ಬೆಂಗಳೂರಿನಂತಹ ಮಹಾನಗರಗಳಲ್ಲಿ ವಾಸಯೋಗ್ಯ ಮನೆ, ಪ್ಲಾಟ್, ನಿವೇಶನ ಖರೀದಿ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಸ್ವಲ್ಪ ಯಾಮಾರಿದರೆ ಕೈಯಲ್ಲಿ ಇರುವ ಹಣ ಕಳೆದುಕೊಂಡು ಬೀದಿಗೆ ಬೀಳಬೇಕಾಗುತ್ತದೆ. ಮೋಸ ಮಾಡುವುದನ್ನೇ ವ್ಯಾಪಾರ ಮಾಡಿಕೊಂಡಿರುವ ಕೆಲ ವಂಚಕರು ಕಡಿಮೆ ಬೆಲೆಗೆ ನಿವೇಶನ, ಪ್ಲಾಟ್ , ಜಮೀನು ಕೊಡಿಸುತ್ತೇನೆ ಎಂದು ನಂಬಿಸಿ ಕೊಟ್ಟಿ ದಾಖಲೆ ಕೈಗಿಟ್ಟು ನಾಮ ಹಾಕುತ್ತಾರೆ.
ಬದುಕಿದ ವ್ಯಕ್ತಿಯನ್ನೇ ಸಾಯಿಸಿದ ರೀತಿ ದಾಖಲೆ ಸೃಷ್ಟಿಸಿ ಮೋಸ ಮಾಡುತ್ತಾರೆ. ನಕಲಿ ದಾಖಲೆಗಳನ್ನು ನ್ಯಾಯಾಲಯದ ಮುಂದಿಟ್ಟು ಆಸ್ತಿಗೆ ದಾಖಲೆ ಸೃಷ್ಟಿಸುತ್ತಾರೆ. ದೂರದ ಊರುಗಳಲ್ಲಿರುವ ವ್ಯಕ್ತಿಗಳ ಹೆಸರಿನಲ್ಲಿ ಬೋಗಸ್ ಜಿಪಿಎ ಸೃಷ್ಟಿಸಿ ಆಸ್ತಿಯನ್ನು ಮಾರಿ ಕೈತೊಳೆದುಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಆಸ್ತಿ ಖರೀದಿ ಮಾಡಿದವರೇ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಒಂದು ಆಸ್ತಿ ಖರೀದಿ ವಿವಾದಕ್ಕೆ ಒಳಗಾದರೆ ನ್ಯಾಯಾಲಯದಲ್ಲಿ ಜಯಿಸುವುದು ಅಷ್ಟು ಸುಲಭವಲ್ಲ. ವರ್ಷಗಳೇ ಕಾಯಬೇಕು. ಬಂಡವಾಳ ಹೂಡಿದಷ್ಟೇ ಮೊತ್ತವನ್ನು ಕಾನೂನು ಪ್ರಕ್ರಿಯೆಗೆ ವೆಚ್ಚ ಮಾಡಬೇಕು. ಮಾತ್ರವಲ್ಲ, ಜೀವನ ಪರ್ಯಂತ ದುಡಿದು ಗಳಿಸಿದ ಹಣ ಉಳಿಸಿಕೊಳ್ಳಲು ಜೀವನ ಪೂರ್ತಿ ಕೋರ್ಟ್ ಕಚೇರಿ ಅಲೆಯಬೇಕು.
ಯಾವುದೇ ಒಂದು ಆಸ್ತಿಯನ್ನು ಖರೀದಿ ಮಾಡುವಾಗ ಅದರ ದಾಖಲೆಗಳ ಕಾನೂನು ಬದ್ಧತೆ, ಅಸಲಿತನ ಒಮ್ಮೆ ಪರಿಶೀಲಿಸಿ ಬಿಟ್ಟರೆ ಯಾವ ಸಮಸ್ಯೆಗಳು ಎದುರಾಗುವುದಿಲ್ಲ. ಅದಕ್ಕಾಗಿ ಕಾನೂನು ಓದಿಕೊಳ್ಳಬೇಕಿಲ್ಲ. ಸ್ವಲ್ಪ ಜಾಣ್ಮೆ ತೋರಿದರೆ ಸಾಕು ಆಸ್ತಿ ಖರೀದಿಯಲ್ಲಿ ಆಗುವ ಮೊಸ ತಡೆಯಬಹುದು. ಮೋಸ ಹೋಗದಂತೆ ಎಚ್ಚರಿಕೆ ವಹಿಸಬಹುದು.
