Revenue Facts

ಕೇಂದ್ರ ಬಜೆಟ್:‌ ಭದ್ರಾ ಮೇಲ್ದಂಡೆ ಯೋಜನೆಗೆ 5300ಕೋಟಿ ಮೀಸಲು

ಬೆಂಗಳೂರು, ಫೆ. 01 : 2023-24ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ನಿರೀಕ್ಷೆಯಂತೆಯೇ ಕರ್ನಾಟಕಕ್ಕೆ ಯಾವುದೇ ನಿರಾಸೆ ಮೂಡಿಸಲಿಲ್ಲ. ರಾಜ್ಯದ ನೀರಾವರಿ ಯೋಜನೆಗಳಿಗೆ ಬಂಪರ್ ಕೊಡುಗೆಯನ್ನು ಬಜೆಟ್‌ ನಲ್ಲಿ ಘೋಷಿಸಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಬರೋಬ್ಬರಿ ರೂ. 5,300 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಘೋಷಿಸಿದೆ.ಲೋಕಸಭೆಯಲ್ಲಿಂದು ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕರ್ನಾಟಕದ ಮಹತ್ವಕಾಂಕ್ಷೆಯ ಭ್ರದ್ರಾ ಮೇಲ್ದಂಡೆ ಯೋಜನೆಗೆ ರೂ. 5.300 ಕೋಟಿ ಅನುದಾನವನ್ನು ಘೋಷಿಸಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕದ ಮೇಲೆ ವಿಶೇಷ ಒಲವನ್ನು ತೋರಲಾಗಿದೆ. ಭದ್ರಾ ಜಲಾಶಯದ ನೀರನ್ನು ತುಮಕೂರು, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ 2.25 ಲಕ್ಷ ಹೆಕ್ಟೇರ್‌ ಕೃಷಿ ಭೂಮಿಗೆ ನೀರು ಒದಗಿಸಬಹುದು. ಇದಕ್ಕಾಗಿ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಆರ್ಥಿಕ ನೆರವನ್ನು ಪ್ರಕಟಿಸಿ, ಯೋಜನೆಗೆ ಕೇಂದ್ರ ಸರ್ಕಾರ 5300 ಕೋಟಿ ರೂಪಾಯಿ ಮೀಸಲಿಟ್ಟಿದೆ. ಈ ಯೋಜನೆಗಾಗಿ ರಾಜ್ಯ ಸರ್ಕಾರ ಕೇಂದ್ರದ ಬಳಿ 23 ಸಾವಿರ ಕೋಟಿ ರೂಪಾಯಿ ಬೇಡಿಕೆ ಇಟ್ಟಿತ್ತು. ಆದರೆ, ಬಜೆಟ್‌ನಲ್ಲಿ 5300 ಕೋಟಿ ಅನುದಾನ ನೀಡಿರುವುದು ರಾಜ್ಯದ ಜನತೆ ಖುಷಿ ತಂದಿದೆ.

ಭದ್ರಾ ಮೇಲ್ದಂಡೆ ಯೋಜನೆ ಎರಡು ಹಂತದಲ್ಲಿ ನಡೆಯಲಿದ್ದು, ಮೊದಲನೇಯ ಹಂತದಲ್ಲಿ ಮೂರು ಪ್ಯಾಕೇಜ್ ಗಳಲ್ಲಿ ನಡೆಯಲಿದೆ. ಮೊದಲನೇ ಹಂತದ ಮೊದಲ ಪ್ಯಾಕೇಜ್ ತುಂಗಾ ನದಿಯಿಂದ 17.40 ಟಿ.ಎಂ.ಸಿ ನೀರನ್ನು ಲಿಫ್ಟ್ ಮಾಡಲಿದೆ. ಈ ಮೂಲಕ ಭದ್ರಾ ಜಲಾಶಯಕ್ಕೆ ನೀರು ಹರಿಸುತ್ತದೆ. ಸದ್ಯ ಈ ಕಾಮಾಗಾರಿ ಪ್ರಗತಿಯಲ್ಲಿದೆ. ಇನ್ನು ಪ್ಯಾಕೇಜ್‌ 2ರಲ್ಲಿ ಭದ್ರಾ ಜಲಾಶಯದಿಂದ 29.90 ಟಿ.ಎಂ.ಸಿ. ನೀರನ್ನು ಲಿಫ್ಟ್ ಮಾಡಲಾಗುತ್ತದೆ. ಇದನ್ನು ಅಜ್ಜಂಪುರ ಸುರಂಗದವರೆಗೆ ಕೊಂಡೊಯ್ಯುವ ಕಾಮಗಾರಿಗಳು ಈಗಾಗಲೇ ಬಹುತೇಕ ಪೂರ್ಣಗೊಂಡಿದೆ.

ಕೊನೆಯ ಹಾಗೂ ಮೂರನೇ ಪ್ಯಾಕೇಜ್ ನಲ್ಲಿ ಅಜ್ಜ೦ಪುರ ಸುರಂಗ ಮಾರ್ಗದ ಮೂಲಕ ಚಿತ್ರದುರ್ಗ ಶಾಖಾ ಕಾಲುವೆ ಹಾಗೂ ತುಮಕೂರು ಶಾಖಾ ಕಾಲುವೆಗಳಿಗೆ ನೀರು ಹರಿಸುವುದು. ಇದು ಈಗಾಗಲೇ ಬಹುತೇಕ ಪೂರ್ಣಗೊಂಡಿದೆ. ಇನ್ನು ಎರಡನೇಯ ಹಂತದಲ್ಲೂ ತರೀಕೆರೆ ಏತ ನೀರಾವರಿ, ಚಿತ್ರದುರ್ಗ ಶಾಖಾ ಕಾಲುವೆ, ತುಮಕೂರು ಶಾಖಾ ಕಾಲುವೆ ಹಾಗೂ ಕೆರೆ ತುಂಬಿಸುವ ಕಾಮಗಾರಿಗಳು ನಡೆಯುತ್ತಿವೆ.

ಇನ್ನು 2000ನೇ ಇಸವಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ಘೋಷಿಸಲಾಯ್ತು. 2003ರಲ್ಲಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿತು. 2008ರಲ್ಲಿ ಯೋಜನೆಗೆ ಚಾಲನೆ ದೊರಕಿತು. ಭೂಸ್ವಾಧೀನ ಪ್ರಕ್ರಿಯೆ, ಅರಣ್ಯ ಇಲಾಖೆ ಅನುಮತಿ ಪಡೆದುಕೊಳ್ಳುವುದು ವಿಳಂಬವಾಯಿತು. ಅಲ್ಲದೇ ವೆಚ್ಚ ಹೆಚ್ಚಳ ಸೇರಿದಂತೆ ನಾನಾ ಕಾರಣಗಳಿಂದ ಯೋಜನೆ ಇನ್ನೂ ನಿಧಾನಗತಿಯಲ್ಲಿ ಸಾಗುತ್ತಿದೆ. ಸದ್ಯ ಕೇಂದ್ರದ ನೆರವಿನಿಂದ ಮತ್ತಷ್ಟು ಉತ್ತೇಜನ ದೊರೆತಿದ್ದು, ವೇಗವಾಗಿ ಕಾಮಗಾರಿ ನಡೆಯುವ ನಿರೀಕ್ಷೆ ಇದೆ.

Exit mobile version