Revenue Facts

ಬೆಂಗಳೂರಲ್ಲಿ ಮನೆ ಕೊಳ್ಳಲು 5 ಅತ್ಯುತ್ತಮ ಏರಿಯಾ ಇವು

ಬೆಂಗಳೂರಲ್ಲಿ ಮನೆ ಕೊಳ್ಳಲು 5 ಅತ್ಯುತ್ತಮ ಏರಿಯಾ ಇವು

ಮನೆ ಕಟ್ಟಬೇಕು ಎಂಬುದು ಪ್ರತಿಯೊಬ್ಬರ ಜೀವನದ ಕನಸು. ಅದರಲ್ಲೂ ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದಿದ್ದರೆ ಅದು ಪ್ರತಿಷ್ಠೆಯೂ ಹೌದು. ಆದರೆ, ಬೆಂಗಳೂರಿನಲ್ಲಿ ಮನೆ ಎಂದರೆ ಕೇವಲ ಎಲ್ಲೋ ಒಂದು ಕಡೆ ಇರುವುದಲ್ಲ. ಅನೇಕರಿಗೆ ಉತ್ತಮ ಸೌಲಭ್ಯಗಳು ಇರುವ, ಈ ಪ್ರದೇಶದಲ್ಲಿ ಮನೆ ಇದ್ದರೆ ನಮ್ಮ ಪ್ರತಿಷ್ಠೆ ಹೆಚ್ಚುತ್ತದೆ ಎಂದು ಆಲೋಚಿಸುವ, ಹೂಡಿಕೆ ದೃಷ್ಟಿಯಿಂದ ಮನೆ ಖರೀದಿಸದಾಗ ಕೆಲವು ವರ್ಷಗಳಲ್ಲೇ ಹೂಡಿದ ಹಣ ದುಪ್ಪಟ್ಟಾಗುವ ಕೆಲವು ಪ್ರದೇಶಗಳಿವೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡುವವರ ಅನುಕೂಲಕ್ಕಾಗಿ ಯಾವ ಯಾವ ಪ್ರದೇಶಗಳು ಸೂಕ್ತ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಸರ್ಜಾಪುರ ರಸ್ತೆ:
ಸರ್ಜಾಪುರ ರಸ್ತೆಯು ಪೂರ್ವ ಬೆಂಗಳೂರಿನ ಮುಖ್ಯ ಪ್ರದೇಶ. ಈ ಭಾಗದಲ್ಲಿ ಪ್ರಮುಖ ಡೆವಲಪರ್‌ಗಳು 3 ಬಿಎಚ್‌ಕೆ ಮನೆಗಳನ್ನು ಹೆಚ್ಚಾಗಿ ಗ್ರಾಹಕರಿಗೆ ಒದಗಿಸುತ್ತಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್, ಮಾರತ್ತಹಳ್ಳಿಯಂತ ಪ್ರಧಾನ ಐಟಿ ಹಬ್‌ಗಳಿಂದ 15 ಕಿ.ಮೀ. ವರೆಗೂ ಇದರ ವ್ಯಾಪ್ತಿ ಹರಡಿಕೊಂಡಿದೆ. ಸರ್ಜಾಪುರ ಮತ್ತು ಬೊಮ್ಮಸಂದ್ರದ ಕೈಗಾರಿಕಾ ಪ್ರದೇಶಗಳಿಗೂ ಉತ್ತಮ ಸಾರಿಗೆ ಸಂಪರ್ಕ ಹೊಂದಿದೆ. ಮುಂಬರುವ ನಮ್ಮ ಮೆಟ್ರೊದ 2 ಮತ್ತು 5ನೇ ಹಂತವು ಇಲ್ಲಿನ ಸಾರಿಗೆ ಸಂಪರ್ಕವನ್ನು ಇನ್ನಷ್ಟು ಸುಧಾರಿಸುವ ನಿರೀಕ್ಷೆ ಇದೆ. ಶಿಕ್ಷಣ ಸಂಸ್ಥೆಗಳು ಮತ್ತು ಮಾರುಕಟ್ಟೆ ಕೂಡ ಹತ್ತಿರವೇ ಇವೆ.

ವೈಟ್‌ಫೀಲ್ಡ್:
ವೈಟ್‌ಫೀಲ್ಡ್ ಪೂರ್ವ ಬೆಂಗಳೂರಿನ ಸೊಗಸಾದ ಏರಿಯಾ. ಸಾಕಷ್ಟು ಪ್ರಮಾಣದಲ್ಲಿ 2 ಮತ್ತು 3 ಬಿಎಚ್‌ಕೆ ರೆಡಿ-ಟು-ಮೂವ್ ಮನೆಗಳು ಈ ಪ್ರದೇಶದಲ್ಲಿ ಲಭ್ಯ. ಸರಾಸರಿ ಮನೆಗಳ ಬೆಲೆಯು 50 ಲಕ್ಷ ರೂಪಾಯಿಗಳಿಂದ ಆರಂಭವಾಗಿ 1 ಕೋಟಿ ರೂಪಾಯಿವರೆಗೂ ಇದೆ. ಬ್ರಿಗೇಡ್ ಟೆಕ್ ಪಾರ್ಕ್, ಇಂಟರ್ನ್ಯಾಷನಲ್ ಟೆಕ್ ಪಾರ್ಕ್, ಮಿಡ್ಕ್ಯಾಪ್ ಟೆಕ್ ಪಾರ್ಕ್‌ಗಳಿಗೆ ಸಮೀಪ. ರಾಜ್ಯ ಹೆದ್ದಾರಿ 35, ರೈಲ್ವೆ ನಿಲ್ದಾಣ ಮತ್ತು ರಾಷ್ಟ್ರೀಯ ಹೆದ್ದಾರಿ 648ರ ಕಾರಣ ಇಲ್ಲಿ ಸಂಪರ್ಕ ವ್ಯವಸ್ಥೆ ಚೆನ್ನಾಗಿದೆ.