ಮುಖ್ಯವಾಗಿ ಒಂದು ನಿವೇಶನ, ಮನೆ, ಪ್ಲಾಟ್ ಖರೀದಿ ಮುನ್ನ ಆ ದಾಖಲೆಗಳ ಅಸಲಿತನ ಪರಿಶೀಲಿಸುವುದು ಬಹು ಮುಖ್ಯವಾಗುತ್ತದೆ. ಒಂದು ಆಸ್ತಿ ಖರೀದಿಗೆ ಉದ್ದೇಶಿಸಿದರೆ ಅದರ ಎಲ್ಲಾ ದಾಖಲೆಗಳನ್ನು ಒಮ್ಮೆ ಪಡೆದುಕೊಂಡು ಕಂದಾಯ ಅಧಿಕಾರಿಗಳ ( ತಹಶೀಲ್ದಾರ್, ಉಪ ನೋಂದಣಾಧಕಾರಿ, ಶಿರಸ್ತೇದಾರ್ ) ಬಳಿ ತಪಾಸಣೆಗೆ ಒಳಪಡಿಸಿ ಸತ್ಯಾಸತ್ಯತೆ ತಿಳಿದುಕೊಳ್ಳಬಹುದು. ಇಲ್ಲವೇ ಕಾನೂನು ತಜ್ಞರಿಗೆ ಕೊಟ್ಟು ದಾಖಲೆಗಳ ನೈಜತೆಯನ್ನು ಖಾತ್ರಿ ಪಡಿಸಿಕೊಳ್ಳಬಹುದು.
ಈ ಎರಡೂ ಮಾರ್ಗದಲ್ಲಿ ಕೆಲವೊಮ್ಮೆ ತಪ್ಪು ಆಗುವ ಸಂಭವ ಇರುತ್ತದೆ. ಸ್ವತಃ ಆಸ್ತಿ ಖರೀದಿ ಮಾಡಲು ನಿರ್ಧರಿಸಿದ ವ್ಯಕ್ತಿಯೇ ಮನಸು ಮಾಡಿದರೆ ದಾಖಲೆಗಳ ಸತ್ಯಾಸತ್ಯತೆ ಪರಿಶೀಲಿಸಿದ ಬಳಿಕ ಆಸ್ತಿ ಖರೀದಿ ವಹಿವಾಟು ನಡೆಸಬಹುದು.
ಯಾವುದೆ ದಾಖಲೆಗಳು ಇರಲಿ, ಕೃಷಿ ಭೂಮಿ, ಅಪಾರ್ಟ್‌ಮೆಂಟ್, ಮನೆ, ನಿವೇಶನ, ಕೈಗಾರಿಕಾ ನಿವೇಶನ, ಮಠಗಳಿಗೆ ಸಂಬಂಧಿಸಿದ ನಿವೇಶನ, ಚಿತ್ರಮಂದಿರ ಯಾವುದೇ ಜಾಗ ಖರೀದಿ ಮಾಡುವ ವೇಳೆ ಅವರು ನೀಡುವ ದಾಖಲೆಗಳು ಸರಿಯಾಗಿದೆಯೆ ಎಂಬುದನ್ನು ಕಂಡು ಹಿಡಿಯಬೆಕಾದರೆ ಈ ಕೆಳಕಂಡ ಕ್ರಮಗಳನ್ನು ಪಾಲಿಸಲೇಬೇಕು.
ಒಂದು ನಿವೇಶನ ಆಗಿದ್ದರೆ, ಅದರ ದಾಖಲೆಗಳನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಹೋಗಿ, ಅ ದಾಖಲೆ ತೋರಿಸಿದಾಗ ಅ ದಾಖಲೆಯು ಪ್ರಾಧಿಕಾರದ ಕಚೇರಿ ಕಡತದಲ್ಲಿದ್ದರೆ, ಅ ದಾಖಲೆ ಅಸಲಿಯಾಗಿರುತ್ತದೆ. ಕಡತದಲ್ಲಿ ಇಲ್ಲದಿದ್ದರೆ ಆ ದಾಖಲೆ ನಕಲಿ ಎಂದು ತಿಳಿಯಬೇಕು. ಅಂತಹ ಆಸ್ತಿಯ ವಹಿವಾಟಿಗೆ ಕೈ ಹಾಕಬಾರದು.
