Revenue Facts

ಜಗತ್ತಿನ ಅತ್ಯಂತ ಐಷಾರಾಮಿ ನಗರಗಳ ಪಟ್ಟಿ ರಿಲೀಸ್

ಬೆಂಗಳೂರು, ಜೂ. 21 : ಕೋಟ್ಯಾಧಿಪತಿಗಳು ಯಾವಾಗಲು ಐಷಾರಾಮಿ ನಗರಗಳಲ್ಲಿ ವಾಸ ಮಾಡಲು ಬಯಸುತ್ತಾರೆ. ತಮ್ಮ ತಮ್ಮ ಸ್ಟೇಟಸ್ ಗೆ ತಕ್ಕ ಹಾಗೆ ಎಲ್ಲವೂ ಇರಲಿ ಎಂದು ಐಷಾರಾಮಿ ನಗರಗಳನ್ನು ನೋಡುತ್ತಿರುತ್ತಾರೆ. ಬೆಂಗಳೂರಿನಲ್ಲಿ ಡಾಲರ್ಸ್ ಕಾಲೋನಿ, ಸದಾಶಿವ ನಗರ, ಕೋರಮಂಗಲದಂತಹ ಏರಿಯಾಗಳು ಹೇಗೆ ಐಷಾರಾಮಿ ಆಗಿದ್ದಾವೆಯೋ ಅದರಂತೆಯೇ ಈಗ ಕೆಲ ಐಷಾರಾಮಿ ನಗರಗಳ ಪಟ್ಟಿಯೂ ಬಿಡುಗಡೆಯಾಗಿದೆ. ಜಗತ್ತಿನಲ್ಲಿನ ಲಕ್ಷಾಂತರ ನಗರಗಳ ನಡುವೆ 25ನಗರಗಳನ್ನು ಐಷಾರಾಮಿ ನಗರ ಎಂದು ಗುರುತಿಸಲಾಗಿದೆ.

ಸ್ವಿಸ್ ವೆಲ್ತ್ ಮ್ಯಾನೇಜರ್ ಜೂಲಿಯಸ್ ಬೇರ್ ಗ್ರೂಪ್ ಲಿಮಿಟೆಡ್ ಎಂಬ ಸಂಸ್ಥೆ ಐಷಾರಾಮಿ ಜೀವನ ನಡೆಸಲು ಯೋಗ್ಯವಾಗಿರುವಂತಹ ಅತ್ಯಂತ ದುಬಾರಿ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ವಸತಿ ಸಮುಚ್ಛಯ, ರಸ್ತೆ, ಮನೆಗಳು, ಕಾರುಗಳು, ಬ್ಯುಸಿನೆಸ್ ಕ್ಲಾಸ್ ವಿಮಾನಗಳು, ಬ್ಯುಸಿನೆಸ್ ಸ್ಕೂಲ್ ಗಳು, ಆಹಾರ, ಆಸ್ಪತ್ರೆ ಸೇರಿದಂತೆ ಹಲವು ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಇದೆಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಈ ಪಟ್ಟಿಯನ್ನು ತಯಾರಿಸಲಾಗಿದೆ.

ಸಂಸ್ಥೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಏಷ್ಯಾ ಖಂಡವೇ ಅತ್ಯಂತ ದುಬಾರಿಯಾಗಿದ್ದು, ನಾಲ್ಕು ವರ್ಷಗಳಿಂದ ಏಷ್ಯಾ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಇದರಲ್ಲಿ ಮೊದಲನೇಯ ಸ್ಥಾನವನ್ನು ಏಷ್ಯಾದ ಸಿಂಗಾಪುರ ಪಡೆದುಕೊಂಡಿದೆ. ಸಿಂಗಾಪುರ ವಿಶ್ವದ ಅತ್ಯಂತ ದುಬಾರಿ ನಗರವಾಗಿ ಹೊರಹೊಮ್ಮಿದೆ. ಇನ್ನು ಶಾಂಘಾಯ್ ನಗರವೂ ಎರಡನೇ ಸ್ಥಾನದಲ್ಲಿದ್ದರೆ, ಹಾಂಗ್ ಕಾಂಗ್ ನಗರವು ಮೂರನೇ ಸ್ಥಾನದಲ್ಲಿದೆ.

ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದ ಲಂಡನ್ ಈ ಬಾರಿ ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ಐದನೇ ಸ್ಥಾನವನ್ನು ನ್ಯೂಯಾರ್ಕ್ ತನ್ನದಾಗಿಸಿಕೊಂಡಿದೆ. ಕಳೆದ ಬಾರಿ ನ್ಯೂಯಾರ್ಕ್ ನಗರವು 11ನೇ ಸ್ಥಾನದಲ್ಲಿತ್ತು. ದುಬೈ ಟಾಪ್ 10ನೇ ಸ್ಥಾನದಲ್ಲಿದ್ದರೆ, ಯೂರೋಪ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ದೇಶಗಳು ಐಷಾರಾಮಿ ನಗರಗಳ ಪಟ್ಟಿ ಸೇರಿವೆ. ಈ ಮೂಲಕ ಜಗತ್ತಿನ ಅತ್ಯಂತ ದುಬಾರಿ ಹಾಗೂ ಐಷಾರಾಮಿ ನಗರಗಳನ್ನು ಗುರುತಿಸಲಾಗಿದೆ.

Exit mobile version