vastu : ಬೆಂಗಳೂರು, ಜ. 10 : ಅಡುಗೆ ಮನೆಯ ವಾಸ್ತು ಹೇಗಿರಬೇಕು..? ಯಾವ ದಿಕ್ಕಿನಲ್ಲಿ ಅಡುಗೆ ಮನೆ ಇದ್ದರೆ, ಕುಟುಂಬಕ್ಕೆ ಒಳ್ಳೆಯದು. ಅಡುಗೆ ಮನೆಯಲ್ಲಿ ಯಾವ ವಸ್ತು ಎಲ್ಲಿಡಬೇಕು ಎಂಬ ಬಗ್ಗೆ ತಿಳಿದುಕೊಳ್ಳಿ.
ಅಡುಗೆ ಮನೆಯ ವಾಸ್ತು ಬಹಳ ಮುಖ್ಯವಾದದ್ದು. ಇದಕ್ಕೆ ಎರಡು ಕಾರಣಗಳಿರುತ್ತವೆ. ಅಡುಗೆ ಮನೆಯಲ್ಲಿ ಆಹಾರಗಳು ತಯಾರಾಗುವ ಸ್ಥಳ. ಮನೆಯಲ್ಲು ಅಡುಗೆ ಸರಿಯಾಗಿಲ್ಲ ಎಂದರೆ ಅದು ಆರೋಗ್ಯಕ್ಕೆ ಸಂಬಂಧಪಟ್ಟ ಕಾರಣ ಅಡುಗೆ ಮನೆಯ ವಾಸ್ತು ಸರಿ ಇರಬೇಕು. ಇನ್ನು ಎರಡನೇ ಕಾರಣ ಏನೆಂದರೆ, ಮನೆಯಲ್ಲಿ ಗೃಹಿಣಿ ಅಥವಾ ಮನೆಯ ಹೆಣ್ಣು ಮಕ್ಕಳು ಅಡುಗೆ ಮನೆಯಲ್ಲಿರುವುದರಿಂದ ಅವರ ಸಮಾಧಾನ ಬಹಳ ಮುಖ್ಯವಾಗಿರುತ್ತದೆ. ಅಡುಗೆ ಮನೆಯಲ್ಲಿ ಇರುವವರು ಮನೆಯ ಎಲ್ಲಾ ಸದಸ್ಯರ ಜೊತೆಗೆ ಸಂಪರ್ಕವನ್ನು ಹೊಂದಿರುತ್ತಾರೆ. ಹಾಗಾಗಿ ಅವರ ಮನಸ್ಸು ಚೆನ್ನಾಗಿದ್ದರೆ, ಮನೆಯಲ್ಲಿ ಎಲ್ಲರ ಜೊತೆಗೂ ಒಳ್ಳೆಯ ಸಂಪರ್ಕವನ್ನು ಚೆನ್ನಾಗಿರುತ್ತದೆ. ಹೀಗಾಗಿ ಅಡುಗೆಮನೆಗೆ ವಾಸ್ತು ಬಹಳ ಮುಖ್ಯವಾಗುತ್ತೆ.
ಇನ್ನು ಅಡುಗೆ ಮನೆಯ ಒಳ ವಿನ್ಯಾಸದ ಬಗ್ಗೆ ನೋಡೋಣ. ಅಡುಗೆ ಮನೆಯಲ್ಲಿ ನೀರು, ಬೆಂಕಿ, ಆಹಾರ ಎಲ್ಲವೂ ಇರುತ್ತದೆ. ಅಡುಗೆ ಮನೆಯಲ್ಲಿ ಕೈ ತೊಳೆಯುವುದಕ್ಕೆ, ಕುಡಿಯುವುದಕ್ಕೆ ನೀರು ಇರುತ್ತದೆ. ನೀರು ಅಡುಗೆ ಮನೆಯ ಈಶಾನ್ಯ ದಿಕ್ಕಿನಲ್ಲಿ ಹರಿದರೆ ಒಳ್ಳೆಯದು. ಸಿಂಕ್ ಈಶಾನ್ಯ ದಿಕ್ಕಿನಲ್ಲಿದ್ದು, ಅದರ ಮೇಲೆಯೇ ವಾಟರ್ ಪ್ಯೂರಿಫೈಯರ್ ಅನ್ನು ಅಳವಡಿಸಿಕೊಂಡರೆ ಮನೆಗೆ ಶುಭ ಎಂದು ಹೇಳಲಾಗಿದೆ. ಇನ್ನು ಬೆಂಕಿಯ ವಿಚಾರಕ್ಕೆ ಬಂದರೆ, ಆಗ್ನೇಯ ದಿಕ್ಕಿನಲ್ಲಿ ಸ್ಟವ್ ಅನ್ನು ಇಟ್ಟರೆ ಒಳ್ಳೆಯದು. ಇನ್ನು ಅಡುಗೆ ಮಾಡುವವರು ಪೂರ್ವಾಭಿಮುಖವಾಗಿ ನಿಂತು ಅಡುಗೆಯನ್ನು ಮಾಡಬೇಕು.