ಒಂದು ನಿವೇಶನಕ್ಕೆ ಸಂಬಂಧಿಸಿದಂತೆ ಕೃಷಿ ಭೂಮಿಯ ಆರ್‌ಟಿಸಿ, ಮ್ಯುಟೇಷನ್ ಮತ್ತು ಸರ್ವೆ ದಾಖಲೆಗಳನ್ನು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಅಧಿಕೃತ ವೆಬ್ ತಾಣದಲ್ಲಿ ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳಬಹುದು. ಇಲ್ಲವೇ ಕಂದಾಯ ಇಲಾಖೆಯ ತಹಶೀಲ್ದಾರ್ ಕಚೇರಿಗಳಿಗೆ ಭೇಟಿ ಪರಿಶೀಲಿಸಬಹುದು.
ನೋಂದಣಿ ದಾಖಲೆ: ಒಂದು ಆಸ್ತಿಗೆ ಸಂಬಂಧಿಸಿದ ಸೇಲ್ ಡೀಡ್, ಸೇಲ್ ಅಗ್ರಿಮೆಂಟ್ ಮತ್ತಿತರ ನೋಂದಣಿ ದಾಖಲೆಗಳನ್ನು ನೋಂದಣಿ ಇಲಾಖೆಯ ಅಧಿಕೃತ ವೆಬ್ ತಾಣದಲ್ಲಿ ಪರಿಶಿಲಿಸಬಹುದು. ಇಲ್ಲವೇ ನೋಂದಣಿಯಾಗಿರುವ ಉಪ ನೋಂದಣಿ ಕಚೇರಿಗೆ ಹೋಗಿ ಖಾತ್ರಿ ಪಡಿಸಿಕೊಳ್ಳಬಹುದು.
ನಿವೇಶನ , ಅಪಾರ್ಟ್ ಮೆಂಟ್ , ವಾಣಿಜ್ಯ ನಿವೇಶನ ಅಗಿದ್ದಲ್ಲಿ, ಸಂಬಂಧಪಟ್ಟ ಸ್ಥಳೀಯ ಸಂಸ್ಥೆ ( ಕಾರ್ಪೋರೇಷನ್, ನಗರ ಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ)ಗಳ ಸಾಮಾಜಿಕ ಜಾಲ ತಾಣದಲ್ಲಿ ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳಬೇಕು. ಇಲ್ಲವೇ ಸಂಬಂಧಪಟ್ಟ ಸ್ಥಳೀಯ ಸಂಸ್ಥೆ ಕಚೇರಿಗೆ ಹೋಗಿ ಖಾತ್ರಿ ಪಡಿಸಿಕೊಳ್ಳಬಹುದು.
ನೀವು ಖರೀದಿಸಿದ ನಿವೇಶನ, ಆಸ್ತಿ ಮೇಲೆ ಬ್ಯಾಂಕ್ ಸಾಲ ಇದ್ದರೆ, ಅದನ್ನು ಸಂಬಂಧಪಟ್ಟವರ ಬ್ಯಾಂಕಿನಲ್ಲಿ ವಿವರ ಪಡೆಯಬಹುದು. ಸಾಲ ಇದ್ದ ಪಕ್ಷದಲ್ಲಿ ಇಸಿಯಲ್ಲಿ ನಮೂದಾಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಕನಿಷ್ಠ ಪಕ್ಷ ಇಷ್ಟು ನಿಯಮ ಪಾಲಿಸಿದರೆ ಆಸ್ತಿ ಖರೀದಿ ವೇಳೆ ಮೋಸ ಹೋಗುವುದನ್ನು ತಪ್ಪಿಸಬಹುದು.
ರೆವಿನ್ಯೂ ಫ್ಯಾಕ್ಟ್ ಉಚಿತ ಸಲಹೆ:
ನಿಮ್ಮ ಆಸ್ತಿ ಖರೀದಿಯ ದಾಖಲೆಗಳ ಬಗ್ಗೆ ಗೊಂದಲ, ಪ್ರಶ್ನೆಗಳಿದ್ದರೆ www.revenuefacts.com ಸಂಪರ್ಕಿಸಿ ಉಚಿತ ಸಲಹೆ ಪಡೆಯಿರಿ. ಇಲ್ಲವೇ ವಾಟ್ಸಪ್ ಮೂಲಕ 6363386332 ಗೆ ವಾಟ್ಸಪ್ ನಲ್ಲಿ ನಿಮ್ಮ ಪ್ರಶ್ನೆ ಕೇಳಿ, 24 ತಾಸಿನಲ್ಲಿ ಉತ್ತರ ನೀಡಲಾಗುತ್ತದೆ. ನಿವೃತ್ತ ಕಂದಾಯ, ಪೊಲೀಸರು ಅಥವಾ ವಕೀಲರು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.