ಬೆಂಗಳೂರು ರಿಯಲ್ ಎಸ್ಟೇಟ್‌: 1,300 ಕೋಟಿ ರೂ. ಬ್ಲ್ಯಾಕ್ ಮನಿ ಪತ್ತೆ

0
76

ರಿಯಲ್ ಎಸ್ಟೇಟ್‌ ವ್ಯವಹಾರಕ್ಕೂ, ಕಪ್ಪು ಹಣಕ್ಕೂ ಬಿಡುಗಡೆ ಇಲ್ಲದ ನಂಟು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆದಾಯ ತೆರಿಗೆ ಇಲಾಖೆಯು ಬೆಂಗಳೂರು, ಮುಂಬೈ ಮತ್ತು ಗೋವಾದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಸಂಬಂಧಿಸಿದ 50 ಸ್ಥಳಗಳ ಮೇಲೆ ದಾಳಿ ನಡೆಸಿದಾಗ 1,300 ಕೋಟಿ ರೂಪಾಯಿಗೂ ಹೆಚ್ಚು ಲೆಕ್ಕವಿಲ್ಲದ ಹಣವನ್ನು ಪತ್ತೆ ಮಾಡಿದೆ ಎಂದು ತಿಳಿಸಿದೆ.

ಇದಲ್ಲದೆ, ನಗದು ಮತ್ತು ಚಿನ್ನಾಭರಣಗಳ ರೂಪದಲ್ಲಿ 24 ಕೋಟಿ ರೂಪಾಯಿ ಮೌಲ್ಯದ ಅಘೋಷಿತ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.

ಐಟಿ ಇಲಾಖೆಯು ಅಕ್ಟೋಬರ್ 20 ಮತ್ತು ನವೆಂಬರ್ 2ರಂದು ಬೆಂಗಳೂರಿನ ವಿವಿಧ ರಿಯಲ್ ಎಸ್ಟೇಟ್ ಡೆವಲಪರ್‌ಗಳ ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಇಲಾಖೆಯ ಪ್ರಕಾರ ಮಾರಾಟ ಒಪ್ಪಂದಗಳು, ಅಭಿವೃದ್ಧಿ ಒಪ್ಪಂದಗಳು ಮತ್ತು ಆಕ್ಯುಪೆನ್ಸಿ ಪ್ರಮಾಣ ಪತ್ರಗಳಿಗೆ (OCs) ಸಂಬಂಧಿಸಿದ ದಾಖಲೆಗಳು ಮತ್ತು ಡಿಜಿಟಲ್ ರೂಪದಲ್ಲಿದ್ದ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ದೊಡ್ಡ ಪ್ರಮಾಣದ ವ್ಯತ್ಯಾಸಗಳು ನಡೆದಿರುವುದು ಕಂಡು ಬಂದಿದೆ.

ಯಾವುದೇ ಕಟ್ಟಡಕ್ಕೆ ವಾಸ ಯೋಗ್ಯ ಎಂದು ಅಧಿಕಾರಿಗಳು ಒಸಿಗಳನ್ನು (ಆಕ್ಯುಪೆನ್ಸಿ ಸರ್ಟಿಫಿಕೇಟ್) ನೀಡಿದ ನಂತರವೂ ಭೂ ಮಾಲೀಕರು ಜೆಡಿಎಗಳ ಮೂಲಕ ವಿವಿಧ ಡೆವಲಪರ್‌ಗಳಿಗೆ ಅಭಿವೃದ್ಧಿಗಾಗಿ ಭೂಮಿಯನ್ನು ಹಸ್ತಾಂತರಿಸುವ ಮೂಲಕ ಬಂಡವಾಳ ಗಳಿಕೆಯಿಂದ ಬಂದ ಆದಾಯವನ್ನು ಬಹಿರಂಗಪಡಿಸಿಲ್ಲ ಎಂದು ದಾಖಲೆಗಳ ಪರಿಶೀಲನೆ ವೇಳೆ ಪತ್ತೆಯಾಗಿದ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಭೂಮಾಲೀಕರು ಸ್ವಾಧೀನದ ವೆಚ್ಚ ಮತ್ತು ಇತರ ವಿವಿಧ ವೆಚ್ಚಗಳನ್ನು ಕೃತಕವಾಗಿ ಹೆಚ್ಚಿಸುವ ಮೂಲಕ ಮತ್ತು ಭೂಮಿಯ ವರ್ಗಾವಣೆಯ ಮೇಲಿನ ಪರಿಗಣನೆಯ ಸಂಪೂರ್ಣ ಮೌಲ್ಯವನ್ನು ಬಹಿರಂಗಪಡಿಸದ ಮೂಲಕ ವಿವಿಧ ವರ್ಷಗಳವರೆಗೆ ಬಂಡವಾಳದ ಲಾಭದಿಂದ ಆದಾಯವನ್ನು ನಿಯಂತ್ರಿಸಿದ್ದಾರೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ತಿಳಿಸಿದೆ.

ಕೆಲವು ಭೂಮಾಲೀಕರು ಹಲವು ವರ್ಷಗಳ ಕಾಲ ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಿಲ್ಲ. ಅಲ್ಲಿ ಬಂಡವಾಳ ಲಾಭದ ಆದಾಯವು ಅವರಿಗೆ ಸೇರಿದೆ. ಈ ಬಗ್ಗೆ ಖುದ್ದು ವಿಚಾರಣೆ ನಡೆಸಿದಾಗ ಅನೇಕರು ಇದನ್ನು ಒಪ್ಪಿಕೊಂಡಿದ್ದಾರೆ. ತಮ್ಮ ಪ್ರಕರಣಗಳಲ್ಲಿ ಪತ್ತೆಯಾದ ಬಂಡವಾಳ ಲಾಭಗಳ ಆದಾಯವನ್ನು ಬಹಿರಂಗಪಡಿಸಲು ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ, ಅವರು ಬಾಕಿ ತೆರಿಗೆಯನ್ನು ಪಾವತಿಸಲು ಸಮ್ಮತಿಸಿದ್ದಾರೆ ಎಂದು ಸಿಬಿಡಿಟಿ ಹೇಳಿದೆ.