ಕನಕಪುರ ರಸ್ತೆ:
ಕನಕಪುರದಲ್ಲಿ ಆಸ್ತಿ ಬೆಲೆ ಸ್ವಲ್ಪ ಹೆಚ್ಚೇ ಎನಿಸಿದರೂ, ಬೆಂಗಳೂರಿನ ಬೇರೆ ಪ್ರದೇಶಗಳಿಗೆ ಸುಲಭ ಸಂಪರ್ಕ ಕಲ್ಪಿಸುವ ನೈಸ್‌ ರಸ್ತೆ ಮತ್ತು ಹೊರ ವರ್ತುಲ ರಸ್ತೆಗಳ ಕಾರಣಕ್ಕೆ ಈ ಪ್ರದೇಶವು ವಸತಿ ಕೇಂದ್ರ ಎನಿಸಿಕೊಂಡಿದೆ.
ಒಂದು ತುದಿಯಲ್ಲಿ ಕೆಂಗೇರಿ ರೈಲ್ವೆ ನಿಲ್ದಾಣ ಮತ್ತು ಇನ್ನೊಂದು ತುದಿಯಲ್ಲಿ ಬೆಂಗಳೂರು ರೈಲ್ವೆ ನಿಲ್ದಾಣ ಇದೆ. ಎಲೆಕ್ಟ್ರಾನಿಕ್‌ ಸಿಟಿಯಂಥ ಪ್ರಮುಖ ಐಟಿ ಕೇಂದ್ರಕ್ಕೆ ಉತ್ತಮ ಸಾರಿಗೆ ಸಂಪರ್ಕ ಇರುವ ಕಾರಣಕ್ಕೂ ಇಲ್ಲಿ ಮನೆಗಳಿಗೆ ಉತ್ತಮ ಬೇಡಿಕೆ ಇದೆ.

ಕೆ.ಆರ್.ಪುರಂ:
ಐಟಿಪಿಎಲ್‌ ಮುಖ್ಯ ರಸ್ತೆ ಮತ್ತು ವೈಟ್‌ಫೀಲ್ಡ್‌ನ ಬ್ರೂಕ್‌ಫೀಲ್ಡ್ಗೆ 7-10 ಕಿ.ಮೀ. ದೂರದಲ್ಲಿ ಇರುವುದರಿಂದ ಪೂರ್ವ ಬೆಂಗಳೂರಿನ ಹೊರ ವರ್ತುಲ ರಸ್ತೆಗುಂಟ ಇರುವ ವಸತಿ ಪ್ರದೇಶಗಳಿಗೆ ಹೋಲಿಸಿದರೆ ಕೆ.ಆರ್.ಪುರಂ ನಲ್ಲಿ ಮನೆಗಳು ಕೈಗೆಟಕುವ ದರದಲ್ಲಿವೆ. ಎಲೆಕ್ಟ್ರಾನಿಕ್‌ ಸಿಟಿಯಿಂದ 30 ಕಿ.ಮೀ. ಅಂತರದಲ್ಲಿರುವುದರಿಂದ ವಸತಿ ಪ್ರದೇಶ ಎಂದೆನಿಸಿಕೊಂಡಿದೆ. 8 ಕಿ.ಮೀ. ದೂರದಲ್ಲಿ ಸ್ವಾಮಿ ವಿವೇಕಾನಂದ ಮೆಟ್ರೊ ನಿಲ್ದಾಣವೂ ಇದೆ.

ಯಲಹಂಕ:
ಹೊರ ವರ್ತುಲ ರಸ್ತೆಯ ಜೊತೆಗೆ ಐಟಿ ಪಾರ್ಕ್‌ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರ ಇರುವುದರಿಂದ ಯಲಹಂಕ ಮನೆ ಖರೀದಿದಾರರ ನೆಚ್ಚಿನ ಪ್ರದೇಶ ಎನಿಸಿದೆ. ಸಾಕಷ್ಟು ಶಾಲೆಗಳು, ಮಾಲ್‌ಗಳು ಮತ್ತು ಆಸ್ಪತ್ರೆಗಳು ಇರುವ ಕಾರಣವೂ ಇದು ಮನೆ ಮಾಡುವವರಿಗೆ ಒಳ್ಳೆಯ ಪ್ರದೇಶವಾಗಿದೆ.

Exit mobile version