ಇನ್ನು ಮೂರನೇಯದಾಗಿ ಅಡುಗೆಗೆ ಬೇಕಾಗುವ ಸಾಮಾಗ್ರಿಗಳಾದ ಉಪ್ಪು, ಸಾಸಿವೆ, ಜೀರಿಗೆಯಂತ ಡಬ್ಬಿಗಳನ್ನು ಇಡಲು ರ್ಯಾಕ್ ಇರುತ್ತದೆ. ಇದನ್ನು ದಕ್ಷಿಣ ಅಥವಾ ಪೂರ್ವ ದಿಕ್ಕಿನಲ್ಲಿದ್ದರೆ ಒಳ್ಳೆಯದು. ಇನ್ನು ಅಕ್ಕಿ, ಹಿಟ್ಟು ಮತ್ತು ಧಾನ್ಯಗಳನ್ನು ದೊಡ್ಡ ದೊಡ್ಡ ಡಬ್ಬಿಯಲ್ಲಿ ಇಡುತ್ತೀವಲ್ಲ ಅದನ್ನು ದಕ್ಷಿಣ ಮತ್ತು ಪಶ್ಚಿಮದಲ್ಲಿ ಇಡಬೇಕು. ಪಾತ್ರಗಳನ್ನು ಪೂರ್ವದಲ್ಲಿ ಇಟ್ಟುಕೊಳ್ಳಬೇಕು. ಉತ್ತರ ಭಾಗದಲ್ಲಿ ಹೆಚ್ಚು ಭಾರವನ್ನು ಇಡದೇ ಖಾಲಿ ಬಿಟ್ಟರೆ ಒಳ್ಳೆಯದು.
ಇನ್ನು ಆಗ್ನೇಯ ದಿಕ್ಕು ಅಡುಗೆ ಮನೆಗೆ ಉತ್ತಮ ಜಾಗ. ಅಕಸ್ಮಾತ್ ಆಗ್ನೇಯದಲ್ಲಿ ಅಡುಗೆ ಮನೆ ಇರದಿದ್ದರೆ, ನೈರುತ್ಯದಲ್ಲಿ ಇರಬಹುದು. ಆದರೆ, ನೈರುತ್ಯದಲ್ಲಿ ಅಡುಗೆ ಮನೆ ಇದ್ದರೆ, ಅಲ್ಲಿ ಶೇ.20 ರಷ್ಟು ಪರಿಣಾಮಗಳು ಕಡಿಮೆ ಇರುತ್ತವೆ. ಅಲ್ಲದೇ, ಮಾಡಿದ ಅಡುಗೆಗಳು ವೇಸ್ಟ್ ಆಗುತ್ತವೆ. ಶೇ.20 ರಷ್ಟು ಅಡುಗೆ ನಿತ್ಯ ವೇಸ್ಟ್ ಆಗುತ್ತಿರುತ್ತದೆ. ಎಲ್ಲರೂ ಒಟ್ಟಿಗೆ ಕೂತು ಊಟ ಮಾಡಲು ಬಯಸುವುದಿಲ್ಲ. ಒಬ್ಬೊಬ್ಬರು ಒಂದೊಂದು ಸಮಯದಲ್ಲಿ ಊಟ ಮಾಡುತ್ತಾರೆ. ಯಾರು ಸರಿಯಾಗಿ ಊಟ ಮಾಡದೇ, ಆಹಾರ ಉಳಿಯುತ್ತದೆ.
ಯಾವ ದಿಕ್ಕಿನಲ್ಲಿ ಅಡುಗೆ ಮನೆ ಇದ್ದರೆ ಯಾವ ತೊಂದರೆಗಳು ಎದುರಾಗಬಹುದು ಎಂದು ನೋಡುವುದಾದರೆ, ನೈರುತ್ಯ ಅಡುಗೆ ಮನೆ ಇದ್ದರೆ ಯಜಮಾನನ ಆಯುಷ್ಯ ಕಡಿಮೆಯಾಗುತ್ತದೆ. ಪಶ್ಚಿಮದಲ್ಲಿ ಅಡುಗೆ ಮನೆ ಇದ್ದರೆ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ವಾಯುವ್ಯದಲ್ಲಿ ಅಡುಗೆ ಮನೆಯಿದ್ದರೆ ಪರವಾಗಿಲ್ಲ. ಅಂತಹ ತೊಂದರೆಗಳೇನು ಕಾಣಿಸುವುದಿಲ್ಲ. ಇನ್ನು ಉತ್ತರದಲ್ಲಿ ಅಡುಗೆ ಮನೆ ಇದ್ದರೆ, ಕೆಲಸಕ್ಕೆ ತೊಂದರೆಯಾಗುತ್ತದೆ. ಜೊತೆಗೆ ಹಣಕಾಸಿನ ತೊಂದರೆಯೂ ತಲೆ ದೂರುತ್ತವೆ. ಈಶಾನ್ಯದಲ್ಲಿ ಅಡುಗೆ ಕೋಣೆ ಇದ್ದರೆ, ಮನೆಯಲ್ಲಿ ಎಲ್ಲರಿಗೂ ತೊಂದರೆಯಾಗುತ್ತದೆ. ಮನೆಯ ಗಂಡು ಮಕ್ಕಳಿಗೆ ಸದಾ ಹೊರಗೆ ಹೋಗಬೇಕೆನಿಸುತ್ತೆ. ಮನೆಯಲ್ಲಿ ಇರುವುದಕ್ಕೆ ಬಯಸೋದಿಲ್ಲ. ಪೂರ್ವದಲ್ಲಿ ಏಳಿಗೆಗೆ ಹಾಗೂ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ.