Revenue Facts

ಬೇನಾಮಿ ಎಂದರೇನು? ಆದಾಯ ತೆರಿಗೆಯಲ್ಲಿ ಬೇನಾಮಿದಾರರ ಪಾತ್ರವೇನು?

ಅಕ್ಷರಶಃ ಹೇಳುವುದಾದರೆ ʻಬೇನಾಮಿʼ ಎಂದರೆ ʻಯಾರ ಹೆಸರೂ ಇಲ್ಲದಿರುವುದುʼ ಎಂದರ್ಥ. ಆದರೆ ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಒಬ್ಬ ವ್ಯಕ್ತಿ ಸ್ವತ್ತು/ಆಸ್ತಿ ಖರೀದಿಗೆ ಹಣ ಪೂರೈಸುತ್ತಿರುತ್ತಾನೆ. ಆದರೆ, ಆ ಸ್ವತ್ತನ್ನು ತನ್ನ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳುವುದಿಲ್ಲ. ಇಂಥ ಪ್ರಕರಣಗಳಲ್ಲಿ ಸ್ವತ್ತು ಯಾರ ಹೆಸರಲ್ಲಿ ನೋಂದಣಿ ಆಗಿರುತ್ತದೆಯೋ ಅವರ ಬದಲಾಗಿ ಹಣ ಪೂರೈಕೆ ಮಾಡಿದವನೇ ನಿಜವಾದ ಮಾಲೀಕ ಆಗಿರುತ್ತಾನೆ. ಇದೇ ರೀತಿ ವ್ಯವಹಾರ ಚಿನ್ನ, ಹಣಕಾಸು ಸೆಕ್ಯುರಿಟಿ, ಕಾನೂನು ದಾಖಲೆಗಳು ಹೀಗೆ ಬೇರೆ ಬೇರೆ ವಿಭಾಗಗಳಲ್ಲೂ ನಡೆಯುತ್ತದೆ.

ಬೇರೊಬ್ಬ ವ್ಯಕ್ತಿಯ ಹೆಸರಿನಲ್ಲಿ ಹೂಡಿಕೆ ಮಾಡುವುದು ಬೇನಾಮಿ (ನಿಷೇಧ) ಕಾನೂನು ಮತ್ತು ಆದಾಯ ತೆರಿಗೆ ನಿಯಮಗಳಲ್ಲಿ ಬೇನಾಮಿದಾರರು ಮತ್ತು ಅದರ ಲಾಭ ಪಡೆಯುವ ಮಾಲೀಕ ಇಬ್ಬರ ಮೇಲೂ ಪರಿಣಾಮ ಬೀರುತ್ತದೆ.

ಬೇನಾಮಿ ಆಸ್ತಿ ಕಾನೂನು 1988 ಮತ್ತು 2016:
ದಾಖಲೆ ಇಲ್ಲದ ಹಣ ಮತ್ತು ಭ್ರಷ್ಟಾಚಾರವನ್ನು ತೊಡೆದುಹಾಕಲು ಬೇನಾಮಿ ವಹಿವಾಟು (ನಿಷೇಧ) ಕಾಯ್ದೆಯನ್ನು 1988ರಲ್ಲಿ ಅಂಗೀಕರಿಸಲಾಯಿತು. ಆದಾಗ್ಯೂ ಅಗತ್ಯ ನಿಯಮ ಮತ್ತು ನಿಬಂಧನೆಗಳನ್ನು ಜಾರಿಗೆ ತರದ ಪರಿಣಾಮ ಅದು ಎಂದಿಗೂ ಅನುಷ್ಠಾನಕ್ಕೇ ಬರಲಿಲ್ಲ. 2016ರಲ್ಲಿ ಬೇನಾಮಿ ವಹಿವಾಟು (ನಿಷೇಧ) ತಿದ್ದುಪಡಿ ಕಾಯ್ದೆಯನ್ನು ದೇಶದಾದ್ಯಂತ ಜಾರಿಗೆ ತರಲಾಯಿತು.

ಈ ಕಾನೂನು 5 ಸೆಪ್ಟೆಂಬರ್ 1988 ಮತ್ತು 25 ಅಕ್ಟೋಬರ್‌ 2016ರ ನಡುವಿನ ವಹಿವಾಟುಗಳಿಗೆ ಪೂರ್ವಾನ್ವಯ ಆಗುವುದಿಲ್ಲ. ಇದೇ ಆಗಸ್ಟ್ 23ರಂದು ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನಲ್ಲೂ ಇದನ್ನೇ ಉಲ್ಲೇಖಿಸಿದೆ.

ಹೂಡಿಕೆ ಮಾಡುವ ಮಾಲೀಕನಿಗೆ ಆದಾಯ ತೆರಿಗೆ:
ಆದಾಯ ತೆರಿಗೆ ನಿಯಮದ ಸೆಕ್ಷನ್ 69ರ ಪ್ರಕಾರ, ವ್ಯಕ್ತಿಯು ಮಾಡಿರುವ ಹೂಡಿಕೆಯು ತನ್ನ ಲೆಕ್ಕ ಪತ್ರದಲ್ಲಿ ನಮೂದು ಮಾಡಿರದಿದ್ದಲ್ಲಿ, ಆ ಆಸ್ತಿಯ ಮೌಲ್ಯವನ್ನು ಅವನ ಆದಾಯ ಎಂದು ಪರಿಗಣಿಸಿ, ಹೂಡಿಕೆ ಮಾಡಿದ ವರ್ಷಕ್ಕೆ ಅನ್ವಯ ಆಗುವಂತೆ ತೆರಿಗೆ ವಿಧಿಸಲಾಗುತ್ತದೆ.

ಬೇನಾಮಿ ಹೂಡಿಕೆಯು ಅದರ ಮಾಲೀಕನಿಗೆ ಕಾನೂನು ಕ್ರಮಗಳನ್ನು ಎದುರಿಸುವಂತೆ ಮಾಡುವುದು ಹಾಗೂ ಯಾವುದೇ ಪರಿಹಾರ ನೀಡದೇ ಆ ಆಸ್ತಿಯನ್ನು ಸರ್ಕಾರ ಅದನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ತೆರಿಗೆ ಹೊಣೆಗಾರಿಕೆಯನ್ನೂ ತಪ್ಪಿಸಿಕೊಳ್ಳುವಂತಿಲ್ಲ.

ಬೇನಾಮಿ ಆಸ್ತಿಗಳಿಗೆ ತೆರಿಗೆ:
ಬೇನಾಮಿ ಹೂಡಿಕೆಗಳಿಗೆ ಶೇ 60ರಷ್ಟು ತೆರಿಗೆ ವಿಧಿಸಲಾಗುತ್ತದೆ. ತೆರಿಗೆ ಮೊತ್ತದ ಮೇಲೆ ಶೇ 25ರಷ್ಟು ಸರ್ಚಾರ್ಜ್ ಮತ್ತು ಶೇ 3ರಷ್ಟು ಶಿಕ್ಷಣ ಸೆಸ್‌ ಕೂಡ ಭರಿಸಬೇಕು. ಈ ಎಲ್ಲವನ್ನೂ ಲೆಕ್ಕ ಹಾಕಿದರೆ ಹೂಡಿಕೆಯ ಶೇ 83.25ರಷ್ಟು ತೆರಿಗೆ ಪಾವತಿ ಮಾಡಬೇಕಾಗುತ್ತದೆ.

ಇಂಥ ಆಸ್ತಿಯ ಕಾನೂನುಬದ್ಧ ಮಾಲೀಕರಾದ ಬೇನಾಮಿದಾರರು ಕೂಡ ಈ ಆಸ್ತಿಯಿಂದ ಬರುವ ಆದಾಯಕ್ಕೆ ತೆರಿಗೆ ಪಾವತಿ ಮಾಡಬೇಕು. ಅವರು ಒಂದಕ್ಕಿಂತ ಹೆಚ್ಚು ಮನೆಗಳನ್ನು ಹೊಂದಿದ್ದ ಪಕ್ಷದಲ್ಲಿ, ಆ ಆಸ್ತಿಯಿಂದ ಆದಾಯ ಇಲ್ಲದೇ ಹೋದ ಸಂದರ್ಭದಲ್ಲಿ ಕೂಡ ಆದಾಯ ತೆರಿಗೆ ನಿಯಮದ ಪ್ರಕಾರ ಕಾಲ್ಪನಿಕ ಬಾಡಿಗೆ ಅನ್ವಯವಾಗುತ್ತದೆ ಮತ್ತು ಅದಕ್ಕೆ ತೆರಿಗೆ ಭರಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಆದಾಯ ತೆರಿಗೆ ಇಲಾಖೆಗೆ ತಪ್ಪು ಮಾಹಿತಿ ನೀಡಿದ್ದಕ್ಕೆ ಪರಿಣಾಮಗಳನ್ನೂ ಎದುರಿಸುವ ಸಂದರ್ಭ ಬರುತ್ತದೆ.

ಯಾವುದಕ್ಕೆ ವಿನಾಯಿತಿ?
ಪತಿ/ಪತ್ನಿ ಸರಿಯಾದ ಆದಾಯದ ಮೂಲವನ್ನು ತೋರಿಸಿ ತನ್ನ ಪತ್ನಿ/ಪತಿಯ ಹೆಸರಿನಲ್ಲಿ ಸ್ವತ್ತು ಖರೀದಿ ಮಾಡಿದಲ್ಲಿ ಅದನ್ನು ಬೇನಾಮಿ ಎಂದು ಪರಿಗಣಿಸಲಾಗದು.

ವ್ಯಕ್ತಿಯು ಹಿಂದೂ ಅವಿಭಕ್ತ ಕುಟುಂಬದ ಸದಸ್ಯನಾಗಿದ್ದಾಗ, ತನ್ನ ಅಥವಾ ತನ್ನ ಕುಟುಂಬ ಸದಸ್ಯರ ಹಿತಕ್ಕಾಗಿ ಸೂಕ್ತ ಮೂಲದ ಆದಾಯದಲ್ಲಿ ಆಸ್ತಿಯನ್ನು ಸಂಗ್ರಹಿಸಬಹುದು. ಕಂಪನಿಯೊಂದರ ಟ್ರಸ್ಟಿ, ಕಾರ್ಯನಿರ್ವಾಹಕ, ಪಾಲುದಾರ, ನಿರ್ದೇಶಕ ಅಥವಾ ಡೆಪಾಸಿಟರಿ ಅಥವಾ ಡೆಪಾಸಿಟರಿ ಏಜೆಂಟ್‌ ಪಾಲುದಾರರು ನಡೆಸುವ ವಹಿವಾಟು ಬೇನಾಮಿ ಆಗುವುದಿಲ್ಲ.

Exit mobile version