೆ ಖರೀದಿ ಮಾಡಲು ಪ್ರಶಸ್ತವಾಗಿದೆ, ಬೆಲೆ ಕೊಂಚ ಹೆಚ್ಚಾಯಿತೆಂದು ಎನಿಸಿದ್ದಲ್ಲಿ ಬೆಲೆಯಲ್ಲಿ ಚರ್ಚೆ ನಡೆಸಲು ಸಮಾಯಾವಕಾಶ ದೊರೆತೀತು.

ಮಾರುಕಟ್ಟೆಯಲ್ಲಿ ಆ ಆಸ್ತಿಯ ಬೆಲೆ ಹೇಗೆ?
ಒಂದು ವೇಳೆ ಖರೀದಿ ಮಾಡಬಯಸುವ ಮನೆ ಹಳೆಯದು ಹಾಗೂ ಸಮರ್ಪಕವಾಗಿರದಿದ್ದಲ್ಲಿ ಮಾರುಕಟ್ಟೆಯಲ್ಲಿ ತುಂಬಾ ಸಮಯಗಳಿಂದ ಅದಕ್ಕೆ ಬೇಡಿಕೆಯಿಲ್ಲದಿರಬಹುದು. ಒಂದು ವೇಳೆ ತುಂಬ ಸಮಯಗಳಿಂದ ಅದು ಹಾಗೇ ಮಾರಾಟವಾಗದೇ ಇದ್ದಲ್ಲಿ ಮಾರಾಟಗಾರನು ಅದರ ಮಾರಾಟಕ್ಕೆ ಹೆಚ್ಚು ಆಸಕ್ತಿ ಹಾಗೂ ಕಡಿಮೆ ಬೆಲೆಗೆ ಮಾತುಕತೆಗೆ ಮುಂದುವರಿಯಬಹುದು.

ಈ ಹಿಂದೆ ಅದರ ಬೆಲೆ ಎಷ್ಟಿತ್ತು?
ಈ ಹಿಂದೆ ಆ ಮನೆ ಅಥವಾ ಆಸ್ತಿಯನ್ನು ಖರೀದಿ ಮಾಡಿದಾಗ ಅದರ ಬೆಲೆ ಹೇಗಿತ್ತು ಎಂದು ತಿಳಿಯುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಆ ಮನೆಯ ಮೌಲ್ಯ ಹೆಚ್ಚು ಅಥವಾ ಕಡಿಮೆಯಾಗಿದ್ದರೆ ಮಾಹಿತಿ ಸಿಗುತ್ತದೆ. ಎರಡನೆಯದಾಗಿ ಅವರು ಅದರ ಮಾರಾಟದ ಬೆಲೆ ಕಡಿಮೆ ಮಾಡಲು ಎಷ್ಟು ಸಿದ್ಧರಿದ್ದಾರೆ ಎಂಬುದನ್ನು ತಿಳಿಸುತ್ತದೆ. ಒಂದು ವೇಳೆ ಅವರು ತಾವು ಖರೀದಿ ಮಾಡಿದ್ದಕ್ಕಿಂತ ಹೆಚ್ಚು ಮೊತ್ತಕ್ಕೆ ಮಾರಾಟ ಮಾಡಲು ಬಯಸಿದರೆ ಚರ್ಚೆ ನಡೆಸಲು ಸಿದ್ಧರಿದ್ದಾರೆ ಎಂದುಕೊಳ್ಳಬಹುದು. ಹಾಗೆ ತಾವು ಕೊಂಡ ಬೆಲೆ ಅಥವಾ ಕೊಂಚ ಏರಿಸಿದ್ದರೆ ಅವರು ಯಾವ ಕಾರಣಕ್ಕೂ ಕಡಿಮೆ ಬೆಲೆಗೆ ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಯುತ್ತದೆ. ಒಂದು ವೇಳೆ ಮಾಲೀಕರು ತಾವು ಕೊಂಡುಕೊಂಡ ಬೆಲೆಯನ್ನು ತಿಳಿಸದಿದ್ದರೂ, ಆ ಮನೆ ಅಥವಾ ಆಸ್ತಿ ಹೊಂದಿರುವ ಪ್ರದೇಶದ ಕ್ರಯ ದಸ್ತಾವೇಜು ಕಚೇರಿಯಲ್ಲಿ ವಿವರಗಳು ಲಭ್ಯವಿರುತ್ತದೆ.

ಆಸ್ತಿಯಲ್ಲಿ ಏನೇನು ಸೇರಿವೆ?
ನಲ್ಲಿ, ವಿಂಡೋ ಬ್ಲೈಂಡ್‌ ಮೊದಲಾದವುಗಳನ್ನು ಕಾನೂನಿನ ದೃಷ್ಟಿಯಲ್ಲಿ ಮನೆಗೆ ಸಂಬಂಧಿಸಿದ ನೆಲೆಗೊಳಿಸಿದ ವಸ್ತುಗಳೆಂದು ಪರಿಗಣಿಸಲಾಗುತ್ತದೆ. ಇವುಗಳನ್ನು ಮನೆ ಮಾರಾಟದ ಒಪ್ಪಂದದಲ್ಲಿ ಸೇರಿಸಲಾಗುತ್ತದೆ. ಸಹಿ ಹಾಕುವಾಗ ಸಂದರ್ಭದಲ್ಲಿ ಒಪ್ಪಂದದಲ್ಲಿ ಏನು ಒಳಗೊಂಡಿರುತ್ತದೆ ಅಥವಾ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಹಾಗೇ ಅದನ್ನು ಲಿಖಿತ ರೂಪದಲ್ಲಿ ಬರೆಸಿ ಸಹಿ ಮಾಡಿಕೊಳ್ಳಬೇಕು.

