ನವದೆಹಲಿ: ಹಸಿರು ಜಲಜನಕ ಮತ್ತು ಅದರ ಉತ್ಪನ್ನಗಳ ಉತ್ಪಾದನೆ, ಬಳಕೆ ಮತ್ತು ರಫ್ತಿಗಾಗಿ ಭಾರತವನ್ನು ಜಾಗತಿಕ ಕೇಂದ್ರ ಸ್ಥಾನವನ್ನಾಗಿ ಮಾಡುವ ಗುರಿಯೊಂದಿಗೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.ಶುದ್ಧ ಇಂಧನ ಉತ್ಪಾದನೆಯಲ್ಲಿ ಭಾರತವನ್ನು ಜಾಗತಿಕ ಹಬ್ ಆಗಿ ಮಾಡುವ ಗುರಿಯೊಂದಿಗೆ ‘ನ್ಯಾಷನಲ್ ಗ್ರೀನ್ ಹೈಡ್ರೋಜನ್ ಮಿಷನ್ (National Green Hydrogen Mission)’ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ನ್ಯಾಷನಲ್ ಗ್ರೀನ್ ಹೈಡ್ರೋಜನ್ ಮಿಷನ್’ಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ. 19,744 ಕೋಟಿ ರೂ. ಆರಂಭಿಕ ವೆಚ್ಚದಲ್ಲಿ ಯೋಜನೆ ಆರಂಭಿಸಲು ಉದ್ದೇಶಿಸಲಾಗಿದೆ. ಎಸ್ಐಜಿಎಚ್ಟಿ ಯೋಜನೆಗೆ 17,490 ಕೋಟಿ ರೂ, ಪ್ರಾಯೋಗಿಕ ಯೋಜನೆಗೆ 1,466 ಕೋಟಿ ರೂ, ಆರ್&ಡಿಗೆ 400 ಕೋಟಿ ರೂ, ಹಾಗೂ ಮಿಷನ್ ಕಾಂಪೊನೆಂಟ್ಸ್ಗೆ 388 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಗ್ರೀನ್ ಹೈಡ್ರೋಜನ್ ಮಿಷನ‌್
* ಆರು ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ
*ಒಂದು ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ಪಳೆಯುಳಿಕೆ ಇಂಧನ ಆಮದುಗಳಲ್ಲಿ ಒಟ್ಟುಗೂಡಿದ ಕಡಿತ.
*ಹೂಡಿಕೆ ಸುಮಾರು ರೂಪಾಯಿ ಎಂಟು ಲಕ್ಷ ಕೋಟಿ
* ವಾರ್ಷಿಕ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ ಸುಮಾರು 50 ಎಂಎಂಟಿ ಕಡಿತ
