Revenue Facts

ಉಯಿಲ್ ಕುರಿತು ನೀವು ತಿಳಿದುಕೊಳ್ಳಬೇಕಾದ ಪ್ರಮುಖ 10 ಅಂಶಗಳು!

ವ್ಯಕ್ತಿಯೊಬ್ಬನು ತನ್ನ ಸಂಪೂರ್ಣ ಆಸ್ತಿಯನ್ನು ತನ್ನ ಮರಣ ನಂತರ ಯಾರಿಗೆ ಸಲ್ಲಬೇಕು ಎಂದು ಬರೆದು ಇಡುವುದಕ್ಕೆ ಮರಣ ಶಾಸನ (ಉಯಿಲ್) ಎಂದು ಕರೆಯುತ್ತೇವೆ. ಈ ಉಯಿಲ್ ನಲ್ಲಿ ಆಸ್ತಿ ಯಾರಿಗೆ ಸೇರಬೇಕು ಎಂದು ಬರೆದಿರಲಾಗಿರುತ್ತದೆಯೋ ಅವರಿಗೆ ಆ ಎಲ್ಲಾ ಆಸ್ತಿಯು ಸೇರುತ್ತದೆ.

1. ಮರಣ ಶಾಸನವನ್ನು ಯಾರು ಬರೆದಿಡಬಹುದು: ಮಾನಸಿಕವಾಗಿ ಸ್ವಾಸ್ಥ್ಯರಾಗಿರುವ 19 ವರ್ಷಗಳ ವಯಸ್ಸನ್ನು ದಾಟಿದ ಯಾವುದೇ ವ್ಯಕ್ತಿ ಮರಣ ಶಾಸನವನ್ನು ಬರೆದಿಡಬಹುದು. ಆದರೆ, ಬೆದರಿಸಿ, ಆಸೆ ತೋರಿಸಿ ಅಥವಾ ಮೋಸ ಮಾಡಿ ಬರೆಸಿದ ಮರಣ ಶಾಸನವು ಊರ್ಜಿತವಾಗುವುದಿಲ್ಲ. ಜೊತೆಗೆ ಬುದ್ಧಿಭ್ರಮಣೆಯಾದ ಅಪ್ರಾಪ್ತರ ಪರವಾಗಿ ಮರಣ ಶಾಸನವನ್ನು ಮಾಡುವಂತಿಲ್ಲ.

2. ಮರಣ ಶಾಸನಕ್ಕೆ ಕನಿಷ್ಠ ಇಬ್ಬರು ಸಾಕ್ಷಿಗಳು ಸಹಿ ಮಾಡಬೇಕು. ಉಯಿಲ್ ಬರೆದವರು ಸಾಕ್ಷಿದಾರರ ಸಮ್ಮುಖದಲ್ಲಿ ಸಹಿ ಮಾಡಲಾಗಿದೆ ಎಂದು ಷರಾ ಬರೆಯಬೇಕು. ಯಾರು ಉಯಿಲ್ ಬರೆದಿರುತ್ತಾರೋ ಅವರನ್ನು ಸಾಕ್ಷಿ ಎಂದು ಪರಿಗಣಿಸುವುದಿಲ್ಲ. ಅವರ ಹೊರತಾಗಿ ಇಬ್ಬರು ಸಹಿ ಮಾಡಬೇಕು. ಮರಣ ಶಾಸನದದ ಪ್ರಯೋಜನ ಪಡೆಯುವ ವ್ಯಕ್ತಿಯು ಅದಕ್ಕೆ ಸಾಕ್ಷಿಯಾಗಲು ಸಾಧ್ಯವಿಲ್ಲ.

3. ಯಾವುದೇ ತೊಂದರೆ ಇಲ್ಲದಂತೆ ಮರಣ ಶಾಸನ ಅನುಷ್ಠಾನಕ್ಕೆ ಬರಬೇಕೆಂದರೆ, ಉಯಿಲ್ ಅನ್ನು ಬಹಳ ಸ್ಪಷ್ಟವಾಗಿ ಯಾವುದೇ ಅನುಮಾನಗಳಿಗೆ ಆಸ್ಪದ ನೀಡದಂತೆ ಬರೆಯಬೇಕು. ಜೊತೆಗೆ ಆಸ್ತಿಯನ್ನು ಪಡೆಯುವ ವ್ಯಕ್ತಿಗಳ ವಿವರವನ್ನು ಸರಿಯಾಗಿ ನಮೂದಿಸಬೇಕು.

4. ಉಯಿಲ್ ಬರೆದ ವ್ಯಕ್ತಿಯು ತಾನು ಇಚ್ಛಿಸಿದಾಗ ಮರಣ ಶಾಸನವನ್ನು ರದ್ದುಪಡಿಸಲುಬಹುದು. ಇದಕ್ಕೆ ರೂ.100 ಮುದ್ರಾಂಕ ಪಾವತಿಸಬೇಕಾಗುತ್ತದೆ. ಅಲ್ಲದೆ, ನೋಂದಣಿ ಆದ ನಂತರವೂ ಉಯಿಲ್ ಅನ್ನು ತಿದ್ದುಪಡಿ ಮಾಡಬಹುದು.

5. ನೀವು ಬರೆದ ಉಯಿಲ್ ಅನ್ನು ನೋಂದಾಯಿಸಬೇಕು ಎನ್ನುವುದು ಕಡ್ಡಾಯವಿಲ್ಲ. ಬರೆದಿಡುವವರು ಇಷ್ಟವಿದ್ದರೆ ನೋಂದಾಯಿಸಬಹುದು. ಇದಕ್ಕೆ ಯಾವುದೇ ಕಾಲಮಿತಿ ಇರುವುದಿಲ್ಲ. ಯಾವುದೇ ಉಪನೋಂದಣಿ ಅಧಿಕಾರಿ ಅಥವಾ ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಅದನ್ನು ನೋಂದಣಿ ಮಾಡಿಕೊಡಲಾಗುತ್ತದೆ.

6. ಇಚ್ಚಾಪತ್ರ ಬರೆದಿಟ್ಟ ವ್ಯಕ್ತಿ ಮರಣ ನಂತರವೂ ಅದನ್ನು ನೋಂದಣಿ ಮಾಡಿಸಬಹುದು. ಯಾರ ಹೆಸರಿಗೆ ಉಯಿಲ್ ಬರೆದಿರಲಾಗಿರುತ್ತದೆಯೋ ಅವರು ಉಪನೋಂದಣಾಧಿಕಾರಿಗೆ ಸೂಕ್ತ ದಾಖಲೆಯನ್ನು ನೀಡಿ ಅದನ್ನು ನೋಂದಾಯಿಸಿಕೊಳ್ಳಬಹುದು. ಉಯಿಲ್ ಬರೆದವರು ನೋಂದಣಿ ಮಾಡಿಸಬೇಕೆಂದರೆ 200 ಶುಲ್ಕವಿರುತ್ತದೆ. ಅವರ ಮರಣದ ನಂತರ ನೋಂದಣಿ ಮಾಡಿಬೇಕೆಂದರೆ ನೋಂದಣಿ ಶುಲ್ಕ ಮತ್ತು ವಿಚಾರಣಾ ಶುಲ್ಕ ಸೇರಿ ೪೫೦ ಪಾವತಿಸಬೇಕಾಗುತ್ತದೆ.

7. ಉಯಿಲ್ ಬರೆದ ವ್ಯಕ್ತಿ ಬದುಕಿರುವವರೆಗೆ ಅದರ ನಕಲನ್ನು ಪಡೆಯುವ ಹಕ್ಕು ಅವರಿಗೆ ಮಾತ್ರ ಇರುತ್ತದೆ. ಅವರ ಮರಣ ನಂತರ ಸೂಕ್ತ ದೃಢೀಕೃತ ದಾಖಲೆಗಳನ್ನು ಒದಗಿಸಿ ಯಾರಾದರೂ ಪಡೆಯಬಹುದು.

8. ಬರೆದ ಮರಣ ಶಾಸನವನ್ನು ಗೋಪ್ಯವಾಗಿಡಬಹುದು. ಅದನ್ನು ಸೀಲು ಮಾಡಿದ ಲಕೋಟೆಯಲ್ಲಿ ಇಟ್ಟು ಜಿಲ್ಲಾನೋಂದಣಾಧಿಕಾರಿಯವರ ಕಛೇರಿಯಲ್ಲಿ ಇಡಬಹುದು. ಠೇವಣಿಗೆ ರೂ.1000 ಶುಲ್ಕ ಪಾವತಿಸಬೇಕಾಗುತ್ತದೆ. ಠೇವಣಿ ಮಾಡಿದ ವ್ಯಕ್ತಿ ಅಥವಾ ಅವರಿಂದ ಸೂಕ್ತ ಅಧಿಕಾರ ಪಡೆದ ವ್ಯಕ್ತಿ ಅದನ್ನು ಹಿಂಪಡೆಯ ಬಹುದು. ಠೇವಣಿ ಹಿಂದಕ್ಕೆ ಪಡೆಯಲು ರೂ.200 ಶುಲ್ಕ ಪಾವತಿಸಬೇಕು.

9. ಠೇವಣಿ ಇಟ್ಟ ವ್ಯಕ್ತಿ ಮೃತಪಟ್ಟಲ್ಲಿ, ಅವರ ಮರಣ ದೃಢೀಕರಣ ಪತ್ರ ನೀಡಿದರೆ ಅರ್ಜಿ ಸಲ್ಲಿಸಿದವರ ಸಮಕ್ಷಮದಲ್ಲಿ ಜಿಲ್ಲಾನೋಂದಣಿ ಅಧಿಕಾರಿ ಲಕೋಟೆಯನ್ನು ತೆರೆದು ಪತ್ರ ನೀಡುವರು. ಇದನ್ನು ತೆರೆದು ನೋಂದಾಯಿಸಲು ರೂ.100 ಶುಲ್ಕ ಪಾವತಿಸಬೇಕಾಗುತ್ತದೆ.

10. ಉಯಿಲ್ ಬರೆದ ವ್ಯಕ್ತಿಯ ಸಾವಿನ ನಂತರ ಅದರಲ್ಲಿ ನಮೂದಿಸಿದ ವ್ಯಕ್ತಿಯು ಅರ್ಜಿಯ ಜೊತೆ ಮರಣ ದೃಢೀಕರಣ ಪತ್ರ ಹಾಗೂ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿ ಆಸ್ತಿಯ ಖಾತೆಯನ್ನು ವರ್ಗಾಯಿಸಿಕೊಳ್ಳಬಹುದು.

Exit mobile version