ರಿಯಲ್‌ ಎಸ್ಟೇಟ್‌ ಮಾರ್ಕೆಟ್‌ನಲ್ಲಿ ಲೈಟ್‌ಗಳು ದುಬಾರಿ ಆಗಿರುವುದರಿಂದ ಅವುಗಳನ್ನು ಮನೆಯ ಭಾಗವೆಂದು ಪರಿಗಣಿಸಲಾಗುತ್ತದೆ. ಕ್ರಯದ ಸಂದರ್ಭದಲ್ಲಿಯೇ ಇದನ್ನು ಸ್ಪಷ್ಟಪಡಿಸಿಕೊಳ್ಳಬೇಕು.

ನೆರೆಹೊರೆ ಕಿರಿಕಿರಿ ಅಥವಾ ಶಬ್ದಮಾಲಿನ್ಯ ಇದೆಯೇ?
ಸಮುದಾಯ ರಸ್ತೆ, ಸದಾ ಟ್ರಾಫಿಕ್‌ನಿಂದ ತುಂಬಿರುವ ರಸ್ತೆಗಳು, ರಾತ್ರಿ ಹಗಲು ಬೊಗಳುತ್ತಲೇ ಇರುವ ನಾಯಿ, ಅಪರಾಧ ಘಟನೆಗಳು, ಸಿಗರೇಟ್‌ ಹೊಗೆ, ಕಳಪೆ ನಿರ್ವಹಣೆ, ಉಗುಳುವುದು ಇಂತಹ ಅನೇಕ ಸಮಸ್ಯೆಗಳು ಖರೀದಿ ಮಾಡುವ ಮನೆಯಲ್ಲಿ ಇರಬಹುದು. ವಿಚಾರಣೆ ಮಾಡಿ ನಿರ್ಧರಿಸಬೇಕು. ನೆರೆಹೊರೆ ಬಗ್ಗೆ ವಿಚಾರಿಸಿದಾಗ ಮಾರಾಟಗಾರ/ಮಾಲೀಕನಿಂದ ಸಮರ್ಪಕ ಉತ್ತರ ದೊರೆಯದಿದ್ದಾಗ ಹತ್ತಿರದ ಪೊಲೀಸ್‌ ಠಾಣೆಯಲ್ಲಿ ವಿಚಾರಿಸುದೊಳಿತು.

ಏನಾದರೂ ಸಮಸ್ಯೆಗಳಿವೆಯೇ?
ಸದ್ಯದ ಮನೆಯ ಸ್ಥಿತಿಯ ಬಗ್ಗೆ ಮಾಲೀಕನಿಂದ ವಿವರ ಪಡೆದುಕೊಂಡರೆ ಭವಿಷ್ಯದಲ್ಲಿ ಕಾಡುವ ತೊಂದರೆಗಳಿಗೆ ಕಾನೂನು ಲಾಭ ಪಡೆಯಬಹುದು. ಆಸ್ತಿ ವಿವಾದ, ಪ್ರವಾಹ ಮುಳುಗಡೆಯಂತಹ ಸಮಸ್ಯೆಗಳಿದ್ದರೆ ಅಗತ್ಯವಾಗಿ ಮಾಲೀಕ ಗ್ರಾಹಕನಿಗೆ ತಿಳಿಸಬೇಕು.

ಮನೆಯ ರಿಪೇರಿ ಮಾಹಿತಿ ಪಡೆದಿದ್ದೇವೆಯೇ?
ಮನೆ ಕಟ್ಟಿದ ವರ್ಷ, ದುರಸ್ತಿ ಮಾಡಿದ ಬಗ್ಗೆ, ರೂಫಿಂಗ್‌, ನೆಲಹಾಸು ಮೊದಲಾದವುಗಳ ಬಗ್ಗೆ ಮಾಹಿತಿ ಪಡೆಯಬೇಕು. ಒಂದು ವೇಳೆ ಮನೆ 15 ವರ್ಷ ಹಳೆದಾಗಿದ್ದರೆ ಕೆಲವು ದುರಸ್ತಿ ಖರ್ಚುಗಳು ಬೀಳಬಹುದು. ವಾಟರ್‌ ಹೀಟರ್‌, ನೀರಿನ ಕೊಳವೆ, ವಿದ್ಯುತ್‌ ವ್ಯವಸ್ಥೆಗಳ ಬಗ್ಗೆ ತಿಳಿದುಕೊಳ್ಳಬೇಕು. ಮನೆಗೆ ಯಾವುದೇ ನವೀಕರಣ, ದುರಸ್ತಿ ಮಾಡಲಾಗಿದೆಯೇ? ಅದನ್ನು ಮಾಡಿದ ಗುತ್ತಿಗೆದಾರ ಅಥವಾ ಎಂಜಿನಿಯರ್‌ ಯಾರು ಎಂದು ವಿವರ ಪಡೆದಿರಬೇಕು.