ವಾರ್ಷಿಕವಾಗಿ ಕನಿಷ್ಠ 50 ಲಕ್ಷ ಮೆಟ್ರಿಕ್ ಟನ್ ಗ್ರೀನ್ ಹೈಡ್ರೋಜನ್ ಉತ್ಪಾದನಾ ಸಾಮರ್ಥ್ಯ ವೃದ್ಧಿಸುವುದು ಯೋಜನೆಯ ಪ್ರಮುಖ ಗುರಿಯಾಗಿದೆ. 2030ರ ವೇಳೆಗೆ ದೇಶದಲ್ಲಿ ಹೆಚ್ಚುವರಿಯಾಗಿ 125 GW ನವೀಕರಿಸಬಹುದಾದ ಇಂಧನ ಉತ್ಪಾದನೆಯ ಗುರಿ ಹಾಕಿಕೊಳ್ಳಲಾಗಿದೆ. ಈ ಮಿಷನ್ ವಿಶಾಲ ವ್ಯಾಪ್ತಿಯ ಪ್ರಯೋಜನಗಳನ್ನು ಹೊಂದಿರುತ್ತದೆ – ಹಸಿರು ಜಲಜನಕ ಮತ್ತು ಅದರ ಉತ್ಪನ್ನಗಳಿಗೆ ರಫ್ತು ಅವಕಾಶಗಳ ಸೃಷ್ಟಿಸಲಿದೆ. ಕೈಗಾರಿಕಾ, ಚಲನಶೀಲತೆ ಮತ್ತು ಶಕ್ತಿ ವಲಯಗಳ ಡಿಕಾರ್ಬೊನೈಸೇಶನ್ (ಇಂಗಾಲ ಹೊರಸೂಸುವಿಕೆಯ ಕಡಿತ); ಆಮದು ಮಾಡಿದ ಪಳೆಯುಳಿಕೆ ಇಂಧನಗಳು ಮತ್ತು ಫೀಡ್ಸ್ಟಾಕ್ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಿದೆ. ಸ್ಥಳೀಯ ಉತ್ಪಾದನಾ ಸಾಮರ್ಥ್ಯಗಳ ಅಭಿವೃದ್ಧಿ, ಉದ್ಯೋಗಾವಕಾಶಗಳ ಸೃಷ್ಟಿ, ಅತ್ಯಾಧುನಿಕ ತಂತ್ರಜ್ಞಾನಗಳ ಅಭಿವೃದ್ಧಿಯಾಗಲಿದೆ. ಸುಮಾರು 125 ಗಿಗಾವ್ಯಾಟ್ ನಷ್ಟು ಸಂಬಂಧಿತ ನವೀಕರಿಸಬಹುದಾದ ಶಕ್ತಿ ಸಾಮರ್ಥ್ಯದ ಸೇರ್ಪಡೆಯೊಂದಿಗೆ ಭಾರತದ ಹಸಿರು ಹೈಡ್ರೋಜನ್ (ಜಲಜನಕ) ಉತ್ಪಾದನಾ ಸಾಮರ್ಥ್ಯವು ವಾರ್ಷಿಕವಾಗಿ ಕನಿಷ್ಠ 5 ಎಂಎಂಟಿ ಅನ್ನು ತಲುಪುವ ಸಾಧ್ಯತೆಯಿದೆ
ಹಸಿರು ಜಲಜನಕದ ಬೇಡಿಕೆ ಸೃಷ್ಟಿ, ಉತ್ಪಾದನೆ, ಬಳಕೆ ಮತ್ತು ರಫ್ತಿಗೆ ಮಿಷನ್ ಅನುಕೂಲ ಮಾಡುತ್ತದೆ.ದೊಡ್ಡ ಪ್ರಮಾಣದ ಉತ್ಪಾದನೆ ಮತ್ತು/ಅಥವಾ ಜಲಜನಕದ ಬಳಕೆಯನ್ನು ಬೆಂಬಲಿಸುವ ಸಾಮರ್ಥ್ಯವಿರುವ ಪ್ರದೇಶಗಳನ್ನು ಗ್ರೀನ್ ಹೈಡ್ರೋಜನ್ ಹಬ್ಸ್ ಎಂದು ಗುರುತಿಸಲಾಗುತ್ತದೆ ಮತ್ತು ಅಭಿವೃದ್ಧಿಪಡಿಸಲಾಗುತ್ತದೆ.ಹಸಿರು ಜಲಜನಕ ಪರಿಸರ ವ್ಯವಸ್ಥೆಯ ಸ್ಥಾಪನೆಯನ್ನು ಬೆಂಬಲಿಸಲು ಸಕ್ರಿಯಗೊಳಿಸುವ ನೀತಿ ಚೌಕಟ್ಟನ್ನು ಅಭಿವೃದ್ಧಿಪಡಿಸಲಾಗುವುದು. ದೃಢವಾದ ಮಾನದಂಡಗಳು ಮತ್ತು ನಿಯಮಾವಳಿಗಳ ಚೌಕಟ್ಟನ್ನು ಸಹ ಅಭಿವೃದ್ಧಿಪಡಿಸಲಾಗುವುದು.
